ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸಾರ್ವಜನಿಕ ಸಮಾರಂಭದಲ್ಲಿ ಅವಹೇಳನಕಾರಿ, ಅಸಾಂವಿಧಾನಿಕ ಹಾಗೂ ಕೀಳು ಮಟ್ಟದ ಪದಗಳನ್ನು ಬಳಸಿ ನಿಂದಿಸಿದ ರಾಜ್ಯದ ನಗರಾಭಿವೃದ್ಧಿ ಸಚಿವ ರೋಷನ್ ಬೇಗ್ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ವತಿಯಿಂದ ಗಂಗೊಳ್ಳಿಯ ಮ್ಯಾಂಗನೀಸ್ ರೋಡ್ ಬಸ್ ನಿಲ್ದಾಣದ ಬಳಿಯಲ್ಲಿ ಸಂಜೆ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ, ಇಡೀ ವಿಶ್ವವೇ ಗುರುತಿಸಿದ ಹಾಗೂ ಭಾರತ ದೇಶವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಿದ ಈ ದೇಶ ಕಂಡ ಮಹಾನ್ ನಾಯಕ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಮಾತನಾಡಿರುವುದು ಸಚಿವರಿಗೆ ಶೋಭೆ ತರವಂತದ್ದಲ್ಲ. ಇದು ಅವರ ವಿಕೃತ ಮನಸ್ಸು ಹಾಗೂ ಕೀಳು ಸಂಸ್ಕೃತಿಯನ್ನು ತೋರಿಸುತ್ತದೆ. ಅಲ್ಪಸಂಖ್ಯಾತರನ್ನು ಓಲೈಸಿ ಓಟು ಗಿಟ್ಟಿಸಿಕೊಳ್ಳಲು ಸಿದ್ಧರಾಮಯ್ಯನವರು ರೋಷನ್ ಬೇಗ್ ಅವರನ್ನು ಸಚಿವರನ್ನಾಗಿ ಮಾಡಿಕೊಂಡಿದ್ದು, ನರೇಂದ್ರ ಮೋದಿಯವರ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ. ಇಡೀ ವಿಶ್ವವೇ ನರೇಂದ್ರ ಮೋದಿ ಹಾಗೂ ಅವರ ಸಾಧನೆಯನ್ನು ಕೊಂಡಾಡುತ್ತಿರುವಾಗ ಸಚಿವ ರೋಷನ್ ಬೇಗ್ ಸಭ್ಯತೆಯನ್ನು ಮೀರಿ ಪ್ರಧಾನ ಮಂತ್ರಿಯವರನ್ನು ಅವ್ಯಾಚ ಶಬ್ದಗಳಿಂದ ಬೈಯ್ದು ನಿಂದಿಸಿರುವುದನ್ನು ಬಿಜೆಪಿ ಕಾರ್ಯಕರ್ತರು ಹಾಗೂ ಅವರ ಅಭಿಮಾನಿಗಳು ತೀವ್ರವಾಗಿ ಖಂಡಿಸುತ್ತಿದ್ದು, ಸಚಿವ ರೊಷನ್ ಬೇಗ್ ಬಹಿರಂಗವಾಗಿ ಸಾರ್ವಜನಿಕರ ಕ್ಷಮೆಯಾಚಿಸಬೇಕು ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ ಅವರು, ಮುಂಬರುವ ಚುನಾವಣೆಯಲ್ಲಿ ಜನರೇ ಅವರನ್ನು ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಸದಸ್ಯ ಸುರೇಂದ್ರ ಖಾರ್ವಿ ಮಾತನಾಡಿ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೇವಲ ಒಂದು ಪಕ್ಷಕ್ಕೆ ಸೀಮಿತವಾಗಿಲ್ಲ. ದೇಶಕ್ಕಾಗಿ ಹಗಲಿರುಳು ದುಡಿಯುತ್ತಿರುವ ಇಡೀ ವಿಶ್ವವೇ ಭಾರತ ದೇಶವನ್ನು ನೋಡುವಂತೆ ಮಾಡುತ್ತಾ ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿರುವ ಪ್ರಧಾನ ಮಂತ್ರಿಯವರ ಬಗ್ಗೆ ಅವಹೇಳನಕಾರಿ ಮಾತನಾಡಿದ ಸಚಿವ ರೋಷನ್ ಬೇಗ್ ಅವರಿಗೆ ಸಚಿವರಾಗಿ ಮುಂದುವರಿಯುವ ಹಕ್ಕಿಲ್ಲ. ಕೂಡಲೇ ಅವರು ಬಹಿರಂಗವಾಗಿ ಕ್ಷಮೆಯಾಚಿಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರೋಷನ್ ಬೇಗ್ ರಾಜೀನಾಮೆ ಪಡೆಯಬೇಕೆಂದು ಒತ್ತಾಯಿಸಿದರು.
ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಜಯರಾಮ ದೇವಾಡಿಗ, ಕಾರ್ಯದರ್ಶಿ ಬಿ.ಗಣೇಶ ಶೆಣೈ, ಗುಜ್ಜಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ ಮೇಸ್ತ, ಬಿಜೆಪಿ ಬೈಂದೂರು ಕ್ಷೇತ್ರ ಸಮಿತಿ ಸದಸ್ಯ ರಾಮಪ್ಪ ಖಾರ್ವಿ, ಗಂಗೊಳ್ಳಿ ಗ್ರಾಪಂ ಸದಸ್ಯರಾದ ಗೋಪಾಲ ಖಾರ್ವಿ ದಾವನಮನೆ, ಬಿ.ಲಕ್ಷ್ಮೀಕಾಂತ ಮಡಿವಾಳ, ಸುಧಾಕರ ಖಾರ್ವಿ, ಪಕ್ಷದ ಮುಖಂಡರಾದ ಮೋಹನ ಗುಜ್ಜಾಡಿ, ಅಶೋಕ ಪೂಜಾರಿ, ಗಣೇಶ ಶೇರುಗಾರ್, ವಾಸುದೇವ ದೇವಾಡಿಗ, ಶ್ರೀಧರ ನಾಯ್ಕ್, ಮೋಹನ ಖಾರ್ವಿ, ರಾಘವೇಂದ್ರ ಗಾಣಿಗ, ಎಸ್.ರಾಘವೇಂದ್ರ, ಗಂಗಾಧರ ಖಾರ್ವಿ ಲೈಟ್‌ಹೌಸ್, ಪ್ರಕಾಶ ಖಾರ್ವಿ, ನವೀನ ದೊಡ್ಡಹಿತ್ಲು, ಯಶವಂತ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.