ಬದುಕು-ಭಾಷೆ-ಭಾವಕ್ಯತೆಯಲ್ಲಿ ಐಕ್ಯತೆಯನ್ನು ಕಾಣೋಣ: ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ

Call us

Call us

ಮೂಡುಬಿದಿರೆ: ಸಮಾಜದ ಇತರರಿಗೆ ತೊಂದರೆಯಾಗದಂತೆ ಬದುಕುವುದು ನಿಜವಾದ ವ್ಯಕ್ತಿ ಸ್ವಾತಂತ್ರ್ಯವೆನಿಸಕೊಳ್ಳುತ್ತದೆ. ನಮ್ಮ ಮಾತುನಂತೆ ನಡೆವಳಿಕೆ ಕಂಡುಬರುತ್ತಿದ್ದರೆ ಇದು ಸಾಧ್ಯವಾಗುತ್ತದೆ. ಅಭಿವ್ಯಕ್ತಿಯ ಸ್ವಾತಂತ್ರ್ಯವು ವ್ಯಕ್ತಿಸ್ವಾತಂತ್ರ್ಯದ ಹಾಗೆ ಪ್ರತಿಯೊಬ್ಬರಿಗೂ ದತ್ತವಾದ್ದು, ನಿಜ. ಆದರೆ ಇವಕ್ಕೆ ಗಡಿರೇಖೆಗಳು, ಗೊತ್ತುಪಾಡುಗಳು ಇರುವುದಿಲ್ಲವೇ ಎಂದು ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಪ್ರಶ್ನೆಸಿದರು

Call us

Call us

Call us

ಅವರು ಮೂಡುಬಿದಿರೆ ವಿದ್ಯಾಗಿರಿಯಲ್ಲಿ ನಡೆಯುವ ನಾಲ್ಕು ದಿನಗಳ ಕನ್ನಡ ನಾಡು ನುಡಿಯ ಸಾಂಸ್ಕೃತಿಕ ಸಮ್ಮೇಳನ ಆಳ್ವಾಸ್ ನುಡಿಸಿರಿ 2015ಕ್ಕೆ ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ವೇದಿಕೆಯಲ್ಲಿ ಚಾಲನೆ ದೊರೆತ ಬಳಿಕ ನಡೆದ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿದರು.

Call us

Call us

ಬುದ್ಧಿಜೀವಿಗಳ, ವಿಚಾರವಾದಿಗಳ, ಸಾಹಿತಿಗಳ ಮೇಲಣ ಹಲ್ಲೆಗಳು ಅತ್ಯಂತ ದುಃಖಕರ; ಖಂಡನಾರ್ಹ, ಶಿಕ್ಷಾರ್ಹ. ಅನ್ಯಾಯವಾಗಿ ಈಚೆಗೆ ನಮ್ಮ ನಡುವಿನ ಕ್ರಿಯಾಶಾಲಿ ಸಂಶೋಧಕಮಿತ್ರ ಎಂ.ಎಂ. ಕಲಬುರ್ಗಿಯವರನ್ನು ನಾವು ಕಳೆದುಕೊಂಡೆವು. ಸಮಾಜ ಸಾಹಿತಿಗಳ ಹಿತ ಕಾಯಬೇಕು; ಸಾಹಿತಿಗಳು ಸಮಾಜದ ಹಿತ ಕಾಯಬೇಕು. ಎರಡು ಕಡೆಗೂ ತಾಳ್ಮೆ ಸಂಯಮ ಸಮಾಧಾನಗಳು ಅವಶ್ಯವಾಗಿರಬೇಕು. ಸರ್ಕಾರದ ನಾಯಕತ್ವವೂ ಸಾಮಾಜಿಕನಾಯಕತ್ವವೂ ಒಗ್ಗೂಡಿ ಶ್ರಮಿಸಬೇಕು ಎಂದವರು ಹೇಳಿದರು.

ಯಾವುದೋ ಮತದ, ಪಂಥದ ಆಚಾರವಿಚಾರಗಳು ಮೇಲೆಂದೂ ಕೀಳೆಂದೂ ತೆಗಳುವುದು, ಯಾವುದೋ ಸ್ಮೃತಿಯಲ್ಲಿ ಬಂದಿರುವ ಯಾವುದೋ ವಿಚಾರ ಅಸಮಾನತೆ ಅಸಹಿಷ್ಣುತೆಗಳ ಭೇದಬುದ್ಧಿಯ ಪುರೋಹಿತಶಾಹಿ ವಿಚಾರವೆಂದು ಗುರುತಿಸಿ ಯಾರನ್ನೋ ತರಾಟೆಗೆ ತೆಗೆದುಕೊಳ್ಳುವುದು, ಪರಿಣಾಮದಲ್ಲಿ ವರ್ತಮಾನಸಮಾಜದ ಮೇಲೆ, ಸಮಾಜದ ಎಳೆಯ ಮನಸ್ಸುಗಳ ಮೇಲೆ ದ್ವೇಷಾಸೂಯೆಗಳ ವಿಷಬೀಜಗಳನ್ನು ಬಿತ್ತದೆ ವಿರಮಿಸುವುದಿಲ್ಲ. ದಿಟವಾಗಿ ಈಗ ಯಾವುದೇ ಮತದ, ಪಂಥದ ಆಚಾರ ವಿಚಾರಗಳು ಉಳಿದಿದ್ದರೆ, ಅವು ಮನೆಯ ಮಟ್ಟಿಗೆ, ಸಾಂಕೇತಿಕವಾಗಿ ಉಳಿದಿರಬಹುದು. ಇನ್ನು ಸ್ಮೃತಿಗಳು ಕಾಲಕಾಲಕ್ಕೆ ಮತೀಯ ಆಚಾರವಿಚಾರಗಳನ್ನು ಬೇರೆಬೇರೆಯಾಗಿ ವ್ಯಾಖ್ಯಾನಿಸುತ್ತ ಉದಾರವಾಗುತ್ತ ಹೋಗಿಯೂ ಈಗ ನಿರುಪಯುಕ್ತವಾಗಿವೆ. ಅವುಗಳಲ್ಲಿ ಹಿತಕರ ನೈತಿಕ ಮತ್ತು ಮಾನವೀಯ ಮೌಲ್ಯಗಳು ಏನುಂಟೋ, ಅವನ್ನು ತಿಳಿಯುವ ಕುತೂಹಲವೂ ನಮಗಿಲ್ಲವಾಗಿದೆ; ಅವನ್ನು ತಿಳಿದವರು ಹೇಳಲೂ ಅವರಿಗೆ ಕುತ್ತಿಗೆ ಹಿಡಿಯುತ್ತಿದೆ.

ಯಾವುದು ಹಳಗನ್ನಡ, ಯಾವುದು ಹೊಸಗನ್ನಡ ಎಂಬ ಚರ್ಚೆ ಆಯಾ ಕಾಲಘಟ್ಟಗಳಲ್ಲಿ ಅಂದಂದಿನ ಸಂದರ್ಭ ಹಿಡಿದು ನಡೆಯುತ್ತ ಬಂದಿದೆ; ಸಂಸ್ಕೃತ ಕನ್ನಡಗಳ ಮಿಶ್ರಣ ಹೇಗಿರಬೇಕೆಂಬ ಚರ್ಚೆಯೂ ಜೊತೆಜೊತೆಗೇ ನಡೆದಿದೆ. ಇದನ್ನು ಈಗ ನಾನು ವಿಚಾರ ಮಾಡುತ್ತಿಲ್ಲ. ನನ್ನ ಆತಂಕವೆಂದರೆ, ನಾವು ದಿಟವಾಗಿ ಕನ್ನಡದಲ್ಲಿ ಮಾತಾಡುತ್ತಿಲ್ಲ, ಬರೆಯುತ್ತಿಲ್ಲ, ಯೋಚನೆ ಚಿಂತನೆಗಳನ್ನು ಮಾಡುತ್ತಿಲ್ಲ ಎನ್ನುವುದು. ರಾಜಕೀಯ ಕಾರಣಗಳಿಂದಾಗಿ ಕನ್ನಡದ ಭೂಪಟ ಕರ್ನಾಟಕ ಏಕೀಕರಣದ ಅನಂತರವೂ ಕುಗ್ಗಿ ಕಿರಿದಾಗಿದೆ.

ಕರ್ನಾಟಕದಲ್ಲಿ ಆಡಳಿತ ನ್ಯಾಯವಿತರಣೆ ಶಿಕ್ಷಣ ಈ ಮೂರು ಕ್ಷೇತ್ರಗಳನ್ನೂ ಒಳಗೊಂಡ ಹಾಗೆ ಎಲ್ಲ ವ್ಯವಹಾರಗಳೂ ರಾಜ್ಯಭಾಷೆಯಾದ ಕನ್ನಡದಲ್ಲಿಯೇ ನಡೆಯಲೆಂಬುದು ನಾಡಿನ ಹಿತಚಿಂತಕರ ಅಪೇಕ್ಷೆ. ಕನ್ನಡದ ಮುನ್ನಡೆಗೆ ಇರುವ ಕಾಲ್ತೊಡಕುಗಳ ಕಾರಣಗಳನ್ನೆಲ್ಲ ಪಟ್ಟಿಮಾಡಿದರೆ, ಮುಖ್ಯವಾಗಿ ತೋರುವುದೆಂದರೆ, ತಕ್ಷಣವೇ ಕಾರ್ಯಪ್ರವೃತ್ತವಾಗಲು ಬೇಕಾದ ಕ್ರಿಯಾಸಂಕಲ್ಪ ಹಾಗೂ ಸಾಹಸಪ್ರವೃತ್ತಿಯ ಕೊರತೆ. ಇಂಗ್ಲಿಷ್ ಭಾಷಾವ್ಯಾಮೋಹದ ಜನಸಮುದಾಯಕ್ಕೆ ಇರುವ ದೊಡ್ಡ ಪಗಾರದ ಭ್ರಮೆ ಹಾಗೂ ರಾಜಕೀಯ ನಾಯಕತ್ವದ ಚದುರಂಗದಾಟ. ಭಾವಶುದ್ಧಿಯಿಲ್ಲದೆ, ಸರಿಯಾದ ಮುನ್ನೋಟವಿಲ್ಲದೆ, ಸಮುದಾಯದ ಏಳಿಗೆ ಸಾಧ್ಯವಿಲ್ಲ. ಉದ್ದೇಶವನ್ನು ಸಾಧಿಸಲು ಧೈರ‍್ಯದಿಂದ ಮುನ್ನಡೆಯಬೇಕು; ಆ ಮುನ್ನಡೆಗೆ ಕನ್ನಡದ ಸಹಜಪ್ರೇಮವಿರುವ ಉದಾತ್ತನಾಯಕತ್ವದ ಬೆಂಬಲಬೇಕು. ಸಮಾಜ ಸರ್ಕಾರಗಳು ಒಮ್ಮತವಾಗಿ, ಒಂದು ಕೈಯಾಗಿ ತಮ್ಮ ಸಂಕಲ್ಪಶಕ್ತಿಯನ್ನು, ಸಾಧನಾಬಲವನ್ನು ಕನ್ನಡದ ವ್ಯಾಪ್ತಿ ವೃದ್ಧಿ ಸುಸ್ಥಿತಿಗಳಿಗೆ ಕೇಂದ್ರೀಕರಿಸುವ ಕಾಲ ಈಗ ಸನ್ನಿಹಿತವಾಗಿದೆ. ಭಾಷಾಸಮಿತಿಗಳೂ ಆಯೋಗಗಳೂ ಸಾಕಷ್ಟು ಚಿಂತನಮಂಥನಗಳನ್ನು ನಡಸಿ ಕಾರ್ಯವಿಧಾನಗಳನ್ನು ರೂಪಿಸಿವೆ.

ಹಿರಿಯ ಸಾಹಿತಿಗಳಾದ ನಾಡೋಜ ಡಾ. ಹಂಪ ನಾಗರಾಜಯ್ಯ ಹಾಗೂ ಕಮಲಾ ಹಂಪನಾ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಮೂಡುಬಿದಿರೆ ಪುರಸಭೆ ಅಧ್ಯಕ್ಷೆ ರೂಪಾ ಎಸ್. ಶೆಟ್ಟಿ, ನುಡಿಸಿರಿಯ ಎಲ್ಲಾ ಘಟಕಗಳ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

ಸಮಾರಂಭವನ್ನು ಉದ್ಘಾಟಿಸಿದ ಡಾ. ವೀಣಾ ಶಾಂತೇಶ್ವರ್ ಹಾಗೂ ಸಮ್ಮೇಳನಾಧ್ಯಕ್ಷ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರೀ ಅವರನ್ನು ಗೌರವಿಸಲಾಯಿತು. ಆಳ್ವಾಸ್ ನುಡಿಸಿರಿ 2014 ‘ಕರ್ನಾಟಕ ವರ್ತಮಾನದ ತಲ್ಲಣಗಳು’ ನೆನಪಿನ ಸಂಚಿಕೆ ನಾವರಣಗೊಂಡಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಸ್ವಾಗತಿಸಿ ಪ್ರಸ್ತಾವನೆಗೈದುರು. ಪತ್ರಕರ್ತ ಮನೋಹರ ಪ್ರಸಾದ್ ವಂದಿಸಿದರು.

Nudi speech1 (1) Nudi speech2
ಸಮ್ಮೇಳನಾಧ್ಯಕ್ಷರ ಮಾತಿನ ಪೂರ್ಣಪಾಠ:

ಮಹಾಕವಿ ರತ್ನಾಕರನ (೧೫೫೭) ವಿಷಯವಾಗಿ ಎರಡು ಮಾತು ಮೊದಲಲ್ಲಿಯೇ ಹೇಳುವುದುಚಿತ. ಈ ಕವಿ ಸುಮಾರು ೧೦ ಸಾವಿರ ಸುಂದರ ಸಾಂಗತ್ಯಪದ್ಯಗಳ ‘ಭರತೇಶವೈಭವ’ವನ್ನು ೯ ತಿಂಗಳ ಅಲ್ಪಾವಧಿಯಲ್ಲೇ ರಚಿಸಿದನು. ಈತನ ಕವಿತ್ವಶಕ್ತಿಯನ್ನು ಕುರಿತು ಹಿರಿಯರು ತುಂಬ ಒಳ್ಳೆಯ ಮಾತುಗಳನ್ನು ಹೇಳಿದ್ದಾರೆ. ಈತ ಸಮಗ್ರ ಸಾಂಗತ್ಯಕವಿಗಳ ಚರಿತ್ರೆಯಲ್ಲಿ, ಸರ್ವೋಚ್ಚಸ್ಥಾನವನ್ನು ಅಲಂಕರಿಸಿದ್ದಾನೆ. ಈತನ ಕಾವ್ಯ ಸಾಂಗತ್ಯಕಾವ್ಯಗಳ ರತ್ನಕಿರೀಟದ ಮಧ್ಯಮಣಿಯಾಗಿದೆ.
ನಮ್ಮ ಕಾಲದ ಮಹಾಕವಿ ಕುವೆಂಪು ಅವರ ಮಾತು ಇದು: (೧) “ಕಾವ್ಯ, ವಸ್ತು ಮತ್ತು ದರ್ಶನದ ದೃಷ್ಟಿಯಿಂದ ನೋಡುವುದಾದರೆ ಭರತೇಶವೈಭವದ ಕರ್ತೃವಾದ ರತ್ನಾಕರವರ್ಣಿ ಹಿಂದಿನ ಮಹಾಕವಿಗಳ ಪಂಕ್ತಿಯಲ್ಲಿ ಪ್ರಥಮಶ್ರೇಣಿಗೆ ಏರುವಂತೆ ತೋರುತ್ತದೆ”. (೨) “ಭರತೇಶವೈಭವದಲ್ಲಿ ತ್ಯಾಗಭೋಗಗಳ ಸಮನ್ವಯದ ಯೋಗದರ್ಶನ ವನ್ನು ಕವಿ ಸುಂದರವಾಗಿ ಪ್ರತಿಮಿಸಿದ್ದಾನೆ. ಅಷ್ಟೆ ಅಲ್ಲ, ಕವಿ ಆದರ್ಶವನ್ನು ಭರತನ ಜೀವನದಲ್ಲಿ ಮಾತ್ರವೇ ಅಲ್ಲದೆ ಇಡೀ ಕಾವ್ಯದ ವಿವರ ವಿವರಗಳಲ್ಲೆಲ್ಲ ಬುದ್ಧಿಪೂರ್ವಕವಾಗಿ ಪ್ರತಿಮಿಸಿರುವುದನ್ನು ನೋಡಿದರಂತೂ ಅಂತಹ ಕಾವ್ಯಸೃಷ್ಟಿ ಜಗತ್ತಿನ ಮತ್ತಾವ ಸಾಹಿತ್ಯದಲ್ಲೂ ಆಗಿರುವಂತೆ ಕಾಣುವುದಿಲ್ಲ. ಆ ದೃಷ್ಟಿಯಿಂದ ಈ ಕೃತಿ ಜಗತ್‌ಕೃತಿ”. (೩) “ಹಿಂದಿನ ಕನ್ನಡ ಸಾಹಿತ್ಯದಲ್ಲಿ ಹಳೆಯ ಕಥೆ ಮತ್ತು ವಿಷಯ ಇವುಗಳಿಂದ ಅತ್ಯಂತ ಸ್ವತಂತ್ರವಾದ ದರ್ಶನವಸ್ತುವನ್ನು ಸೃಷ್ಟಿಸಿ ತನ್ನದೆ ಆದ ಒಂದು ನೂತನಮಾರ್ಗದಿಂದ ಭರತೇಶವೈಭವದಂತಹ ಬೃಹತ್ಪ್ರಮಾಣದ ಮಹಾಕೃತಿಯನ್ನಾಗಿಸಿದ ಮಹಾಕವಿಯ ಕೀರ್ತಿ ರತ್ನಾಕರವರ್ಣಿಗೊಬ್ಬನಿಗೆ ಸಲ್ಲುತ್ತದೆ.”
ಈಗ ಮಾಸ್ತಿಯವರ ಮಾತು: (೧) “ರತ್ನಾಕರನ ಕಾವ್ಯ ಕನ್ನಡದ ಮಕ್ಕಳ ಭಾವದ ಹಸಿವನ್ನು ತೀರಿಸಬಲ್ಲುದು. ನಾವು ಅವನ ಕಾವ್ಯದ ಕಡೆಗೆ ಹೆಚ್ಚು ಹೆಚ್ಚಾಗಿ ತಿರುಗಬೇಕು”. (೨) “ಮಹಾಕಾವ್ಯಕ್ಕೆ ವಸ್ತುವಿಜ್ಞಾನ ಒಂದು ಗುಣ ಎಂದು ವಾಲ್ಮೀಕಿಯ ಕೃತಿ ನಿರೂಪಿಸಿದ ಮೇಲೆ ಕನ್ನಡದಲ್ಲಿ ಅದನ್ನು ಪೂರ್ಣವಾಗಿ ಸಾಧಿಸಿದವರು ಇಬ್ಬರೇ. ಒಬ್ಬ ಕುಮಾರವ್ಯಾಸ, ಇನ್ನೊಬ್ಬ ರತ್ನಾಕರ”.
ಈ ಎರಡೂ ಅಭಿಪ್ರಾಯಗಳಲ್ಲಿ ವಿಮರ್ಶೆ ಕೊಂಚ ಉದಾರವಾಯಿತು ಎಂದು ಕೆಲವರಿಗೆ ತೋರಿದರೆ, ಹಾಗೆ ತೋರುವುದಕ್ಕೆ ಅವಕಾಶಗಳಿವೆಯೆನ್ನಬಹುದು. ಆದರೇನು? ನಮ್ಮ ಸಾಹಿತ್ಯೇತಿಹಾಸದಲ್ಲಿ ರತ್ನಾಕರ ಖಂಡಿತವಾಗಿ ನಾಲ್ಕೈದು ಜನ ಮಹಾಕವಿಗಳಲ್ಲಿ ಅಗ್ರಶ್ರೇಣಿಯಲ್ಲಿದ್ದಾನೆ.
ರತ್ನಾಕರನ ಕರ್ತೃತ್ವದ ಮೂರು ಶತಕಗಳಿದ್ದು, ಮೈಸೂರತ್ತಣ ಕರ್ಣಾಟಕ ಕಾವ್ಯಮಂಜರಿ ಎಂಬ ಪತ್ರಿಕೆ ತನ್ನ ಪ್ರಾಚೀನ ಕಾವ್ಯಪ್ರಕಟನೆಯನ್ನು ಆರಂಭಿಸಿದ್ದು ರತ್ನಾಕರನ ‘ರತ್ನಾಕರಾಧೀಶ್ವರಶತಕ’ ಮತ್ತು ‘ಅಪರಾಜಿತೇಶ್ವರಶತಕ’ ಎಂಬೆರಡು ಕೃತಿಗಳಿಂದಲೇ. ಇದು ೧೮೯೩ರಲ್ಲಿ, ಎಂದರೆ ೧೨೨ ವರ್ಷಗಳ ಹಿಂದೆ. ಈ ಕವಿಯ ಅಧ್ಯಾತ್ಮಗೀತಗಳು ಈಗ ಪ್ರಕಟವಾಗಿವೆ; ಅವಕ್ಕೆ ರಾಗಸಂಯೋಜನೆ ಮಾಡಿ ಗಾಯಕರು ಹಾಡುತ್ತಿದ್ದಾರೆಯೇ, ನನಗೆ ತಿಳಿಯದು. ಒಳ್ಳೆಯ ಸಾಹಿತ್ಯಸತ್ತ್ವದ ರಚನೆಗಳಿವು. ಇವಕ್ಕೆ ಪ್ರಚಾರ ಸಿಕ್ಕಬೇಕು.

ಮೂಡಬಿದರೆಯ ಕವಿಗಣ
ಮೂಡಬಿದರೆಯ ಮತ್ತು ಸುತ್ತಮುತ್ತಣ ಕವಿಗಳು ೧೭-೧೯ನೆಯ ಶತಮಾನಗಳಲ್ಲಿ ಕೃತಿರಚನೆಯನ್ನು ಮಾಡಿದವರು ರತ್ನಾಕರನ ಪ್ರಭಾವಕ್ಕೆ ಒಳಪಟ್ಟಿರುವುದನ್ನು ಗಮನಿಸ ಬಹುದಾಗಿದೆ. ಇಂಥವರಲ್ಲಿ ನೇಮಿವ್ರತಿ ಎಂಬವನು (ಸು. ೧೬೫೦) ‘ಸುವಿಚಾರಚರಿತೆ’, ‘ಜ್ಞಾನಭಾಸ್ಕರಚರಿತೆ’ ಎಂಬ ಕೃತಿಗಳನ್ನು “ತುಳುರಾಜ್ಯಕಗ್ಗಳವಾದ ಬಿದರೆ”ಯಲ್ಲಿ ಹುಟ್ಟಿ ರಚಿಸಿದನು.
ಪಟ್ಟಾಭಿರಾಮನೆಂಬ ಒಬ್ಬ ಬ್ರಾಹ್ಮಣಕವಿ (ಸು. ೧೭೨೫) ಮೂಡಬಿದರೆಯನ್ನು ಚೌಟರಾಜರ ಪರಂಪರೆಯಲ್ಲಿ ಅಬ್ಬಕ್ಕ ದೇವಿ ಎಂಬವಳು ಆಳುತ್ತಿದ್ದಾಗ ‘ರತ್ನಶೇಖರಚರಿತೆ’ಯೆಂಬ ಒಂದು ಸಾಂಗತ್ಯಕಾವ್ಯ ರಚಿಸಿದನು. ಈ ಕೃತಿ ಒಂದು ಜೈನಕಾವ್ಯ; ಬರೆದಾತ ಬ್ರಾಹ್ಮಣ. ಕವಿಯ ಸ್ನೇಹಿತ ಜೈನನಾದ ಪದ್ಮನೆಂಬವನ (‘ಪದ್ಮಾನುಮತದಿಂದೆ’) ಕೋರಿಕೆಯಂತೆ ಕೃತಿ ರಚನೆಯಾಗಿದೆ. ಕವಿಚರಿತೆಕಾರರು ಕೂಡ “ಈ ಕವಿ ಮತಾಂತರದವ ನಾದರೂ ಜೈನನಾದ ಸ್ನೇಹಿತನಿಗೋಸ್ಕರ ಜೈನಕವಿಗಳ ರೀತಿಯಲ್ಲಿಯೇ ಈ ಜೈನಗ್ರಂಥ ವನ್ನು ರಚಿಸಿರುವುದು ಗಮನಿಸತಕ್ಕ ವಿಷಯವಾಗಿದೆ” ಎಂದಿದ್ದಾರೆ. ಇಂತಹ ಇನ್ನೊಂದು ಉದಾಹರಣೆ ಪ್ರಾಚೀನಕನ್ನಡಸಾಹಿತ್ಯದಲ್ಲಿ ಉಂಟೇ, ನನಗೆ ತಿಳಿಯದು. ಇದು ಮೂಡಬಿದರೆಯ ಮತೀಯ ಸಾಮರಸ್ಯದ ಒಂದು ದೃಷ್ಟಾಂತ.
ಶಾಂತಿಕೀರ್ತಿಮುನಿ (೧೭೨೫-೧೮೦೯) ‘ಪುರುದೇವಚರಿತೆ’ (೧೭೨೫), ‘ಶಾಂತೀಶ್ವರಚರಿತೆ’ (೧೮೦೯) ಎಂಬವೇ ಅಲ್ಲದೆ ‘ಪಾರ್ಶ್ವನಾಥಚರಿತೆ’, ‘ಚತುರ್ವಿಂಶತಿ ತೀರ್ಥಕರಕಲ್ಯಾಣ’ ಮುಂತಾಗಿ ಇನ್ನೂ ಹಲವು ಕೃತಿಗಳನ್ನು ಬರೆದಿದ್ದಾನೆ. ‘ಪಾರ್ಶ್ವನಾಥ ಚರಿತೆ’ಯನ್ನು ಆದಿನಾಥನಿಗೆ ಸಮರ್ಪಿತವಾದ ಬಸದಿಯಲ್ಲಿ ರಚಿಸಿದ ಸಾಧ್ಯತೆಯಿದೆ.
ವೇಣೂರು ‘ಭುಜಬಲಿಚರಿತೆ’ ರಚಿಸಿದ ಪದ್ಮನಾಭನೆಂಬ ಕವಿ (ಸು. ೧೭೫೦) ಮೂಡಬಿದರೆ ಸ್ಥಳದವನು, ಪದ್ಮಶೆಟ್ಟಿ-ಪದ್ಮಾವತಿಯರ ಮಗ. ೨೮ ಸಂಧಿ, ೪೭೦೫ ಸಾಂಗತ್ಯಪದ್ಯಗಳ ದೊಡ್ಡ ರಚನೆ. ಶ್ರವಣಬೆಳಗೊಳ, ಕಾರ್ಕಳ ಇಲ್ಲಿಯ ಗೊಮ್ಮಟ ಜಿನಚರಿತ್ರೆಗಳುಂಟು; ಆದರೆ ವೇಣೂರುಕ್ಷೇತ್ರದ ಗೊಮ್ಮಟನ ಚರಿತ್ರೆ ಬರೆದು, ಅಂಥ ಚರಿತ್ರೆಯೊಂದು ಇಲ್ಲದ ಕೊರತೆಯನ್ನು ಈ ಕವಿ ನೀಗಿದ್ದಾನೆ. ಪ್ರತಿ ಸಂಧಿಯ ಆರಂಭಕ್ಕೆ ಒಂದು ಸಂಸ್ಕೃತಪದ್ಯವಿರುವುದು ಕೂಡ ವಿಶೇಷವೇ.
ಈಚಿನ ಇನ್ನೊಬ್ಬ ದೊಡ್ಡ ಸಾಂಗತ್ಯಕವಿ ಚಂದಯ್ಯೋಪಾಧ್ಯಾಯ (೧೮೨೮) ಕೂಡ ಇಲ್ಲಿಯವನೇ. ಈತನ ‘ಜೈನಾಚಾರ’ವೆಂಬ ೩೨ ಸಂಧಿ – ೩೭೯೯ ಸಾಂಗತ್ಯ ಪದ್ಯಗಳ ರಚನೆ ಒಂದು ಕಥಾಕೋಶದಂತಿರುವ ಆಕರ್ಷಕಕೃತಿ. ಶ್ರವಣಬೆಳಗೊಳ ಮತ್ತು ಮೈಸೂರು ಸಂಸ್ಥಾನಗಳ ಸಮಕಾಲೀನ ಚರಿತ್ರೆಯ ಸಂಗತಿಗಳೂ ಇಲ್ಲಿ ಉಂಟು. ಇದಲ್ಲದೆ ಈತನ ಬೇರೆ ಕೆಲವು ರಚನೆಗಳೂ ಉಂಟು.
ಎರಡು ಪುಟ್ಟ ರಚನೆಗಳ ಬಗ್ಗೆ ಕೂಡ ಇಲ್ಲಿ ಹೇಳಬೇಕು. (೧) ಮೂಡಬಿದರೆಯ ಬಸದಿಗಳಲ್ಲಿರುವ ಬಿಂಬಗಳ ಲೆಕ್ಕಪುಸ್ತಕ; ಸ್ಥಳದ ಚಾರಿತ್ರಿಕ ಆಕರಗಳಲ್ಲಿ ಇದೂ ಒಂದು. (೨) ‘ತ್ರಿಭುವನಚೂಡಾಮಣಿ ಬಸದಿಯ ಜೀರ್ಣೋದ್ಧಾರ ಚರಿತ’ (ಸು. ೧೮ನೆಯ ಶತಮಾನ). ಇದೂ ಚಾರಿತ್ರಿಕವಿಶೇಷದ ಕೃತಿಯೇ.
ಹೀಗೆ ಬಸದಿಗಳ ಬಿಂಬಗಳ, ಪದಾರ್ಥಗಳ, ಜೀರ್ಣೋದ್ಧಾರವಿವರಗಳ ಕೃತಿಗಳನ್ನು ರಚಿಸುವ ಈ ಶ್ರದ್ಧೆ, ಧರ್ಮನಿಷ್ಠೆ ಯಾರಿಗಾದರೂ ವಿಶೇಷವೆಂದೇ ಹೇಳಬೇಕಾದ್ದು. ಈ ಕವಿಗಳು, ರತ್ನಾಕರನಿಂದ ಹಿಡಿದು ಚಂದಯ್ಯ ಉಪಾಧ್ಯಾಯನ ವರೆಗೆ, ಮಾಡಿರುವ ಪರಿಶ್ರಮ, ಪ್ರಕಟಿಸಿರುವ ಸ್ಥಳದ ಅಭಿಮಾನ ತೌಲನಿಕವಾಗಿಯೂ ವಿಶೇಷವೇ.
ಇದು ಹೇಗೆ ಸಾಧ್ಯವಾಯಿತು? ಮೂಡಬಿದರೆಯ ಈ ನೆಲದ ಫಲವತ್ತತೆ ಇದು. ಸಾಹಿತ್ಯ, ಧರ್ಮ, ಸಂಸ್ಕೃತಿ ಮುಪ್ಪುರಿಗೊಂಡಿರುವ ಈ ಉರ್ವರಾಕ್ಷೇತ್ರದಲ್ಲಿ ಡಾ. ಮೋಹನ ಆಳ್ವರ ನುಡಿಸಿರಿಯ ಸಂಕಲ್ಪ, ಯೋಜನೆ, ನಿರ್ವಹಣೆ ಕೂಡ ನಿತ್ಯಹರಿದ್ವರ್ಣದ ವಸಂತೋದ್ಯಾನದ ಹಾಗೆಯೇ ಹೂವಾಗಿದೆ, ಹಣ್ಣಾಗಿದೆ. ಇದು ನಿಂದ ನೆಲದ ಗುಣವೇ, ಸರಿ.

