ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮನಸ್ಸಿನಲ್ಲಿ ಪ್ರೀತಿ ತುಂಬಿಕೊಂಡರೆ ದೇಹವು ರೋಗಮುಕ್ತವಾಗಿರುತ್ತೆ. ಮಧ್ಯಪಾನ, ಧೂಮಪಾನದಿಂದ ದೂರವಿದ್ದು, ಪ್ರೀತಿ ಹಂಚುವುದೇ ಆರೋಗ್ಯದ ಗುಟ್ಟು ಎಂದು ಪದ್ಮಶ್ರೀ ಡಾ. ಬಿ. ಎಂ. ಹೆಗ್ಡೆ ಹೇಳಿದರು.
ಅವರು ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗಿದ್ದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ೮೪ನೇ ಹುಟ್ಟು ಹಬ್ಬದ ಆಚರಣೆ ಮತ್ತು ದತ್ತಿನಿಧಿ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯರ ದೊಡ್ಡ ಆಸ್ತಿಯೆಂದರೆ ಪ್ರೀತಿ ಮಾಡುವ ಮಕ್ಕಳು. ಬದುಕಿನಲ್ಲಿ ಆಸ್ತಿ ಮಾಡುವ ಬದಲು ಅವರು ಪ್ರೀತಿಯಿಂದ ನೋಡಿಕೊಳ್ಳುವಂತೆ ಮಾಡಿ. ಆರೋಗ್ಯದಿಂದ ಇರುವುದೆಂದರೆ ಖಾಯಿಲೆಯಿಂದ ದೂರವಿರುವುದಲ್ಲ ಬದಲಿಗೆ ಕೆಲಸ ಮಾಡಲು ಹುಮ್ಮಸ್ಸನ್ನು ತುಂಬಿಕೊಳ್ಳುವ ಸ್ಥಿತಿಯದು. ದಿನದಲ್ಲಿ ಮನಸ್ಫೂರ್ತಿಯಿಂದ ನಗುವುದನ್ನು ಅಭ್ಯಾಸ ಮಾಡಿಕೊಳ್ಳಿ. ಅದರಿಂದ ಸುಖ, ನೆಮ್ಮದಿಯೂ ದೊರೆಯುತ್ತದೆ ಎಂದವರು ಸಲಹೆಯಿತ್ತ ಅವರು ಅಪ್ಪಣ್ಣ ಹೆಗ್ಡೆ ಅವರ ಆಯೋಗ್ಯದ ಗುಟ್ಟು ಅವರ ಮದಸ್ಮಿತ ಮುಖದಲ್ಲಿದೆ ಎಂದರು.
ಕೋಣಿ ರಮಾನಂದ ಕಾರಂತರಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳು ಹಾಗೂ ಅನಾರೋಗ್ಯ ಪೀಡಿತರಿಗೆ ದತ್ತಿನಿಧಿ, ಸಹಾಯಧನ ವಿತರಿಸಲಾಯಿತು.
ಅಂಬಲಪಾಡಿ ಶ್ರೀ ಜನಾರ್ದನ ಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ವಿಜಯ ಬಲ್ಲಾಳ್ ಪ್ರಶಸ್ತಿ ಪ್ರದಾನ ಮಾಡಿದರು. ಬಸ್ರೂರು ಅಪ್ಪಣ್ಣ ಹೆಗ್ಡೆ ಅವರು ಉಪಸ್ಥಿತರಿದ್ದರು.
ರಾಮ ಕಿಶನ್ ಹೆಗ್ಡೆ ಪ್ರಾಸ್ತಾವಿಕ ಮಾತನಾಡಿದರು. ಅಪ್ಪಣ್ಣ ಹೆಗ್ಡೆ ಅವರ ಮೊಮ್ಮಕ್ಕಳು ಹಾಗೂ ವಿವಿಧ ಶಿಕ್ಷಣ ಸಂಸ್ಥೆಗಳ ಪ್ರಮುಖರು ಶುಭಕೋರಿದರು. ವಕ್ವಾಡಿ ಗುರುಕುಲ ವಿಧ್ಯಾರ್ಥಿಗಳು ಗೀತೆಯನ್ನು ಹಾಡಿದರು. ಅನುಪಮಾ ಎಸ್. ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು. ಪ್ರಾಂಶುಪಾಲರಾದ ಕೆ. ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು. ದಿನಕರ್ ಆರ್. ಶೆಟ್ಟಿ, ಅಕ್ಷಯ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.