ಪರಿಸರದ ಕುರಿತ ಕಾಳಜಿ ತೆರೆದಿಟ್ಟ ಎಳೆಯ ಮನಸ್ಸುಗಳು

ಕುಂದಾಪ್ರ ಡಾಟ್ ಕಾಂ ಸುದ್ದಿ.
ವಿದ್ಯಾಗಿರಿ: ಆಳ್ವಾಸ್ ವಿದ್ಯಾರ್ಥಿಸಿರಿಯ ಅಂಗವಾಗಿ ಕಾಲೇಜಿನ ರತ್ನಾಕರವರ್ಣಿ ವೇದಿಕೆಯಲ್ಲಿ `ನಾವು ಮತ್ತು ನಮ್ಮ ಪರಿಸರ’ ಎಂಬ ವಿಷಯದ ಕುರಿತು ಸಂವಾದ ಗೋಷ್ಠಿ ನಡೆಯಿತು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಗುಣೇಶ್ ಭಾರತೀಯ, ತೋಕೂರಿನ ಡಾ. ಎಂ. ರಾಮಣ್ಣ ಶೆಟ್ಟಿ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿಘ್ನೇಶ್ ಮಲ್ಯ, ಮೂಡಬಿದ್ರೆ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಪ್ರದ್ಯುಮ್ನ ಮೂರ್ತಿ ಕಡಂದಲೆ ಹಾಗೂ ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ಭಕ್ತಿಶ್ರೀ ಸಂವಾದದಲ್ಲಿ ಪಾಲ್ಗೊಂಡು ವಿಚಾರ ಮಂಡಿಸಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಉಜಿರೆ ಎಸ್.ಡಿ..ಎಮ್ ಪದವಿಪೂರ್ವ ಕಾಲೇಜಿನ ಶ್ಯಾಮ್ ಪ್ರಸಾದ್ ಸಮಾಪನ ಮಾತುಗಳನ್ನಾಡಿ “ಪ್ರಕೃತಿಯನ್ನು ನಾವು ಅದರ ದೃಷ್ಟಿಯಲ್ಲಿ ನೋಡಬೇಕೇ ಹೊರತು ನಮ್ಮ ರೀತಿಯಲ್ಲಲ್ಲ. ಇದರಿಂದಲೇ ಪ್ರಕೃತಿ ವಿಕೋಪಗಳು ಹೆಚ್ಚಾಗಿ ಜರುಗುತ್ತಿವೆ. ಪರಿಸರಕ್ಕೆ ನಾವು ಅವಶ್ಯಕವಲ್ಲ, ಬದಲಿಗೆ ನಮಗೆ ಅದು ಅನಿವಾರ್ಯ ಎಂಬುದನ್ನು ನಾವು ಮೊದಲು ತಿಳಿದುಕೊಳ್ಳಬೇಕು” ಎಂದು ತಿಳಿಸಿದರು.

“ನಾವೆಲ್ಲಾ ಇಂದು ಅಭಿವೃದ್ಧಿ ಎಂಬ ಮಾರಕಾಸ್ತ್ರದಿಂದ ಪ್ರಕೃತಿಯ ಮೇಲೆ ದಾಳಿ ಮಾಡುತ್ತಿದ್ದೇವೆ. ಪರಿಸರ ಇರುವುದು ನಮ್ಮ ವೈಯಕ್ತಿಕ ನೆಮ್ಮದಿಗೆ ಎಂಬ ಭಾವನೆ ನಮ್ಮಲ್ಲಿದೆ. ಪ್ರಾಣಿ ದಾಳಿಯಿಂದ ಮಾನವನ ಸಾವು ಎಂದೆಲ್ಲಾ ಹೇಳಲಾಗುತ್ತದೆ. ಆದರೆ ಇಷ್ಟು ವರ್ಷದಿಂದ ನಾವು ನಮ್ಮ ಪರಿಸದ ಮೇಲೆ ನಡೆಸಿಕೊಂಡು ಬಂದಿರುವ ಹಲ್ಲೆಗೆ ಪರಿಹಾರ ನೀಡುವವರಾರು?” ಎಂದು ಪ್ರಶ್ನಿಸಿದರು.

“ಅಭಿವೃದ್ಧಿ ಎಂಬ ಪರಿಕಲ್ಪನೆಯ ಅರ್ಥವೇ ಗೊತ್ತಿಲ್ಲದೇ ನಾವು ವಿಪರೀತ ರೀತಿಯಲ್ಲಿ ವರ್ತಿಸುತ್ತಿದ್ದೇವೆ. ಇದಕ್ಕೆ ಉತ್ತಮ ಉದಾಹರಣೆ ನದಿ ತಿರುವು. ಇದರಿಂದ ದೇಶದ ನೀರಿನ ಸಮಸ್ಯೆ ಇಲ್ಲವಾಗುತ್ತದೆ ಎಂದು ಸಾಕಷ್ಟು ನದಿ ತಿರುವುನ ಯೋಜನೆಗಳನ್ನು ಸರ್ಕಾರ ಕೈಗೊಂಡಿದೆ. ಆದರೆ ಚೀನಾದಲ್ಲಿ ಕೇವಲ ಒಂದು ನದಿ ತಿರುವಿನಿಂದ ಏಳು ನದಿಗಳು ಬತ್ತಿ ಹೋಗಿವೆ. ಹಾಗಾಗಿ ಯಾವುದು ನಮ್ಮ ನಾಳೆಗಳನ್ನು ಕಾಪಾಡುತ್ತದೆಂದರೆ ಅದು ಪ್ರಕೃತಿಯೇ ಆಗಿದೆ. ಅದನ್ನು ಜತನದಿಂದ ಕಾಪಾಡಿ, ಉಳಿಸಿ ಬೆಳೆಸುವ ಕಾರ್ಯ ನಮ್ಮದಾಗಬೇಕು” ಎಂದು ತಿಳಿಸಿದರು. ಸಂವಾದ ಗೋಷ್ಠಿಯಲ್ಲಿ ವಿದ್ಯಾರ್ಥಿಸಿರಿಯ ಸರ್ವಾಧ್ಯಕ್ಷೆ ಸನ್ನಿಧಿ ಟಿ. ರೈ ಪೆರ್ಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

two × 2 =