ಮೂಡಬಿದರೆಯ ಮಹಿಮೆ
ನಾನು ನಿಂದ ನೆಲದ ಗುಣ ಎಂದೆನಲ್ಲವೇ? ಅದನ್ನು ಬೇರೆ ಇನ್ನಷ್ಟು ವಿವರದಲ್ಲಿ ತಮಗೆ ನೆನಪುಮಾಡಿಕೊಡುತ್ತೇನೆ.
ಮೂಡಬಿದರೆ ದಕ್ಷಿಣಭಾರತದ ‘ಜೈನಕಾಶಿ’ ಎಂದು ಹೆಸರಾದ್ದು; ಬಿದರೆ ಎಂದರೂ ವಂಶಪುರ, ವೇಣುಪುರ ಎಂದರೂ ಇದೇ. ೧೭ನೆಯ ಶತಮಾನದಲ್ಲಿ ಪುತ್ತಿಗೆಯ ಚೌಟರಸರ ಮೂರನೆಯ ಭೋಜರಾಯ ಇಲ್ಲಿ ಅರಮನೆ ಕಟ್ಟಿಸಿ ರಾಜಧಾನಿ ಮಾಡಿಕೊಂಡ ಮೇಲೆ ಮೇಲ್ಮೆ ಬೆಳೆಯಿತು. ಇಲ್ಲಿಯ ಜೈನಪೀಠಾಧಿಪತಿಗಳಿಗೆ ಪಟ್ಟವಾಗುವುದು ಇಲ್ಲಿಯ ಹಳೆಯ ಬಸದಿಯಲ್ಲಿ; ಇದು ಗುರುಬಸದಿ, ಸಿದ್ಧಾಂತಬಸದಿ. ಇಲ್ಲಿಯ ೧೮ ಜಿನಬಸದಿಗಳಲ್ಲಿ ಸಾವಿರಕಂಬಗಳ ಬಸದಿ ಎಂದು ಲೋಕಪ್ರಸಿದ್ಧವಾದ ‘ತ್ರಿಭುವನತಿಲಕಚೂಡಾಮಣಿ’ (೧೪೩೧) ಎಂಬುದು ದಕ್ಷಿಣಭಾರತದ ಉತ್ತಮ ವಾಸ್ತುನಿರ್ಮಾಣದಲ್ಲಿ ಒಂದು. ಬಸದಿಯ ಭೂಷಣವಾಗಿರುವ, ಏಳಡಿ ಎತ್ತರದ, ಪಂಚಲೋಹದ ಚಂದ್ರನಾಥಸ್ವಾಮಿಯ ಬಿಂಬ ಪ್ರಾಯಃ ದಕ್ಷಿಣಭಾರತದಲ್ಲಿಯೇ ಅತಿದೊಡ್ಡ ಚಂದ್ರನಾಥ ಜಿನಬಿಂಬವಾಗಿದೆ. ಭೈರಾದೇವಿ ಮಂಟಪದ ಕೆಳಗಲ್ಲುಗಳಲ್ಲಿ ಕೆತ್ತಲಾದ ಜಿರಾಫೆ ಮತ್ತು ಚೀನದ ಡ್ರೇಗನ್ ವಿಸ್ಮಯಕರ ಪ್ರಾಣಿಶಿಲ್ಪಗಳು.
ಸಿದ್ಧಾಂತಬಸದಿಯಲ್ಲಿ ಜೈನಧರ್ಮದ ಪವಿತ್ರ ಸಿದ್ಧಾಂತಗ್ರಂಥಗಳಾದ ‘ಧವಲಾ-ಜಯಧವಲಾ-ಮಹಾಧವಲ’ಗಳೆಂಬವು ಶ್ರೀತಾಳೆಯ ಓಲೆಪ್ರತಿಗಳಲ್ಲಿ, ೧೨ನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿ ಲಿಖಿತವಾದ ಪ್ರಾಕೃತಭಾಷಾಗ್ರಂಥಗಳಾಗಿದ್ದು ಈ ಅತಿಶಯ ಗಾತ್ರವೈಭವದ ಹಸ್ತಪ್ರತಿಗಳ ಭವ್ಯತೆ, ಇಲ್ಲಿಯ ವರ್ಣರಂಜಿತ ಚಿತ್ರಗಳ ಕಲೆಗಾರಿಕೆ ಕರ್ನಾಟಕದ ಇತರ ಭಾಗಗಳಲ್ಲಿಯೇ ಆಗಲಿ, ಭಾರತದ ಯಾವುದೇ ಭಾಗದಲ್ಲಿಯೇ ಆಗಲಿ ಕಂಡುಬರುವುದಿಲ್ಲ ಎಂದಿದ್ದಾರೆ, ಪರಿಣತರು. ಈ ಸಾರಸ್ವತನಿಧಿ ಯಿದ್ದುದು ಮೂಡಬಿದರೆಯಲ್ಲಿ ಮಾತ್ರವೇ ಎನ್ನುವುದನ್ನು ಗಮನಿಸಿದರೆ, ಜೈನಧರ್ಮದ ಇತಿಹಾಸದಲ್ಲಿ ಈ ಕ್ಷೇತ್ರದ ಮಹಿಮೆಯೇನೆಂದು ತಿಳಿಯುತ್ತದೆ. ‘ಧವಳಗ್ರಂಥ’ಗಳ ಈ ಏಕೈಕ ಸಂರಕ್ಷಿತಪ್ರತಿ, ಏಳೆಂಟು ಪೆಟ್ಟಿಗೆಗಳಲ್ಲಿ ನಿಧಿಯಂತೆ ನಿಕ್ಷೇಪಗೊಂಡಿದ್ದುದು ಉತ್ತರಭಾರತದ ವಿದ್ವಾಂಸರ ಧರ್ಮಶ್ರದ್ಧೆಯ ಪ್ರಬಲ ಪ್ರಯತ್ನದಿಂದಾಗಿ ಸಂಪಾದನೆ ಗೊಂಡು ಲೋಕಪ್ರಕಟವಾಗುವುದು ಸಾಧ್ಯವಾಯಿತು. ಇದು ಶ್ರವಣಬೆಳಗೊಳದ ಶ್ರೀಮಠದ ಸ್ವಸ್ತಿಶ್ರೀ ಚಾರುಕೀರ್ತಿಭಟ್ಟಾರಕ ಸ್ವಾಮೀಜಿಯವರ ಪ್ರಧಾನಸಂಪಾದಕತ್ವದಲ್ಲಿ, ಅಲ್ಲಿಯ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾಸಂಸ್ಥೆಯ ಮೂಲಕ ಕನ್ನಡ ಅನುವಾದದಲ್ಲಿಯೂ ಶ್ರೀಮಂತಪ್ರಕಟನೆಯಾಗಿ ಈಚೆಗೆ ೨೦೦೫ರಿಂದ ಭಾಗಭಾಗಗಳಾಗಿ ಹಲವು ಸಂಪುಟಗಳಲ್ಲಿ ಪ್ರಕಟಗೊಂಡಿದೆ.
ಅನನ್ಯ ಗದ್ಯಕಾವ್ಯವಾದ ‘ವಡ್ಡಾರಾಧನೆ’ಯ ಸಂಪಾದನೆಗೆ ಧೈರ್ಯಕೊಟ್ಟದ್ದು ಇದೇ ಸ್ಥಳದಲ್ಲಿ ದೊರೆತ ಇನ್ನೊಂದು ಹಸ್ತಪ್ರತಿ. ನನ್ನ ಗುರುಗಳಾದ ಎನ್. ಅನಂತ ರಂಗಾಚಾರ‍್ಯರು ದಕ್ಷಿಣಕನ್ನಡದಲ್ಲಿ ಹಸ್ತಪ್ರತಿಗಳ ಸಂಗ್ರಹಕ್ಕೆಂದು ಸಂಚಾರ ಹೊರಟಾಗ ದೊರೆತದ್ದು, ಅದು. ತಮ್ಮ ಸಂಚಾರದ ಸ್ವಾರಸ್ಯವಾದ ಅನುಭವಗಳನ್ನು ಅವರು ಒಂದು ಲೇಖನದಲ್ಲಿ ವಿಸ್ತಾರವಾಗಿ ದಾಖಲಿಸಿದ್ದು, ಆ ಸ್ವಾರಸ್ಯವನ್ನು ಓದಿಯೇ ತಿಳಿಯಬೇಕು. ೮೦ ವರ್ಷಗಳಷ್ಟು ಹಿಂದೆ ನಡೆದುದನ್ನು ನಿರೂಪಿಸಿರುವ ಈ ಅನುಭವಕಥನದಲ್ಲಿ ಇಲ್ಲಿ ಆಗ್ಗೆ ವಾಸವಿದ್ದ ಪಂಡಿತರಲ್ಲಿ ಕೆಲವರ ವಿಚಾರವೂ ಉಂಟು. ಪಂಡಿತ ಲೋಕನಾಥಶಾಸ್ತ್ರಿಗಳ ಸ್ವಂತ ಶ್ರೀ ವೀರವಾಣೀವಿಲಾಸ ಜೈನಸಿದ್ಧಾಂತಭವನ ದಲ್ಲಿಯೂ ನೂರಾರು ಹಸ್ತಪ್ರತಿಗಳಿದ್ದುದನ್ನು ದಾಖಲಿಸಿದ್ದಾರೆ. ಶ್ರೀಮಠದಲ್ಲಿ ೧೦ ಕಪಾಟುಗಳ ೯೪೦ ಓಲೆಗರಿಗಳ ಪುಸ್ತಕಗಳಿದ್ದುವೆಂದೂ ೬ ಅಪೂರ್ವಗ್ರಂಥಗಳನ್ನು ಮೈಸೂರಿಗೆ ಪ್ರಾಚ್ಯಕೋಶಾಗಾರದ ಸಂಗ್ರಹಕ್ಕೆ ಎರವಲು ತಂದುದಾಗಿಯೂ ತಿಳಿಸಿದ್ದಾರೆ.
ಕಿಟ್ಟೆಲರ ‘ಶಬ್ದಮಣಿದರ್ಪಣ’ದ ಎರಡನೆಯ ಸುಧಾರಿಸಿದ ಆವೃತ್ತಿಯ ಪ್ರಕಟಣೆಗೆ (೧೮೯೭) ಮೂಡಬಿದರೆಯ ಭಂಡಾರದ ಹಸ್ತಪ್ರತಿ ತುಂಬ ಸಹಾಯಮಾಡಿತು. ಮೂಡಬಿದರೆಯ ಹಸ್ತಪ್ರತಿಗಳ ವಿವರಣೆಯ ‘ತಾಡಪತ್ರೀಯ ಗ್ರಂಥಸೂಚಿ’ಯಲ್ಲಿ ಉಕ್ತವಾಗಿರುವ ಪ್ರಕಾರ ಈ ಓಲೆಪ್ರತಿಯೇ ಈ ಗ್ರಂಥದ ಅತ್ಯಂತ ಪ್ರಾಚೀನ ಹಸ್ತಪ್ರತಿಯೆಂದು (೧೫೫೧) ತಿಳಿಯುವುದು.
ಮೂಡಬಿದರೆಯ ಮಹಿಮೆ ಇಲ್ಲಿಗೆ ಮುಗಿಯಲಿಲ್ಲ. ಇಲ್ಲಿಯ ದಿಗಂಬರ ಜೈನ ಧರ್ಮಶಾಲೆಯಲ್ಲಿಯ ಹಸ್ತಪ್ರತಿಗಳನ್ನು ನನ್ನ ಮಿತ್ರರಾದ ಬಿ.ಎಸ್. ಸಣ್ಣಯ್ಯನವರು ತಮ್ಮ ತಂಡದೊಂದಿಗೆ ಶೋಧಿಸಲೆಂದು ಬಂದಾಗ ದೊರೆತದ್ದು (೧೯೭೩), ಶತಮಾನಗಳ ಕಾಲ ಕತ್ತಲಲ್ಲಿ ಕರಗಿಹೋದಂತೆ ಹುದುಗಿದ್ದ ೧೧ನೆಯ ಶತಮಾನದ ನಾಗವರ್ಮಕೃತ ‘ವೀರವರ್ಧಮಾನ ಪುರಾಣ’ ಕೃತಿಯ ಏಕೈಕ ಕಾಗದದ ಹಸ್ತಪ್ರತಿ; ಹೀಗೆ ದೊರೆಯಲಾಗಿ ಆವರೆಗಿನ ಕನ್ನಡ ಸಾಹಿತ್ಯೇತಿಹಾಸದ ಅನೇಕ ವಿವರಗಳು ಸ್ಪಷ್ಟವಾದುವು, ತಪ್ಪುಗ್ರಹಿಕೆಗಳು ದೂರವಾದುವು. ಗ್ರಂಥಸಂಪಾದನೆಯಲ್ಲಿ ಸಂಪಾದಕರಿಗೆ ನಾನು ಕೂಡ ನೆರವಾದೆ; ಈಚೆಗೆ ಪಾಠಪರಿಷ್ಕರಣದ ವಿಸ್ತೃತಲೇಖನವನ್ನೂ ಪ್ರಕಟಿಸಿದೆ. ಈ ಕಾವ್ಯ ಪ್ರಕಟವಾದ ಹೊಸತರಲ್ಲಿ ನನ್ನದೊಂದು ಕೆಲಸಕ್ಕೆಂದು ನನ್ನ ಗುರುಗಳಾದ ಕುವೆಂಪು ಅವರ ಮನೆಗೆ ಹೋಗಿದ್ದಾಗ, ಅವರು ತಾವಾಗಿಯೇ ಈ ಗ್ರಂಥದ ವಿಶೇಷತೆಯ ಬಗ್ಗೆ ನನ್ನನ್ನು ಪ್ರಶ್ನಿಸಿದರು. ನಾನು ಕನ್ನಡಸಾಹಿತ್ಯೇತಿಹಾಸದ ಕೆಲವು ವಿವಾದಾಸ್ಪದವಾದ ವಿವರಗಳು ಪರಿಹಾರಗೊಂಡುದು, ಹೊಸ ವಿವರಗಳು ಬೆಳಕಿಗೆ ಬಂದುದು ಮತ್ತು ವಿವಿಧ ಛಂದೋಬಂಧಗಳು ಪ್ರಯೋಗವಾಗಿರುವುದು ಇವನ್ನು ಅವರ ಗಮನಕ್ಕೆ ತಂದೆ. ಹಾ.ಮಾ. ನಾಯಕರು ಕೂಡ ಪ್ರಶ್ನಿಸಿದ್ದುಂಟು. ಈ ಕೃತಿ ವಡ್ಡಾರಾಧನೆಯ ಅನಂತರದ ಅಮೂಲ್ಯವಾದ ಶೋಧವೆಂದು ಅವರಿಗೆ ಹೇಳಿದೆ. ಸಣ್ಣಯ್ಯನವರು ಈ ಗ್ರಂಥಭಂಡಾರವನ್ನು ‘ಸಂಶೋಧಕರಿಗೆ ತವನಿಧಿ’ ಎಂದು ಕರೆದಿದ್ದಾರೆ.
ಈ ಸ್ಥಳದ ಹಸ್ತಪ್ರತಿಭಂಡಾರಗಳ ಸ್ಥಿತಿಗತಿಗಳು ಈಗ ಹೇಗಿವೆಯೋ ನನಗೆ ತಿಳಿಯದು. ಅವು ಧರ್ಮಶ್ರದ್ಧೆಯ, ಸಾಹಿತ್ಯಾಸಕ್ತಿಯ, ಸಂಸ್ಕೃತಿಪ್ರೇಮಿಗಳ ಆಸಕ್ತಿ ಕುತೂಹಲ ಗಳನ್ನು ತಣಿಸುವ ಹಾಗೆ ಸುವ್ಯವಸ್ಥೆಯ ಭಂಡಾರಗಳಾಗಬೇಕು; ಸಾಹಿತಿಗಳ, ಅಧ್ಯಯನಾ ಸಕ್ತರ ಸರಸ್ವತೀಭಂಡಾರಗಳಾಗಬೇಕು. ಆಸಕ್ತರು ಇವುಗಳ ಸುಸ್ಥಿತಿಗೆ ಶ್ರಮಿಸಬೇಕು.
ಮೂಡಬಿದರೆಯ ಬೆಟ್ಟಕೇರಿಯಲ್ಲಿಯ ಮುಡಿಂಜೆಯೆಂಬ ಜೈನಸ್ಮಾರಕಗಳ ವಿಚಾರವಿರಲಿ; ಚೌಟರಸರ ಅರಮನೆಯ ಕಾಷ್ಠಶಿಲ್ಪಗಳಲ್ಲಿಯ ಪಂಚನಾರೀತುರಂಗವೂ ನವನಾರೀಕುಂಜರವೂ ಒಂದು ಕುತೂಹಲದ ಕಲಾರಚನೆಯ ಕಲ್ಪನೆಯಾಗಿದ್ದು, ಸಾಹಿತ್ಯ ಕೃತಿಗಳಲ್ಲಿ ಕೂಡ ಇವುಗಳ ಉಲ್ಲೇಖವಿರುವಂತಿದೆ. ಆಸಕ್ತರು ವಿಶೇಷ ಅಧ್ಯಯನದಿಂದ ಈ ಕಲಾಕೃತಿಗಳ ಸಂದೇಶ ಸಂವಿಧಾನಗಳನ್ನು ಸಂಶೋಧಿಸಬೇಕೆಂಬುದು ನನ್ನ ಅಪೇಕ್ಷೆ.
ಹಿರಿಯ ವಿದ್ವಾಂಸರಾಗಿದ್ದ ಆ.ನೇ. ಉಪಾಧ್ಯೆ ಅವರು ಜೈನಶೌರಸೇನೀ ಪ್ರಾಕೃತಭಾಷೆಯ ಪ್ರಾಚೀನ ಜೈನಗ್ರಂಥ ‘ಮೂಲಾಚಾರ’ದ (ಕ್ರಿ.ಶ. ೪-೫ನೆಯ ಶತಮಾನ) ಕರ್ತೃ ವಟ್ಟಕೇರ ಎಂಬುವನು ಈ ಪ್ರಾಂತದ ಬೆಟ್ಟಕೇರಿಯವನಿರಬಹುದೇ ಎಂದು ಪ್ರಾಸಂಗಿಕವಾಗಿ ನನ್ನೊಂದಿಗೆ ಮಾತಾಡುತ್ತ ಹೇಳಿದ ಹಾಗೆ ನನ್ನ ನೆನಪು. ಇದನ್ನು ಖಚಿತಪಡಿಸಿಕೊಳ್ಳಬೇಕು. ಇದು ಆಸಕ್ತರ ಹೊಸ ಉತ್ಸಾಹದ ಹುಡುಕಾಟದಿಂದ ಸಾಧ್ಯವಾಗಬೇಕು.

‘ಪೂರ್ವಸೂರಿಭ್ಯೋ ನಮಃ’
ಅವಿಭಕ್ತ ದಕ್ಷಿಣಕನ್ನಡದ ನಿತ್ಯಹರಿದ್ವರ್ಣ ವನಸಿರಿಯ ಈ ಪ್ರಾಂತವನ್ನು ಕವಿಗಳೂ ವಿದ್ವಾಂಸರೂ ವಿದ್ವತ್ಕವಿಗಳೂ ಇತಿಹಾಸಕಾರರೂ ವಿಜ್ಞಾನಿಗಳೂ ಕಲಾವಿದರೂ ತಮ್ಮ ವಿದ್ಯಾಪ್ರೌಢಿಮೆಯ ಶ್ರೀಮಂತಿಕೆಯಿಂದ ಸಂಪನ್ನಗೊಳಿಸಿರುವುದು ಇಡಿಯ ಕರ್ನಾಟಕಕ್ಕೆ ಮಾತ್ರವಲ್ಲ, ಭಾರತಕ್ಕೇ ಹೆಮ್ಮೆಯ ವಿಷಯ. ರಾಜನೀತಿ, ಅರ್ಥನೀತಿ, ಆಡಳಿತವಿಚಕ್ಷಣೆ, ವಿದ್ಯಾಪೋಷಣೆ, ಧರ್ಮಪೀಠ ಮತ್ತು ವಿದ್ಯಾಪೀಠಗಳ ನಿರ್ವಹಣೆ, ಕಲೆ ಮತ್ತು ಸಂಸ್ಕೃತಿಗಳ ಪ್ರೋತ್ಸಾಹ ಈ ಎಲ್ಲ ವಿಷಯಗಳಲ್ಲಿಯೂ ಇಲ್ಲಿಯ ನಡೆ ಎಂದೂ ಮುನ್ನಡೆ, ನುಡಿ ಎಂದೂ ಮುನ್ನುಡಿ.
ದಕ್ಷಿಣ ಕನ್ನಡದ ಬರಹಗಾರರ ಪರಿಚಯ ಒಂದೇ ಕಡೆ ಸಿಕ್ಕುವ ಹಾಗೆ ಪುಸ್ತಕ ವೇನಾದರೂ ಬಂದಿದೆಯೇ, ನನಗೆ ತಿಳಿಯದು. ಬಂದಿದ್ದರೆ, ಸಂತೋಷ. ಅಲ್ಲವಾದರೆ, ತುರ್ತಾಗಿ ಅದು ಆಗಬೇಕಾದ್ದು. ಈಚಿನ ವರ್ಷಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಉಡುಪಿಯ ಎಂ.ಜಿ.ಎಂ. ಕಾಲೇಜು ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಪುತ್ತೂರಿನ ಕರ್ಣಾಟಕ ಸಂಘ, ಕಾಂತಾವರದ ಕನ್ನಡಸಂಘ, ಉಜಿರೆಯ ಡಾ. ಹಾ.ಮಾ.ನಾ. ಸಂಶೋಧನ ಕೇಂದ್ರ, ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸಂಶೋಧನ ವಿಭಾಗ, ಮೂಡಬಿದರೆಯ ಶ್ರೀ ವೀರವಾಣೀವಿಲಾಸ ಜೈನಸಿದ್ಧಾಂತಭವನ, ಮಂಗಳೂರಿನ ಬಾಸೆಲ್ ಮಿಷನ್ ಪ್ರೆಸ್ ಮೊದಲಾದ ಮಿಷನರಿ ಸಂಸ್ಥೆಗಳು – ಹೀಗೆ ಎಷ್ಟೋ ಸಂಸ್ಥೆಗಳು, ಪತ್ರಿಕೆಗಳ ಕಾರ್ಯಾಲಯಗಳು ಮಾಡುತ್ತಿರುವ ಸಾಹಿತ್ಯಸೃಷ್ಟಿ – ಸೇವೆ – ಪ್ರಕಾಶನ ಮತ್ತು ಪರಿಚಾರಿಕೆಗಳು ಇಲ್ಲಿಯ ಬೌದ್ಧಿಕ ಸಂಪತ್ತನ್ನು ಬೆಳಸುವಲ್ಲಿ ಮಾದರಿ ಎನ್ನುವಂತಿವೆ. ಈ ವಿಷಯದಲ್ಲಿ ಪುಸ್ತಕಪ್ರಕಾಶಕರ, ಮಾರಾಟಗಾರರ ಒತ್ತಾಸೆಯೂ ಸೇರಿರುವುದು ಶ್ಲಾಘ್ಯವಾದ ಸಂಗತಿ.
೧೯-೨೦ನೆಯ ಶತಮಾನದ ಸಂಧಿಕಾಲದಿಂದ, ಎಂದರೆ ಮುದ್ದಣನೆಂಬ ಕವಿ ಮುಂಗೋಳಿಯಾಗಿ ಸಾಹಿತ್ಯರಚನೆಗೆ ದನಿಯೆತ್ತಿದಂದಿನಿಂದ ಕನ್ನಡವನ್ನು ಕಟ್ಟಿ ಬೆಳಸಿದ ಪ್ರಾತಃಸ್ಮರಣೀಯರು ಇಲ್ಲಿ ಪುಸ್ತಕ-ಪತ್ರಿಕೆ-ಪ್ರಕಾಶನ-ಪ್ರತಿಷ್ಠಾನ-ಪ್ರಸಾರ ಎಂಬ ಐದು ಮುಖಗಳಲ್ಲಿ ಭಾಷಾಭಾರತಿಯ ಸೇವೆಯನ್ನು ನಿರ್ಮಲಾಂತಃಕರಣದಿಂದ ಮಾಡುತ್ತ ಬಂದಿದ್ದಾರೆ. ಇವರ ಸ್ಮರಣೆ ಅವಶ್ಯವೆಂದು ನಾನು ಅವರ ಹೆಸರುಗಳನ್ನು ಗುರುತಿಸಿಕೊಳ್ಳುತ್ತ ಹೋದಂತೆ, ಅದು ಸುಮಾರು ನೂರರ ಗಣನೆಗೆ ಬಂತು. ಅವನ್ನಿಲ್ಲಿ ಹೇಳಲು ಹೊರಟರೆ ಮತ್ತಷ್ಟು ಹೆಸರುಗಳು ಉಳಿದುಕೊಂಡು, ಅದು ಅಪಚಾರವಾಗುತ್ತದೆ ಎನ್ನುವ ಆತಂಕ ನನ್ನನ್ನು ಕಾಡಿತು. ಆದರೂ ಸಾಂದರ್ಭಿಕವಾಗಿ, ಪ್ರಾತಿನಿಧಿಕವಾಗಿ ಕೆಲವರ ಹೆಸರುಗಳನ್ನು ಇಲ್ಲಿ ಹೇಳಲು ತಮ್ಮ ಅಪ್ಪಣೆ ಬೇಡುತ್ತೇನೆ.
ಪಂಜೆ ಮಂಗೇಶರಾವ್, ಪಾರ್ತಿಸುಬ್ಬ, ಎಂ. ಗೋವಿಂದ ಪೈ, ಕಡೇಕಾರು ರಾಜಗೋಪಾಲ ಕೃಷ್ಣರಾವ್, ಕೆರೋಡಿ ಸುಬ್ಬರಾವ್, ಮುಳಿಯ ತಿಮ್ಮಪ್ಪಯ್ಯ, ಬೆನಗಲ್ ರಾಮರಾವ್, ಉಗ್ರಾಣ ಮಂಗೇಶರಾವ್, ಉಳ್ಳಾಲ ಮಂಗೇಶರಾವ್, ಕಡೆಂಗೋಡ್ಲು ಶಂಕರಭಟ್ಟ, ಸೇಡಿಯಾಪು ಕೃಷ್ಣಭಟ್ಟ, ಕಡವ ಶಂಭುಶರ್ಮ, ಗುಲ್ವಾಡಿ ವೆಂಕಟರಾವ್, ಬೋಳಾರ ಬಾಬುರಾವ್, ಹಟ್ಟಿಯಂಗಡಿ ನಾರಾಯಣರಾವ್, ಪಾವಂಜೆ ಗುರುರಾವ್, ತೋನ್ಸೆ ಮಂಗೇಶರಾವ್, ಹಟ್ಟಿಯಂಗಡಿ ರಾಮಭಟ್ಟ, ಬೆಳ್ಳೆ ರಾಮಚಂದ್ರರಾವ್, ಎಂ. ರಾಮನ್ ನಂಬಿಯಾರ್.
ಪೇಜಾವರ ಸದಾಶಿವರಾವ್, ತೆಕ್ಕುಂಜ ಗೋಪಾಲಕೃಷ್ಣಭಟ್ಟ, ಬಾಗಲೋಡಿ ದೇವರಾಯ, ಪಡುಕೋಣೆ ರಮಾನಂದರಾವ್, ಉಡುಪಿ ವೆಂಕಟಕೃಷ್ಣರಾವ್, ಕು.ಶಿ. ಹರಿದಾಸಭಟ್ಟ, ಪಾ.ವೆಂ. ಆಚಾರ‍್ಯ, ಎಂ. ಮರಿಯಪ್ಪ ಭಟ್ಟ, ಎಂ.ಎನ್. ಕಾಮತ್, ಕೊಳಕೆ ಪರಮೇಶ್ವರ ಮಯ್ಯ, ಬಿ.ಎಚ್. ಶ್ರೀಧರ, ಬೈಕಾಡಿ ವೆಂಕಟಕೃಷ್ಣರಾವ್, ಸುರತ್ಕಲ್ ವೆಂಕಟರಾಯಾಚಾರ‍್ಯ, ಎ.ಎಸ್. ಕೆದಿಲಾಯ, ಕ.ಪು. ಸೀತಾರಾಮ ಕೆದಿಲಾಯ, ವೆಂಕಟರಾಜ ಪುಣಿಂಚತ್ತಾಯ, ಪಿ. ಗುರುರಾಜ ಭಟ್ಟ, ಬಿ.ಎ. ಸಾಲೆತ್ತೂರು, ಪಾಂಡೇಶ್ವರ ಗಣಪತಿ ರಾವ್, ದಾಮೋದರ ಬಾಳಿಗ, ಮಂದಾರ ಕೇಶವ ಭಟ್ಟ, ಕೀಕಾನ ರಾಮಚಂದ್ರ, ವಿಶುಕುಮಾರ್, ಉ.ಕಾ. ಸುಬ್ಬರಾಯಾಚಾರ್ಯ, ಎಸ್.ವಿ. ಪರಮೇಶ್ವರ ಭಟ್ಟ, ವ್ಯಾಸರಾಯ ಬಲ್ಲಾಳ, ನಿರಂಜನ, ಸೇವ ನಮಿರಾಜ ಮಲ್ಲ, ಕೆ.ವಿ. ರಮೇಶ್.
ಕೋಟ ಶಿವರಾಮ ಕಾರಂತ, ಕಯ್ಯಾರ ಕಿಯ್ಯಣ್ಣ ರೈ, ಟಿ. ಕೇಶವಭಟ್ಟ, ಎಂ. ಗೋಪಾಲಕೃಷ್ಣ ಅಡಿಗ, ಚಕ್ರಕೋಡಿ ಸುಬ್ರಹ್ಮಣ್ಯ ಶಾಸ್ತ್ರಿ, ಚಕ್ರಕೋಡಿ ನಾರಾಯಣ ಶಾಸ್ತ್ರಿ, ಧರ್ಮಸ್ಥಳ ಮಂಜಯ್ಯ ಹೆಗ್ಗಡೆ, ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮಿ (ತಿರುಕ), ಕೆ.ಪಿ. ವೆಂಕಪ್ಪ ಶೆಟ್ಟಿ, ಹುರುಳಿ ಭೀಮರಾವ್, ಮೂಲ್ಕಿ ಶ್ರೀನಿವಾಸ ಭಾಗವತ, ಕ್ರಿಸ್ತಾನುಜ ವತ್ಸ, ಯು. ಅಮ್ಮೆಂಬಳ ಶಂಕರನಾರಾಯಣ ನಾವಡ, ಡಿ.ವಿ. ಹೊಳ್ಳ, ಪಂಡಿತ ತಾರಾನಾಥ್, ಬೋಳಂತಕೋಡಿ ಈಶ್ವರ ಭಟ್ಟ, ಪಿ. ಸುಬ್ರಾಯ ಭಟ್ಟ, ನವಗಿರಿ ನಂದ.
ಸುಬ್ಬಯ್ಯ ಶಾಸ್ತ್ರಿ, ಎ. ಶಾಂತಿರಾಜ ಶಾಸ್ತ್ರಿ, ಕೆ. ಭುಜಬಲಿ ಶಾಸ್ತ್ರಿ, ವಿ. ಲೋಕನಾಥ ಶಾಸ್ತ್ರಿ, ಶಿಶುಪಾಲ ಪಾರ್ಶ್ವನಾಥ ಶಾಸ್ತ್ರಿ, ಪಂಡಿತ ಜಿನರಾಜ ಶಾಸ್ತ್ರಿ, ಜಗತ್ಪಾಲಯ್ಯ, ದೇವಕುಮಾರ ಶಾಸ್ತ್ರಿ, ನೆಲ್ಲಿಕಾರು ರಾಧಾಬಾಯಿ, ಸರಸ್ವತೀಬಾಯಿ ರಾಜವಾಡೆ, ಕಮಲಾದೇವಿ ಚಟ್ಟೋಪಾಧ್ಯಾಯ. ಇವರಲ್ಲಿ ಹಲವರ ಜೀವನ ಸಾಧನೆಗಳ ವಿಷಯ ಇನ್ನೂ ವ್ಯಾಪಕವಾಗಿ ಕೆಲಸವಾಗಬೇಕು. ವಿಸ್ಮೃತಿಗೆ ಸಂದುಹೋಗಿರುವುದನ್ನು ತೆಗೆದು ತೋರುವುದೂ ಬೆಳಗುವುದೂ ಹೊಸ ಶೋಧವೇ. ಕನ್ನಡ ಸಾಹಿತ್ಯ ಪರಿಷತ್ತಿನ ‘ಆಧುನಿಕಕನ್ನಡ ಸಾಹಿತ್ಯಚರಿತ್ರೆ’, ಸಂಪುಟ ೧ (೨೦೧೫) ಕೆಲವು ಆಧಾರ ಸಾಮಗ್ರಿಯನ್ನು ದಿಕ್ಸೂಚಿಯಾಗಿ ನೀಡಬಲ್ಲುದು.
ಇಲ್ಲಿ ವಿಶೇಷವಾಗಿ ಹೇಳತಕ್ಕ ಕೆಲವು ಮಾತುಗಳಿವೆ.
(೧) ಹೆಚ್ಚು ಮಂದಿ ಸಾಹಿತಿಗಳು ಯಕ್ಷಗಾನ ಕೃತಿಗಳ ರಚನೆಯಲ್ಲಿ ಆಸಕ್ತಿತೋರಿದ್ದಾರೆ. ಯಕ್ಷಗಾನಕೃತಿಭಂಡಾರವನ್ನು ಬೆಳಸಿದ್ದಾರೆ. ಸ್ಥಳೀಯ ಸಂಸ್ಕೃತಿಯ ವಿಶೇಷತೆಯನ್ನು ಎತ್ತಿ ತೋರಿಸಿದ್ದಾರೆ.
(೨) ದಕ್ಷಿಣ ಕನ್ನಡದ ಈ ಪ್ರಾಂತದಲ್ಲಿ ಕಾವ್ಯಸತ್ತ್ವ – ವಿದ್ವತ್‌ಪ್ರೌಢಿಮೆ ಸಮಸಮಾಯೋಗ ವಾಗಿರುವ ಸಾಹಿತಿಗಳು ಸಂಖ್ಯೆಯಲ್ಲಿ ಹೆಚ್ಚಾಗಿದ್ದಾರೆ. ಕವಿಗಳಿಗೆ ಹಳೆಯ ಭಾಷೆ, ಹಳೆಯ ಶೈಲಿ ಛಂದಸ್ಸುಗಳ ಕಡೆಗೆ ಒಲವು ಹೆಚ್ಚು.
(೩) ದೊಡ್ಡ ಸಾಹಿತ್ಯಿಕ ಯೋಜನೆಗಳನ್ನು ಸಾಂಸ್ಥಿಕವಾಗಿ ಕೈಗೆತ್ತಿಕೊಂಡು ಕೈಗೂಡಿಸಿರು ವುದರಲ್ಲಿ ವಿಚಕ್ಷಣೆಯಿಂದ ದುಡಿಯಬಲ್ಲ ಸಾಹಿತ್ಯಸಂಘಟಕರು ಇಲ್ಲಿ ಹೆಚ್ಚಾಗಿದ್ದಾರೆ.
(೪) ಪೂರ್ವಸೂರಿಗಳ ವಿಷಯದಲ್ಲಿ ಅಪಾರವಾಗಿ ಭಕ್ತಿ ಗೌರವಗಳನ್ನು ತಳೆದ ಸಾಹಿತ್ಯಪ್ರೇಮಿಗಳು ಆ ಪೂರ್ವಸೂರಿಗಳ ಬರಹಗಳ ಸಮಗ್ರಸಂಪುಟಗಳನ್ನು ಅಚ್ಚುಕಟ್ಟಾಗಿ ಅಣಿಗೊಳಿಸಿ ಪ್ರಕಟಿಸುವುದರಲ್ಲಿ ನಿಪುಣರಾಗಿದ್ದಾರೆ.
ಮೂಡಬಿದರೆಯ ವಿದ್ಯಾಗಿರಿಯಲ್ಲಿಯೇ, ವಿದ್ಯಾಗಿರಿ ಎಂಬ ಹೆಸರಿಗೆ ತಕ್ಕಂತೆ ಸ್ಥಳೀಯ ಕವಿ-ಕಲಾವಿದ-ವಿದ್ವಾಂಸ-ವಿಜ್ಞಾನಿ-ಇತಿಹಾಸಕಾರರ ಒಂದು ಪುಸ್ತಕ ಭಂಡಾರವೂ ವಸ್ತುಕೋಶವೂ ಸ್ಥಾಪನೆಯಾದರೆ, ಅದು ಈ ಹಿರಿಯರಿಗೆ ತೋರಿಸಿದ ದೊಡ್ಡ ಗೌರವವಾಗುತ್ತದೆ. ಇದಕ್ಕೆ ಡಾ. ಮೋಹನ ಆಳ್ವರು ಆ ಹಿರಿಯರ ಸಂತತಿಯವರ ಹಾಗೂ ಸಾರ್ವಜನಿಕರ ಸಹಕಾರ ಪಡೆದು ಕಾರ್ಯೋನ್ಮುಖರಾಗಲಿ ಎಂದು ನಾನು ಹಾರೈಸುತ್ತೇನೆ. ಅವರಂತಹ ಸದಭಿರುಚಿಯ ಧೀರ ಸಂಘಟಕರನ್ನು ನಾವು ಪಡೆದಿರುವಾಗ, ನಮಗೆ ಸಾಧ್ಯವಾಗದ್ದು ಏನಿದೆ?
ಈಚೆಗೆ ಈ ಪ್ರದೇಶದಲ್ಲಿ ಕನ್ನಡದ ಐಕ್ಯಗಾನವನ್ನು ಹಾಡಿ ಹಾಡಿ ಕಣ್ಮರೆಯಾದ ನಾಡೋಜ ಕಯ್ಯಾರ ಕಿಯ್ಯಣ್ಣ ರೈ ಅವರ ಹೆಸರು ನಿಲ್ಲುವಂತೆ ಏನಾದರೂ ಏರ್ಪಾಡು ಆಗಬೇಕು. ಈ ಭಾಗದಲ್ಲಿಯೇ ಹಿರಿಯ ಅಧಿಕಾರಿಗಳಾಗಿದ್ದ ಜಾನಪದಲೋಕದ ಎಚ್.ಎಲ್. ನಾಗೇಗೌಡ, ಪ್ರಸಿದ್ಧ ಕಾದಂಬರಿಕಾರ ಭಾರತೀಸುತ, ಪದಾರ್ಥಚಿಂತಾಮಣಿಯ ಪಾ.ವೆಂ. ಆಚಾರ‍್ಯ, ‘ಮೈಸೂರು ಮಲ್ಲಿಗೆ’ಯ ಕವಿ ಕೆ.ಎಸ್. ನರಸಿಂಹಸ್ವಾಮಿ, ನಾಟಕಕಾರ -ಅನುವಾದಕ-ಕಾದಂಬರಿಕಾರ ಸಿ.ಕೆ. ನಾಗರಾಜರಾಯ ಇವರ ಶತಮಾನೋತ್ಸವಗಳ ಸಂದರ್ಭವೂ ಬಂದಿರುವುದರಿಂದ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ-ಸಂಸ್ಕೃತಿ ನಿರ್ದೇಶನಾಲಯ ಈ ಬಗ್ಗೆಯೂ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.
ಶ್ರೀಯವರ ‘ಕವಿಶಿಷ್ಯ’ನ (ಮೂಲ: ಖಿhe Sಛಿhoಟಚಿಡಿ: ಖobeಡಿಣ Souಣheಥಿ) ಈ ಮಾತು ನನಗೆ ಬಹು ಪ್ರಿಯವಾದ್ದರಿಂದ, ಅದರಿಂದ ಈ ಭಾಗವನ್ನು ಮುಗಿಸುತ್ತೇನೆ.
ಹೊತ್ತು ಹೋಗುವುದೆನಗೆ ಸತ್ತವರ ಸಂಗದಲಿ
ಬಳಸಿ ಬಂದಿಹರ ಕಾಣುತಿಹೆನು,
ಎತ್ತೆತ್ತ ಸುಳಿಸುವೆನೊ ಈ ಕಣ್ಣನತ್ತತ್ತ
ಹಳಮೆಯ ಮಹಾತ್ಮರನು, ಪರಮಕವಿಗಳನು.
ನನಗವರೆ ಕೈಬಿಡದ ಕೆಳೆಯರಾದವರು
ದಿನದಿನದಿ ಮಾತುಕಥೆಗೆನಗಿರುವರವರು.

