ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಗಣನೀಯವಾಗಿ ಕಡಿಮೆ ಆಗುವವರೆಗೆ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವುದರ ಜೊತೆಗೆ ಕೋವಿಡ್ನ ಮೂರನೇ ಅಲೆಯ ತಡೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ನಗರದ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಕೋವಿಡ್-19 ನಿಯಂತ್ರಣ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೋವಿಡ್ ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಣಾಮಕಾರಿಯಾಗಿ ಜಾರಿಗೊಳಿಸಿದ ಹಿನ್ನೆಲೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗುತ್ತಿವೆ. ಗ್ರಾಮೀಣ ಭಾಗದಲ್ಲಿ 50 ಕ್ಕೂ ಹೆಚ್ಚು ಕೋವಿಡ್ ಪ್ರಕರಣಗಳು ಇರುವ ಗ್ರಾಮ ಪಂಚಾಯತ್ಗಳನ್ನು ಸಂಪೂರ್ಣವಾಗಿ ಲಾಕ್ಡೌನ್ ಮುಂದುವರೆಸಬೇಕು ಎಂದರು.
ಕಳೆದ ಐದು ದಿನಗಳಿಂದ 50 ಕ್ಕೂ ಹೆಚ್ಚು ಪ್ರಕರಣಗಳು ಇರುವ ಗ್ರಾಮಪಂಚಾಯತ್ಗಳನ್ನು ಪೂರ್ಣ ಪ್ರಮಾಣದ ಲಾಕ್ಡೌನ್ ಮಾಡಿದ ಹಿನ್ನೆಲೆ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಡಿಮೆಯಾಗಿವೆ. ಈ ಹಿನ್ನೆಲೆ ಪ್ರಸಕ್ತ 50 ಕ್ಕೂ ಪ್ರಕರಣಗಳಿರುವ ಬೈಂದೂರು ತಾಲೂಕಿನ ಜಡ್ಕಲ್, ಶಿರೂರು, ನಾಡ ಗ್ರಾಮ ಪಂಚಾಯತಿ, ಕಾರ್ಕಳದ ಬೆಳ್ಮಣ್, ಮಿಯಾರು, ಪಳ್ಳಿ, ಕುಕ್ಕುಂದೂರು, ನಲ್ಲೂರು, ಮರ್ಣೆ, ಹೆಬ್ರಿಯ ವರಂಗ, ಕುಂದಾಪುರದ ಗಂಗೊಳ್ಳಿ, ಆಲೂರು, ಕಾಪುವಿನ ಶಿರ್ವ, ಬೆಳ್ಳೆ, ಬ್ರಹ್ಮಾವರದ ಆವರ್ಸೆ, ಕೊಕ್ಕರ್ಣೆ ಗ್ರಾಮ ಪಂಚಾಯತ್ಗಳ ವ್ಯಾಪ್ತಿಯಲ್ಲಿ ಪೂರ್ಣ ಪ್ರಮಾಣದ ಲಾಕ್ಡೌನ್ ಮಾಡಬೇಕೆಂದರು.
ಜಿಲ್ಲೆಯಲ್ಲಿ 4085 ಸಕ್ರೀಯ ಪ್ರಕರಣಗಳಿದ್ದು, ಅವುಗಳಲ್ಲಿ 487 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 149 ಜನ ಕೋವಿಡ್ ಕೇರ್ ಸೆಂಟರ್ನಲ್ಲಿ ಹಾಗೂ 3,449 ಜನರು ಹೋಂ ಐಸೋಲೇಷನ್ನಲ್ಲಿ ಇದ್ದಾರೆ ಎಂದ ಅವರು ಜಿಲ್ಲೆಯಲ್ಲಿ ಒಟ್ಟು 20 ಬ್ಲಾö್ಯಕ್ ಫಂಗಸ್ ಪ್ರಕರಣಗಳು ಕಂಡುಬಂದಿದ್ದು, ಅವುಗಳಲ್ಲಿ 6 ಪ್ರಕರಣಗಳು ಜಿಲ್ಲೆಯವರಾಗಿದ್ದು, 14 ಪ್ರಕರಣಗಳು ಹೊರ ಜಿಲ್ಲೆಯಿಂದ ಬಂದವರದ್ದಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ 4 ಪ್ರಕರಣಗಳು ಶಿಫ್ಟ್ ಆಗಿದ್ದು, ಅವರು ಅಲ್ಲಿ 2 ಜನ ಮರಣ ಹೊಂದಿದ್ದಾರೆ. ಜಿಲ್ಲೆಯಲ್ಲಿ 6 ಜನರು ಗುಣಮುಖ ಹೊಂದಿದ್ದರೆ, 8 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ.
