ಪ್ರತಿ ಗ್ರಾಮದಲ್ಲೂ ಗೋಮಾಳ ಜಾಗ ಗುರುತಿಸಿ: ಮಹೇಂದ್ರ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗೋಮಾಳ ವಿವರ ನೀಡದ ಕಂದಾಯ ಅಧಿಕಾರಿಗಳ ವಿರುದ್ಧ ಆಕ್ರೋಶ, ತಹಶೀಲ್ದಾರ್ ನೇಮಕಕ್ಕೆ ಆಗ್ರಹ, ಮಾಹಿತಿ ಇಲ್ಲದ ಅಧಿಕಾರಿಗಳ ವಿರುದ್ಧ ಗರಂ, ಮಾಹಿತಿದಾರರನ್ನು ಬಲಿಪಶು ಮಾಡದಂತೆ ಗಣಿ ಇಲಾಖೆಗೆ ಸೂಚನೆ ಸೇರಿದಂತೆ ಹಲವು ವಿಚಾರಗಳ ಕುರಿತು ಬೈಂದೂರು ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಚರ್ಚೆ ನಡೆಯಿತು.

ಕಂದಾಯ ಇಲಾಖೆಯ ಕೆಲಸಗಳನ್ನು ಬಿಟ್ಟು ಭೂ ಪರಿವರ್ತನೆಯಲ್ಲಿಯೇ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸುತ್ತಾರೆ. ಗೋಮಾಳ ಗುರುತಿಸಿ ಮಾಹಿತಿ ನೀಡುವಂತೆ ಸೂಚಿಸಿದರೂ ಕೆಲಸ ಆಗುತ್ತಿಲ್ಲ, ಪ್ರತಿ ಗ್ರಾಮದಲ್ಲೂ ಗೋಮಾಳ ಹಾಗೂ ಒತ್ತುವರಿ ಗೋಮಾಳಗಳನ್ನು ತೋರಿಸಿ, ಗೋಮಾಳ ನಿರ್ಮಾಣ ಹಾಗೂ ಒತ್ತುವರಿ ತೆರಿಗೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಬೈಂದೂರಿನಲ್ಲಿ ಕಾಯಂ ತಹಶೀಲ್ದಾರ್ ಇಲ್ಲ ಎಂದು ಪ್ರಸ್ತಾಪಿಸಿದ ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ , ತಾಲ್ಲೂಕು ಕಚೇರಿಯಲ್ಲಿ ಕಮಿಷನ್ ದಂಧೆ ನಡೆಯುತ್ತಿದೆ. ಇಂತಹ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. ಇದನ್ನು ಧ್ವನಿಗೂಡಿಸಿದ ಜಗದೀಶ ದೇವಾಡಿಗ ಬೆಂಬಲಿಸಿದರು. ಅಧ್ಯಕ್ಷ ಮಹೇಂದ್ರ ಪೂಜಾರಿ ಪ್ರತಿಕ್ರಿಯಿಸಿ, ಸಂಸದರು, ಸಚಿವರ ಗಮನಕ್ಕೆ ತಂದು ತಹಶೀಲ್ದಾರ್ ನೇಮಕಕ್ಕೆ ಒತ್ತಾಯಿಸಲಾಗಿದೆ. ಸದ್ಯದಲ್ಲಿ ಅಧಿಕಾರ ಸ್ವೀಕಾರಿಸುವರು ಎಂದರು.

ಅಂಗನವಾಡಿ ಬಳಿ ಸರ್ಕಾರಿ ಕೆಲಸ ಹೊಂದಿರುವವರಿಗೆ 94 ಸಿ ಯಲ್ಲಿ ಜಾಗ ಮಂಜೂರು ಮಾಡಲಾಗಿದೆ. ದಾಖಲೆ ಸಹಿತ ಮಾಹಿತಿ ನೀಡುವಂತೆ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರೂ, ಸಭೆಗೆ ಖಾಲಿ ಕೈಯಲ್ಲಿ ಬಂದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ ಅಧ್ಯಕ್ಷರು,ಈ ರೀತಿಯ ನಿರ್ಲಕ್ಷ್ಯ ಸಹಿಸಲಾಗುದಿಲ್ಲ ಎಂದರು. ಅಧ್ಯಕ್ಷರ ನಿಲುವನ್ನು ಪ್ರಮೀಳಾ ಕೆ.ದೇವಾಡಿಗ, ಜಗದೀಶ್ ದೇವಾಡಿಗ, ಪ್ರವೀಣ್ ಕುಮಾರ್ ಶೆಟ್ಟಿ ಕಡ್ಕೆ, ಪುಷ್ಪರಾಜ್ ಶೆಟ್ಟಿ ಬೆಂಬಲಿಸಿದರು.

ಆಕ್ರಮ ಗಣಿಗಾರಿಕೆ ಕುರಿತು ಮಾಹಿತಿ ನೀಡಿದರೆ, ಮಾಹಿತಿದಾರರನ್ನೆ ಬಲಿಪಶು ಮಾಡದಂತೆ ಗಣಿಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಕುಂದಾಪುರದ ತಾಲ್ಲೂಕು ಪಂಚಾಯಿತಿಯ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಬೈಂದೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ವಹಿಸಿದ್ದರು. ಉಪಾಧ್ಯಕ್ಷೆ ಮಾಲಿನಿ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಭಾರತಿ ಇದ್ದರು.

Leave a Reply

Your email address will not be published. Required fields are marked *

19 − 16 =