ಯಕ್ಷಗಾನದ ಲಕ್ಷದೀಪ
ಕರ್ನಾಟಕದ ರಂಗಕಲೆಯ ವೈವಿಧ್ಯಮಯ ಪ್ರಕಾರಗಳಲ್ಲಿ ಮುಖ್ಯವಾದ್ದು, ಪ್ರಾಣಪದಕ ದಂತೆ ಉಜ್ವಲವಾದ್ದು ಎಂದರೆ ಯಕ್ಷಗಾನ. ಹಲಕೆಲವು ಸೀಳುಗಳಲ್ಲಿ, ಪ್ರಾದೇಶಿಕಭೇದಗಳಲ್ಲಿ ಅದರ ವ್ಯಾಪ್ತಿ ವೈವಿಧ್ಯಗಳಿವೆ. ಶತಮಾನಗಳಿಂದ ಬೆಳೆದುಕೊಂಡು ಬಂದ ಈ ಕಲೆ ದೃಶ್ಯ ಮತ್ತು ಶ್ರವ್ಯ ಎರಡು ಮಾಧ್ಯಮಗಳನ್ನೂ ಬಂಧುರವಾಗಿ ಬೆಸೆದುಕೊಂಡು ರಸಿಕಜನಮನೋರಂಜಕವಾಗಿ ಖ್ಯಾತವಾಗಿದೆ. ವಿಶೇಷವಾಗಿ ತೌಳವಪ್ರಾಂತದಲ್ಲಿ ಅದರ ವಿಲಾಸ, ವಿಜೃಂಭಣೆ. ತುಳುನಾಡ ರಾಣಿ ಯಕ್ಷಗಾನವಿನೋದಿನಿ. ಕಾವ್ಯೇತಿಹಾಸಗಳ, ಪುರಾಣಗಳ, ನಾನಾ ದೇವತೆಗಳ, ದೇವತಾಕ್ಷೇತ್ರಗಳ ಕಥೆಗಳನ್ನೂ ಮಾಹಾತ್ಮ್ಯಗಳನ್ನೂ ಕಣ್ಣೆದುರು ಕಟ್ಟಿ ನಿಲ್ಲಿಸುವ ಈ ಯಕ್ಷಗಾನವೆಂಬ ಕಲೆ ಇಲ್ಲಿ ತಾನೊಂದು ಜನತಾ ವಿಶ್ವವಿದ್ಯಾನಿಲಯವಾಗಿ ಬೆಳೆದಿದೆ. ಜನತೆಗೆ ಹತ್ತಿರವಾದುದರಿಂದಲೇ ಜನಪದಮೂಲದ ಕಥೆಗಳೂ ಇಲ್ಲಿ ಸೇರಿವೆ.
ಯಕ್ಷಗಾನ ಕರಾವಳಿಪ್ರದೇಶದಲ್ಲಿ ಒಂದು ವೃತ್ತಿಯಾಗಿ ಬೆಳೆದು ಜನತೆಯ ಸಂಸ್ಕೃತಿಯ ಭಾಗವಾಗಿರುವುದು ಒಂದು ವಿಶೇಷ. ಬಡಗತಿಟ್ಟು, ತೆಂಕತಿಟ್ಟು, ಸಣ್ಣಾಟ, ದೊಡ್ಡಾಟ ಎಂಬ ಹೆಸರುಗಳೇ ಇವುಗಳ ದೇಸಿಯ ದೇಸೆಯನ್ನು ಕಡೆದು ನಿಲ್ಲಿಸಿವೆ. ಅಲ್ಲಲ್ಲಿಯ ಸಂಪ್ರದಾಯಗಳ ಕಥಾವಸ್ತು, ಪ್ರದರ್ಶನವಿಧಾನ, ಮಾತುಗಾರಿಕೆ, ವೇಷಭೂಷಣ, ರಂಗಸ್ಥಲ ಇವು ಸಾಕಷ್ಟು ತುಲನಾತ್ಮಕ ಅಧ್ಯಯನಗಳಿಗೆ ಅವಕಾಶಮಾಡುತ್ತವೆ. ಇಂತಹ ಅಧ್ಯಯನಗಳು ಈಗಾಗಲೇ ಸಾಕಷ್ಟು ನಡೆದಿರಬಹುದು; ಇನ್ನೂ ಅವಕಾಶಗಳಂತೂ ಇವೆ.
ಇದೇ ಸಂದರ್ಭದಲ್ಲಿ ದಕ್ಷಿಣಕನ್ನಡದ ಯಕ್ಷಗಾನಕಲಾವಿದರ, ಸಂಶೋಧಕರ ಗಮನವನ್ನು ಮಧ್ಯಕರ್ನಾಟಕದ ಯಕ್ಷಗಾನಸಾಹಿತ್ಯಕೃತಿಗಳ ಬಗೆಗೆ ಸೆಳೆಯಬಯಸುತ್ತೇನೆ. ಮುಮ್ಮಡಿ ಕೃಷ್ಣರಾಜ ಒಡೆಯರ ಅಳಿಯಂದಿರು ಅಳಿಯ ಲಿಂಗರಾಜ ಕವಿ (೧೮೨೩-೭೪) ಬರೆದ ಹಲವಾರು ಕೃತಿಗಳಲ್ಲಿ ಕೆಲವು ಯಕ್ಷಗಾನಕೃತಿಗಳೂ ಇವೆ; ಹಾಗೆಯೇ ಈತನ ಆಶ್ರಿತನಾದ ನಂಜಯ್ಯನೆಂಬುವನು (ಸು. ೧೮೬೦) ಘಟ್ಟದ ಕೆಳಗಣಿಂದ ಬಂದು ಲಿಂಗರಾಜನ ಆಶ್ರಯ ಪಡೆದವನು ರಚಿಸಿದ ನಾಲ್ಕಾರು ಯಕ್ಷಗಾನಕೃತಿಗಳಿವೆ. ಇವರ ಬಗೆಗೆ ಕವಿಚರಿತೆಕಾರರು ಹಲವು ವಿವರಗಳನ್ನು ಕೊಟ್ಟಿದ್ದಾರೆ. ಇವನ್ನು ಭಾಷೆ ವಸ್ತು ಪ್ರದರ್ಶನಗಳ ದೃಷ್ಟಿಯಿಂದ, ತುಲನಾತ್ಮಕದೃಷ್ಟಿಯಿಂದ ಅಭ್ಯಾಸಮಾಡಲು ಬೇಕಾದ ಹಾಗೆ ಅವಕಾಶಗಳಿವೆ. ನಂದಳಿಕೆಯಿಂದ ಮೈಸೂರಿಗೆ ಮುಮ್ಮಡಿ ಕೃಷ್ಣರಾಜರ ಕಾಲದಲ್ಲಿ ಯಕ್ಷಗಾನದ ಮೇಳವೊಂದು ಬಂದು ಬಿಡಾರಮಾಡಿದ ಮೇಲೆ ಇಲ್ಲಿ ಈ ಕಲೆಯ ಪರಿಚಯವಾಗಿರಬೇಕು.
ಯಕ್ಷಗಾನ ಬಯಲಾಟಗಳಲ್ಲಿ ವೀರರಸವೇ ಪ್ರಧಾನವಾಗಿರುವುದೇಕೆ, ವಾದ್ಯದ ಬಳಕೆಯಲ್ಲಿ ಚಂಡೆಗೆ ಮಹತ್ತ್ವವೇಕೆ, ರಂಗಸ್ಥಲದ ಅಟ್ಟಣೆಯಂಥ ವೇದಿಕೆಯ ಕಟ್ಟುಪಾಡು ಗ್ರೀಕ್ ರಂಗಭೂಮಿಯ ಅದೊಂದು ಬಗೆಯ ವರ್ತುಲರಂಗದ ವಿನ್ಯಾಸವನ್ನು ಹೋಲುವುದೇಕೆ, ಸಂಗೀತವಿದ್ಯೆಯಲ್ಲಿ ‘ಮನೋಧರ್ಮಸಂಗೀತ’ ಎಂದು ವಿಮರ್ಶಿಸಿ ನೋಡುವಂತೆ ಯಕ್ಷಗಾನದ ಪ್ರದರ್ಶನಗಳಲ್ಲಿಯೂ ಹಾಗೆಯೇ ವಿಮರ್ಶಿಸಿ ನೋಡಬಹುದೇ, ದೇವಾಲಯಗಳ ಶಿಲ್ಪ ಮತ್ತು ವಾಸ್ತು ರಚನೆಗಳ ದೃಷ್ಟಿಯಿಂದ ಕಲಾವಿದರ ಭಂಗಿವಿಶೇಷಗಳನ್ನೂ ಆಭೂಷಣಗಳನ್ನೂ ಕೂಡಿಸಿ ವಿಚಾರಮಾಡಬಹುದೇ, ಒಂದೊಂದು ಮೇಳದ ವೈಖರಿ ವೈಶಿಷ್ಟ್ಯಗಳೇನು, ಕಲಾವಿದರ ಪ್ರತಿಭೆ ಎಂಥದು – ಇಂತಹ ಪ್ರಶ್ನೆಗಳನ್ನು ಎತ್ತಿ ಪರಿಹಾರದ ಶೋಧಗಳಿಗೆ ಹೊರಡಲು ಸಾಧ್ಯವಿದೆಯಲ್ಲವೇ? ಈಗಾಗಲೇ ನಡೆದಿದ್ದರೆ, ಸಂತೋಷವೇ.
ತಾಳಮದ್ದಲೆ ಎಂಬ ಪಾತ್ರಸಂವಾದಪ್ರಧಾನವಾದ ಯಕ್ಷಗಾನಗೋಷ್ಠಿಗೆ ಎರಡು ವಾದ್ಯಗಳ ಹೆಸರು ಹೆಣಿಗೆಯಾದ್ದೇ ಒಂದು ಕೌತುಕ. ಇಲ್ಲಿ ನಡೆಯುವ ಅರ್ಥಧಾರಿಗಳ, ಸೂಳ್ನುಡಿಯ ಸರದಾರರ, ಸಂವಾದದ ಚಮತ್ಕಾರಗಳನ್ನು ನೋಡಿದರೆ, ಪಂಪಕವಿ ಹೇಳುವಂತಹ ‘ಅಕ್ಕರಗೊಟ್ಟಿ’ಯ ಪ್ರಪಂಚದಲ್ಲೇ ಇದನ್ನೂ ಗುರುತಿಸಬಹುದು.
ಯಕ್ಷಗಾನ, ಬಯಲಾಟ, ಸಣ್ಣಾಟ, ದೊಡ್ಡಾಟ, ದಾಸರಾಟ, ಸೂತ್ರದ ಬೊಂಬೆಯಾಟ, ತೊಗಲುಗೊಂಬೆಯಾಟ ಇತ್ಯಾದಿ ಪ್ರಭೇದಗಳ ವಿಚಾರ ನಮ್ಮ ಹಳೆಯ ಸಾಹಿತ್ಯದಲ್ಲಿ ಇನ್ನೊಂದು ಮತ್ತೊಂದು ಹೆಸರಿನಲ್ಲಿ ಕಾಣಿಸಿಕೊಂಡಿರಬಹುದು; ಆ ತೆರನ ಸಾಹಿತ್ಯ ರಚನೆಯೂ ಕನಿಷ್ಠ ಈ ೨೦೦-೩೦೦ ವರ್ಷಗಳಲ್ಲಿ ಆಗಿರಬಹುದು. ಇವನ್ನು ಕಂಡುಕೊಳ್ಳ ಬೇಕಾಗಿದೆ. ೧೬ನೆಯ ಶತಮಾನದ ಮಧ್ಯಭಾಗದ ಸಾಂಗತ್ಯಕವಿ ರತ್ನಾಕರವರ್ಣಿಯ ‘ಭರತೇಶವೈಭವ’ದ ಪೂರ್ವ ಮತ್ತು ಉತ್ತರ ನಾಟಕ ಸಂಧಿಗಳಲ್ಲಿ ಬರುವ ನರ್ತನ ವಿಶೇಷಗಳೂ ವಾದ್ಯವೈವಿಧ್ಯವೂ ಇನ್ನೂ ಗಾಢ ಶಾಸ್ತ್ರೀಯ ಪರಿಶೀಲನೆಗೆ ಒಳಗಾದ ಹಾಗಿಲ್ಲ. ಯಕ್ಷಗಾನಕಲೆಯ ಹಿನ್ನೆಲೆಯಲ್ಲಿ ಅವನ್ನು ನೋಡುವುದರಿಂದ ಪ್ರಯೋಜನವಿದೆ. ಏಕೆಂದರೆ, ಅವನು ಇಲ್ಲಿಯ ಕವಿಯೇ. ಸ್ಥಳೀಯ ಕಲಾವಿದ-ಸಂಶೋಧಕರು ಈ ಕಡೆ ಗಮನ ಹರಿಸಬಹುದಾಗಿದೆ.
ಎಂದಿನಿಂದಲೂ ಜನಪದವಾದ್ಯಗಳು, ಅವುಗಳ ರೂಪ, ರಚನೆ ಮತ್ತು ಧ್ವನಿಪ್ರಸಾರ ಗಳ ದೃಷ್ಟಿಯಿಂದ, ಒಂದು ಗಾಢಕುತೂಹಲದ ಅಧ್ಯಯನವಿಷಯ. ಈ ದಿಸೆಯಲ್ಲಿ ಹೆಚ್ಚು ಕೆಲಸ ನಡೆದಹಾಗೆ ತೋರುವುದಿಲ್ಲ. ನಾನು ಕೆಲವು ವರ್ಷಗಳ ಹಿಂದೆ ಗುಜರಾತಿಗೆ ಹೋಗಿದ್ದಾಗ, ಹಾಗೆಯೇ ಮುನ್ನಡೆದು ಬರೋಡದ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ಹೋಗಿದ್ದೆ. ಅಲ್ಲಿ ಸಂಗ್ರಹಿತವಾದ ವಾದ್ಯಗಳನ್ನು ವಿವರಿಸಿದ ಸು. ೫೦೦ ಪುಟಗಳ ಒಂದು ಸುಂದರ ಸಚಿತ್ರ ಬೃಹತ್ಸಂಪುಟ (ಖಿhe ಊeಡಿiಣಚಿge oಜಿ ಒusiಛಿಚಿಟ Iಟಿsಣಡಿumeಟಿಣs: ಂ ಅಚಿಣಚಿಟogue oಜಿ ಒusiಛಿಚಿಟ Iಟಿsಣಡಿumeಟಿಣs iಟಿ ಣhe ಒuseums oಜಿ ಉuರಿಚಿಡಿಚಿಣh, ೧೯೯೦) ನನ್ನ ಗಮನ ಸೆಳೆಯಿತು. ಅದನ್ನು ನಾನು ಕೊಂಡು ತಂದೆ. ತುಲನಾತ್ಮಕವಾಗಿ ಕೆಲಸಮಾಡಲು ಇಂಥ ಅಧ್ಯಯನಗಳು ನಮಗೆ ಸಹಕಾರಿಯಾಗಿವೆ.

