ಇತಿಹಾಸ ಪ್ರಸಿದ್ಧ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವದ ಅಂಗವಾಗಿ ಫೆ. 24ರಿಂದ 26ರವರೆಗೆ 1008 ತೆಂಗಿನಕಾಯಿ ಅಷ್ಟೋತ್ತರ ಸಹಸ್ರನಾಳಿಕೇರ ಮಹಾ ಗಣಯಾಗ ಮತ್ತು ನವಚಂಡೀ ಹವನ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿದೆ.
ಫೆ. 24ರಂದು ಬೆಳಿಗ್ಗೆ ೮ರಿಂದ ಶ್ರೀಗುರು ಗಣೇಶ ಪ್ರಾರ್ಥನೆ, ಪುಣ್ಯಾಹ, ನಾಂದೀ, ವಿವಿಧ ಮಂತ್ರ ಜಪಾನುಷ್ಠಾನ, ನವಗ್ರಹ ಹವನ, ಬ್ರಹ್ಮಣಸ್ಪತಿ ಸೂಕ್ತ ಹವನ, ಶ್ರೀಸೂಕ್ತ ಹವನ, ಪುರುಷ ಸೂಕ್ತ ಹವನ, ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಹಾಗೂ ಹವನ, ಧನ್ವಂತರಿ ಹವನ ನಡೆಯಲಿದೆ. ಫೆ. 25ರಂದು ಬೆಳಿಗ್ಗೆ ೮ರಿಂದ ನವಾಕ್ಷರೀ ಮಂತ್ರಜಪ ಹಾಗೂ ಹವನ, ಗಣಸೂಕ್ತ ಹವನ, ರುದ್ರಪಾರಾಯಣ ಹಾಗೂ ರುದ್ರಹವನ, ದುರ್ಗಾ ಹೋಮ, ಅಥರ್ವಶೀರ್ಷ ಹವನ, ಲಲಿತಾ ಸಹಸ್ರನಾಮ ಹವನ, ಚಂಡಿಕಾ ಪಾರಾಯಣ ಜರುಗಲಿದೆ. ಫೆ. 26ರಂದು ಬೆಳಿಗ್ಗೆ 8ರಿಂದ 1008 ತೆಂಗಿನ ಕಾಯಿ ಅಷ್ಟೋತ್ತರ ಸಹಸ್ರನಾಳಿಕೇರ ಮಹಾ ಗಣಯಾಗ ಮತ್ತು ನವಚಂಡೀ ಹವನ, ಅಧಿವಾಸ ಹವನ, ಕಲಾ ತತ್ವ ಹವನ, ಶ್ರೀ ಸ್ವಾಮಿಗೆ ೧೦೮ ಕಲಶಾಭಿಷೇಕ, ಕನಕಾಭೀಷೇಕ, ಮಹಾ ಪೂಜೆ ರಾತ್ರಿ ೯.೩೦ಕ್ಕೆ ಸಂಕಷ್ಟ ಷತುರ್ಥಿ ಮಹಾಪೂಜೆ ನಡೆಯಲಿದೆ.
ಫೆ.24ರಂದು ರಾತ್ರಿ 8ರಿಂದ ಸಾಗರದ ಹೆಗ್ಗೋಡುವಿನ ಸಾಕೇತ ಕಲಾವಿದರಿಂದ ಲವ-ಕುಶ ಯಕ್ಷಗಾನ, ಫೆ. 25ರಂದು ರಾತ್ರಿ ೮ರಿಂದ ಕುಂದಾಪುರದ ರೂಪಕಲಾ ತಂಡದವರಿಂದ ಮಿ. ಪಾಪ ಪಾಂಡು ಹಾಸ್ಯ ನಾಟಕ, ಫೆ. 26ರಂದು ಸಂಜೆ6:30ರಿಂದ ಹೆಗ್ಗೂಡುವಿನ ಸಿ. ಎನ್. ಮಾಧವ ಭಟ್ ಮತ್ತು ಸಂಗಡಿಗರಿಂದ ಮುಖವೇಣು ವಾದನ ಕಛೇರಿ ಮತ್ತು ಹಾಡುಗಾರಿಕೆ ನಡೆಯಲಿದೆ. ಫೆ. 25ರಂದು ರಾತ್ರಿ ನರಸೀಪುರದ ಆಯುರ್ವೇದ ಚಿಕಿತ್ಸಕರಾದ ನಾರಾಯಣ ಸ್ವಾಮಿಯವರನ್ನು ದೇವಳದ ವತಿಯಿಂದ ಸನ್ಮಾನಿಸಲಾಗುವುದು. ದೇವಳದ ಸಂಪೂರ್ಣ ಪುಷ್ಪಾಲಂಕಾರ ಸೇವೆಯನ್ನು ಸುರತ್ಕಲ್‌ನ ಜೆ. ಡಿ. ವೀರಪ್ಪ ಅವರು ನಡೆಸಿಕೊಡಲಿದ್ದಾರೆ ಎಂದು ದೇವಳದ ಧರ್ಮದರ್ಶಿ ಹೆಚ್. ರಾಮಚಂದ್ರ ಭಟ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.