3 ನೇ ಅಲೆ ಕೋವಿಡ್ ನಿರೋಧಕ ಲಸಿಕೆ ಪಡೆಯದ ಮಕ್ಕಳನ್ನು ಬಾದಿಸುವ ಸಾಧ್ಯತೆಗಳಿವೆ. ಮಾಧ್ಯಮಗಳಲ್ಲಿ ತಜ್ಞರು ಸಹ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಗತ್ಯವಿರುವ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಒಂದೊಮ್ಮೆ ಹೆಚ್ಚು ಪ್ರಕರಣಗಳು ಕಂಡುಬಂದಲ್ಲಿ ಅವರಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಮೂಲ ಸೌಕರ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಉತ್ತಮ ಚಿಕಿತ್ಸೆ ನೀಡಬೇಕು ಎಂದರು.
ಜಿಲ್ಲೆಯಲ್ಲಿ ಸೋಂಕಿತರ ಚಿಕಿತ್ಸೆಗೆ ಅಗತ್ಯ ಇರುವ ಆಕ್ಸಿಜನ್ ಉತ್ಪಾದನಾ ಘಟಕಗಳಿಗೆ ಈಗಾಗಲೇ ಸರ್ಕಾರ ಸ್ವಾಮ್ಯದ ಹಾಗೂ ಖಾಸಗಿ ಸಂಸ್ಥೆಗಳು ಸಹಾಯ ಹಸ್ತ ನೀಡಿದ್ದು, ಇವುಗಳ ಕಾಮಗಾರಿಗಳನ್ನು ಆದಷ್ಟು ಶೀಘ್ರವಾಗಿ ಪೂರ್ಣಗೊಳಿಸಬೇಕು ಎಂದರು. ಜನರು ಸಹ ತಮ್ಮ ದೈನಂದಿನ ಅಗತ್ಯತೆ ವಸ್ತುಗಳನ್ನು ಖರೀದಿ ಮಾಡಲು ಅವಶ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರಬೇಕು. ಅಂತಹ ಸಂದರ್ಭದಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರೊಂದಿಗೆ ಕೋವಿಡ್ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಪಾಲಿಸಬೇಕು ಎಂದರು.
ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮಾತನಾಡಿ, ಕೋವಿಡ್ ನಿರೋಧಕ ಲಸಿಕೆಯನ್ನು ನೀಡಲು ಟೋಕನ್ ವಿತರಣೆಯನ್ನು ಪಾರದರ್ಶಕವಾಗಿ ಮಾಡುವುದರೊಂದಿಗೆ ಪ್ರತಿಯೊಬ್ಬರಿಗೂ ಲಸಿಕೆ ನೀಡಬೇಕು ಎಂದ ಅವರು ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಕೋವಿಡ್ ಸೋಂಕು ಹಬ್ಬ ಹಾಗೂ ಮದುವೆ ಕಾರ್ಯಕ್ರಮಗಳಿಂದ ಹೆಚ್ಚು ಜನರಿಗೆ ಸೋಂಕು ಹರಡುತ್ತಿದೆ. ಇದಕ್ಕೆ ನಿರ್ಬಂಧ ಹೇರುವುದು ಸೂಕ್ತ ಎಂದರು.
ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಕೊರೋನಾ ನಿರೋಧಕ ಚುಚ್ಚುಮದ್ದನ್ನು ಜಿಲ್ಲೆಯಲ್ಲಿ 2,75,064 ಜನರಿಗೆ ಒಂದನೇ ಡೋಸ್ ಲಸಿಕೆ ನೀಡಲಾಗಿದ್ದು, 87,360 ಜನರಿಗೆ ಎರಡನೇ ಲಸಿಕೆ ನೀಡುವುದರೊಂದಿಗೆ ಶೇಕಡ 20.37 ಆಗಿದೆ. ಇದು ರಾಜ್ಯದಲ್ಲಿಯೇ ಹೆಚ್ಚು ಚುಚ್ಚುಮದ್ದು ನೀಡಿರುವ ಜಿಲ್ಲೆಯಾಗಿದ್ದು, ರಾಜ್ಯದಿಂದ ಹೆಚ್ಚುವರಿ ಕೋವಿಡ್ ಲಸಿಕೆ ಸರಬರಾಜು ಮಾಡಿದ್ದಲ್ಲಿ ಅವುಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಶಾಸಕರಾದ ರಘುಪತಿ ಭಟ್, ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಮತ್ತಿತರರು ಉಪಸ್ಥಿತರಿದ್ದರು.