ಪಾಂಡಿತ್ಯದ ಪ್ರಯೋಜನ
ಕನ್ನಡದ ಕಲಿಕಾಲಸರ್ವಜ್ಞನೆಂದೇ ಹೇಳಬಹುದಾದ ನಾಗವರ್ಮನು ಕವಿತೆ ಹುಟ್ಟಲು ಬೇಕಾದ ಪೂರ್ವಸಿದ್ಧತೆಗಳನ್ನು ತನ್ನ ‘ಕಾವ್ಯಾವಲೋಕನ’ದಲ್ಲಿ ಹೀಗೆ ವಿವರಿಸಿದ್ದಾನೆ:
ಕವಿತೆಗೆ, ಎಂದರೆ ಕಾವ್ಯನಿರ್ಮಿತಿಗೆ ಇರಲೇಬೇಕಾದ ಕಾರಣಗಳೆಂದರೆ ‘ಪ್ರತಿಭೆ’, ಎಂದರೆ ಹೊಸತನ್ನು ಕಾಣುವ-ಕಟ್ಟುವ ಒಂದು ಅನಿರ್ವಚನೀಯ ಶಕ್ತಿವಿಶೇಷ; ‘ಕಾವ್ಯವಿದ್ಯೆಯ ಪರಿಚಯ’, ಎಂದರೆ ಕಾವ್ಯವನ್ನು ಕಟ್ಟಲು ಬೇಕಾಗುವ ಕಾವ್ಯತತ್ತ್ವಗಳ ಅನುಸಂಧಾನ (ಲೌಕಿಕವಿಚಾರಗಳು, ಶಾಸ್ತ್ರಸಂಬಂಧವಾದ ವಿಚಾರಗಳು ಮತ್ತು ವಿವಿಧರೀತಿಯ ಕಲೆಗಳಲ್ಲಿ ಅಭಿಜ್ಞತೆ); ‘ವೃದ್ಧಸೇವಾನುರಕ್ತಿ’, ಎಂದರೆ ಅನುಭವ ವಯಸ್ಸುಗಳಿಂದ ಜ್ಞಾನಿಗಳಾಗಿರುವ ಹಿರಿಯರನ್ನು ಗುರುಗಳಾಗಿ ತಿಳಿದು ಆಶ್ರಯಿಸಿ, ಅವರ ಪರಿಚರ್ಯೆಮಾಡಿ ವಿಷಯಗಳನ್ನು ತಿಳಿದುಕೊಳ್ಳುವುದು; ‘ಸತತಾಭ್ಯಾಸಪ್ರಯತ್ನ’, ಎಂದರೆ ಅಲಸಿಕೆಯಿಲ್ಲದೆ ಪರಿಶ್ರಮವನ್ನು ಮಾಡುತ್ತಿರುವ ಪ್ರಯತ್ನಶೀಲತೆ.
ಈ ಕಾರಣಗಳು ಕವಿತೆಯ ನಿರ್ಮಾಣಕ್ಕೆ ಮಾತ್ರವಲ್ಲದೆ ಪಾಂಡಿತ್ಯದ ಆರ್ಜನೆಗೂ ಅತ್ಯವಶ್ಯ. ಮೇಲುಮೇಲಿನ ವಿಚಾರಕ್ಕೆ, ಕಾವ್ಯನಿರ್ಮಾಣದ ಪರಿಕರಗಳಲ್ಲಿ ಪ್ರತಿಭೆ ವಿಶೇಷವಾಗಿ ಕವಿಗಳಿಗೆ ಸ್ವಭಾವಲಕ್ಷಣ ಎಂದು ತೋರಬಹುದು. ಆದರೆ ಕವಿಗಳದು ಸೃಜನಾತ್ಮಕವಾದ್ದು, ವಿದ್ವಾಂಸರದು ಸಂಯೋಜನಸಮರ್ಥವಾದ್ದು. ತೀ.ನಂ.ಶ್ರೀ. ಅವರು ಒಂದೆಡೆ ಹೇಳಿರುವಂತೆ “ಪಾಂಡಿತ್ಯವೆಂದರೆ ಕೇವಲ ವಿಷಯರಾಶಿಯ ಸಂಗ್ರಹವಲ್ಲ. ಆ ರಾಶಿ ಬೇಕೇ ಬೇಕು. ಆದರೆ ಅಷ್ಟೇ ಸಾಲದು. ಆ ವಿವಿಧ ವಿಷಯಗಳಲ್ಲಿ ಮರೆಯಾಗಿರುವ ಸಂಬಂಧಗಳನ್ನು ಊಹಿಸಿ ಗ್ರಹಿಸಿ, ಎಳೆಗಳ ತೊಡಕುಗಳನ್ನು ಬಿಡಿಸಿ ಕೂಡಿಸಿ, ತತ್ತ್ವವನ್ನು ಬೆಳಗುವ ಸಂಯೋಜಕಪ್ರತಿಭೆಯೂ ಅವಶ್ಯವಾಗಿ ಬೇಕು.”
ಒಳ್ಳೆಯ ಕವಿತೆಯ ವಿಚಾರಕ್ಕೆ, ನಯಸೇನ ತನ್ನ ‘ಧರ್ಮಾಮೃತ’ವೆಂಬ ಕಾವ್ಯದಲ್ಲಿ ಹೇಳುವ ಹಾಗೆ ‘ಸಹಜ ಕವಿತ್ವ’ಕ್ಕೆ, ‘ಕಾವ್ಯಾವಲೋಕನ’ದಲ್ಲಿ ಹೇಳಿರುವ ಕಾವ್ಯನಿರ್ಮಿತಿ ಕಾರಣಗಳು ಒಪ್ಪುತ್ತವೆ. ಆದರೆ ಒಳ್ಳೆಯ ಕವಿತೆ ಎನ್ನುವುದು ಕಸ್ತೂರಿ ಚಂದನಗಳ ಹಾಗೆ ದುರ್ಲಭ. ಸಾವಿರ ಕೆಟ್ಟ ಕವಿತೆಗಳಿಗಿಂತ ಒಂದು ವಾದಗ್ರಸ್ತವೇ ಆಗಬಹುದಾದ ಸಾಮಾನ್ಯ ಸಂಶೋಧನಲೇಖನ ಎಷ್ಟೋ ಮೇಲು. ಕವಿ ತನ್ನ ಕಾವ್ಯವನ್ನು ಬ್ರಹ್ಮನ ಸ್ಥಾನದಲ್ಲಿ ನಿಂತು ನಿರ‍್ಮಿಸಬಹುದು. ಅಷ್ಟಕ್ಕೆ ಆತ ಕೃತಕೃತ್ಯನಾಗಲಾರ. ಅದು ಲೋಕದಲ್ಲಿ ಸಲ್ಲುವಂತಾಗಬೇಕಾದರೆ, ಆ ಕಾವ್ಯಗಳ ಗುಣದೋಷಗಳನ್ನು ವಿವೇಚಿಸಿ, ರಸಸ್ಥಾನಗಳನ್ನು ಗುರುತಿಸಿ, ಶಬ್ದಾರ್ಥಗಳ ಹಾಗೂ ಸಂದರ್ಭವಿಶೇಷಗಳ ಕ್ಲಿಷ್ಟತೆಗಳನ್ನು ಪರಿಹರಿಸಿ ವಿದ್ವಾಂಸರು ಪಾಂಡಿತ್ಯಬಲದಿಂದ ವಿಷ್ಣುವಿನ ನೆಲೆಯಲ್ಲಿ ನಿಂತು ಪಾಲನೆ – ಲಾಲನೆ ಮಾಡಬೇಕಾಗುತ್ತದೆ. ಕಾಲಪುರುಷನು ಲಯಕಾರಿಯಾದ ರುದ್ರನಾಗಿ ಎಲ್ಲವನ್ನೂ ಗುಡಿಸಿಹಾಕುವುದು ಬೇರೆ ಮಾತು. ಹೀಗಿರುವಾಗ ಪ್ರತಿಭಾವಂತನಾದ ಕವಿ ತಾನು ಹೆಚ್ಚೆಂದು ಹಿಗ್ಗುವುದಿಲ್ಲ; ವಿಮರ್ಶಕನಾದ ವಿದ್ವಾಂಸ ತಾನು ಕಡಮೆಯೆಂದು ಕುಗ್ಗುವುದಿಲ್ಲ. ಡಿ.ಎಲ್. ನರಸಿಂಹಾಚಾರ‍್ಯರು ಹೇಳುವಂತೆ “ಕಾವ್ಯವೂ ದೊಡ್ಡದು, ಶಾಸ್ತ್ರವೂ ದೊಡ್ಡದು. ಒಂದು ಇನ್ನೊಂದಕ್ಕೆ ಕೀಳಲ್ಲ, ಮೇಲಲ್ಲ. ಕವಿತ್ವದ ವಿದ್ವತ್ತಿನ ಸಮಸಮಾಯೋಗವೇ ಪೂರ್ಣಸತ್ಯ” ಎಂಬ ಮಾತು ನಿಲ್ಲುತ್ತದೆ.
ಕಾವ್ಯವಷ್ಟೇ ದೊಡ್ಡದು ಎನ್ನುವುದಾದರೆ, ವಿದ್ವಾಂಸರಿಗೆ ಏನು ಕೆಲಸ? ಇದಕ್ಕೆ ಕೆಲವು ಉತ್ತರಗಳನ್ನು ಪ್ರಶ್ನೆಗಳ ರೂಪದಲ್ಲಿಯೇ ಕೊಡಬಹುದು.
(೧) ಕರ್ನಾಟಕದ ಪರಂಪರೆ ಇತಿಹಾಸ ಸಾಹಿತ್ಯ ಸಂಸ್ಕೃತಿಗಳ ಉಗಮ ವಿಕಾಸಗಳನ್ನು, ವೈವಿಧ್ಯ ವೈಲಕ್ಷಣ್ಯಗಳನ್ನು, ಯಾರು ತಾನೆ ನಿರೂಪಿಸುವವರು, ವ್ಯಾಖ್ಯಾನಿಸುವವರು?
(೨) ಪ್ರಾಚೀನ ಮಧ್ಯಕಾಲೀನ ಕನ್ನಡ ಸಾಹಿತ್ಯವನ್ನು ಸೂಕ್ತವಾದ, ಖಚಿತವಾದ ಶಬ್ದಾರ್ಥಗಳ ನೆಲಗಟ್ಟಿನ ಮೇಲೆ, ಎಂದರೆ ವಾಚ್ಯಾರ್ಥ ವ್ಯಂಗ್ಯಾರ್ಥಗಳಿಗೆ ಭಂಗಬಾರದ ಹಾಗೆ ವಿಶದಮಾಡಿಕೊಟ್ಟು ಅರ್ಥಹೇಳುವವರು ಯಾರು? ಅನಂತರ ವಿಮರ್ಶಕರ ಟೀಕೆ ಟಿಪ್ಪಣಿಗಳಿಗೆ, ವೃತ್ತಿ ವ್ಯಾಖ್ಯಾನಗಳಿಗೆ ವಸ್ತುವನ್ನು ಅಣಿಗೊಳಿಸುವವರು ಯಾರು? ಕವಿಕಾವ್ಯಗಳನ್ನು ಯೋಗ್ಯತಾನುಸಾರವಾಗಿ ಬೆಲೆ ಕಟ್ಟುವುದು, ಸ್ಥಾನ ನಿರ್ದೇಶಿಸುವುದು ಹೇಗೆ?
(೩) ಪ್ರಾಚೀನ ಮಧ್ಯಕಾಲೀನ ಕನ್ನಡಭಾಷೆಯ ವಿಶಿಷ್ಟಸ್ವರೂಪವನ್ನು ಸ್ಪಷ್ಟಪಡಿಸುವವರು ಯಾರು? ಆ ಭಾಷೆಯಲ್ಲಿ ಕಟ್ಟಿದ ಸಾಹಿತ್ಯದ ಇತಿಹಾಸವನ್ನು ಕ್ರಮಬದ್ಧವಾಗಿ ರಚಿಸುವವರು ಯಾರು?
(೪) ನಿಶ್ಚಿತವಾದ ಅರ್ಥ ಅನ್ವಯಗಳಿಗೆ, ವಿಮರ್ಶೆ ವ್ಯಾಖ್ಯಾನಗಳಿಗೆ ಅವಶ್ಯವಾದ ಛಂದಸ್ಸು ವ್ಯಾಕರಣ ಗ್ರಂಥಸಂಪಾದನೆ ಶಬ್ದಾರ್ಥವಿಚಾರ ನಿಘಂಟು ಅಲಂಕಾರ ಇತ್ಯಾದಿ ಲಕ್ಷಣಭಾಗದ ಅವಲಂಬನೆಯನ್ನು ಸಂದಿಗ್ಧತೆಗೆ ಅವಕಾಶವಿಲ್ಲದಂತೆ ಒದಗಿಸುವವರು ಯಾರು? ಬೇಕಾದ ಅಧಿಷ್ಠಾನಗ್ರಂಥಗಳನ್ನು ಸಿದ್ಧಪಡಿಸುವವರು ಯಾರು?
(೫) ಸಾಂಸ್ಕೃತಿಕಸಂದರ್ಭಗಳನ್ನು, ತಾತ್ತ್ವಿಕವಿಷಯಗಳನ್ನು, ಧಾರ್ಮಿಕಪ್ರಕ್ರಿಯೆಗಳನ್ನು ಶಾಸ್ತ್ರಗಳನ್ನೂ ಸೂತ್ರಗಳನ್ನೂ ಹುಡುಕಿ ಅನ್ವಯಿಸುವ ಮೂಲಕ ಕಾವ್ಯಾರ್ಥ ವಿವೇಚನೆಗೆ, ಕವಿಕೃತಿಯ ಭಾವಾನುಭಾವಗಳ ಮೂಲಸೆಲೆಗಳನ್ನು ಗುರುತಿಸುವುದಕ್ಕೆ ಶ್ರಮಿಸುವವರು ಯಾರು?
(೬) ವಿಮರ್ಶಕರ, ಪಂಡಿತರ, ಸಂಶೋಧಕರ ವ್ಯವಸಾಯದ ನೆರವಿಲ್ಲದೆ ನಮ್ಮ ಪ್ರಾಚೀನ ಮಧ್ಯಕಾಲೀನ ಕಾವ್ಯಗಳು ತಮ್ಮ ಅರ್ಥ ಅಭಿಪ್ರಾಯಗಳ ಸಾರಸರ್ವಸ್ವವನ್ನು ಬಿಟ್ಟುಕೊಡುತ್ತವೆಯೇ? ಹೇಗೆ ಅರ್ಥವಾದರೆ ಹಾಗೆ, ಎಷ್ಟು ಅರ್ಥವಾದರೆ ಅಷ್ಟು ನಮಗೆ ತಿಳಿದರೆ ಸಾಕೇ? ಅದು ಅರ್ಥಜ್ಞಾನವೋ ಅನ್ಯಥಾಜ್ಞಾನವೋ? ಕವಿಕೃತಿಗೆ ಮಾಡುವ ಪರವಂಚನೆಯೋ ಆತ್ಮವಂಚನೆಯೋ?
ಇದನ್ನು ನಾವು ಗಂಭೀರವಾಗಿ ಯೋಚಿಸಬೇಕು. ‘ಕಾಕಸ್ಯ ಕತಿ ವಾ ದಂತಾಃ’ ಎಂಬ ಕುಚೋದ್ಯದ ಮಾತು ಆಡಿ ಪಂಡಿತರ ಮುಖಭಂಗ ಮಾಡುವ ಕೆಲಸ ನಿಲ್ಲಬೇಕು. ಕನ್ನಡದ ದೌರ್ಬಲ್ಯ ಎಂದರೆ ಈಚಿನ ದಶಕಗಳಲ್ಲಿ ಹೊಸಗನ್ನಡದಲ್ಲಿ ಕೃಷಿ ಮಾಡುವ ಕವಿಗಳು, ಕತೆಗಾರರು, ನಾಟಕಕಾರರು, ಕಾದಂಬರಿಕಾರರು, ವೈಚಾರಿಕಸಾಹಿತ್ಯ ಲೇಖಕರು ಮಾತ್ರ ಹೆಚ್ಚಾಗಿ ಕೀರ್ತಿಪ್ರತಿಷ್ಠೆಗಳಿಗೆ ಭಾಜನರಾಗುತ್ತಿದ್ದಾರೆ. ಆದರೆ ಪರಂಪರೆಯ ಸಾಹಿತ್ಯವನ್ನು, ಕರ್ನಾಟಕದ ಕವಿವರೇಣ್ಯರು ಸುಮಾರು ೧೫೦೦ ವರ್ಷಗಳ ಕಾಲ ಬೆಳಸಿಕೊಂಡು ಬಂದ, ಶ್ರದ್ಧೆ ಶಕ್ತಿಗಳ ಜೀವಸಾರವಾದ ಸಾಹಿತ್ಯವನ್ನು ಕಣ್ಣೆತ್ತಿ ನೋಡುವವರೂ ಆದರದಿಂದ ಆಸ್ವಾದಿಸುವವರೂ ವ್ಯಾಸಂಗಮಾಡುವವರೂ ವ್ಯಾಖ್ಯಾನಿಸುವವರೂ ವಿರಳವಾಗುತ್ತ ಹೋಗುತ್ತಿರುವುದು ಭಾಷೆ ಸಾಹಿತ್ಯಗಳ ಬೆಳೆವಣಿಗೆಯ ದೃಷ್ಟಿಯಿಂದ ತುಂಬ ಅನ್ಯಾಯ ಎನ್ನುವಂತೆ ಆಗಿದೆ. ಪರಂಪರೆಯ ವಿಸ್ಮೃತಿ ಭವಿತವ್ಯವನ್ನು ದುರ್ಬಲಗೊಳಿಸದೆ ಬಿಡುವುದಿಲ್ಲ.
ದಿಟವಾಗಿ, ಪಾಂಡಿತ್ಯ ಅಥವಾ ವಿದ್ವತ್ತೆ ಎಂದರೆ ಏನು? ಪರಂಪರೆಯ ಜ್ಞಾನಸಾಧನಗಳಾದ ಭಾಷಾಸಾಹಿತ್ಯಗಳ ಪಠ್ಯಗಳನ್ನು, ಶಾಸನಗಳನ್ನು, ಶಿಲ್ಪಗಳನ್ನು, ನಾಣ್ಯಗಳನ್ನು, ಮುದ್ರೆಗಳನ್ನು, ಭೂಗರ್ಭದ ವಸ್ತುವಿಶೇಷಗಳನ್ನು, ಚಿತ್ರಗಳನ್ನು ಆಯಾಕಾಲದ ಹಿನ್ನೆಲೆಯಲ್ಲಿ, ಕರ್ತೃವಿನ ಸಾಧನೆಯ, ಸಾಮರ್ಥ್ಯದ ಬೆಳಕಿನಲ್ಲಿ ಸಮರ್ಥವಾಗಿ, ಸಮರ್ಪಕವಾಗಿ, ವ್ಯಾಖ್ಯಾನಿಸುವುದು ಎಂದು ಸ್ಥೂಲವಾಗಿ ಹೇಳಬಹುದು. ಸಾಹಿತ್ಯಕ್ಕೆ ಮಾತ್ರವೇ ಅನ್ವಯಿಸಿ ಹೇಳುವುದಾದರೆ, ಭಾಷೆ ವ್ಯಾಕರಣ ಛಂದಸ್ಸು ಗ್ರಂಥಸಂಪಾದನೆ ನಿಘಂಟು ಶಬ್ದಾರ್ಥವಿವೇಚನೆ ಇವುಗಳಲ್ಲಿಯ ತಜ್ಞತೆ ಎಂದು ತಿಳಿಯಬೇಕು. ಈ ಅರ್ಥ ಆಂಗ್ಲಭಾಷಾವಿದ್ವಾಂಸರಿಗೂ ಸಮ್ಮತವಾದ್ದು. ಅವರಿಗೆ ಪಾಂಡಿತ್ಯದ ಒರೆಗಲ್ಲು ಲ್ಯಾಟಿನ್ ಗ್ರೀಕ್ ಮತ್ತು ಹಳೆಯ ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯ ಎಂದಾದರೆ, ನಮಗೆ ಸಂಸ್ಕೃತ ಪ್ರಾಕೃತಗಳು, ಸೋದರ ದ್ರಾವಿಡಭಾಷೆಗಳು ಹಾಗೂ ಹಳಗನ್ನಡ ಭಾಷಾಸಾಹಿತ್ಯಗಳು ಇವುಗಳ ಸಮೀಚೀನವಾದ ಜ್ಞಾನ. ಇಂಗ್ಲಿಷ್ ಮತ್ತು ಜರ್ಮನ್ ವಿದ್ವಾಂಸರು ಅನುಸರಿಸಿದ ಅಧ್ಯಯನವಿಧಾನಗಳು ಒದಗಿಸಿರುವ ಸಾಧನಸಂಪತ್ತಿಯನ್ನೂ ತಪ್ಪದೆ ನಾವು ನೆರವಿಗೆ ಬಳಸಿಕೊಳ್ಳಬೇಕಾಗುತ್ತದೆ.
೧೯ನೆಯ ಶತಮಾನದ ಉತ್ತರಾರ್ಧದಿಂದ ತೊಡಗಿ ೨೦ನೆಯ ಶತಮಾನದ ಪೂರ್ವಾರ್ಧದ ವರೆಗೆ ಸಮಗ್ರ ಭರತಖಂಡದಲ್ಲಿಯೇ ಭಾಷೆ ಸಂಸ್ಕೃತಿ ಇತಿಹಾಸದ ನೆಲೆಗಳಲ್ಲಿ ಜಾಗೃತಿಯ ಮತ್ತು ಶೋಧನೆಯ ಕೆಲಸಗಳು ಉತ್ಸಾಹದಿಂದ ನಡೆದುವು. ಸಂಸ್ಥೆಗಳೂ ವ್ಯಕ್ತಿಗಳೂ ಒಗ್ಗೂಡಿ ಒತ್ತಾಸೆನೀಡಿದ್ದು ಕಂಡುಬಂದದ್ದು ಈ ಕಾಲಘಟ್ಟದಲ್ಲಿಯೇ. ಕನ್ನಡಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಕಿಟ್ಟೆಲ್-ರೈಸ್-ಫ್ಲೀಟ್ ಇಂತಹ, ಆರ್. ನರಸಿಂಹಾಚಾರ್, ಆಲೂರು ವೆಂಕಟರಾವ್, ಬಿ.ಎಂ. ಶ್ರೀಕಂಠಯ್ಯ, ಪಂಜೆ ಮಂಗೇಶರಾವ್, ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ ಇಂತಹ ಹಲವರ ಪ್ರಯತ್ನಗಳಿಂದ ನಡೆದ ಭಾಷಾಭಿವೃದ್ಧಿಯ ಉದ್ಯಮಗಳು ಸುದೃಢವಾದವು, ದೀರ್ಘಕಾಲಿಕ ವಾದವು. ಈ ಶ್ರೇಣಿಗೆ ಸೇರತಕ್ಕವರು ಇನ್ನೂ ಹಲವರಿದ್ದಾರೆ. ನನ್ನ ಈ ವೃದ್ಧಾಪ್ಯದ ದಿನಗಳಲ್ಲಿ ಇವರ ಜೀವನ ಸಾಧನೆಗಳನ್ನು ನೆಮ್ಮದಿಯಿಂದ ಪರಿಚಯಮಾಡಿಕೊಳ್ಳಲು, ಈಚಿನ ಪೀಳಿಗೆಯವರಿಗೆ ಸಾಧ್ಯವಾದಮಟ್ಟಿಗೆ ಪರಿಚಯಮಾಡಿಕೊಡಲು ನನ್ನ ಹೊತ್ತು ಹೋಗುತ್ತಿದೆ ಎಂದು ತಮ್ಮಲ್ಲಿ ಅರಿಕೆ ಮಾಡಿಕೊಳ್ಳುತ್ತೇನೆ. ನನ್ನ ಪಾಲಿಗೆ ಪಂಪ-ಕುಮಾರವ್ಯಾಸರೂ ರತ್ನಾಕರವರ್ಣಿ-ಮುದ್ದಣರೂ ಎಷ್ಟು ಪೂಜ್ಯರೋ, ಅಷ್ಟೇ ಮಟ್ಟಿಗೆ ಈ ಮೂರ್ಧನ್ಯಪ್ರಾಯರಾದ ಪಂಡಿತರೂ ಪೂಜ್ಯರು. ಏಕೆಂದರೆ, ಇವರು ಕನ್ನಡ ನಾಡು ನುಡಿಗಳ ಮೂಲಾಧಾರಗಳನ್ನು ಕಟ್ಟುವ, ಗಟ್ಟಿಮಾಡುವ ಪುಣ್ಯಕಾರ್ಯದಲ್ಲಿ ಕಟಿಬದ್ಧರಾಗಿ ದುಡಿದು ಜೀವತೆತ್ತವರು.

ವಿದ್ವಾಂಸರ, ವಿದ್ವತ್ಕಾರ್ಯಗಳ ದಾಖಲಾತಿ
ನಮ್ಮ ಭಾಷೆ ಸಾಹಿತ್ಯಗಳ ವಿಷಯದಲ್ಲಿ ಆರಂಭದಲ್ಲಿ ವಿದ್ವಾಂಸರು ಮಾಡಿರುವ ಕೆಲಸಗಳು ಒಳ್ಳೆಯ ಫಲಗಳನ್ನೇ ನೀಡಿವೆ. ನಮ್ಮ ಭಾಷೆ ಸಾಹಿತ್ಯ ಸಂಸ್ಕೃತಿ ಇತಿಹಾಸ ಈ ನಾಲ್ಕು ಮುಖಗಳಲ್ಲಿಯೂ ಶ್ರಮಿಸಿದ ವಿದೇಶೀಯರು ಸುಮಾರು ೬೦-೭೦ ಮಂದಿಯಾದರೂ ಇರಬಹುದು.
ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಅಸ್ತಿತ್ವ ನಿಂತುಹೋದಮೇಲೆಯೂ ಐರೋಪ್ಯ ವಿದ್ವಾಂಸರ ಬರಹಗಳು ಉಳಿಯುತ್ತವೆ ಎಂಬುದಾಗಿ ಗವರ್ನಲ್ ಜನರಲ್ ವಾರೆನ್ ಹೇಸ್ಟಿಂಗ್ಸ್ ೧೭೮೪ರಲ್ಲಿಯೇ ಪ್ರವಾದಿಯಂತೆ ನುಡಿದನು. ಆದರೆ ಎಷ್ಟೋ ರಾಷ್ಟ್ರೀಯ ವಿಶ್ವಕೋಶಗಳಲ್ಲಿ ಇವರಲ್ಲಿ ಗಣ್ಯರಾದ ಎಫ್. ಕಿಟ್ಟೆಲ್, ಬಿ.ಎಲ್.ರೈಸ್., ಜೆ.ಎಫ್. ಫ್ಲೀಟ್ ಇಂಥವರ ಹೆಸರುಗಳೇ ಮುಖ್ಯ ಉಲ್ಲೇಖಗಳಾಗಿ ಕಂಡುಬರುವುದಿಲ್ಲ. ಎ. ವೆಂಕಟಸುಬ್ಬಯ್ಯ, ಎಂ.ಎ. ರಾಮಾನುಜ ಅಯ್ಯಂಗಾರ್, ಕ.ವೆಂ. ರಾಘವಾಚಾರ್, ಶಿ.ಶಿ. ಬಸವನಾಳ, ಸೇಡಿಯಾಪು ಕೃಷ್ಣಭಟ್ಟ, ಎರ್ತೂರು ಶಾಂತಿರಾಜಶಾಸ್ತ್ರಿ, ರಾ.ಹ. ದೇಶಪಾಂಡೆ, ಶ್ಯಾಮರಾವ್ ವಿಟ್ಠ್ಠಲ ಕೈಕಿಣಿ, ಫ.ಗು. ಹಳಕಟ್ಟಿ ಇವರ ಹೆಸರುಗಳೂ ಹೀಗೆಯೇ ಕಾಣಿಸುವುದಿಲ್ಲ. ಭಾರತೀಯ ಸಾಹಿತ್ಯ ವಿಶ್ವಕೋಶದಲ್ಲಿ ಡೋಗ್ರಿ ಮೈಥಿಲಿ ಇಂಥ ಭಾಷೆಗಳ ಭಾಷಾವೈಜ್ಞಾನಿಕ ಅಧ್ಯಯನಗಳ ಬಗೆಗೆ ಪ್ರಬಂಧಗಳಿದ್ದರೂ, ಕನ್ನಡದ ಸಂಬಂಧದಲ್ಲಿ ಒಂದು ಸಾಲು ಬರೆವಣಿಗೆಯೂ ಇಲ್ಲ. ಇದು ಕನ್ನಡಕ್ಕೆ ಆಗಿರುವ ಅನ್ಯಾಯ.
ಕನ್ನಡ ಭಾಷೆ ಸಾಹಿತ್ಯಗಳ ಚರಿತ್ರೆಯನ್ನು ಬರೆಯುವವರು ಸಾಮಾನ್ಯಕವಿಗಳಿಗೆ ಕೂಡ ವಿಮರ್ಶೆಯ ಭಾಗ್ಯ ದೊರಕಿಸುತ್ತಾರೆ; ಶ್ರೇಷ್ಠದರ್ಜೆಯ ವಿದ್ವತ್ಕಾರ್ಯಗಳನ್ನು ಕೈಗೂಡಿಸಿದವರ ಹೆಸರನ್ನೇ ಹೇಳುವುದಿಲ್ಲ. ಆದರೆ ಸಮದರ್ಶಿಗಳಾದ ತೀ.ನಂ. ಶ್ರೀಕಂಠಯ್ಯನವರು ಕನ್ನಡ ಭಾಷೆ ಸಾಹಿತ್ಯಗಳ ಸಂಬಂಧವಾಗಿ ಐತಿಹಾಸಿಕಲೇಖನ ಬರೆಯುವಾಗ ವಿದ್ವತ್ತೆಯ ವ್ಯವಸಾಯವನ್ನೂ ಪಂಡಿತರ ಹೆಸರುಗಳನ್ನೂ ದಾಖಲಿಸಿದ್ದಾರೆ. ಡಿ.ಎಲ್. ನರಸಿಂಹಾಚಾರ‍್ಯರು ತಮ್ಮ ೪೧ನೆಯ ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷ ಭಾಷಣದಲ್ಲಿ (೧೯೬೦) ವಿದ್ವತ್ತೆಯ ಪೋಷಣೆ, ವಿದ್ವಾಂಸರ ಕಾರ್ಯ ಎರಡನ್ನೂ ಸವಿಸ್ತರವಾಗಿ ಪ್ರಸ್ತಾವಿಸುತ್ತಾರೆ.
ರೈಸ್ ಮತ್ತು ಕಿಟ್ಟೆಲ್ ಇಬ್ಬರಿಗೂ ನಾನಾ ವಿಧಗಳಲ್ಲಿ ಸಹಾಯಮಾಡಿದ, ಸಿಬ್ಬಂದಿ ಯಲ್ಲಿ ಒಬ್ಬರಾಗಿ ಅವಿರತವಾಗಿ ಶ್ರಮಿಸಿದ ಬುರುಡುಗುಂಟೆ ಶ್ರೀನಿವಾಸಯ್ಯಂಗಾರ್, ಚಿಂಚೋಳಿ ವೆಂಕಣ್ಣಾಚಾರ್ (ಇವರ ಮಗ ಚಿಂಚೋಳಿ ವೇಣುಗೋಪಾಲಾಚಾರ‍್ಯರು ಬೆಂಗಳೂರು ಸೆಯಿಂಟ್ ಜೋಸೆಫ್ಸ್ ಕಾಲೇಜಿನಲ್ಲಿ ನನ್ನ ಸಹೋದ್ಯೋಗಿಯಾಗಿದ್ದರು; ಸಂಸ್ಕೃತ ಪ್ರಾಧ್ಯಾಪಕರಾಗಿದ್ದರು), ಧನ್ವಂತ್ರಿ ಭೀಮಾಚಾರ‍್ಯ, ಸೋಸಲೆ ಅಯ್ಯಶಾಸ್ತ್ರಿ, ಕೆ. ರಾಮರಾವ್, ಬ್ರಹ್ಮಸೂರಿ ಪಂಡಿತ, ತಿರುಮಲೆ ಶಾಮಣ್ಣ, ಎಂ.ಸಿ. ಶ್ರೀನಿವಾಸಾಚಾರಿ, ವಸ್ತ್ರದ ಶಿವಲಿಂಗಪ್ಪ, ಉದ್ದಿ ದಕ್ಷಿಣಾಮೂರ್ತಿಶಾಸ್ತ್ರಿ, ಸುರಧೇನುಪುರದ ನರಸಿಂಹಶಾಸ್ತ್ರಿ, ರಾಯಪಾಳ್ಯಂ ರಾಘವಾಚಾರ‍್ಯ, ಗೌಡಗೆರೆ ವೆಂಕಟರಮಣಾಚಾರ‍್ಯ, ಬಿ. ವೆಂಕಟರಾಯಾಚಾರ‍್ಯ, ಆನಂದಾಳ್ವಾರ್, ವಿ. ಶ್ಯಾಮಾಚಾರ‍್ಯ, ಪದ್ಮರಾಜಪಂಡಿತ ಹೀಗೆ ಸಾಲು ಸಾಲು ಹೆಸರುಗಳು ಉಲ್ಲೇಖಮಾತ್ರವಾಗಿ ಕಾಣುತ್ತವೆಯಲ್ಲದೆ ಕಾರ್ಯಭಾರವೇನು ಎಂದು ತಿಳಿಯುವುದಿಲ್ಲ. ತಿಳಿಯಬೇಕೆಂಬವರ ಕುತೂಹಲವನ್ನು ತಣಿಸುವ ಬಗೆ ಹೇಗೆ? ನಮ್ಮ ದುರ್ದೈವವೆಂದರೆ, ಪೀಳಿಗೆಯ ಮಕ್ಕಳು ಮೊಮ್ಮಕ್ಕಳಿಗೇ ತಮ್ಮ ಹಿರಿಯರ ಬಗೆಗೆ ಇರಬೇಕಾಗಿದ್ದ ಅಭಿಮಾನವಿಲ್ಲದಿರುವುದು, ಮನೆಗಳಲ್ಲಿ ಅವರದಾಗಿ ಏನೂ ಮಾಹಿತಿಗಳನ್ನೂ ಸಾಮಗ್ರಿಗಳನ್ನೂ ಉಳಿಸಿಕೊಳ್ಳದಿರುವುದು. ಕೆಲವು ಅಪವಾದಗಳು ಇರಬಹುದು. ನಾನು ಅನ್ಯತ್ರ ಇದರ ವಿಚಾರವನ್ನು ಮಾಡಿದ್ದೇನೆ.

