ಪರೀಕ್ಷಾ ಕೇಂದ್ರದಲ್ಲಿ ಕೊರೋನಾ ಮುಂಜಾಗೃತ ಕ್ರಮ ಪಾಲಿಸಿ: ಅಪರ ಜಿಲ್ಲಾಧಿಕಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಅಕ್ಟೋಬರ್ 13 ಹಾಗೂ 14 ರಂದು ನಡೆಯಲಿರುವ ಡಿಪ್ಲೋಮಾ ಮತ್ತು ಪಿ. ಜಿ. ಸಿ. ಇ. ಟಿ ಪರೀಕ್ಷೆಯಲ್ಲಿ ಕೋವಿಡ್ ಸೋಂಕು ತಡೆಗೆ ಸರ್ಕಾರ ಹೊರಡಿಸಿರುವ ಎಲ್ಲಾ ಅಗತ್ಯ ಮುಂಜಾಗೃತ ಕ್ರಮಗಳನ್ನು ಪರೀಕ್ಷಾ ಕೇಂದ್ರದಲ್ಲಿ ಕೈಗೊಳ್ಳಬೇಕು ಎಂದು ಅಪರಜಿಲ್ಲಾಧಿಕಾರಿ ಸದಾಶಿವ ಪ್ರಭು ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡಿಪ್ಲೋಮಾ ಮತ್ತು ಪಿ. ಜಿ. ಸಿ.ಇ. ಟಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ ಸೋಂಕು ಹೆಚ್ಚು ಹರಡುತ್ತಿರುವ ಈ ಸಮಯದಲ್ಲಿ ನಡೆಯುತ್ತಿರುವ ಡಿಪ್ಲೋಮಾ ಮತ್ತು ಪಿಜಿಸಿಇಟಿ ಪರೀಕ್ಷೆಯಲ್ಲಿ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಮಾರ್ಗ ಸೂಚಿಗಳನ್ನು ತಪ್ಪದೇ ಪಾಲಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಈಗಾಗಲೇ ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸಲಾಗಿರುವ ಅನುಭವವಿದ್ದು ಅದೇ ರೀತಿಯಲ್ಲಿ ಪರೀಕ್ಷೆಯನ್ನು ನಡೆಸಬೇಕು. ಪರೀಕ್ಷಾ ಕೇಂದ್ರದ ಹೊರ ಭಾಗದಲ್ಲಿ ಹಾಗೂ ಪರೀಕ್ಷಾ ಕೊಠಡಿಯಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಶಿಕ್ಷಕರು ಎಚ್ಚರ ವಹಿಸಬೇಕೆಂದು ತಿಳಿಸಿದರು.

ಕೋವಿಡ್ ಪಾಸಿಟಿವ್ ಬಂದ ಅಭ್ಯರ್ಥಿಗಳಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯಲು ಕೇಂದ್ರಗಳನ್ನು ಗುರುತಿಸಬೇಕು. ಅಲ್ಲಿ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸುವುದರ ಜೊತೆಗೆ ಜಿಲ್ಲಾಆರೋಗ್ಯ ಪ್ರಾಧಿಕಾರದಿಂದ ಅವಶ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದರು.

ಪರೀಕ್ಷಾ ಕೇಂದ್ರಗಳನ್ನು ಪರೀಕ್ಷೆ ಮುಗಿದ ನಂತರ ಪ್ರತೀ ದಿನ ಸಾಯಂಕಾಲ ಸೋಂಕು ನಿವಾರಣಾ ದ್ರವಣವನ್ನು ಸಿಂಪಡಿಸಬೇಕು ಪ್ರತೀ ವಿದ್ಯಾರ್ಥಿಗಳಿಗೆ ಥರ್ಮಾಲ್ ಸ್ಕ್ಯಾನಿಂಗ್ ಮಾಡಬೇಕು ಅಲ್ಲದೇ ಪ್ರತಿಯೊಬ್ಬ ವಿದ್ಯಾರ್ಥಿಗಳು ತಪ್ಪದೇ ಮುಖಗವಸುಗಳನ್ನು ಧರಿಸಬೇಕು ಎಂದು ತಿಳಿಸಿದರು.

ಕೋವಿಡ್ ಸೋಂಕಿತ ವಿದ್ಯಾರ್ಥಿಗಳು ದೂರವಾಣಿ ಸಂಖ್ಯೆ 0820-2574802 ಹಾಗೂ ಟೋಲ್ ಫ್ರೀ ಸಂಖ್ಯೆ 1077 ಗೆ ಕರೆ ಮಾಡಿದಲ್ಲಿ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಭಗವಂತ ಕಟ್ಟಿಮನಿ, ತಹಶೀಲ್ದಾರ ಪ್ರದೀಪ್ ‌ಎಸ್. ‌ಕುರುಡೇಕರ್, ಖಜಾನೆ ಇಲಾಖೆ ಉಪನಿರ್ದೇಶಕ ಗೋಪಾಲ ಸ್ವಾಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್. ಬಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

one × 5 =