ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪಶ್ಚಿಮ ವಾಹಿನಿ ಹೆಸರಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ನಿರ್ಮಿಸಲ್ಪಡುತ್ತಿರುವ ವೆಂಟೆಡ್ ಡ್ಯಾಮ್ ಕಾಮಗಾರಿಗಳು ಕಳಪೆಯಾಗಿದ್ದು ಮತ್ತು ಈ ಕಾಮಗಾರಿಗಳಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಹಣ ದುರುಪಯೋಗ ಆಗುತ್ತಿದೆ. ಕಳಪೆ ಕಾಮಗಾರಿಗಳ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮ ವಾಹಿನಿ ಯೋಜನೆಯ ಅಡಿಯಲ್ಲಿ 1400ಕ್ಕೂ ಹೆಚ್ಚು ವೆಂಟೆಡ್ ಡ್ಯಾಮ್ ಗಳು ಮಂಜೂರಾಗಿದ್ದು, ಉಡುಪಿ ಜಿಲ್ಲೆಯಲ್ಲೂ ಈ ಯೋಜಯ ಅಡಿ ಹಲವು ವೆಂಟೆಡ್ ಡ್ಯಾಂ ನಿರ್ಮಾಣವಾಗಿದ್ದು ಇನ್ನು ಕೆಲವು ನಿರ್ಮಾಣದ ಹಂತದಲ್ಲಿವೆ, ಈ ಡ್ಯಾಂಗಳು ರೈತರ ಬೇಡಿಕೆ ಹಾಗೂ ಆಗ್ರಹಕ್ಕೆ ನಿರ್ಮಾಣವಾಗದೆ ಜನಪ್ರತಿನಿಧಿಗಳು ಹಾಗೂ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರ ಮರ್ಜಿಗೆ ಒಳಗಾಗಿ ಅವರಿಗೆ ಲಾಭವಾಗುವಲ್ಲಿ ಡ್ಯಾಂ ಮಂಜೂರು ಮಾಡುತ್ತಿದ್ದಾರೆ ಹಾಗೂ ಈ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಅನುಪಯುಕ್ತ ಕಾಮಗಾರಿಗಳಾಗಿವೆ ಹಾಗೂ ಕಾಮಗಾರಿಯ ಅಂದಾಜು ಮೊತ್ತ ಕಾಮಗಾರಿ ಮುಕ್ತಾಯವಾಗುವಾಗ ವಿಶೇಷ ಆರ್ಥಿಕ ಹೊಣೆಗಾರಿಕೆ ಹೆಸರಿನಲ್ಲಿ ಮೂರು, ನಾಲ್ಕು ಪಟ್ಟು ಹೆಚ್ಚಾಗಿ ಕೋಟ್ಯಂತರ ರೂಪಾಯಿ ಹಣ ಗುತ್ತಿಗೆದಾರರಿಗೆ ಸಂಧಾಯವಾಗುತ್ತಿದೆ, ರೈತರ ಹೆಸರಿನಲ್ಲಿ ಆಗುತ್ತಿರುವ ಅನ್ಯಾಯಕ್ಕೆ ಸೂಕ್ತ ತನಿಕೆಯಾಗಬೇಕು ಎಂದು ಅವರು ಆಗ್ರಹಿಸಿದ್ದಾರೆ.