ಹೊಸತನದ ಹುಡುಕಾಟ: ಸಾಹಿತ್ಯದ ಮೂರು ಗಣಿಗಳು
ಅಜ್ಞಾತಸಾಹಿತ್ಯ, ಅನುಪಲಬ್ಧಸಾಹಿತ್ಯ ಮತ್ತು ಅಲಕ್ಷಿತಸಾಹಿತ್ಯ ಇವನ್ನು ಮೂರು ಗಣಿಗಳೆಂದು ನಾನು ಗಣಿಸಿದ್ದೇನೆ. ಈ ವಿಷಯದಲ್ಲಿ ಕೆಲವರು ಗಣ್ಯವಿದ್ವಾಂಸರು ಸ್ವಲ್ಪ ಕೆಲಸ ಮಾಡಿದ್ದಾರೆ. ಈ ಕೆಲಸ ಮುಂದುವರಿಯಬೇಕಾಗಿದೆ.
ಅಜ್ಞಾತಸಾಹಿತ್ಯ: ‘ಕವಿರಾಜಮಾರ್ಗ’ದಲ್ಲಿ ಶೋಧಿಸತಕ್ಕ ಇನ್ನೂ ಹಲವು ವಿಷಯಗಳಿವೆ. ಸಾಹಿತ್ಯಪ್ರಕಾರಗಳಾದ ಚತ್ತಾಣ ಬೆದಂಡೆ ಗದ್ಯಕಥೆಗಳ ಸ್ವರೂಪ, ಮಾದರಿಗಳು ಅವುಗಳಲ್ಲಿ ಒಂದು. ಹಾಗೆಯೇ ಕಾವ್ಯಾವಲೋಕನದಲ್ಲಿ ಉಕ್ತವಾಗಿರುವ, ಇಡುಕುಂಗಬ್ಬ (=ಮುಕ್ತಕ), ಪದ, ಮೆಲ್ವಾಡು, ಪ್ರಬಂಧ, ಪಾಡು, ಪಾಡುಗಬ್ಬ, ಮೆಲ್ವಾಡು, ಬೆದಂಡೆಗಬ್ಬ, ಬಾಜನೆಗಬ್ಬ ಎಂದಿರುವ ಸಾಹಿತ್ಯಪ್ರಕಾರಗಳ ರೂಪ ಮತ್ತು ಪ್ರಯೋಗಗಳ ಸಂಬಂಧವಾಗಿ ಈ ಶೋಧ ಮುನ್ನಡೆದು, ಮಾದರಿಗಳನ್ನು ಗುರುತಿಸಬಹುದೇ ಅಥವಾ ಸಣ್ಣ ಪ್ರಮಾಣದವು ಪ್ರಬಂಧಗಳ ಮೈಯಲ್ಲಿ ಅಡಗಿಕೊಂಡಿವೆಯೇ ಕಂಡುಹಿಡಿಯ ಬೇಕಾಗಿದೆ.
ಹಾಗೆಯೇ ಕನ್ನಡದಲ್ಲಿ ‘ಕವಿರಾಜಮಾರ್ಗ’, ‘ಕಾವ್ಯಾವಲೋಕನ’ ಮೊದಲುಗೊಂಡು ಪ್ರಾಚೀನ ಅಲಂಕಾರಶಾಸ್ತ್ರ ಗ್ರಂಥಗಳಲ್ಲಿ, ‘ಸೂಕ್ತಿಸುಧಾರ್ಣವ’, ‘ಕಾವ್ಯಸಾರ’ ಮೊದಲಾದ ಪದ್ಯಸಂಕಲನಗಳಲ್ಲಿ ಚದುರಿಹೋಗಿರುವ ಬಹುಸಂಖ್ಯೆಯ ಲಕ್ಷ್ಯಪದ್ಯಗಳ ಹಾಗೂ ಉದಾಹರಣೆಗಳ ಅಜ್ಞಾತಮೂಲಗಳನ್ನು ಶೋಧಿಸಿ, ಅವುಗಳ ಕರ್ತೃತ್ವ ಆಕರಗಳನ್ನೂ ಬೌದ್ಧಿಕ ನೆಲೆಯಲ್ಲಿ ಕಥಾವಸ್ತು ಸಂಸ್ಕೃತಿ ಇತಿಹಾಸ ಮೊದಲಾದ ವಿವರಗಳನ್ನೂ ಶೋಧಿಸಬೇಕಾಗಿದೆ. ಸುಳಿವು ಸುದ್ದಿಗಳನ್ನು ಕೊಡದೆ ನಷ್ಟಪ್ರಾಯವಾಗಿರುವ ಸಾಹಿತ್ಯಿಕ ಸಂಗತಿಗಳೇನಿವೆಯೋ ಅವನ್ನು ಅನುಮಾನಪ್ರಮಾಣದ ಬಲದಿಂದ ಕಟ್ಟಿಕೊಡುವುದು ಸಾಧ್ಯವೇ ಹೇಗೆ ಎನ್ನುವುದನ್ನು ವಿವೇಚಿಸಬೇಕು. ಆರ್. ನರಸಿಂಹಾಚಾರ‍್ಯರು ಮೊದಲು ಗೊಂಡು ಕೆಲವರು ಈ ದಿಕ್ಕಿನಲ್ಲಿ ಕೆಲಸಮಾಡಿದ್ದರೂ ಪ್ರತ್ಯೇಕ ಪ್ರಾಮುಖ್ಯದ ವಿಷಯವಾಗಿ ಶೋಧ ನಡೆಯಬೇಕಾಗಿದೆ.
ಅನುಪಲಬ್ಧಸಾಹಿತ್ಯ: ‘ಕವಿರಾಜಮಾರ್ಗ’, ಜಯಕೀರ್ತಿಯ ‘ಛಂದೋನುಶಾಸನ’ ಮೊದಲಾದ ಶಾಸ್ತ್ರಕೃತಿಗಳಲ್ಲಿಯೂ ಪೊನ್ನ ರನ್ನ ಮೊದಲಾದವರ ಕಾವ್ಯಗಳಲ್ಲಿಯೂ ದೊರೆಯುವ ಹಾಗೂ ಅನ್ಯ ಸಾಕ್ಷ್ಯಾಧಾರಗಳಿಂದ ತಿಳಿಯುವ ಸಾಹಿತ್ಯ ಕೃತಿಗಳು ಯಾವುವು, ಎಷ್ಟು. ಇವುಗಳನ್ನು ಗೊತ್ತುಮಾಡಿ ಕ್ಷೇತ್ರಕಾರ್ಯದಲ್ಲಿ ಆಸಕ್ತರಾದವರು ತಮ್ಮ ಕೆಲಸಗಳನ್ನು ಇನ್ನಷ್ಟು ತೀವ್ರಗೊಳಿಸಬೇಕಾಗಿದೆ. ಈಗ ಕನ್ನಡದಲ್ಲಿ ರಚಿತವಾಗಿರುವ ಪ್ರಾಚೀನ ಕಾವ್ಯಸಂಕಲನಗಳಲ್ಲಿ ಸಂಕಲಿತವಾಗಿರುವ ಪದ್ಯರಾಶಿಯಲ್ಲಿ ಜ್ಞಾತ ಅಜ್ಞಾತ ಆಕರಗಳ ಅಂದಾಜು ಲೆಕ್ಕ ನೋಡಿದರೆ, ನಾವು ನಮ್ಮ ಪ್ರಾಚೀನ ಕನ್ನಡಸಾಹಿತ್ಯದ ಸು. ಅರ್ಧಭಾಗದಷ್ಟನ್ನು ಕಳೆದುಕೊಂಡಿದ್ದೇವೆ ಎಂದು ತೋರುತ್ತದೆ. ಇನ್ನು ನಡುಗನ್ನಡ ಕಾಲದ ಸಾಹಿತ್ಯಕೃತಿಗಳಿಗೆ ಬೇರೆಯೇ ಲೆಕ್ಕಾಚಾರದ ಅಂದಾಜು ಬೇಕಾಗುತ್ತದೆ. ಆಕಸ್ಮಿಕ ವಾಗಿ ನಾಗವರ್ಮನ ೧೧ನೆಯ ಶತಮಾನದ ‘ವೀರವರ್ಧಮಾನಪುರಾಣ’ ದೊರೆತು ಪ್ರಕಟವಾದ ಹಾಗೆ, ಅಜ್ಞಾತಕರ್ತೃಕವಾದ ಸು. ೧೭೦೦ರ ‘ಧರ್ಮಗುಪ್ತ ಚರಿತೆ’ ದೊರೆತು ಪ್ರಕಟನೆಯ ಸಿದ್ಧತೆಯಲ್ಲಿರುವ ಹಾಗೆ, ಹುಡುಕಲು ಹೊರಡುವವರಿಗೆ ಗಣಿಯೊಳಗಿನ ರತ್ನಗಳು ಕಣ್ಣಿಗೆ ಬೀಳಬಹುದಾಗಿದೆ. ಶ್ರವಣಬೆಳಗೊಳದ ಶ್ರೀಮಠ ಅಂಥ ಕೆಲವನ್ನು ಪ್ರಕಟಿಸಿದೆ.
ಅಲಕ್ಷಿತಸಾಹಿತ್ಯ : ಇದು ವಿಶೇಷವಾಗಿ ಗಮನಿಸಬೇಕಾದ್ದು. ಸಾಹಿತ್ಯ ಲಭ್ಯವಿದೆ; ಹಸ್ತಪ್ರತಿಗಳ ರೂಪದಲ್ಲಿಯೋ ಮುದ್ರಣಗೊಂಡು ಪ್ರಕಟವಾಗಿಯೋ ಪರಾಮರ್ಶೆಗೆ ಸಿಕ್ಕುತ್ತದೆ; ಆದರೆ ಸಾಹಿತ್ಯಾಸಕ್ತರಿಂದಲೂ ಸಂಶೋಧಕರಿಂದಲೂ ಅದು ಅಲಕ್ಷ್ಯಕ್ಕೆ ಒಳಗಾಗಿರುವ ಹಾಗೆ ತೋರುತ್ತದೆ. ಅದರ ಪ್ರಾಶಸ್ತ್ಯ ಮಹತ್ತ್ವಗಳ ಬಗೆಗೆ ಉದಾಸೀನವಿದ್ದು, ಹೆಚ್ಚಿನ ಹಸ್ತಪ್ರತಿಗಳು ಕತ್ತಲೆಕೋಣೆಯ ಕಪಾಟುಗಳಲ್ಲಿ ನಿದ್ರಿಸಿವೆ; ಪ್ರಕಟವಾಗಿದ್ದ ಪಕ್ಷದಲ್ಲಿ, ತಿರಸ್ಕಾರಭಾವವಿದೆ; ಅಸಹಾಯಕತೆಯೂ ಇದೆ.
ಇಲ್ಲಿ ನಾನು ಮಾತಾಡುತ್ತಿರುವುದು ಲೌಕಿಕಶಾಸ್ತ್ರಕೃತಿಗಳನ್ನು ಕುರಿತು. ಇಮ್ಮಡಿ ಚಾವುಂಡರಾಯನ (೧೦೨೫) ‘ಲೋಕೋಪಕಾರ’ ಒಂದು ಸರ್ವಸಂಗ್ರಾಹಕ ಶಾಸ್ತ್ರಕೃತಿ. ಹಳಗನ್ನಡ ಬಲ್ಲವರ ಸಹಾಯ ಪಡೆದು ವಿಜ್ಞಾನಿಗಳೂ ಕೈಗಾರಿಕೋದ್ಯಮಿಗಳೂ ಈ ಕೃತಿಯ ಪ್ರಯೋಗಸಾಧ್ಯತೆ ಪ್ರಯೋಜನಗಳ ಮೌಲ್ಯವನ್ನು ಕಂಡುಕೊಳ್ಳಬೇಕಾಗಿದೆ. ಅಧ್ಯಯನಕ್ಕೆ ‘ಮಾನಸೋಲ್ಲಾಸ’, ‘ಶಿವತತ್ತ್ವರತ್ನಾಕರ’ಗಳ ನೆರವು ಕೂಡ ಪಡೆಯಬಹುದು, ತೌಲನಿಕವಾಗಿ ವಿಮರ್ಶಿಸಬಹುದು. ತೋಟಗಾರಿಕೆ, ಅಗರುಬತ್ತಿ ತಯಾರಿಕೆ, ಅಂತರ್ಜಲ ಶೋಧನೆ ಇಂತಹ ಕೆಲವು ವಿಷಯಗಳಲ್ಲಿ ಆಸಕ್ತರ ಹೊಸ ಶೋಧಗಳಿಗೆ ಈ ಕೃತಿಯಲ್ಲಿ ಅವಕಾಶವಿದೆ.
ವಿವಿಧ ಪ್ರಾಯೋಗಿಕ ವಿದ್ಯೆಗಳಾದ ಯೋಗ, ನಾಡೀಶಾಸ್ತ್ರ, ಪಾಕಶಾಸ್ತ್ರ, ಧನುರ್ವಿದ್ಯೆ, ಮಲ್ಲವಿದ್ಯೆ, ಖಡ್ಗವಿದ್ಯೆ, ಬಾಣಗಾರಿಕೆ, ವೃಕ್ಷಾಯುರ್ವೇದ, ಸ್ತ್ರೀ-ಅಶ್ವ-ಗಜ-ಗೋ-ಸಾಮಾನ್ಯ-ಬಾಲವೈದ್ಯ ಶಾಖೆಗಳು, ಚತುರಂಗ, ನೆತ್ತ ಮೊದಲಾದ ಕ್ರೀಡೆಗಳು, ಅಶ್ವಶಾಸ್ತ್ರ, ಗಜಶಾಸ್ತ್ರ ಮೊದಲಾದ ಪ್ರಾಣಿಶಾಸ್ತ್ರಗಳು; ಕಲಾಪ್ರಕಾರಗಳಾದ ಗೀತ-ನೃತ್ಯ-ಚಿತ್ರ-ಶಿಲ್ಪ ಮತ್ತು ವಾಸ್ತುಕಲೆಗಳು; ಗಣಿತವಿಜ್ಞಾನದ ಸಾಮಾನ್ಯ-ಜ್ಯಾಮಿತೀಯ-ಬೀಜಗಣಿತ ವಿಜ್ಞಾನಗಳು ಹೀಗೆ ಇವುಗಳ ವ್ಯಾಪ್ತಿ.
ಕಾರ‍್ಯಕಾರಣಸಂಬಂಧವನ್ನು ವಿಜ್ಞಾನದ ಹಾಗೆ ಸ್ಪಷ್ಟವಾಗಿ ಸಾಧಿಸಲು ಸಾಧ್ಯವಿಲ್ಲದೆ, ಶ್ರದ್ಧೆ ಅನೂಚಾನವಾದ ಆಚರಣೆ ಅತೀತಲೋಕಜ್ಞತೆ ಅನುಭವಪ್ರಾಮಾಣ್ಯ ಇವನ್ನು ಆಶ್ರಯಿಸಿದ ಶಾಸ್ತ್ರಪ್ರಪಂಚವೊಂದುಂಟು. ಇಲ್ಲಿ ದೇಶೀಯ ಅನುಭವ ಆಚರಣೆಗಳದೇ ಮುಖ್ಯಪಾತ್ರ.
ಜ್ಯೋತಿಶ್ಶಾಸ್ತ್ರದ ಶಕುನ-ಪ್ರಶ್ನಫಲ-ಸ್ವಪ್ನಫಲ-ಸಾಮುದ್ರಿಕ-ನರಪಿಂಗಲಿ-ನಾಡೀಶಾಸ್ತ್ರ – ಜಲಶಿಲ್ಪಿ-ಹಲ್ಲಿಶಕುನ ಇತ್ಯಾದಿ ಶಾಖೆಗಳು, ಧಾತುವಾದ-ರಸವಿದ್ಯೆ-ವೃಷ್ಟಿಶಾಸ್ತ್ರಗಳು ಇತ್ಯಾದಿ. ಇಂಥವನ್ನು ತಳ್ಳಿಹಾಕುವುದು, ಬುರುಡೆಯೆಂದು ಅಪಹಾಸ್ಯ ಮಾಡುವುದು ಸುಲಭ. ಆದರೆ ಪ್ರತ್ಯಕ್ಷದರ್ಶಿಗಳ ಹಾಗೂ ಪರಿಣತರ ಅನುಭವ ಮತ್ತು ವ್ಯವಹಾರಗಳನ್ನು ಜೊತೆಗಿಟ್ಟುಕೊಂಡು, ಶಾಸ್ತ್ರಶೋಧನೆಯ ನಿಕಷಕ್ಕೆ ತಿಕ್ಕಿ ವೈಜ್ಞಾನಿಕಸತ್ಯ ಸಂಭಾವ್ಯತೆ ಹೇಗೆ-ಈ ನಂಬಿಕೆಗಳ ಉಗಮ ಹಿನ್ನೆಲೆ ಏನು ಇವನ್ನು ತಿಳಿಯುವುದರಲ್ಲಿ ತಪ್ಪೇನಿಲ್ಲ.
ಇನ್ನು ಕನ್ನಡದ ಒಗಟುಗಳ ಅಧ್ಯಯನ ಸಾಕಷ್ಟು ನಡೆದಿದ್ದರೂ ಅದು ಜನಪದ ಸಾಹಿತ್ಯದ ಹಿನ್ನೆಲೆಯಲ್ಲಿ ನಡೆದಿರುವುದೇ ಸಾಮಾನ್ಯ. ಆದರೆ ಮಹಾಕವಿಗಳ ಹಳಗನ್ನಡ ಚಂಪೂಕಾವ್ಯಗಳಲ್ಲಿ, ‘ಗಟ್ಟಿಪದಗಳು-ವಾವೆ ಪದಗಳು’, ‘ಒಗಟಿನ ಚೌಪದಗಳು-ಲೆಕ್ಕದ ಚೌಪದಗಳು’ ಎಂಬ ಪ್ರತ್ಯೇಕ ಕೃತಿರಾಶಿಯಲ್ಲಿ ಚೆದುರಿರುವ, ಹುದುಗಿರುವ ಒಗಟುಗಳ ಅಧ್ಯಯನ ಇನ್ನೂ ನಡೆಯಬೇಕಾದಮಟ್ಟಿಗೆ ನಡೆದಿಲ್ಲ. ಪುರುಷಪ್ರಶಂಸೆ-ವಿಡಂಬನೆಗಳು ಬೆರೆತ ಚಮತ್ಕಾರಕವಿತ್ವದ ‘ರಾತ್ರಿಯ ನಲ್ಲನ ಪದ್ಯ’ ಎಂಬ ಅಜ್ಞಾತಕರ್ತೃಕ ಕೃತಿ (ಸು. ೧೭೦೦) ೧೮೯೪ರ ಬಳಿಕ ಮತ್ತೆ ಪೂರ್ಣವಾಗಿ ಪುನರ್ಮುದ್ರಣಗೊಂಡಂತೆಯೇ ಕಾಣದು. ಚಿಕುಪಾಧ್ಯಾಯನ (೧೬೭೨) ‘ಚಿತ್ರಶತಕಸಾಂಗತ್ಯ’ ಎಂಬ ಕೃತಿ ಶಬ್ದ ಚಮತ್ಕಾರದ ಚಾಟುಪದ್ಯಗಳ ಸಂಕಲನವಾಗಿದ್ದು, ಅದು ಕೂಡ ಪ್ರಕಟವಾದಹಾಗೆ ಕಾಣದು. ಕನ್ನಡ ಭಾಷೆಯ ಬೆಡಗು ಹೇಗೆಂದು ತಿಳಿಯಬೇಕಾದರೆ ಈ ಕೃತಿಯನ್ನೊಮ್ಮೆ ನೋಡಬೇಕು.
ವಿಶೇಷವಾಗಿ ಕಾಲಜ್ಞಾನದ ಕೃತಿಗಳು ಕನ್ನಡದಲ್ಲಿ ಸಾಕಷ್ಟಿವೆ. ಇವುಗಳ ಅನುಭವ ಪ್ರಾಮಾಣ್ಯವನ್ನು, ವೈಜ್ಞಾನಿಕ ಸಂಭಾವ್ಯತೆಯನ್ನು ಗುರುತಿಸುವುದು ಹೇಗೆ? ಬುರುಡೆಯೆಂದು ತಳ್ಳಿ ಹಾಕುವುದು ಸುಲಭ. ಆದರೆ ಕಾಲಜ್ಞಾನ ನುಡಿದವರನ್ನು ಮಹಿಮಾನ್ವಿತರೆಂದು ತಿಳಿದು, ಅಂಥವರ ವಾಣಿಯನ್ನು ಬುರುಡೆಯೆಂದು ತಳ್ಳಿಹಾಕುವುದು ಹೇಗೆ? ಶೋಧಕರು ಈ ಆಹ್ವಾನವನ್ನು ಸ್ವೀಕರಿಸಿ, ತಥ್ಯವನ್ನು ತಿಳಿಯಬೇಕು. ಮಿಥ್ಯೆ ಎನ್ನುವುದು ನಿಶ್ಚಯವಾದರೆ ಗುಡಿಸಿ ಹಾಕಬೇಕು.
ಸ್ಥಳಮಾಹಾತ್ಮ್ಯದ ಬಹುಸಂಖ್ಯೆಯ ಕೃತಿಗಳು ಕನ್ನಡದಲ್ಲಿವೆ. ಇವು ಲೋಕದ ಬೆಳಕು ಕಾಣುತ್ತಿರುವುದು ಈಚಿನ ವರ್ಷಗಳಲ್ಲಿ; ಇನ್ನೂ ಕೆಲವು ಪ್ರಕಟವಾಗಬೇಕಾಗಿವೆ. ತಿರುಪತಿ, ಕಂಚಿ, ಮೇಲುಕೋಟೆ, ಹಿಮವದ್ಗೋಪಾಲಸ್ವಾಮಿ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ಎಡತೊರೆ, ಶ್ರವಣಬೆಳಗೊಳ, ಶ್ರೀಶೈಲ, ಚುಂಚನಕಟ್ಟೆ, ಶ್ರೀರಂಗ, ನಂಜನಗೂಡು, ತಲಕಾವೇರಿ, ಶೃಂಗೇರಿ, ಶಿವಗಂಗೆ, ಶ್ರೀರಂಗಪಟ್ಟಣ, ಬಳ್ಳಿಗಾವೆ ಇತ್ಯಾದಿ ಪುಣ್ಯಸ್ಥಳಗಳ ಮಾಹಾತ್ಮ್ಯಗಳು ಈ ಸಾಲಿನಲ್ಲಿವೆ. ಆಯಾ ಸ್ಥಳದ ಇತಿಹಾಸ, ಕಲೆ, ಸಂಸ್ಕೃತಿ, ಧರ್ಮಶ್ರದ್ಧೆ, ಸಾಹಿತ್ಯ ಇತ್ಯಾದಿಗಳ ದೃಷ್ಟಿಯಿಂದ ಈ ಕೃತಿಗಳು ಅಧ್ಯಯನಯೋಗ್ಯವಾಗಿವೆ. ೩-೪ ಶತಮಾನಗಳ ಹಿಂದಿನ ಈ ಕೃತಿಗಳು ಇಂದಿನ ಆಯಾ ಸ್ಥಳ ಸನ್ನಿವೇಶಗಳ, ವಿದ್ಯಮಾನಗಳ ಐತಿಹಾಸಿಕ ಬೆಳೆವಣಿಗೆಯನ್ನು ಹೇಳಬಲ್ಲವೇ, ನೋಡಬೇಕು. ಉದಾಹರಣೆಗೆ ಹಿಮವದ್ಗೋಪಾಲಸ್ವಾಮಿ ಬೆಟ್ಟದ ಮಾಹಾತ್ಮ್ಯ ಹೇಳುವ, ಕತ್ತಿ ಗೋಪಾಲರಾಜ ಅರಸಿನ ಕೃತಿ ೧೬ ಆಶ್ವಾಸದ, ೪೦೩೧ ಪದ್ಯಗಳ ಚಂಪೂಕೃತಿಯಾಗಿರುವುದು ಸಣ್ಣ ಸಂಗತಿ ಯೇನಲ್ಲ. ಚಂದ್ರಮನ ಕಾರ್ಕಳದ ‘ಗೊಮ್ಮಟೇಶ್ವರ ಚರಿತೆ’ ೧೭ ಸಂಧಿಗಳ, ೨೧೮೫ ಪದ್ಯಗಳ ರಚನೆಯಾಗಿದ್ದು, ಕಾರ್ಕಳದಲ್ಲಿ ಗೊಮ್ಮಟೇಶ್ವರನ ಪ್ರತಿಷ್ಠೆಯ ವಿವರಗಳನ್ನು ತಿಳಿಸುವ ಒಂದು ಐತಿಹಾಸಿಕ ಮಹತ್ತ್ವದ ರಚನೆಯೂ ಆಗಿದೆ.
ಅಲಕ್ಷಿತಸಾಹಿತ್ಯದಲ್ಲಿ ಅಗ್ರಗಣ್ಯಸ್ಥಾನ ಪಡೆದಿರುವ ಒಂದು ಕೃತಿರಾಶಿಯಿದೆ. ಅದೆಂದರೆ ಜೈನಾಗಮಗ್ರಂಥಗಳ ಟೀಕೆ ವ್ಯಾಖ್ಯಾನಗಳು. ಕನ್ನಡದಲ್ಲಿ ಲಿಪಿಬದ್ಧ ಸಾಹಿತ್ಯೋದಯದ ಮೊದಲ ಕುರುಹುಗಳು ದೊರೆಯುವುದು ಇಲ್ಲಿಯೇ. ‘ಪದ್ಧತಿ’ ಎಂಬ ಹೆಸರಿನಲ್ಲಿ ಸೂತ್ರ-ವೃತ್ತಿಗಳ ಅರ್ಥವಿವರಣೆ ಕೊಡುವ ಟೀಕೆಯನ್ನು ಶ್ಯಾಮಕುಂದಾಚಾರ‍್ಯರೂ ತುಂಬಲೂರಾಚಾರ‍್ಯರೂ ರಚಿಸಿದ್ದು ಕ್ರಿ.ಶ. ೨-೩ನೆಯ ಶತಮಾನದಲ್ಲಿ ಎಂದು ಹೀರಾಲಾಲ್ ಜೈನ್ ಮತ್ತು ಆ.ನೇ. ಉಪಾಧ್ಯೆ ಆ ಟೀಕಾಕಾರರಿಗೆ ಕೊಡುವ ಕಾಲಮಾನದ ದೃಷ್ಟಿಯಿಂದ ತಿಳಿಯುತ್ತದೆ. ನಮ್ಮ ಹುಡುಕಾಟ ಈ ಸಂಗತಿಯನ್ನು ಖಚಿತಪಡಿಸಬೇಕು.
ಹೀಗೆಯೇ ಕನ್ನಡ ಗದ್ಯದ ಕಥೆ ಕೂಡ. ಕಥಾವಸ್ತು ವಿನ್ಯಾಸ ಭಾಷೆ ಶೈಲಿಗಳ ದೃಷ್ಟಿಯಿಂದ ವಡ್ಡಾರಾಧನೆ-ಚಾವುಂಡರಾಯಪುರಾಣಗಳ ಕಾಲದಿಂದ ತೊಡಗಿ, ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದವರೆಗೆ ಒಂದು ಸಮೀಚೀನ ಅಧ್ಯಯನವೇ ಈವರೆಗೆ ನಡೆದಂತೆ ತೋರದು. ಕೈಫಿಯತ್ ಮತ್ತು ಅಂತಹ ಕೆಲವು ಐತಿಹಾಸಿಕ ದಾಖಲೆಗಳು ಪ್ರಕಟನೆಯ ಭಾಗ್ಯ ಪಡೆದಿದ್ದರೂ ಅವುಗಳ ಭಾಷೆ ಶೈಲಿಗಳ ಅಧ್ಯಯನದಿಂದ ಕನ್ನಡ ಗದ್ಯದ ಶಬ್ದಭಂಡಾರ, ವಾಕ್ಯರಚನೆಗಳ ವೈಲಕ್ಷಣ್ಯಗಳು ಇನ್ನೂ ವಿಶದಪಡಬೇಕಾಗಿದೆ. ಈಚೆಗೆ ‘ಜಂಗ್‌ನಾಮಾ’ ಎಂಬ ಹೈದರ್-ಟಿಪ್ಪು ಕಾಲದ ಕನ್ನಡಗದ್ಯರಚನೆಯನ್ನು ನಾನು ಓದಿದಾಗ, ಅಲ್ಲಿಯ ಶಬ್ದಭಂಡಾರದ ಅನ್ಯದೇಶ್ಯಗಳೂ ವಾಕ್ಯರಚನೆಯ ಸಂಕೀರ್ಣತೆಯೂ ನನಗೆ ಪರಕೀಯವಾಗಿ ಕಂಡದ್ದನ್ನು, ನಾನು ಅಭಿಪ್ರಾಯಸ್ಪಷ್ಟತೆಗೆ ಪರದಾಡಿದುದನ್ನು ಇಲ್ಲಿ ಹೇಳಬೇಕು. ಕನ್ನಡ ಗದ್ಯದ ಭಾಷಿಕ-ವಾಕ್ಯಾತ್ಮಕ ಕ್ರಮಿಕ ವಿಕಾಸದಲ್ಲಿ ಸಾಮಾಜಿಕ ಸಾಂಸ್ಕೃತಿಕ ಮಾತ್ರವಲ್ಲದೆ ರಾಜಕೀಯವಿಪ್ಲವಗಳ ಉರಿಯೂತದ ಚರಣಚಿಹ್ನೆಗಳನ್ನು ಗುರುತಿಸುವ ಶೋಧಗಳನ್ನೂ ನಮ್ಮ ಯುವ ಸಂಶೋಧಕರು ನಡಸಬೇಕಾಗಿದೆ. ಹಾಗೆಯೇ ಕನ್ನಡ ಭಾಷೆ ಸಂಸ್ಕೃತಿಗಳು ಅನುಭವಿಸಬೇಕಾಗಿ ಬಂದ ಹೀನಾಯವಾದ ಸ್ಥಿತಿಗತಿಗಳಿಗೆ ಕಾರಣಗಳನ್ನು ಕಂಡುಕೊಳ್ಳಬೇಕಾಗಿದೆ.
ಇಲ್ಲಿಯೇ ಹೇಳಬಹುದಾದ್ದು: ೧೯ನೆಯ ಶತಮಾನದ ಅಂತ್ಯಭಾಗದಲ್ಲಿ ಗ್ರಾಮ್ಯ ಆದ, ಸ್ವಚ್ಛಂದ ಆದ ಹೊಸಗನ್ನಡ ಗದ್ಯದ ಶಬ್ದರೂಪಗಳಲ್ಲಿ ಪದಶುದ್ಧಿಯನ್ನೂ ವಾಕ್ಯರಚನೆಯಲ್ಲಿ ವ್ಯಾಕರಣನಿಷ್ಠೆಯನ್ನೂ ತರಬೇಕೆಂದು ತಂಡತಂಡವಾಗಿ ಆ ಕಾಲದ ವಿದ್ಯಾವಂತರ ಪಡೆ ಕೆಲಸಮಾಡಿದ ವಿವರಗಳುಂಟು. ಇವನ್ನು ಲಕ್ಷಿಸಿದರೆ, ಇಂದಿನ ಹೊಸಗನ್ನಡ ಗದ್ಯದ ಭಾಷೆಯ ಸ್ವರೂಪದ ಹಿನ್ನೆಲೆಯೇನು ಎನ್ನುವುದು ತಿಳಿದುಬರುತ್ತದೆ. ಈ ವಿವರಗಳು ಅಂದಿನ ಪತ್ರಿಕೆಗಳಲ್ಲಿ ದೊರೆಯುತ್ತವೆ, ಶೋಧಗಳು ನಡೆಯಬೇಕು.
ಜನಪದಸಾಹಿತ್ಯದ ಸಂಗ್ರಹ ಸಂಕಲನ ಸಂಪಾದನಗಳ ಮಾತು ಬಂದಾಗ, ಅಧ್ಯಯನ ಸಂಶೋಧನೆಗಳ ವಿಚಾರ ನಡೆದಾಗ, ೨೦ನೆಯ ಶತಕದ ೪ನೆಯ ದಶಕ ದಿಂದಲೇ ಇದು ಮೊದಲಾಯಿತೇನೋ ಎಂಬಂತೆ ನಮ್ಮ ವಿದ್ವಾಂಸರು, ಸಂಗ್ರಾಹಕರು ನಡೆದುಕೊಳ್ಳುತ್ತಾರೆ. ಇನ್ನೂ ಹಿಂದೆ ಮಾಸ್ತಿ, ದೇವುಡು ಮಾಡಿದ ಕೆಲಸಗಳಿರಲಿ, ಇಂತಹ ಉದ್ದೇಶದಿಂದಲೇ ೨೦ನೆಯ ಶತಕದ ಮೊದಲ ದಶಕದಲ್ಲಿಯೇ ಜನ್ಮತಾಳಿದ ಮಿಥಿಕ್ ಸೊಸೈಟಿ ಪತ್ರಿಕೆಯ ಯಾವ ಬರಹವೂ ಅವರ ವಿವೇಚನೆಗೆ ವಿಷಯವಾಗುವುದಿಲ್ಲ. ನಮ್ಮ ಹೊಸತನದ ಹುಡುಕಾಟ ಹಳಮೆಯ ಹುಡುಕಾಟಕ್ಕೆ ಹೊಂದಿದರೆ ಮಾತ್ರ ಸಾರ್ಥಕವಾಗಿ, ಸಮರ್ಥವಾಗಿ ಸಾಗುವುದು ಸಾಧ್ಯ. ಕರ್ನಾಟಕದ ಭಾಷೆ ಸಾಹಿತ್ಯ ಇತಿಹಾಸ ಧರ್ಮ ಸಂಸ್ಕೃತಿಗಳ ಹೆಗ್ಗಡಲ ತೆರೆಗಳು ಇಂಡಿಯನ್ ಆಂಟಿಕ್ವೆರಿ ಮೊದಲಾದ ಪತ್ರಿಕೆಗಳ ಪುಟಗಳಲ್ಲಿ ಹೊಯ್ದಾಡಿವೆ.
ಹೊಸಗನ್ನಡ ಸಾಹಿತ್ಯದತ್ತಲೇ ಬರೋಣ. ನಮ್ಮ ಮುದ್ರಿತ ಗ್ರಂಥಸೂಚಿಗಳನ್ನೂ ಹಸ್ತಪ್ರತಿಗಳ ಗ್ರಂಥಸೂಚಿಗಳನ್ನೂ ತಿರುವಿಹಾಕಿದರೆ ಅನೇಕ ವಿಸ್ಮಯದ ರತ್ನದ್ವೀಪಗಳನ್ನು ನಾವು ಕಾಣಬಹುದಾಗಿದೆ. ಕಾಣುವ ಕಣ್ಣು ಮನಸ್ಸುಗಳು ಬೇಕು, ಅಷ್ಟೆ. ಕೆಲವು ಉದಾಹರಣೆಗಳು:
ಜೈನಕವಿ ಚಂದ್ರಸಾಗರವರ್ಣಿ (೧೮೧೦) ಬರೆದ ‘ಕದಂಬಪುರಾಣ’ದ ಐತಿಹ್ಯಗಳಲ್ಲಿ ಇತಿಹಾಸಪುರುಷರ ಕಥನಗಳಿವೆ, ಸಾಮಾಜಿಕ ಮಹತ್ತ್ವದ ಜಾತಿಪಂಗಡಗಳ ವಿವರಗಳಿವೆ. ಇದೇ ಕವಿಯ ‘ಮುಲ್ಲಾಶಾಸ್ತ್ರ’ದಲ್ಲಿ (೮ ಆಶ್ವಾಸ – ೪೦೦ ಪದ್ಯ) “ಪಾರ್ಶ್ವಭಟ್ಟಾರಕನು ಕೋಪಗೊಂಡು ಮುಲ್ಲಾಶಾಸ್ತ್ರವನ್ನು ಕಲ್ಪಿಸಿ ಪ್ರಚಾರಮಾಡಿದ ಸಂಗತಿ” ವಸ್ತುವಾಗಿದೆ ಎಂದಾದರೆ ಅದು ತಿಳಿಯಬೇಕಾದ್ದು, ತಾನೇ?
ಪ್ರವಾಸಸಾಹಿತ್ಯದ ಉಗಮ ವಿಕಾಸ ಗುರುತಿಸಲು ಹೊರಟರೆ, ಶ್ರೀವಾಸಕವಿಯ ‘ಕೃಷ್ಣರಾಜವರ್ಷವರ್ಧಂತಿ ಶತಕ’ (೧೮೩೦) ಒಂದು ಪ್ರವಾಸಸಾಹಿತ್ಯಕೃತಿಯಾಗಿ ತಾನಿದ್ದೇನೆ ಎನ್ನುತ್ತದೆ. ವಿಮರ್ಶೆಯ ದೇಶೀಯ ಮೂಲ ಹುಡುಕುವವರಿಗೆ ಕವಿ ಹಿರಣ್ಯಗರ್ಭನ ‘ವಿಶ್ವಕೃತಿಪರೀಕ್ಷಣ’ (೧೮೭೩) ಎಂಬ ಗದ್ಯಗ್ರಂಥ ತಾನಿದ್ದೇನೆ ಎನ್ನುತ್ತದೆ.
ಹೊಸಗನ್ನಡದ ಕತೆ ಕವಿತೆ ಕಾದಂಬರಿ ಪ್ರಬಂಧಗಳ ಚರಿತ್ರೆ ಬರೆಯಲು ಹೊರಟವರು ಸಾಮಾನ್ಯವಾಗಿ ೨೦ನೆಯ ಶತಮಾನದ ಆರಂಭದಿಂದ ಸಾಮಗ್ರಿಗಳನ್ನು ಒಗ್ಗೂಡಿಸಿ ಕೊಳ್ಳುವುದೇ ರೂಢಿ. ಆದರೆ ೧೯ನೆಯ ಶತಮಾನದ ಮಧ್ಯಭಾಗದ ಪ್ರಕಟಿತಸಾಹಿತ್ಯವನ್ನು ಅಲಕ್ಷಿಸುತ್ತಾರೆ. ಪುಸ್ತಕಗಳೂ ಪತ್ರಿಕೆಗಳೂ ಈಗ ದುರ್ಲಭವೆಂದು ಕಾರಣ ಕೊಡುವುದು ಸುಲಭ. ಹುಡುಕಿದರೆ, ಈಗಲೂ ಅವು ತಮ್ಮ ಭಂಡಾರವನ್ನು ತೆಗೆದು ಮುಂದಿಡಲು ಸಿದ್ಧವಾಗಿವೆ. ಕಾದಂಬರಿಪ್ರಕಾರಕ್ಕೆ ಕೆಂಪುನಾರಾಯಣಕವಿಯ ‘ಮುದ್ರಾಮಂಜೂಷ’ ಮೊದಲಾದವು ಇವೆ; ಲಲಿತಪ್ರಬಂಧದ ಪ್ರಕಾರಕ್ಕೆ ಎಂ. ಶಾಮರಾವ್, ಎಂ.ಎ. ರಾಮಾನುಜ ಅಯ್ಯಂಗಾರ್ ಮೊದಲಾದವರ ರಚನೆಗಳಿವೆ. ಮಕ್ಕಳ ಸಾಹಿತ್ಯಕ್ಕೆ ಎಸ್.ಜಿ. ನರಸಿಂಹಾಚಾರ್, ಎನ್. ಜಯರಾಯಾಚಾರ‍್ಯ ಮೊದಲಾದವರ ಬಾಲಬೋಧೆಯ ಸುಂದರ ಪದ್ಯರಾಶಿಯಿದೆ; ಕಿಟ್ಟೆಲ್ ಮೊದಲಾದವರ ಪುಟ್ಟ ಪುಟ್ಟ ಕವಿತೆಗಳಿವೆ. “ಹಿಂದನಱಯದುದು ಮುಂದನೇನಬಲ್ಲುದು” ಎಂಬ ಮಾತು ದಿಟ.
ನಮ್ಮ ದೇಶದಲ್ಲಿ ಇಂದು ಭಾರತೀಯ ಅಧ್ಯಯನಗಳಿಗೆ ತಕ್ಕ ಪ್ರೋತ್ಸಾಹ ದೊರಕಿಸಲು ಕೇಂದ್ರಸರ್ಕಾರದ ಮಾನವ ಸಂಪನ್ಮೂಲ ಇಲಾಖೆ, ಉನ್ನತವಿದ್ಯಾಭ್ಯಾಸ ಇಲಾಖೆ, ವಿಶ್ವವಿದ್ಯಾನಿಲಯ ಧನಸಹಾಯ ಆಯೋಗಗಳು ಸಿದ್ಧವಾಗಿದ್ದರೂ ಸಮರ್ಥರೂ ಉತ್ಸಾಹಿಗಳೂ ಆದ ಅಧ್ಯಯನಾಸಕ್ತರೇ ಇಂದು ಕಾಣಿಸುತ್ತಿಲ್ಲ. ಅವರೀಗ ಶುದ್ಧವಿಜ್ಞಾನ ಗಳನ್ನೂ ಅಲಕ್ಷಿಸಿ ತಂತ್ರವಿಜ್ಞಾನದ ಕಡೆಗೆ, ಯಂತ್ರವಿದ್ಯೆಯ ಕಡೆಗೆ ಸಾಗುತ್ತಿದ್ದಾರೆ. ಇದರ ಅಪಾಯವನ್ನು ಶುದ್ಧವಿಜ್ಞಾನದ ಧೀಮಂತರು ಸಮಯಸಿಕ್ಕಾಗೆಲ್ಲ ಹೇಳುತ್ತಿದ್ದಾರೆ. ಆದರೆ ನಮ್ಮ ಮಕ್ಕಳ, ಅವರ ಪೋಷಕರ ಹುಚ್ಚು ಬಿಡಿಸಲಾಗುತ್ತಿಲ್ಲ.
ಇನ್ನೊಂದು ಅಪಾಯ ಮಾನವಿಕವಿಜ್ಞಾನವಿಷಯಗಳನ್ನೂ ತೀವ್ರವಾಗಿ ಕಾಡುತ್ತಿದೆ. ಈಗ ಭಾಷೆಗಳು, ತತ್ತ್ವಶಾಸ್ತ್ರ, ಇತಿಹಾಸ, ಸಮಾಜವಿಜ್ಞಾನ, ಪುರಾತತ್ತ್ವ, ಶಾಸನಶಾಸ್ತ್ರ, ಲಿಪಿಶಾಸ್ತ್ರ, ನಾಣ್ಯಶಾಸ್ತ್ರ, ಪುರಾವಸ್ತು ಮತ್ತು ಪುರಾಭಿಲೇಖಶಾಸ್ತ್ರ, ಭೂವಿಜ್ಞಾನ, ಮಾನವಶಾಸ್ತ್ರ, ಮನಶ್ಶಾಸ್ತ್ರ ಮೊದಲಾದ ಭಾರತೀಯ ಇತಿಹಾಸ ಸಂಸ್ಕೃತಿ ಸಂಬಂಧದ ವಿದ್ಯಾಶಾಖೆಗಳಿಗೆ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಬರುತ್ತಿಲ್ಲ, ವಿಭಾಗಗಳು ಮುಚ್ಚಿಹೋಗುತ್ತಿವೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ. ತೌಲನಿಕ ಅಧ್ಯಯನಗಳ ಅವಲಂಬನ ಆಧಾರಗಳಿಲ್ಲದೆ ನಮ್ಮ ಸಾಮಾಜಿಕ ಸಾಂಸ್ಕೃತಿಕ ಐತಿಹಾಸಿಕ ವಿದ್ಯಮಾನಗಳು ಹೊಸ ಶೋಧಗಳನ್ನು ಮೊಗೆದು ತೋರಲಾರವು. ಹಾಗೆ ನೋಡಿದರೆ, ಅರಾಬಿಕ್ ಪರ್ಶಿಯನ್ ಪೋರ್ಚಗೀಸ್ ಚೈನೀಸ್ ಜರ್ಮನ್ ಫ್ರೆಂಚ್ ಟಿಬೆಟಿಯನ್ ನೇಪಾಲಿ ಬಂಗಾಳಿ ಈ ಕೆಲವು ಭಾಷೆಗಳ ಪರಿಚಯ ಕರ್ನಾಟಕದ ಸಮಗ್ರ ಅಧ್ಯಯನಕ್ಕೆ ಅವಶ್ಯವಾಗಿದ್ದು, ಇವನ್ನು ಕಲಿಯುವುದರಿಂದ ಪ್ರಯೋಜನವಿದೆ ಎಂದು ತಿಳಿದೂ, ಇತ್ತ ಯಾರೂ ಮನಸ್ಸು ಕೊಡುತ್ತಿಲ್ಲ. ಗೋವಿಂದ ಪೈ, ಎ. ವೆಂಕಟಸುಬ್ಬಯ್ಯ, ಎಸ್. ಶ್ರೀಕಂಠಶಾಸ್ತ್ರಿಗಳು ತಮ್ಮ ಅಧ್ಯಯನಗಳಿಗೆ ನೇರವಾಗಿ ಇಂತಹ ಹತ್ತಾರು ಭಾಷೆಗಳಿಂದ ಸಾಮಗ್ರಿಸಂಕಲನ ನಡಸಿ ಮುಂದುವರಿಯುತ್ತಿದ್ದರು. ನನ್ನ ಗುರುಗಳಾಗಿದ್ದ ಕ.ವೆಂ. ರಾಘವಾಚಾರ‍್ಯರು ಗ್ರೀಕ್ ಭಾಷೆಯನ್ನು ಚೆನ್ನಾಗಿ ಕಲಿತು ಅಲ್ಲಿಯ ಪ್ರಾಚೀನ ಮಹಾನಾಟಕಕಾರರ ಪ್ರಸಿದ್ಧ ನಾಟಕಗಳನ್ನು ನೇರವಾಗಿ ಗ್ರೀಕಿಂದಲೇ ಭಾಷಾಂತರಿಸಿದರು. ನಮ್ಮ ಧೀಮಂತಸಾಹಿತಿಗಳಾದ ಮಂಜೇಶ್ವರ ಗೋವಿಂದ ಪೈಗಳ ಗ್ರಂಥಭಂಡಾರದಲ್ಲಿ ಕನಿಷ್ಠ ೨೫-೩೦ ಭಾಷೆಗಳ ಗ್ರಂಥಗಳಿರುವುದನ್ನು ಗೋವಿಂದ ಪೈ ಸಂಶೋಧನ ಕೇಂದ್ರದ ಗ್ರಂಥಾಲಯದಲ್ಲಿ ನಾನು ಗಮನಿಸಿದ್ದೇನೆ. ಇಂತಹ ಇನ್ನೂ ಹಲವರ ಬಗ್ಗೆ ನಾನು ಇಲ್ಲಿ ಹೇಳಬಹುದು.
ನಮ್ಮಲ್ಲಿ ಬ್ರಾಹ್ಮಿಯ ವಿವಿಧರೂಪಗಳ ಲಿಪಿಗಳನ್ನು, ಅರಮಾಯಿಕ್ ಖರೋಷ್ಠಿ ಲಿಪಿಗಳನ್ನು ಓದುವವರೇ ಈಗ ಕಾಣುತ್ತಿಲ್ಲ ಎಂದು ನನ್ನ ಮಿತ್ರರಾದ ಕೆ.ವಿ. ರಮೇಶ್ ಕೊರಗುತ್ತಿದ್ದರು. ಕರ್ನಾಟಕದ ಮಧ್ಯಕಾಲೀನ ಇತಿಹಾಸವನ್ನು ತಿಳಿಯಲು ಅವಶ್ಯವಾಗಿರುವ ದಾಖಲೆಗಳನ್ನು, ಕಡತ ಕೈಫಿಯತ್ತುಗಳನ್ನು ಓದಲು ಅವಶ್ಯವಾದ ಕೆಲವು ವಿದೇಶೀ ಭಾಷೆಗಳ ಪರಿಚಯವಿಲ್ಲದೆ, ಅವುಗಳ ಇಂಗ್ಲಿಷ್ ಭಾಷಾಂತರಗಳಿಗಾಗಿ ನಾವು ಕಾಯುತ್ತ ಕೂರಬೇಕಾಗಿದೆ; ಎಲ್ಲವೂ ಇಂಗ್ಲಿಷಿನಲ್ಲಿ ಬಂದಿವೆಯೋ, ನನಗೆ ತಿಳಿಯದು. ಇದರ ಅಭಿಪ್ರಾಯವೆಂದರೆ, ಪೋರ್ಚುಗೀಸ್ ಅರಾಬಿಕ್ ಪರ್ಶಿಯನ್ ಚೈನೀಸ್ ಇಂತಹ ಭಾಷೆಗಳನ್ನು ಕಲಿಯುವುದಕ್ಕೆ ಧೈರ‍್ಯದಿಂದ, ಶ್ರದ್ಧೆಯಿಂದ ಮನಸ್ಸು ಕೊಟ್ಟದ್ದೇ ಆದರೆ, ನಮ್ಮ ನಾಡಿನ ಇತಿಹಾಸದ ಇನ್ನಷ್ಟು ಮುಖಗಳು ಬೆಳಕಿಗೆ ಬರುತ್ತವೆ. ಅಂತಹ ಸಾಹಸಿಗಳು ಕೀರ್ತಿಶಾಲಿಗಳೂ ಆಗುತ್ತಾರೆ.

ವಿಶ್ವವಿದ್ಯಾನಿಲಯಗಳು, ಅಧ್ಯಯನಪೀಠಗಳು, ಪ್ರತಿಷ್ಠಾನಗಳು
ವಿಶ್ವವಿದ್ಯಾನಿಲಯಗಳು ಮೊದಮೊದಲು ಕನ್ನಡಭಾಷೆ ಸಾಹಿತ್ಯಗಳ ಬೋಧನೆಗೆ ಮುಖ್ಯವಾಗಿ ಅವಕಾಶನೀಡಿದ್ದುವು; ಬರುಬರುತ್ತ ಕನ್ನಡದ ಕಾರಣಪುರುಷರ, ಕ್ರಾಂತದರ್ಶಿ ಗಳ ಪ್ರಯತ್ನಗಳಿಂದ ಸಂಶೋಧನೆ ಸಂಪಾದನೆ ಪ್ರಕಟನೆಗಳತ್ತ ಅವು ಗಮನಕೊಟ್ಟವು. ಮೈಸೂರಿನ ಪ್ರಾಚ್ಯವಿದ್ಯಾಸಂಶೋಧನ ಸಂಸ್ಥೆ, ಮದರಾಸಿನ ಸರ್ಕಾರದ ಪ್ರಾಚ್ಯ ಕೋಶಾಗಾರ, ಧಾರವಾಡದ ಕನ್ನಡ ಸಂಶೋಧನ ಸಂಸ್ಥೆ ಇವು ತಮ್ಮ ಮಿತಿ ವ್ಯಾಪ್ತಿಗಳಲ್ಲಿ ತಾವೂ ಕೆಲಸಮಾಡುತ್ತಿದ್ದವು. ಹಸ್ತಪ್ರತಿಗಳ ಸಂಗ್ರಹ ಸಂಪಾದನೆಯಲ್ಲಿ ಈಗಲೂ ಇವು ದುಡಿಯುತ್ತಿವೆ. ಕರ್ನಾಟಕದ ವಿವಿಧ ಧಾರ್ಮಿಕಸಂಸ್ಥೆಗಳೂ ಅಹಮಹಮಿಕೆಯಿಂದ ದುಡಿಯುತ್ತಿರುವುದೂ ನಮಗೆ ತಿಳಿದಿದೆ. ಇನ್ನು ವೈಯಕ್ತಿಕ ವಿದ್ವತ್ ಪ್ರಯತ್ನಗಳು ಕೂಡ ಈ ಭಾಷಾಭಿವೃದ್ಧಿಯ ಸಾಹಸಯಾತ್ರೆಯಲ್ಲಿ ಸೇರಿಕೊಂಡು ಈ ಸೇವಾವರ್ತುಲ ವನ್ನು ಚಲನಶೀಲವಾಗಿಟ್ಟಿವೆ.

೧೯ನೆಯ ಶತಮಾನದ ಉತ್ತರಾರ್ಧದಲ್ಲಿ ಆರಂಭವಾದ ಕರ್ನಾಟಕ ಭಾಷೋಜ್ಜೀವಿನೀ ಸಭಾ (೧೮೮೬) ಒಂದು ಕಡೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ (೧೮೯೦), ಇನ್ನೊಂದು ಕಡೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ (೧೯೧೪) ಕನ್ನಡ ಚಟುವಟಿಕೆಗಳಿಗೆ ಸನ್ನೆಗೋಲಾದುದು ಈಗ ಇತಿಹಾಸವಾಗಿದೆ. ಹಾಗೆಯೇ ಹಿರಿಯರ ಹೆಸರಿನಲ್ಲಿ ಹುಟ್ಟಿಕೊಂಡ ಸ್ಮಾರಕಸಂಸ್ಥೆಗಳೂ ಪ್ರತಿಷ್ಠಾನಗಳೂ ವಿಶ್ವವಿದ್ಯಾನಿಲಯಗಳಲ್ಲಿ ಏರ್ಪಟ್ಟ ಅಧ್ಯಯನಪೀಠಗಳೂ ತಿರುಗುತ್ತಿರುವ ಭಾಷಾಭ್ಯುದಯ ಚಕ್ರಗಳಾಗಿವೆ.

ಈಚೆಗೆ ಧರ್ಮಸ್ಥಳದ ಹಸ್ತಪ್ರತಿಭಂಡಾರ ಮತ್ತು ಮಂಜೂಷಾ ವಸ್ತುಪ್ರದರ್ಶನಶಾಲೆ, ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನದ ಹಸ್ತಪ್ರತಿಭಂಡಾರ ಮತ್ತು ಕರ್ನಾಟಕದ ನಾನಾ ಧಾರ್ಮಿಕಮಠಗಳ, ವಿಶೇಷವಾಗಿ ಜೈನ ಮತ್ತು ವೀರಶೈವ ಮಠಗಳ ಹಸ್ತಪ್ರತಿ ಭಂಡಾರಗಳು, ಇಂಥ ಹಲವು ಸಾರಸ್ವತ ನಿಧಿನಿಕ್ಷೇಪಗಳು ತಮ್ಮ ನಿಟ್ಟಿನಲ್ಲಿ ಭಾಷೆ ಮತ್ತು ಸಂಸ್ಕೃತಿಗಳ ಪೋಷಣೆಗೆ ಸಹಾಯವಾಗುತ್ತಿರುವುದೂ ತಿಳಿದ ಸಂಗತಿಯಾಗಿದೆ.
ಈ ಪ್ರಯತ್ನಗಳೆಲ್ಲ ಏತಕ್ಕಾಗಿ, ಇವುಗಳ ಸಾರ್ಥಕತೆ ಏನು? ಇವುಗಳಿಗೆ ಉತ್ತರ ಹೇಳಬೇಕಾಗುವುದು:

ನಮ್ಮ ಹಿರಿಯರು ನಮಗಾಗಿ ಮಾಡಿಟ್ಟ, ಕೂಡಿಟ್ಟ ಭಾಷಿಕ-ಸಾಹಿತ್ಯಿಕ-ಸಾಂಸ್ಕೃತಿಕ ಸಂಪತ್ತಿಯನ್ನು, ಪಿತ್ರಾರ್ಜಿತವಾದ ಆಸ್ತಿಯನ್ನು, ಅವರ ವಿವೇಕಶಾಲಿ ವಾರಸುದಾರರಾದ ನಾವು ತಿಳಿದುಕೊಳ್ಳುವುದು, ತಿಳಿದು ಬೆಳೆಯುವುದು, ಬೆಳೆದು ಮುಂದಿನ ಪೀಳಿಗೆಗೆ ತಿಳಿಯಲೂ ಬೆಳೆಯಲೂ ಉಳಿಸುವುದು. ಯಾವುದೇ ಭಾಷೆಗೆ ಆಯಾ ಭಾಷೆಯ ಅಭಿಜಾತ ಸಾಹಿತ್ಯ, ಎಂದರೆ ಮಾರ್ಗಸಾಹಿತ್ಯ ತವನಿಧಿ, ಮೂಲಧನ. ನಮ್ಮ ಭಾಷೆಯ ವ್ಯಾಪಾರ ವ್ಯವಹಾರಗಳು ಈ ಮೂಲಧನದ ಬಂಡವಾಳದಿಂದಲೇ ಸಾಗಬೇಕು.

ನಮಗೆ ಶಾಸನಸಾಹಿತ್ಯವಿದೆ; ಚಂಪೂ-ಷಟ್ಪದಿಗಳ, ವಚನ-ಕೀರ್ತನೆಗಳ, ವಿವಿಧ ಛಂದೋಬಂಧಗಳ, ಅಮಿಶ್ರ ಗದ್ಯ-ಪದ್ಯಗಳ ಹೇರಳ ಅಭಿಜಾತಸಾಹಿತ್ಯವಿದೆ. ಈ ಸಾಹಿತ್ಯರಾಶಿಯ ಅಗಾಧಪ್ರಮಾಣ ಸು. ೧೨೦೦-೧೩೦೦ ವರ್ಷಗಳ ಕಾಲ ಬೆಳೆದು ಬಂದದ್ದು. ಇವುಗಳಲ್ಲಿ ಹಳೆಯ ಕವಿಗಳು ಕಟ್ಟಿಕೊಟ್ಟಿರುವ ಶತಶತಮಾನಗಳ ಕಲೆ ಸಂಸ್ಕೃತಿ ಇತಿಹಾಸ ಧರ್ಮ ತತ್ತ್ವ ಕಥೆ ಜಾನಪದ ಶಿಕ್ಷಣ ರಾಜನೀತಿ ಸಾಮಾನ್ಯನೀತಿ ವ್ಯಕ್ತಿವಿಚಾರ ಸ್ಥಳ ಸನ್ನಿವೇಶ ಹೀಗೆ ಬಹುಮುಖವಾದ ವಿಚಾರಗಳಿವೆ, ವಿಶೇಷಗಳಿವೆ. ಇವೆಲ್ಲಕ್ಕೂ ಶಿಖರಪ್ರಾಯವಾಗಿ ಸಾಹಿತ್ಯಿಕವಾಗಿ ಆಸ್ವಾದ್ಯವಾಗುವ ರಸರುಚಿಯಿದೆ, ಧ್ವನಿಗಮ್ಯವಾಗುವ ಚಿಂತನವಿದೆ. ಈ ವಿಷಯದಲ್ಲಿ ನೂರಿನ್ನೂರು ವರ್ಷಗಳಿಂದ ಬೇಕಾದಹಾಗೆ ಅಧ್ಯಯನಗಳು ನಡೆದಿವೆ, ಸಂಶೋಧನೆಗಳಾಗಿವೆ. ಆಗಬೇಕಾದ್ದು ಇನ್ನೂ ಬೆಟ್ಟದಷ್ಟಿದೆ, ಸಾಗರದಷ್ಟಿದೆ. ನೂರಿನ್ನೂರು ವರ್ಷಕಾಲ ನಡೆಯುವುದಕ್ಕೆ ಸಾಕಾಗುವಷ್ಟು ಕೆಲಸಗಳಿವೆ. ಈ ಸಂಬಂಧದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಆಗಿನ ಕುಲಪತಿಗಳ ಅಪೇಕ್ಷೆಯಂತೆ, ಗ್ರಾಂಥಿಕ ಮತ್ತು ಶಾಸನಸಾಹಿತ್ಯಗಳನ್ನು ಆಧರಿಸಿ ಸು. ೬೦ ವಿಷಯಗಳನ್ನು ವಿವರವಾಗಿ ಗುರುತಿಸಿ, ‘ಕನ್ನಡ ಅಭಿಜಾತಸಾಹಿತ್ಯ: ಅಧ್ಯಯನದ ಅವಕಾಶಗಳು, ಆಹ್ವಾನಗಳು’ ಎಂಬ ಪುಸ್ತಕವನ್ನೇ ನಾನು ಸಿದ್ಧಪಡಿಸಿಕೊಟ್ಟೆ. ಅದು ೨೦೦೯ರಲ್ಲಿಯೇ ಪ್ರಕಟವಾಗಿದೆ. ಇದು ದಿಕ್ಸೂಚಿಯಷ್ಟೇ. ಇದಕ್ಕೆ ಇನ್ನೂ ಅಷ್ಟು ವಿಷಯಗಳನ್ನು ಸೇರಿಸಬಹುದು.
“ವ್ಯಾಸ-ವಾಲ್ಮೀಕಿಗಳನ್ನೋ ಭಾಸ-ಕಾಳಿದಾಸರನ್ನೋ ಷೇಕ್ಸ್‌ಪಿಯರ್-ಮಿಲ್ಟನ್ನ ರನ್ನೋ ತಿಳಿಯುವ ಹಂಬಲವಿರುವವರು ಆ ಕವಿಗಳ ಭಾಷೆ ಸಾಹಿತ್ಯಗಳನ್ನು ಕಲಿಯುವ ಸಾಹಸ ಮಾಡುವಂತೆ ನಮ್ಮ ಭಾಷೆಯ ಹಳೆಯ ಕವಿಗಳನ್ನು ತಿಳಿಯಲು ಸ್ವಲ್ಪ ಚೆನ್ನಾಗಿಯೇ ಹಳಗನ್ನಡ ನಡುಗನ್ನಡಗಳನ್ನು ಕಲಿಯಬೇಕಾಗುತ್ತದೆ, ಆ ಭಾಷೆಗಳ ಶಬ್ದಭಂಡಾರಗಳನ್ನು ನಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಇದೇನೂ ಕಾಲದ ಅಪವ್ಯಯವಲ್ಲ. ದುಸ್ಸಾಹಸವಲ್ಲ. ನಮ್ಮ ಪ್ರಾಚೀನ ಸಾಹಿತ್ಯದ ಉತ್ಕೃಷ್ಟಭಾಗಗಳಲ್ಲಿ ಜೀವನಪಾಠಗಳಿವೆ, ನೀತಿವಾಕ್ಯಗಳಿವೆ, ಕಾಲಾತೀತವಾದ ಮಾನವೀಯ ದೃಷ್ಟಿವಿಶೇಷಗಳಿವೆ, ಉದಾತ್ತ ಜೀವನಮೌಲ್ಯಗಳಿವೆ, ಬಹುಮುಖ ಸಂಬಂಧಸಂಘರ್ಷಗಳ ಕುತೂಹಲ ಕಥಾಪ್ರಪಂಚವಿದೆ, ಪ್ರಕೃತಿಯ ವಿವಿಧ ವಿಲಾಸಗಳ ರಮ್ಯಚಿತ್ರಗಳಿವೆ, ಎಲ್ಲಕ್ಕೆ ಮಿಗಿಲಾಗಿ ಹೃದಯವನ್ನು ಸಂಸ್ಕರಿಸುವ ಸಾರಸತ್ತ್ವಗಳಿವೆ. ನಮ್ಮ ಈ ಸಂಪತ್ತಿನ ವಿಷಯದಲ್ಲಿ ‘ಹಿತ್ತಲ ಗಿಡ ಮದ್ದಲ್ಲ’ ಎಂಬ ಭಾವನೆಯನ್ನು ಮೊದಲು ನಾವು ತೊಲಗಿಸಬೇಕು. ಆಗ ನಮಗೆ, ಮದ್ದಿಗೆ ಒದಗುವ ಹಿತ್ತಲ ಗಿಡ ಮಾತ್ರವಲ್ಲ, ಅದು ಪ್ರಾಣಪೋಷಕವಾದ ಸಂಜೀವಿನಿಯೂ ಹೌದು ಎಂಬ ನಿಜ ತಿಳಿಯುತ್ತದೆ”.
ಭಾರತೀಯ ಸಂಸ್ಕೃತಿಯ ಪ್ರಾಚೀನ ಪ್ರತಿನಿಧಿಗಳೆಂದೂ ಜೀವನಮೌಲ್ಯಗಳ ಪ್ರಸಾರಕರೆಂದೂ ಪಂಪ-ಕುಮಾರವ್ಯಾಸರನ್ನೂ ಬಸವ-ಅಲ್ಲಮರನ್ನೂ, ಕನಕ-ಪುರಂದರ ರನ್ನೂ ಒಂದೊಂದು ನಿಟ್ಟಿನಲ್ಲಿ ಉಳಿಸಿಕೊಳ್ಳುವುದು ನಮ್ಮ ಅವಶ್ಯಕರ್ತವ್ಯ. ನಮ್ಮ ಭಾಷೆಯ ಜೀವಧ್ವನಿಗಳನ್ನು ಇಂಥವರಲ್ಲಿಯೇ ನಾವು ಕೇಳಬೇಕಾಗುತ್ತದೆ. ಈ ನಮ್ಮ ಜೀವನದಿಗಳಿಂದಲೇ ನಮ್ಮ ಹೃದಯದ ನೆಲ-ಹೊಲಗಳು ಪಯಿರು-ಪಚ್ಚೆಗಳ ಸೊಂಪನ್ನು ಕಾಣಬೇಕಾಗಿದೆ. ಪ್ರಪಂಚದ ಪ್ರಾಚೀನಭಾಷೆಗಳಲ್ಲಿ ಇಂತಹ ಜೀವನದಿಗಳು ಒಂದೋ ಎರಡೋ ಇರುವಂತೆ ನಮ್ಮಲ್ಲಿಯೂ ಇವೆ. ಇವುಗಳಿಂದಲೇ ನಮ್ಮ ನಾಡು-ನುಡಿಗಳಿಗೆ ಒಂದು ನೆಲೆ, ಬೆಲೆ. ಉಳಿದ ಹಳೆಯ ಸಾಹಿತ್ಯಭಾಗದಲ್ಲಿ ಆಯ್ಕೆಯ ಸೂತ್ರವನ್ನು ಹಿಡಿಯಬಹುದು; ತಿರುಳನ್ನು ತೆಗೆದಿಟ್ಟುಕೊಂಡು ಲಾಭ ಪಡೆಯಬಹುದು.
ಮುಂದುವರಿದ ರಾಷ್ಟ್ರಗಳಲ್ಲಿ ಅಭಿಜಾತಸಾಹಿತ್ಯದ ಪ್ರಕಟನೆ ಪ್ರಸಾರಗಳಿಗೆ ಅಪಾರವಾದ ಪ್ರೋತ್ಸಾಹವಿದೆ; ಕವಿಶ್ರೇಷ್ಠರ, ವಿದ್ವದ್ವರೇಣ್ಯರ ಹೆಸರಿನ ಸಂಘಸಂಸ್ಥೆಗಳಿವೆ, ಅಧ್ಯಯನಪೀಠಗಳಿವೆ. ಅವರು ಹುಟ್ಟಿ ಬೆಳೆದ ಊರು ಪರಿಸರಗಳು, ಜೀವನವಿವರಗಳು, ಸಾಹಿತ್ಯಕೃತಿಗಳು, ಹಸ್ತಪ್ರತಿಗಳು, ಛಾಯಾಚಿತ್ರಗಳು ಹೀಗೆ ಅವರ ಮಹತ್ತ್ವವನ್ನು ಸ್ಥಾಯಿಗೊಳಿಸುವುದಕ್ಕೆ, ಮನವರಿಕೆಮಾಡುವುದಕ್ಕೆ ಏನೇನು ಸಾಧ್ಯವೋ ಅವನ್ನೆಲ್ಲ ಮಾಡಿರುತ್ತದೆ. ನಮ್ಮಲ್ಲಿ ಕೂಡ ಅಂಥ ಪ್ರಯತ್ನಗಳಿದ್ದರೂ ಅದು ಅಲ್ಪಪ್ರಮಾಣದಲ್ಲಿ ಮಾತ್ರ. ಬೇರೆಬೇರೆ ಶೈಕ್ಷಣಿಕನೆಲೆಗಳಲ್ಲಿ ರನ್ನ, ಕನಕದಾಸ, ಬಸವ, ಅಲ್ಲಮ, ಅಕ್ಕಮಹಾದೇವಿ ಹೆಸರಿನ ಅಧ್ಯಯನಪೀಠಗಳೋ ಪ್ರತಿಷ್ಠಾನಗಳೋ ಇವೆ. ಆದಿಕವಿ, ಮಹಾಕವಿಖ್ಯಾತ ಪಂಪನ ಹೆಸರಿನ ಪೀಠವೋ ಪ್ರತಿಷ್ಠಾನವೋ ಉಂಟೇ, ನನಗೆ ತಿಳಿಯದು. ರತ್ನಾಕರವರ್ಣಿ, ಪುರಂದರ, ಷಡಕ್ಷರಿ, ಹರಿಹರ ಇವರ ಹೆಸರಿನಲ್ಲಿ ಏನಾದರೂ ಉಂಟೇ ನನಗೆ ತಿಳಿಯದು. ಆಯಾ ಗಣ್ಯರ ಜೀವನ ಸಾಧನೆಗಳಷ್ಟು ಮಾತ್ರವೇ ಅಲ್ಲದೆ ಒಂದು ವಿಶಿಷ್ಟ ಪಂಥದ, ತತ್ತ್ವದ, ಸಾಹಿತ್ಯದ, ಕಾಲಘಟ್ಟದ ಭಾಷೆ ಸಾಹಿತ್ಯಗಳ ಅಧ್ಯಯನಗಳು ಕೂಡ ಇಲ್ಲಿ ನಡೆಯಬಹುದು.
ಆಧುನಿಕಕಾಲವನ್ನೇ ಗಮನಿಸಿದರೆ, ಆರಂಭಕಾಲದ ಸಾಹಿತ್ಯೋಜ್ಜೀವಕರಾದ ಕಿಟ್ಟೆಲ್-ರೈಸ್ ಮಹನೀಯರ, ಉತ್ತರಕರ್ನಾಟಕದ ಕರ್ನಾಟಕಕುಲಪುರೋಹಿತಖ್ಯಾತರಾದ ಆಲೂರ ವೆಂಕಟರಾವ್, ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪಕಮುಖ್ಯರಾದ ರಾ.ಹ. ದೇಶಪಾಂಡೆಯವರ, ಮಧ್ಯಕರ್ನಾಟಕದ ಪ್ರಾಕ್ತನವಿಮರ್ಶವಿಚಕ್ಷಣ ಆರ್. ನರಸಿಂಹಾಚಾರ‍್ಯ – ಕನ್ನಡದ ಕಣ್ವ ಬಿ.ಎಂ.ಶ್ರೀಕಂಠಯ್ಯನವರ, ಕರಾವಳಿಭಾಗದ ಪಂಜೆ ಮಂಗೇಶರಾವ್ – ಮುಳಿಯ ತಿಮ್ಮಪ್ಪಯ್ಯನವರ ಹೆಸರಿನಲ್ಲಿ ವಿಶ್ವವಿದ್ಯಾನಿಲಯಗಳ ಕನ್ನಡ ಅಧ್ಯಯನಕೇಂದ್ರಗಳಲ್ಲಿ ಏನಾದರೂ ಸ್ಥಾಯಿಯಾದ ಕೆಲಸಗಳಾಗಿವೆಯೋ, ಅಧ್ಯಯನಪೀಠಗಳುಂಟೋ? ಇರುವುದಾದರೆ ನಾನು ತುಂಬ ಸಂತೋಷಪಡುತ್ತೇನೆ.ಈ ಸಂದರ್ಭದಲ್ಲೇ ಒಂದು ಮಾತನ್ನು ನಾನು ಸಂಕೋಚದಿಂದ ಹೇಳಬೇಕಾಗಿದೆ. ಮಾತು ಹೆಚ್ಚಾಯಿತು ಎನ್ನಿಸಿದರೆ, ದಯವಿಟ್ಟು ಕ್ಷಮಿಸಬೇಕು. ವಿವಿಧಕ್ಷೇತ್ರಗಳಲ್ಲಿ ಗಣ್ಯತೆ ಗಳಿಸಿದವರು ಎಂದೂ ರಾಷ್ಟ್ರಜೀವನವನ್ನು ಪ್ರಭಾವಿಸಿದವರು ಎಂದೂ ಮಹಾನ್ ಸಾಧಕರು ಎಂದೂ ಖ್ಯಾತರಾದವರ ಹೆಸರುಗಳನ್ನು ವಿಶ್ವವಿದ್ಯಾನಿಲಯಗಳಿಗೆ ಇಡುತ್ತಿರುವುದು ಕಾಣುತ್ತಿದೆ. ಹೀಗೆ ಹೆಸರುಗಳನ್ನಿಡುವುದರಲ್ಲಿ ಶೈಕ್ಷಣಿಕ ಕಾರಣಗಳಿರ ಬಹುದು, ಅನ್ಯಕಾರಣಗಳೂ ಇರಬಹುದು. ಆದರೆ ಇದು ಸರಿಯೇ ಎಂದು ನಾವು ಗಂಭೀರವಾಗಿ ಯೋಚಿಸಬೇಕು. ವಿಶ್ವವಿದ್ಯಾನಿಲಯಗಳ ವಿಶ್ವತ್ವದ ವ್ಯಾಪ್ತಿಯನ್ನು ಹೀಗೆ ಮಾಡುವುದರಿಂದ ಸಂಕುಚಿತಗೊಳಿಸಿದಂತಾಗದೇ ಎನ್ನುವುದು ನನ್ನ ಯೋಚನೆ; ಆದರೆ ಅಂತಹ ಹಿರಿಯರ ಹೆಸರು ನಿಲ್ಲುವಂತೆ ಅಧ್ಯಯನ ಪೀಠಗಳಂತೂ ಅವಶ್ಯವಾಗಿ ಆಗಬೇಕು.

ವ್ಯಕ್ತಿಸ್ವಾತಂತ್ರ್ಯ – ಅಭಿವ್ಯಕ್ತಿಸ್ವಾತಂತ್ರ್ಯ
ಸಹಜೀವರಿಗೆ ಯಾವುದೇ ಬಾಧೆಯಾಗದ ಹಾಗೆ ಇರುತ್ತ, ತನ್ನ ಬದುಕಿನಲ್ಲಿ ನೆಮ್ಮದಿಯಿಂದ ಬಾಳುವುದು ವ್ಯಕ್ತಿಸ್ವಾತಂತ್ರ್ಯ. ಇದು ನಡೆವಳಿಕೆಯ ಮಾತು. ಈ ನಡೆವಳಿಕೆಗೆ ಚಾಲನೆ, ಶಕ್ತಿ ಬರುವುದು ನಮ್ಮ ಅಭಿವ್ಯಕ್ತಿಯಲ್ಲಿ ಕೂಡ ಇದು ಕಂಡುಬರುತ್ತಿದ್ದರೆ ಮಾತ್ರ ಸಾಧ್ಯ. ಈ ಅಭಿವ್ಯಕ್ತಿಯ ಸ್ವಾತಂತ್ರ್ಯ ವ್ಯಕ್ತಿಸ್ವಾತಂತ್ರ್ಯದ ಹಾಗೆ ಪ್ರತಿಯೊಬ್ಬರಿಗೂ ದತ್ತವಾದ್ದು, ನಿಜ. ಆದರೆ ಇವಕ್ಕೆ ಗಡಿರೇಖೆಗಳು, ಗೊತ್ತುಪಾಡುಗಳು ಇರುವುದಿಲ್ಲವೇ ಎನ್ನುವುದು ಮುಖ್ಯಪ್ರಶ್ನೆ. ‘ಇಲ್ಲ’ ಎನ್ನುವುದಾದರೆ ಸ್ವಾಚ್ಛಂದ್ಯ ಸಂಘರ್ಷಗಳಿಗೆ ಕರೆದು ಮಣೆಹಾಕಿದಂತೆಯೇ ಸರಿ. ‘ಇದೆ’ ಎನ್ನುವುದಾದರೆ, ಅವನ್ನು ಗುರುತಿಸುವುದು ಈಗಿನ ಸಂದರ್ಭಗಳ ಒತ್ತಡದಲ್ಲಿ ಅವಶ್ಯವಾಗುತ್ತದೆ. ವಿದ್ವತ್ತೆಯ, ವಿಮರ್ಶೆಯ ವಿಷಯಗಳು ಬಂದಾಗ ಬೌದ್ಧಿಕ, ಶೈಕ್ಷಣಿಕ ಆದ ನೆಲೆಗಳಲ್ಲಿ ನಡೆಯುವ ವಾಗ್ವಾದಗಳು ಒಟ್ಟು ಸಮಾಜದ ಸುಸ್ಥಿತಿಯ ದೃಷ್ಟಿಯಿಂದ ಅಷ್ಟು ಘಾತಕವಾದ ಪರಿಣಾಮಗಳಿಗೆ ಅವಕಾಶ ಮಾಡಲಾರವು. ಏಕೆಂದರೆ ಅದು ಒಟ್ಟು ಜನಸಮುದಾಯದ ವಿಶಾಲಕ್ಷೇತ್ರಕ್ಕೆ ಅನ್ವಯಿಸುವ ವಿದ್ಯಮಾನವಾಗಿರುವುದಿಲ್ಲ.

“ಬುದ್ಧಿವಂತರಲ್ಲಿ ಸಮಾನಾಭಿಪ್ರಾಯಗಳು ಬೇಕಾದಷ್ಟು ಬರುತ್ತವೆ. ಆದರೆ ವಿದ್ವಾಂಸನಾದವನು ಅವೆಲ್ಲವೂ ಒಂದೇ ಎಂದು ತಿಳಿಯಬಾರದು” ಎನ್ನುವ ‘ಧ್ವನ್ಯಾಲೋಕ’ದ ಮಾತು ಸಾಹಿತ್ಯಲೋಕದಲ್ಲಿ ವ್ಯಕ್ತಿಸ್ವಾತಂತ್ರ್ಯದ, ಅಭಿಪ್ರಾಯಸ್ವಾತಂತ್ರ್ಯದ ಸಂದರ್ಭಗಳಲ್ಲಿ ನಡೆಯಬಹುದು. ತರ್ಕ, ವಿಚಾರ, ಸತ್ಯನಿಷ್ಠೆ ಇವು ವಿಚಾರ ವಿಮರ್ಶೆಗಳಿಗೆ, ವಿದ್ವದುದ್ಯಮಗಳಿಗೆ ಮುಖ್ಯ ಎಂಬುದು ಇಲ್ಲಿಯ ಆಶಯ. ಈ ವಿಷಯದಲ್ಲಿ ವಿದೇಶದ ಬ್ರೊನೊವ್ಸ್ಕಿ ಎಂಬ ವಿದ್ವಾಂಸರೊಬ್ಬರ ಮಾತನ್ನು ಇಲ್ಲಿ ಉದ್ಧರಿಸಬಹುದಾಗಿದೆ. ಈ ಮಾತನ್ನು ಹಲವು ವರ್ಷಗಳ ಹಿಂದೆ ಪು.ತಿ. ನರಸಿಂಹಾಚಾರ‍್ಯರು ನನ್ನ ಗಮನಕ್ಕೆ ತಂದರು.

ಸಾರ್ವಜನಿಕಜೀವನದಲ್ಲಿ ಸಾಮಾನ್ಯವಾಗಿ ಅನುಸರಿಸುವ ಯೋಗ್ಯತಾನಿರ್ಣಯಕ್ಕೆ ಅನುಗುಣವಾಗಿ ಎಲ್ಲ ವಿದ್ವಾಂಸರೂ ತಂತಮ್ಮ ಕ್ಷೇತ್ರಗಳಲ್ಲಿ ಒಂದು ವಿಲಕ್ಷಣರೀತಿಯಲ್ಲಿ ಋಜುಬುದ್ಧಿಯುಳ್ಳವರು ಎಂಬುದು ನಿಜ. ತಮ್ಮ ಸಾಧನೆಗಳ ಬಗ್ಗೆ ಅವರು ದೊಡ್ಡದಾಗಿ ಹೇಳಿಕೊಳ್ಳುವುದಿಲ್ಲ. ಅವರು ವಂಚಿಸುವುದಿಲ್ಲ. ತಾವು ಹೇಳುವುದನ್ನು ಬೇರೆಯವರು ಒಪ್ಪುವ ಹಾಗೆ ಮಾಡಬೇಕೆಂದು ಹೇಗೋ ಪ್ರಯತ್ನಿಸುವುದಿಲ್ಲ. ಇನ್ನೊಬ್ಬನಿಗೆ ಇದು ಇಷ್ಟ, ಇದು ಅನಿಷ್ಟ ಎಂದೋ, ಅಧಿಕಾರಕ್ಕೆ ಮಣಿದೋ ವರ್ತಿಸುವುದಿಲ್ಲ. ತಮಗೆ ತಿಳಿಯದ ವಿಷಯದಲ್ಲಿ ಅವರಿಗೆ ಮುಚ್ಚುಮರೆಯಿಲ್ಲ. ಅವರ ಭಿನ್ನಾಭಿಪ್ರಾಯಗಳು ಬಹಳಮಟ್ಟಿಗೆ ಗಾಂಭೀರ‍್ಯದಿಂದ ಕೂಡಿದವು. ಅವರು ವಾದಸರಣಿಯನ್ನು ಜನಾಂಗ ರಾಜಕೀಯ ಲಿಂಗ ಅಥವಾ ವಯಸ್ಸು ಇವನ್ನು ಹಿಡಿದು ದಾರಿತಪ್ಪಿಸುವುದಿಲ್ಲ. ತಿಳಿದವರು ಚಿಕ್ಕವರಿರಲಿ ದೊಡ್ಡವರಿರಲಿ, ಅವರು ಹೇಳುವುದನ್ನು ತಾಳ್ಮೆಯಿಂದ ಕೇಳುತ್ತಾರೆ. ಇದು ವಿದ್ವತ್ತೆಯ ಸಾಮಾನ್ಯ ಲಕ್ಷಣಗಳು; ಸ್ವಾರಸ್ಯವೆಂದರೆ, ಇವೇ ವಿಜ್ಞಾನದ ಲಕ್ಷಣಗಳು ಕೂಡ.
ಈ ವಾಕ್ಯಪುಂಜದ ಆಶಯವನ್ನು ನಾನು ವ್ಯಾಖ್ಯಾನಿಸುವುದಿಲ್ಲ. ತಮ್ಮ ವಿವೇಚನೆಗೇ ಬಿಡುತ್ತೇನೆ.
ಇದನ್ನು ಇನ್ನೂ ಸೂತ್ರಪ್ರಾಯವಾಗಿ, ೧೧೫೦ ವರ್ಷಗಳಿಗೂ ಹಿಂದೆಯೇ ನಮ್ಮ ಭಾಷೆಯ, ನಮ್ಮ ನಾಡಿನ ಹೆಮ್ಮೆಯ ಕೃತಿ ‘ಕವಿರಾಜಮಾರ್ಗ’ದ ಮುಂದಿನ ಕಂದಪದ್ಯದಲ್ಲಿ ಕಾಣಬಹುದಾಗಿದೆ: ಇದು ಸಮಾಜಕ್ಕೂ ಸಾಹಿತಿಗೂ ಸಮಾನವಾಗಿ ಅನ್ವಯಿಸುವ ಹಿತೋಕ್ತಿ.
ಕಸವರಮೆಂಬುದು ನೆಱೆ ಸೈ
ರಿಸಲಾರ್ಪೊಡೆ ಪರವಿಚಾರಮನ್ ಧರ್ಮಮುಮನ್
ಕಸವೇನ್ ಕಸವರಮೇನು
ಬ್ಬಸಮನ್ ಬಸಮಲ್ಲದಿರ್ದು ಮಾಡುವುವೆಲ್ಲಮ್ ||
ಅನ್ಯರ ವಿಚಾರವನ್ನು, (ಅನ್ಯರ) ಧರ್ಮವನ್ನು ಕೂಡ, ಪೂರ್ಣವಾಗಿ (ಅಂತಃಕರಣ ಪೂರ್ವಕವಾಗಿ) ಸಹಿಸುವುದು ಸಾಧ್ಯವಾದರೆ, (ಅದನ್ನು) ಸಂಪತ್ತು ಎನ್ನಬೇಕು. (ಹಾಗಲ್ಲದಿದ್ದರೆ), ಕಸವೇನು ಕಸವರವೇನು? (ಎರಡೂ ಒಂದೇ). ಅವೆಲ್ಲ ಬಹುವಾಗಿ ಹಿಂಸೆಮಾಡುತ್ತವೆ.
ಈ ಪದ್ಯದ ಆಶಯವನ್ನೂ ನಾನು ವ್ಯಾಖ್ಯಾನಿಸುವುದಿಲ್ಲ. ತಮ್ಮ ವಿವೇಚನೆಗೇ ಬಿಡುತ್ತೇನೆ.
ಈಗ್ಗೆ ಕೆಲವು ವರ್ಷಗಳಿಂದ ನಮ್ಮ ಸಮಾಜಜೀವನ ಮತ್ತು ಸಾಹಿತ್ಯಕೃಷಿ ಎರಡರ ನಡುವೆ, ಅನ್ಯೋನ್ಯವಾಗಿ ಸಂಬಂಧವಿರಬೇಕಾದ್ದು ಸಡಿಲಗೊಳ್ಳುತ್ತ, ಸಂಘರ್ಷದ ತೀವ್ರತೆ ಕಾಣುತ್ತಿದೆ. ಇದು ವೈಚಾರಿಕಸಂವಾದವಾಗಿ ಉಳಿಯದೆ, ಸಂಘರ್ಷವಾಗಿ ಆಘಾತಕಾರಿ ಪರಿಣಾಮಗಳಿಗೆ ದಾರಿಮಾಡುತ್ತಿದೆ. ಸಮಾಜ ಒಂದು ಶಿಕ್ಷಿತ-ಅಶಿಕ್ಷಿತ, ವಿವೇಕಿ-ಅವಿವೇಕಿ ಜನರ ಕೂಟ. ಸಮಾಜ ಹರಿಯುವ ಹುಚ್ಚುಹೊಳೆ; ಸಾಹಿತ್ಯರಚನೆ ಕಟ್ಟಿದ ಕೆರೆ. ಹೊಳೆಯ ನೀರು ಕೆರೆಯ ಕಟ್ಟೆಯನ್ನು ಕೊಚ್ಚಿಹಾಕದ ಹಾಗೆ ನೋಡಿಕೊಳ್ಳ ಬೇಕು. ಈ ದಿಕ್ಕಿನಲ್ಲಿ ನಮ್ಮ ವ್ಯಕ್ತಿ-ಅಭಿವ್ಯಕ್ತಿ ಸ್ವಾತಂತ್ರ್ಯಗಳ ಮಿತಿಮೇರೆಗಳನ್ನು ಗುರುತಿಸ ಬೇಕಾಗಿದೆ. ದೇಶದ ಸಂವಿಧಾನ, ಕಾನೂನಿನ ಕಟ್ಟುಕಟ್ಟಳೆಗಳು, ನೈತಿಕಪ್ರಜ್ಞೆ, ಆತ್ಮಸಾಕ್ಷಿ, ಪರವಿಚಾರ ಪರಧರ್ಮಗಳ ಬಗೆಗೆ ಸಹಿಷ್ಣುತೆ, ಯುಕ್ತಾಯುಕ್ತವಿವೇಚನೆ, ಪರಿಣಾಮ ಪರಂಪರೆ ಎಲ್ಲವೂ ಎಚ್ಚರದಿಂದ ಗಮನಿಸಬೇಕಾದುವೇ.
ಈಚಿನ ಕೆಲವು ವರ್ಷಗಳಲ್ಲಿ ನಡೆದಿರುವ ಬುದ್ಧಿಜೀವಿಗಳ, ವಿಚಾರವಾದಿಗಳ, ಸಾಹಿತಿಗಳ ಮೇಲಣ ಹಲ್ಲೆಗಳು ಅತ್ಯಂತ ದುಃಖಕರ; ಖಂಡನಾರ್ಹ, ಶಿಕ್ಷಾರ್ಹ. ಅನ್ಯಾಯವಾಗಿ ಈಚೆಗೆ ನಮ್ಮ ನಡುವಿನ ಕ್ರಿಯಾಶಾಲಿ ಸಂಶೋಧಕಮಿತ್ರ ಎಂ.ಎಂ. ಕಲಬುರ್ಗಿಯವರನ್ನು ನಾವು ಕಳೆದುಕೊಂಡೆವು.
ಸಮಾಜ ಸಾಹಿತಿಗಳ ಹಿತ ಕಾಯಬೇಕು; ಸಾಹಿತಿಗಳು ಸಮಾಜದ ಹಿತ ಕಾಯಬೇಕು. ಎರಡು ಕಡೆಗೂ ತಾಳ್ಮೆ ಸಂಯಮ ಸಮಾಧಾನಗಳು ಅವಶ್ಯವಾಗಿರಬೇಕು. ಸರ್ಕಾರದ ನಾಯಕತ್ವವೂ ಸಾಮಾಜಿಕನಾಯಕತ್ವವೂ ಒಗ್ಗೂಡಿ ಶ್ರಮಿಸಬೇಕು.
ಯಾವುದೋ ಮತದ, ಪಂಥದ ಆಚಾರವಿಚಾರಗಳು ಮೇಲೆಂದೂ ಕೀಳೆಂದೂ ತೆಗಳುವುದು, ಯಾವುದೋ ಸ್ಮೃತಿಯಲ್ಲಿ ಬಂದಿರುವ ಯಾವುದೋ ವಿಚಾರ ಅಸಮಾನತೆ ಅಸಹಿಷ್ಣುತೆಗಳ ಭೇದಬುದ್ಧಿಯ ಪುರೋಹಿತಶಾಹಿ ವಿಚಾರವೆಂದು ಗುರುತಿಸಿ ಯಾರನ್ನೋ ತರಾಟೆಗೆ ತೆಗೆದುಕೊಳ್ಳುವುದು, ಪರಿಣಾಮದಲ್ಲಿ ವರ್ತಮಾನಸಮಾಜದ ಮೇಲೆ, ಸಮಾಜದ ಎಳೆಯ ಮನಸ್ಸುಗಳ ಮೇಲೆ ದ್ವೇಷಾಸೂಯೆಗಳ ವಿಷಬೀಜಗಳನ್ನು ಬಿತ್ತದೆ ವಿರಮಿಸುವುದಿಲ್ಲ. ದಿಟವಾಗಿ ಈಗ ಯಾವುದೇ ಮತದ, ಪಂಥದ ಆಚಾರ ವಿಚಾರಗಳು ಉಳಿದಿದ್ದರೆ, ಅವು ಮನೆಯ ಮಟ್ಟಿಗೆ, ಸಾಂಕೇತಿಕವಾಗಿ ಉಳಿದಿರಬಹುದು. ಇನ್ನು ಸ್ಮೃತಿಗಳು ಕಾಲಕಾಲಕ್ಕೆ ಮತೀಯ ಆಚಾರವಿಚಾರಗಳನ್ನು ಬೇರೆಬೇರೆಯಾಗಿ ವ್ಯಾಖ್ಯಾನಿಸುತ್ತ ಉದಾರವಾಗುತ್ತ ಹೋಗಿಯೂ ಈಗ ನಿರುಪಯುಕ್ತವಾಗಿವೆ. ಅವುಗಳಲ್ಲಿ ಹಿತಕರ ನೈತಿಕ ಮತ್ತು ಮಾನವೀಯ ಮೌಲ್ಯಗಳು ಏನುಂಟೋ, ಅವನ್ನು ತಿಳಿಯುವ ಕುತೂಹಲವೂ ನಮಗಿಲ್ಲವಾಗಿದೆ; ಅವನ್ನು ತಿಳಿದವರು ಹೇಳಲೂ ಅವರಿಗೆ ಕುತ್ತಿಗೆ ಹಿಡಿಯುತ್ತಿದೆ.
ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಎಂ.ಎಚ್. ಗೋಪಾಲ್ ಅವರಿಗೆ ಹಿಂದೂಸಮಾಜದಲ್ಲಿ ಸಂಪೂರ್ಣ ಜಾತಿನಿರಪೇಕ್ಷತೆ ಮತ್ತು ಭಾರತೀಯ ಸಂಸ್ಕೃತಿ ಮತ್ತು ಜೀವನಶ್ರದ್ಧೆಯ ಮೌಲ್ಯಗಳಲ್ಲಿಯ ವೈಶಿಷ್ಟ್ಯದ ಸ್ವೀಕೃತಿ ಅಪೇಕ್ಷಣೀಯ ವಾಗಿದ್ದುವೆಂದು ಇತಿಹಾಸಕಾರ ಜಿ.ಎಸ್. ದೀಕ್ಷಿತ್ ಅವರನ್ನು ಕುರಿತ ಬರಹದಲ್ಲಿ ಹೇಳಿದ್ದಾರೆ. ಅವರು ಹೇಳಿರುವ ಇನ್ನೊಂದು ಮಾತು ಕೂಡ ಉಂಟು. ಹಿಂದುಳಿದ ರಾಷ್ಟ್ರಗಳಿಗೆ ಪ್ರಜಾಪ್ರಭುತ್ವವೆನ್ನುವುದು ಒಂದು ಆದರ್ಶ; ಉಪಕಾರಬುದ್ಧಿಯ ನಿರಂಕುಶಪ್ರಭುತ್ವವೇ ಬಲುಮಟ್ಟಿಗೆ ಸೂಕ್ತ.
ಕಾಲಗತಿಯನ್ನು ಹಿಡಿದು ಸಮಾಜ ತನ್ನ ಒಳಿತನ್ನು ಕಂಡುಕೊಳ್ಳುತ್ತದೆ; ಹಳತರ ಪೊರೆ ಕಳಚಿಕೊಳ್ಳುತ್ತದೆ. ಅದಕ್ಕೆ ಹೋರಾಟ ಗುದ್ದಾಟಗಳ ಇಷ್ಟೊಂದು ಹುಯಿಲು ಬೇಕಾಗಿಲ್ಲ.

ಸಮೂಹಮಾಧ್ಯಮಗಳು
ದೇಶವಿದೇಶಗಳ, ನಮ್ಮದೇ ರಾಜ್ಯದ ಸುದ್ದಿ ಸಮಾಚಾರಗಳು ನಮಗೆ ತಲುಪುವುದಕ್ಕೆ, ತಿಳಿಯುವುದಕ್ಕೆ ಈಗ ಎಂದಿಗಿಂತ ಹೆಚ್ಚಿಗೆ ಸಹಾಯ ಸಲಕರಣೆಗಳಿವೆ. ಇವುಗಳ ಮೂಲಕ ಭಾಷೆ-ಸಾಹಿತ್ಯಗಳು, ಕಲೆ-ಸಂಸ್ಕೃತಿಗಳು, ದೇವರು-ಧರ್ಮಗಳು, ಕ್ರೀಡೆ-ಮನೋರಂಜನೆಗಳು, ಬಗೆಬಗೆಯ ಪ್ರಾಕೃತಿಕ ಪ್ರಾಪಂಚಿಕ ವಿಲಾಸ ವೈಖರಿಗಳು ಇವನ್ನು ತಿಳಿಯುವ ಯಥೇಚ್ಛವಾದ ಅವಕಾಶಗಳು ನಮಗೆ ಲಭ್ಯವಿವೆ. ಯಂತ್ರ ನಾಗರಿಕತೆಯ ಅನ್ವೇಷಣೆ ಆವಿಷ್ಕಾರಗಳ ಫಲವಿದು. ಈ ವಿಷಯದಲ್ಲಿ ನಾನು ಅನಾಸಕ್ತನಲ್ಲವಾದರೂ ಅಷ್ಟಾಗಿ ಉತ್ಸಾಹಿಯಲ್ಲ; ಹೆಚ್ಚಿನ ಉಪಕರಣಗಳ ತಿಳಿವಳಿಕೆಯೂ ನನಗಿಲ್ಲ. ನನ್ನ ಮಿತ್ರರಾದ ಡಾ. ಬಿ.ಎ. ವಿವೇಕ ರೈ ಅವರು ತಮ್ಮ ಅಧ್ಯಕ್ಷಭಾಷಣದಲ್ಲಿ ವಿಸ್ತಾರವಾಗಿ ಈ ಬಗ್ಗೆ ವಿವರಗಳನ್ನು ನೀಡಿದ್ದಾರೆ.
ಜಗತ್ತಿನ ಅನೇಕ ವಿದ್ಯಮಾನಗಳು ಈ ಸಮೂಹಮಾಧ್ಯಮಗಳ ಮೂಲಕ ನಮ್ಮ ತಿಳಿವಿಕೆಗೆ ಬಂದು ಪರಸ್ಪರವಾಗಿ ಅರಿವು ಸಂವಹನ ಸಂಪರ್ಕಗಳು ಸಾಧ್ಯವಾಗಿ ನಮ್ಮ ಭೌತಿಕ ಮತ್ತು ಬೌದ್ಧಿಕಜ್ಞಾನ ಬೆಳೆದಿರುವುದಂತೂ ನಿಜ. ಆದರೆ ನಮ್ಮ ಸಮುದಾಯದಲ್ಲಿ ಈ ಮಾಧ್ಯಮಗಳ ದುರುಪಯೋಗವೂ ಒಂದು ರೀತಿಯಲ್ಲಿ ಸಾಗಿದೆ; ಇವು ಸ್ವಾರ್ಥ, ವಿಲಾಸ, ಸಂಪತ್ತಿನ ಸೆಳೆತ, ಕಲೆ ಸಂಸ್ಕೃತಿಗಳ ಶೋಷಣೆ, ಇವುಗಳ ಚಕ್ರತೀರ್ಥದಲ್ಲಿ ವೇಗವೇಗವಾಗಿ ಸುತ್ತಲು ಸ್ಪರ್ಧಿಸುತ್ತಿವೆ. ಯಾವುವು ಜ್ಞಾನದಿಗಂತದ ವಿಸ್ತರಣಕ್ಕೆ, ನವಾವಿಷ್ಕಾರಗಳ ಮೂಲಕವಾಗಿ ಜ್ಞಾನದ ಸ್ಫೋಟಕ್ಕೆ ಅವಕಾಶಮಾಡಬೇಕಾಗಿದ್ದುವೋ, ಅವು ಈ ಸ್ಪರ್ಧೆಯ ಮೂಲಕ ಜೀವನದ ಮೌಲ್ಯಗಳನ್ನು ತೆರೆಮರೆಗೆ ತಳ್ಳಿವೆ, ನಿರ್ಲಕ್ಷಿಸಿವೆ ಎಂದು ತೋರುತ್ತಿದೆ. ನಮಗೆ ಬೇಕಾಗಿರುವುದು ದಿಟವಾಗಿ ಜನಸಮುದಾಯದ ಬಡತನ ಅಸಮಾನತೆಗಳ ನಿವಾರಣೆಯ ಉಪಾಯಗಳು, ಜ್ಞಾನ-ವಿವೇಕಗಳ ಹಾಗೂ ನೆಮ್ಮದಿ-ಅಭ್ಯುದಯಗಳ ಚಿಂತನ ಮಂಥನಗಳು. ಪರಿಣಾಮದಲ್ಲಿ ಸ್ವಚ್ಛವಾದ, ಗಂಭೀರವಾದ, ಶಾಂತವಾದ ಮನಃಸ್ಥಿತಿಯ ಸಮಾಜನಿರ್ಮಾಣ. ನನ್ನ ವಿಚಾರ ಬರಿಯ ಆದರ್ಶಾನುಸಂಧಾನವಲ್ಲ; ಪ್ರಯೋಗಸಾಧ್ಯವಾಗುವ, ಆರೋಗ್ಯಕರವಾದ, ದೃಶ್ಯ-ಶ್ರವ್ಯ ಸಂಪತ್ತನ್ನು ಸಮೂಹಮಾಧ್ಯಮಗಳು ಬಿತ್ತಿ ಬೆಳೆಯಲಿ ಎಂಬ ಉತ್ಕಟವಾದ ಕಾಂಕ್ಷೆ.
ನಮ್ಮ ಸರ್ಕಾರೇತರ ಖಾಸಗಿ ವಾಹಿನಿಗಳ ದೂರದರ್ಶನದ ಮನೋರಂಜನೆಯ ಕಾರ್ಯಕ್ರಮಗಳು ಕುಟುಂಬ ಜೀವನದಲ್ಲಿ ದ್ವೇಷ, ಅಸಹನೆ ಕ್ರೌರ್ಯಗಳನ್ನು, ಕಟ್ಟುಕತೆಗಳ ಮೂಲಕ ಅಸ್ವಾಭಾವಿಕವಾಗಿ ಕಲ್ಪಿಸಿ ತೋರಿಸಿ, ಜುಗುಪ್ಸೆಯುಂಟುಮಾಡುತ್ತ, ಕೆಟ್ಟ ಕುತೂಹಲದ ಕಿಚ್ಚು ಹೊತ್ತಿಸಲು ವ್ರತ ತೊಟ್ಟಂತಿದೆ. ನಮ್ಮ ಮಾನಸಿಕ ಸ್ತಿಮಿತ ಕೆಡುತ್ತಿದೆ.
ಎಷ್ಟೋ ವೇಳೆ ಅಥವಾ ಹೆಚ್ಚಿನ ಮಟ್ಟಿಗೆ ಇಂದು ನಮ್ಮ ಸಮೂಹಮಾಧ್ಯಮಗಳು ಜಾಹಿರಾತುಗಳನ್ನು ನೆಚ್ಚಿ ಕೆಲಸ ಮಾಡುತ್ತಿವೆ. ಈ ಜಾಹಿರಾತುಗಳು ಬರುಬರುತ್ತ ತಮ್ಮ ಸಭ್ಯತೆ ಸಹ್ಯತೆಗಳ ಲಕ್ಷ್ಮಣರೇಖೆ ದಾಟಿ ಕಣ್ಣಿಗೆ ರಾಚುತ್ತಿವೆ. ಉಳಿದೆಲ್ಲ ಸುದ್ದಿ ಸಮಾಚಾರಗಳೂ ಅವುಗಳ ಎದುರಿನಲ್ಲಿ ‘ಶಿಷ್ಟಾಚಾರದ ಸಲುವಾಗಿ’ ಎನ್ನುವಂತೆ ಸ್ಥಾನ ಪಡೆಯುತ್ತಿವೆ. ಈ ವಿಷಯದಲ್ಲಿ ಜಾಹಿರಾತು ಆಕರ್ಷಣೆಯ ಹೊರತಾಗಿ ಆಕಾಶವಾಣಿ ಹೆಚ್ಚು ಗಾಂಭೀರ‍್ಯದಿಂದ, ಹೆಚ್ಚು ಸಂಯಮದಿಂದ ನಡೆದುಕೊಳ್ಳುತ್ತಿದೆ. ಇಲ್ಲಿಯೂ ಭಾಗಶಃ, ಸುಂದರ ಸುದೃಢ ಸ್ವಚ್ಛ ಕನ್ನಡಭಾಷೆಯ ಮೇಲೆ ಆಕ್ರಮಣ ಆರಂಭವಾಗಿದೆ. ಸಮೂಹಮಾಧ್ಯಮಗಳು ಕೂಡ ಎಂದೋ ಉದ್ಯಮಗಳಾಗಿ ಪರಿಣಮಿಸಿವೆ; ಜನಜಾಗೃತಿಯ ಧ್ಯೇಯನಿಷ್ಠ ಸಾಮಾಜಿಕಸಂಸ್ಥೆಗಳಾಗಿ ಏನೂ ಉಳಿದಿಲ್ಲ. ನಷ್ಟ ಮಾಡಿಕೊಂಡು ಉದ್ಯಮ ಬೆಳಸಬೇಕೆಂದು ಯಾರೂ ಹೇಳುವುದಕ್ಕಾಗದು. ಆದರೆ ಅಗತ್ಯಕ್ಕಿಂತ ಹೆಚ್ಚಿನ ಸ್ವಹಿತಾಸಕ್ತಿಗಳೂ ಪಕ್ಷಪಂಥಗಳ ಅಂಗೀಕಾರವೂ ಧನದಾಹಿಪ್ರವೃತ್ತಿಯೂ ಇರುವುದು ಒಪ್ಪುವ ಮಾತಲ್ಲ. ಸಾಮಾಜಿಕ ಆರೋಗ್ಯವನ್ನು ಕಾಪಾಡಬೇಕಾದ ಈ ಸಂಸ್ಥೆಗಳು ಜನಹಿತವನ್ನು ಕಡೆಗಣಿಸಲಾಗದು ಎಂದು ತಿಳಿಯುವುದಷ್ಟೇ ಅಲ್ಲ; ಸ್ವಸ್ಥ ಸದೃಢ ಸಮಾಜನಿರ್ಮಾಣದಲ್ಲಿ ಒಂದು ನ್ಯಾಯಾಧಿಕರಣ ದಂತೆ, ಸಂವಿಧಾನದ ಪಾಲಕನಂತೆ ತಿಳಿಯುವುದಾಗಬೇಕು. ಅಂಥ ಶಕ್ತಿ ಸಮೂಹ ಮಾಧ್ಯಮಗಳಿಗಿದೆ.
ಇಂದು ದೃಶ್ಯ ಮತ್ತು ಶ್ರವ್ಯ ಮಾಧ್ಯಮಗಳ ಮೂಲಕವೂ ಪುಸ್ತಕ ಪತ್ರಿಕೆ ಪ್ರವಾಸಾದಿಗಳ ಮೂಲಕವೂ ಕ್ಷಣಕ್ಷಣಕ್ಕೂ ಆಗುತ್ತಿರುವ ಜ್ಞಾನಸ್ಫೋಟದ ಪ್ರಯೋಜನ ದೊರಕಿಸುವಲ್ಲಿ, ಪಡೆಯುವಲ್ಲಿ ನಮ್ಮ ಪ್ರಜೆ ಅಲಸಿಗಳಾಗಿದ್ದಾರೆ, ಅನಾಸಕ್ತರಾಗಿದ್ದಾರೆ. ದೊಡ್ಡದೊಡ್ಡ ತೊರೆಗಳ ಬಹುಪಾಲು ನೀರು ಸುಮ್ಮನೆ ವ್ಯರ್ಥವಾಗಿ ಹರಿದುಹರಿದು ಸಾಗರವನ್ನು ಸೇರುವಂತಾಗಿದೆ.
ಇಲ್ಲಿಯೇ ಹೇಳಿಬಿಡುತ್ತೇನೆ. ನಮ್ಮಲ್ಲಿ ಈ ಹಿಂದೆ ಪ್ರಕಟವಾಗುತ್ತಿದ್ದ ರೀತಿಯ, ಭಾಷೆ ಶುದ್ಧವಾಗಿರುವ, ಸಾಹಿತ್ಯ ಸಮೃದ್ಧವಾಗಿರುವ ವಾರ ಮತ್ತು ಮಾಸಪತ್ರಿಕೆಗಳು ಕಣ್ಮರೆಯಾಗಿ ಅವುಗಳ ಸ್ಥಾನವನ್ನು ಭಾಷೆ ಅಶುದ್ಧವೂ ಸಂಕರವೂ ಆಗಿರುವ, ಸಾಹಿತ್ಯೇತರ ವಿಷಯಗಳಿಗೆ ಎಡೆಮಾಡಿರುವ ವಾರ ಮತ್ತು ಮಾಸಪತ್ರಿಕೆಗಳೇ ಹೆಚ್ಚಾಗುತ್ತಿವೆ. ಆದರೆ ವಿಷಯ ವೈವಿಧ್ಯ ಹೆಚ್ಚಿದೆ, ವಿಚಾರ ವಿಮರ್ಶೆಗಳ ವ್ಯಾಪ್ತಿ ಬೆಳೆದಿದೆ. ಇದು ಸ್ವಾಗತಾರ್ಹವೇ. ಆದರೆ ಹಿಂದಿನ ವಾರ-ಮಾಸಪತ್ರಿಕೆಗಳನ್ನು (ಕನ್ನಡನುಡಿ, ಜೀವನ, ಜಯಕರ್ನಾಟಕ, ಜಯಂತಿ, ಶ್ರೀಕೃಷ್ಣಸೂಕ್ತಿ, ಶಿವಾನುಭವ, ಶರಣಸಾಹಿತ್ಯ ಇ.) ಕುತೂಹಲಕ್ಕಾದರೂ ಒಮ್ಮೆ ನೋಡುವುದರಿಂದ ಪ್ರಯೋಜನವಿದೆ. ಇನ್ನು ನಮ್ಮ ತ್ರೈಮಾಸಿಕ, ಅರ್ಧವಾರ್ಷಿಕ ಗಳಾದ ವಿದ್ವತ್ಪತ್ರಿಕೆಗಳ ವಿಚಾರ: ನಮ್ಮ ಈ ಪತ್ರಿಕೆಗಳ ವರ್ಚಸ್ಸು ತೇಜಸ್ಸುಗಳು ನಷ್ಟವಾಗಿ ಎಷ್ಟೋ ಕಾಲವಾಯಿತು. ಇವುಗಳಲ್ಲಿ ಕೆಲವು ನಿಂತೇಹೋಗಿವೆ. ಇನ್ನು ಕೆಲವು ಬಹುಶಃ ತೀರ ಅನಿಯತಕಾಲಿಕಗಳಾಗಿವೆ. ಈ ಪತ್ರಿಕೆಗಳಿಗೆ ಈಗ ಬರೆಯುವವರೂ ಓದುವವರೂ ಕಡಮೆಯಾಗಿದ್ದಾರೆ. ಚಂದಾದಾರರಂತೂ ಇಲ್ಲವೆನ್ನುವಷ್ಟು ಸಂಖ್ಯೆಯಲ್ಲಿದ್ದಾರೆ. ಕೃಪೆಯಿಟ್ಟು ನಮ್ಮ ಪ್ರಬುದ್ಧಕರ್ಣಾಟಕದ, ಸಾಹಿತ್ಯಪರಿಷತ್ಪತ್ರಿಕೆಯ, ಜೀವನಪತ್ರಿಕೆಯ ಹಳೆಯ ಸಂಚಿಕೆಗಳನ್ನು ಕುತೂಹಲಕ್ಕಾಗಿ ಒಮ್ಮೆ ಯುವಸಂಶೋಧಕರು ಪುಟತೆರೆದು ನೋಡಲೆಂದು ಆಶಿಸುತ್ತೇನೆ; ಮೈಸೂರು ವಿಶ್ವವಿದ್ಯಾನಿಲಯದ ಮಾನವಿಕಕರ್ಣಾಟಕ ವಿಜ್ಞಾನಕರ್ಣಾಟಕಗಳ ಸಾಮಾನ್ಯ ಮತ್ತು ವಿಶೇಷಸಂಚಿಕೆಗಳನ್ನು ಕೂಡ ನೋಡುವುದಾಗಲಿ.
ಈಗ ಸರ್ಕಾರದ ಸಗಟುಖರೀದಿಯ ಬೆಂಬಲದಲ್ಲಿ ಪುಸ್ತಕಗಳು ಉತ್ಪಾದಿಸಲ್ಪಡು ವಂತೆ ತೋರುತ್ತಿದೆ; ಬರೆಯಲ್ಪಡುವಂತೆ ತೋರುತ್ತಿಲ್ಲ. ಹೀಗೆಯೇ ಪ್ರಾಯೋಜನೆ ವಿಶೇಷ ಅನುದಾನಗಳ ಬಲದ ಮೇಲೆಯೂ ಇದು ನಡೆಯುತ್ತಿದೆ. ಕೆಲವು ಪ್ರಕಾಶನ ಸಂಸ್ಥೆಗಳು ಹೆಚ್ಚಿನ ಪ್ರಯೋಜನ ಪಡೆಯಲು ಏನೇನೋ ಅಡ್ಡದಾರಿಗಳನ್ನು ಕಂಡುಕೊಳ್ಳುತ್ತಿವೆ. ಹಿಂದೆ ಮೈಸೂರು ವಿಶ್ವವಿದ್ಯಾನಿಲಯದ ಪ್ರಕಟನಮಾಲೆಯ ಸಣ್ಣ ಪುಸ್ತಕಗಳೂ ದೊಡ್ಡ ಪುಸ್ತಕಗಳೂ ಕಠಿನವಾದ ವಿಮರ್ಶೆಗೆ, ಪರಿಷ್ಕರಣಕ್ಕೆ ಒಳಗಾಗುವ ವ್ಯವಸ್ಥೆಯಿತ್ತು. ಈಗಲೂ ಇರಬಹುದು. ಆದರೆ ಆ ದರ್ಜೆಯಲ್ಲಿ ಉಂಟೇ, ನನಗೆ ತಿಳಿಯದು.
ಹೊಸತನದ ಹುಡುಕಾಟ ಮುಮ್ಮುಖವಾಗಿಯೇ ನಡೆಯಬೇಕೆಂದೇನಿಲ್ಲ; ಹಿಮ್ಮುಖ ವಾಗಿಯೂ ನಡೆದು ಹೊಸತನದ ನೆಲೆಗಳನ್ನು ಕಾಣಬಹುದು, ಕಾಣಲು ಪ್ರೇರಣೆ ಪಡೆಯಬಹುದು.
“ಹಿಂದಣ ಹಜ್ಜೆಯ ನೋಡಿ ಕಂಡಲ್ಲದೆ
ನಿಂದ ಹಜ್ಜೆಯನಱಯಬಾರದು”
– ಎನ್ನುವ ಮಾತು ಇಲ್ಲಿಯೂ ಸಲ್ಲುತ್ತದೆ, ಅಲ್ಲಿಯೂ ಸಲ್ಲುತ್ತದೆ.
ನಮ್ಮ ಸಮೂಹಮಾಧ್ಯಮಗಳು ಇಂದು ಜನಜಾಗೃತಿಯ ಪ್ರಬಲ ಶಕ್ತಿಕೇಂದ್ರಗಳಾಗಿ ಕೆಲಸಮಾಡಬೇಕಾಗಿದೆ. ದಲಿತರ, ಹಿಂದುಳಿದವರ ಮುನ್ನಡೆಗೆ ಅತ್ಯವಶ್ಯವಾದ ಸಾಕ್ಷರತೆಯ ಹೆಚ್ಚಳ, ಆರ್ಥಿಕಸಂಕಷ್ಟದ ನಿವಾರಣೆ, ಕೃಷಿ-ಕೈಗಾರಿಕೆಗಳ ಕ್ಷೇತ್ರದಲ್ಲಿ ವೃದ್ಧಿ, ಉದ್ಯೋಗದ ಅವಕಾಶಗಳಿಗೆ ಏರ್ಪಾಡು, ಅನ್ಯಭಾಷಿಕರ ವಲಸೆಯ ತಡೆ, ಆಂಧ್ರ ತಮಿಳುನಾಡು ಕೇರಳ ರಾಜ್ಯಗಳ ಗಡಿಭಾಗಗಳಲ್ಲಿ ಕನ್ನಡ ಶಾಲೆಗಳನ್ನು ಮುಚ್ಚದಿರುವಂತೆ ಎಚ್ಚರಿಕೆ ನೀಡುವುದು, ಕಾರ್ಖಾನೆ ಕಛೇರಿಗಳಲ್ಲಿ ಕನ್ನಡಗರಿಗೆ ಉದ್ಯೋಗ ದೊರಕಿಸುವುದು, ಹುಚ್ಚು ಕೆರಳಿಸುತ್ತಿರುವ ಜಾತೀಯತೆಯ ಸುದ್ದಿಸಮಾಚಾರಗಳ ವಿಷಯದಲ್ಲಿ ಸಂಯಮ ತೋರುವುದು, ಭ್ರಷ್ಟಾಚಾರದ ಹಬ್ಬುಗೆಗೆ ತಡೆಯೊಡ್ಡುವುದು, ಶಿಕ್ಷಣಮಾಧ್ಯಮ ಮೊದಲಾದ ವಿಷಯಗಳಲ್ಲಿ ಕನ್ನಡದ ಮಹತ್ತ್ವವನ್ನು ಎತ್ತಿಹಿಡಿಯುವುದು, ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯುವುದು – ಇಂತಹ ಪ್ರಸಂಗಗಳ ವಿಷಯದಲ್ಲಿ ಸರ್ಕಾರಕ್ಕೆ ತಕ್ಕ ತಿಳಿವು, ಎಚ್ಚರ ನೀಡಬೇಕಾಗುತ್ತದೆ.
‘ಸೂಕ್ತಿಸುಧಾರ್ಣವ’ವೆಂಬ ೧೩ನೆಯ ಶತಮಾನದ ಪ್ರಾಚೀನ ಪದ್ಯಸಂಕಲನದಲ್ಲಿಯ ಈ ಮಾತುಗಳನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.
೧. “ಬಡವರ ಪುಯ್ಯಲನ್ ಪ್ರಜೆಯ ಬಿನ್ನಹಮನ್… ಆಲಿಸದನ್ ನೃಪೇಂದ್ರನೇ?” (೧೬-೯)
೨. ಬೇಸತ್ತು ನಾಡು ಕೆಟ್ಟೊಡೆ | ದೇಶಮನಾಳ್ವರಸು ಕೆಡುಗುಮರಸಿನ ಕತದಿನ್
ದೇಶಮ್ ಕೆಡುಗುಮದೆಂತೆನೆ | ತ್ರಾಸಿನ ಕೊಡನೊಂದು ಬೀೞಲೊಂದಿರ್ದರ್ಪುದೇ|| (೧೬-೧೪)
ಇಲ್ಲಿ ಅರಸು, ನೃಪೇಂದ್ರ ಎಂದರೆ ಈಗ ಸರ್ಕಾರ; ನಾಡು ಎಂದರೆ ಪ್ರಜೆ.

ಅರ್ಥನೈಪುಣ್ಯ
ಸರ್ ಎಂ. ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದ ದಿವಾನರಾಗಿದ್ದಾಗ (೧೯೧೨-೧೮) ಪ್ರಜಾಪ್ರತಿನಿಧಿಸಭೆಯ ಸದಸ್ಯರಾಗಿದ್ದ ಮಾಗಡಿ ಕರಣಿಕ ಕೃಷ್ಣಮೂರ್ತಿ ಗಳು ರಾಮಾಯಣದಲ್ಲಿ ಶ್ರೀರಾಮನು ಭರತನಿಗೆ ಉಪದೇಶಿಸಿದ ಆರ್ಥಿಕ ನೀತಿಯ ಭಾಗವನ್ನು ಸಭೆಯ ಗಮನಕ್ಕೆ ತಂದರಂತೆ (ಅಯೋಧ್ಯಾಕಾಂಡ, ಸರ್ಗ ೧೦೦, ಶ್ಲೋಕ ೫೪). “ಆದಾಯ ಹೆಚ್ಚಾಗಿರಲಿ, ಖರ್ಚು ಕಡಮೆಯಾಗಿರಲಿ; ನಿನ್ನ ಭಂಡಾರದ ಹಣ ಅಪಾತ್ರರ ಪಾಲಿಗೆ ಹೋಗದಂತೆ ನೋಡಿಕೋ” ಎನ್ನುವುದು ಅಲ್ಲಿಯ ಮಾತು. ಸಭೆಯ ಸದಸ್ಯರಲ್ಲಿ ಕೆಲವರಿಗೆ ಇದು ತಮಾಷೆಯಾಗಿ ಕಂಡಿತು. ಸರ್. ಎಂ.ವಿ. ಅವರಿಗೆ ಅದು ತಮಾಷೆಯಾಗಿರಲಿಲ್ಲ. “ಇದನ್ನು ಹೇಗೆ ಸಾಧಿಸಬಹುದು, ಈಗ ಯೋಚಿಸೋಣ” ಎಂದರಂತೆ. ರಾಮಾಯಣದ ಇದೇ ಸಂದರ್ಭದಲ್ಲೇ ಅರ್ಥನೈಪುಣ್ಯದ (ಈiಟಿಚಿಟಿಛಿiಚಿಟ mಚಿಟಿಚಿgemeಟಿಣ) ಮಾತು ಬಂದಿದೆ.
ನನಗೆ ಇಷ್ಟವಾದ ಸೂಕ್ತಿಯೊಂದು ‘ಸಮಯೋಚಿತಪದ್ಯಮಾಲಿಕೆ’ಯಲ್ಲಿದೆ. ಅದೆಂದರೆ:
ಇದಮೇವ ಹಿ ಪಾಂಡಿತ್ಯಂ | ಚಾತುರ‍್ಯಮಿದಮೇವ ಹಿ ||
ಇದಮೇವ ಸುಬುದ್ಧಿತ್ತ್ವ | ಮಾಯಾದಲ್ಪತರೋ ವ್ಯಯಃ ||
ಆದಾಯಕ್ಕಿಂತ ಖರ್ಚು ಕಡಮೆಯಾಗಿರುವಂತೆ ನೋಡಿಕೊಳ್ಳುವುದೇ ಪಾಂಡಿತ್ಯ, ಜಾಣ್ಮೆ, ಬುದ್ಧಿವಂತಿಕೆ. ಈಗ ದೇಶದಲ್ಲಿ ಆಗುತ್ತಿರುವುದೇನು? ಅದಾಯಕ್ಕಿಂತ ಖರ್ಚು ಹೆಚ್ಚುತ್ತಿದೆ; ಭಂಡಾರದ ಹಣ ಅಪಾತ್ರರ ಪಾಲಿಗೆ ಹೋಗುತ್ತಿದೆ; ಸಾರ್ವಜನಿಕರೂ ಸರ್ಕಾರಗಳೂ ಸಾಲದ ಹುಚ್ಚುಹೊಳೆಯಲ್ಲಿ ತೇಲಿ ಹೋಗುತ್ತಿದ್ದಾರೆ. ಭ್ರಷ್ಟಾಚಾರದ ನಗ್ನನೃತ್ಯ ಸಾಗಿದೆ.
ನಮಗೆ ಈಗ ಬಂದಿರುವ ಕಷ್ಟಕ್ಕೆಲ್ಲ ಅರ್ಥನೈಪುಣ್ಯದ ಅಭಾವವೇ ಕಾರಣವೆಂದು ತೋರುತ್ತದೆ. ನಮ್ಮ ಗೃಹಸ್ಥಜೀವನ ಸಂಬಳ-ಬಡ್ತಿ, ಸಾಲ-ಕಂತು, ಅಸಲು-ಬಡ್ಡಿ, ಲಂಚ-ಭಕ್ಷೀಸು ಇವುಗಳ ಆಳಸುಳಿಯಲ್ಲಿ ಸಿಕ್ಕಿ ತಿರುಗುತ್ತಿದೆ. “ಸರಳಜೀವನ, ಉದಾತ್ತಚಿಂತನ” ಎಂಬ ಸ್ವರ್ಣಸೂತ್ರವನ್ನು ಕೈಬಿಟ್ಟು ಎಷ್ಟೋ ಕಾಲವಾಗಿದೆ. ನಯವಂಚಕ ವಾದ ಜಾಹಿರಾತುಪ್ರಪಂಚದ ಜೇಡನ ಬಲೆಗೆ ಸಿಕ್ಕಿ ಸಾಯುತ್ತಿರುವ ನೊಣವಾಗಿದ್ದೇವೆ, ನಾವು. ಚಿಂದಿ ಆಯುವ ಹುಡುಗನಿಂದ ಹಿಡಿದು ಸಾರ್ವಭೌಮ ಸರ್ಕಾರದವರೆಗೆ ಯಾವುದೋ ಭ್ರಮಾಲೋಕದಲ್ಲಿರುವಂತೆ, ಗಾಳಿಗುದುರೆಯ ಸವಾರಿ ಮಾಡುತ್ತಿರುವಂತೆ ತೋರುತ್ತಿದೆ. ಕೃಷಿಕರು ಕಾರ್ಮಿಕರು, ಉದ್ಯೋಗಿಗಳು ಉದ್ಯಮಿಗಳು, ಅಧಿಕಾರಿಗಳು ಗುಮಾಸ್ತರು, ವಿದ್ಯಾರ್ಥಿಗಳು ಶಿಕ್ಷಕರು ಎಲ್ಲರಿಗೂ ಈಗ ಹಣವೇ ಸರ್ವಸ್ವವಾಗಿದೆ. ಒಂದು ಕಾಲಕ್ಕೆ ಮನೆಯ ಯಜಮಾನ ಆಯಾ ದಿನದ ಜಮಾಖರ್ಚಿನ ಲೆಕ್ಕ ಬರೆದಿಟ್ಟು ಅರ್ಥನೈಪುಣ್ಯವನ್ನು ನಿಭಾಯಿಸುತ್ತಿದ್ದನು. ಈಗ ಹಣವೆಂದರೆ, ಯಾವ ಭಯವೂ ಇಲ್ಲ, ಗೌರವವೂ ಇಲ್ಲ. ‘ಕುರುಡು ಕಾಂಚಾಣ’ ತನ್ನ ಕಾಲಿಗೆ ಬಿದ್ದವರನ್ನು ತುಳಿಯುತ್ತಿಲ್ಲ. ನಾವೇ ಹುರುಡುಗಟ್ಟಿ ಅದನ್ನು ಕಾಲಡಿಗೆ ಬೀಳಿಸಿಕೊಂಡು ತುಳಿಯುತ್ತಿದ್ದೇವೆ; ನಿತ್ಯವೂ ಹಣದ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಯುತ್ತಿದೆ. ಸರಳಜೀವನದ ಸೌಂದರ‍್ಯ ಮೌಲ್ಯ ಮಧುರಪರಿಕರಗಳೆಲ್ಲ ಈಗ ಭೋಗಜೀವನದ ಮೋಜು-ಮೇಜವಾನಿಗಳ, ಪಾನಗೋಷ್ಠಿಗಳ ಸಲುವಾಗಿ ಹಿಮ್ಮೆಟ್ಟಿವೆ.
ಇಷ್ಟು ಮಾತುಗಳನ್ನು ಇಲ್ಲಿ ಆಡಿರುವುದಕ್ಕೆ ನನಗಿದ್ದ ಒತ್ತಡವೆಂದರೆ, ನಮ್ಮ ಕೃಷಿಕರ ಇಂದಿನ ಕರುಣಾಜನಕವಾದ ಸ್ಥಿತಿ. ಕಾರ್ಮಿಕರೂ ಸೇರಿದಂತೆ ಬದುಕು ಮಾಡುತ್ತಿರುವ ಎಲ್ಲರಿಗೂ ಇದು ಯಾವುದೋ ತರತಮ ಪ್ರಮಾಣದಲ್ಲಿ ಅನ್ವಯಿಸುತ್ತದೆ. ಈ ಬಾರಿಯ ಮೈಸೂರು ದಸರಾ ಮಹೋತ್ಸವವನ್ನು ಉದ್ಘಾಟಿಸಿದ ಪ್ರಗತಿಪರ ರೈತರಾದ ಶ್ರೀ ಪುಟ್ಟಯ್ಯನವರ ವಿವೇಕದ ಮಾತುಗಳನ್ನು ತಾವೆಲ್ಲ ಗಮನಿಸಿಯೇ ಇರುತ್ತೀರಿ. ಕುಟುಂಬ ಜೀತದಿಂದ ಕೂಲಿಗೆ, ಕೂಲಿಯಿಂದ ಕೃಷಿಗೆ ನಡೆದುಬಂದ ದಾರಿಯ ಯಶೋಗಾಥೆಯ ಹಿಂದೆ ವಿವೇಚನೆಯಿದೆ, ಪರಿಶ್ರಮವಿದೆ, ವ್ಯಸನಮುಕ್ತವಾದ ಸದಾಶಯಗಳಿವೆ. ಇಂಥ ಆದರ್ಶ ಎಂದಿಗೂ ಮಾನ್ಯವೇ. ಅವರಿಗೆ ಸಾಧ್ಯವಾದ್ದು, ಇತರರಿಗೆ ಏಕೆ ಸಾಧ್ಯವಾಗದು?
ಸಂಚಿ ಹೊನ್ನಮ್ಮನ ಆಶಯವಿದು:
ಕನ್ನಡನಾಡೊಳು ಕಲಿಯುಗ ಪುಗದಿರ್ಕೆ | ಕನ್ನಡಿಗರು ಘನರಕ್ಕೆ
ಉನ್ನತಿವಡೆಗೆಯಗರ ದೇಗುಲಗಳು | ಸನ್ನುತಿವಡೆಗೆ ಸತ್ರಗಳು ||
ಮಳೆಯಕ್ಕೆ ಕಾಲಕಾಲಕೆ ದೇವರೊಲವಿಂದ | ಬೆಳೆಗೈಗೆ ಪೆರ್ಚುಗೆಯಕ್ಕೆ
ಇಳೆಯೊಳು ಪತಿ ಪುತ್ರ ಪೌತ್ರ ಸಂಪದದೊಡ | ನೊಳುವೆಂಡಿರೊಪ್ಪದೊಳಿರ್ಕೆ||
ಇದನ್ನು ಸಾಧಿಸೋಣ. ಚಳವಳಿ ಹೋರಾಟ ಆತ್ಮಹತ್ಯೆಗಳು ಬೇಡ.

ಕರ್ನಾಟಕ ಇತಿಹಾಸದ ದಸರಿದೊಡಕುಗಳು
ಒಂದು ಕಾಲದ ಇತಿಹಾಸದ ಅಧ್ಯಯನಗಳಲ್ಲಿ ರಾಜಕೀಯ ಮತ್ತು ಆಡಳಿತ ಸಂಬಂಧವಾದ ವಿದ್ಯಮಾನಗಳಿಗೇ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಿದ್ದುದು ಕಾಣುತ್ತದೆ. ಅನಂತರದಲ್ಲಿ ಸಾಮಾಜಿಕ ಸಾಂಸ್ಕೃತಿಕ ಸಂಗತಿಗಳು ಮುನ್ನೆಲೆಗೆ ಬಂದುವು. ಆದರೆ ರಾಜಕೀಯ ಕೋಲಾಹಲಕರ ವಿದ್ಯಮಾನಗಳ ನಡುವೆ ಕಣ್ಣಿಗೆ ಬೀಳದಂತೆ ಬೆದರಿ ಮುದುರಿ ಕುಳಿತಿರುವ ಸಾಮಾನ್ಯಪ್ರಜೆಯ ಸ್ಥಿತಿಗತಿಗಳ ತಿಳಿವಳಿಕೆ ಹೆಚ್ಚು ಹೆಚ್ಚು ಶೋಧನೆಯ, ಪ್ರಕಟನೆಯ ನೆಲೆಗಳಿಗೆ ಇನ್ನು ಮೇಲೆ ಬರಬೇಕಾಗಿದೆ.
ರಾಜ ಒಬ್ಬ, ಪ್ರಜೆ ಸಾವಿರ ಎನ್ನುವ ತಥ್ಯವನ್ನರಿತಾಗ, ಈ ಸೆಳೆತದ ಸೆಲೆ ತಿಳಿದೀತು. ಜನಸಾಮಾನ್ಯರ ದೈನಂದಿನ ವ್ಯಾವಹಾರಿಕ ಸಂಗತಿಗಳನ್ನು, ಆಚರಣೆಗಳನ್ನು, ಆಲೋಚನೆಗಳನ್ನು, ಒಕ್ಕೂಟಗಳನ್ನು, ಸ್ನೇಹಸೌಹಾರ್ದಗಳನ್ನು, ಅವು ಎಷ್ಟೇ ಸಣ್ಣವಿರಲಿ, ಗುರುತಿಸಿ ಕೂಡಿಸಿ ವ್ಯಾಖ್ಯಾನಿಸಿದಾಗಲೇ ದಿಟವಾಗಿ ಒಂದು ನೆಲದ ಇತಿಹಾಸ ಎನ್ನುವುದು ಸ್ಪಷ್ಟಪಡುತ್ತದೆ, ಸಾರ್ಥಕವಾಗುತ್ತದೆ. ಎಡಪಂಥೀಯರು ಇಷ್ಟಪಡುವ ಈ ದಿಕ್ಕಿನ ಅಧ್ಯಯನ ಪ್ರಗತಿಪರ ಸಮಾಜದ ಬೆಳೆವಣಿಗೆಗೆ ಅವಶ್ಯವೆಂದೇ ಹೇಳಬಹುದು. ನಮಗೆ ಇಂದು ಬೇಕಾದ್ದು ಸನಾತನ-ವಿನೂತನಗಳನ್ನು ಒಗ್ಗೂಡಿಸುವ, ಶ್ರೀಮಂತ-ದರಿದ್ರರಿಬ್ಬರನ್ನೂ ಸಾಮಾಜಿಕರೆಂದೇ ತಿಳಿಯುವ, ವರ್ಣ-ವರ್ಗವಿದ್ವೇಷಗಳಿಗೆ ಅವಕಾಶ ಮಾಡದ ಒಂದು ಸಮನ್ವಯ ಕೌಶಲದೃಷ್ಟಿಯ ಇತಿಹಾಸ; ನಡೆದುಹೋದ ಸಂದರ್ಭ ಗಳನ್ನು ನಡೆದ ಕಾಲಘಟ್ಟಗಳ ಕಾಲಧರ್ಮಕ್ಕೆ, ಒತ್ತಡಗಳ ಇಕ್ಕಟ್ಟಿಗೆ ಅನುಸಾರವಾಗಿ, ವ್ಯಕ್ತಿ ಸಮುದಾಯಗಳ ವರ್ತನೆಗಳನ್ನು ಸಹ ಅದಕ್ಕೆ ಅನುಗುಣವಾಗಿ, ಮನೋವಿಕಾರ ವಿಲ್ಲದೆ ಮಮಕಾರವಿಲ್ಲದೆ ನಿರೂಪಿಸುವ ಸತ್ಯನಿಷ್ಠ ಇತಿಹಾಸಕಾರ. ಆತ ಮಾತ್ರವೇ ಸತ್ಯವನ್ನು ಕಾಣಬಲ್ಲನು. ವಸ್ತುರಂಜನೆ ಭಾವವ್ಯಂಜನೆಗಳಿಗೆ ಇಲ್ಲಿ ಅವಕಾಶವಿಲ್ಲ; “ಇದು ಹಿಡಿ”, “ಅದು ಬಿಡು” ಎನ್ನುವುದು ಇಲ್ಲಿ ಸಲ್ಲ.
ನನಗೆ ತಿಳಿದ ಮಟ್ಟಿಗೆ ನಮ್ಮ ಹಳೆಯ ಪೀಳಿಗೆಯ ಇತಿಹಾಸಕಾರರು ಪಕ್ಷ ವಹಿಸಿದವರಲ್ಲ, ದಿಟ ಬಚ್ಚಿಟ್ಟವರಲ್ಲ, ಮೆಚ್ಚಿ ಮೈಮರೆತವರಲ್ಲ. ಅವರಿಗೆ ಸತ್ಯಕಥನವಷ್ಟೇ ಕರ್ತವ್ಯ; ಸಾಕ್ಷ್ಯಾಧಾರಗಳಷ್ಟೇ ಪ್ರಮಾಣ. ಉಪಪತ್ತಿಗಳಿಗಾಗಿ ಅವರು ಪಾಡುಪಟ್ಟಿದ್ದರೂ ಉದ್ರೇಕದಿಂದ ತೋರಿದಂತೆ ಆಡಿದವರಲ್ಲ. ಅವರು ಸಾಮಾನ್ಯವಾಗಿ ವಿಷಯಗಳನ್ನು ಮುಖಾಮುಖಿಮಾಡಿ ಹೋರಾಡುತ್ತಿದ್ದರು. ವ್ಯಕ್ತಿಗತವಾಗಿ ಕಚ್ಚಾಡುತ್ತಿರಲಿಲ್ಲ. ಅವರು ತಪ್ಪನ್ನು ಒಪ್ಪಿಕೊಳ್ಳುತ್ತಿದ್ದರು, ತಿದ್ದಿಕೊಳ್ಳುತ್ತಿದ್ದರು.
ಐತಿಹ್ಯಗಳೂ ಪುರಾಣಕಥೆಗಳೂ, ಕೆಲಮಟ್ಟಿಗೆ ಸಾಹಿತ್ಯಕೃತಿಗಳೂ ಮತೀಯ ಅಭಿನಿವೇಶಗಳಿಗೆ ಎಡೆಮಾಡುತ್ತವೆ. ವ್ಯಕ್ತಿಮಹಿಮೆಗಳು ವಿಭೂತಿಪೂಜೆಗೆ ದಾರಿಮಾಡುತ್ತವೆ. ಸ್ಥಳಮಾಹಾತ್ಮ್ಯಗಳು ಸ್ಥಳದ ವೈಭವೀಕೃತ ಕಥನಗಳಾಗಿರುತ್ತವೆ. ಇಲ್ಲಿಂದ ಹುಟ್ಟಿ ಹಬ್ಬಿಕೊಳ್ಳುವ ಅತಿರಂಜಿತ ಕಲ್ಪನೆಗಳನ್ನು ತೊಡೆದುಹಾಕುವುದು ಇತಿಹಾಸಕಾರರಿಗೆ ಒಂದು ದೊಡ್ಡ ಆಹ್ವಾನ. ಐತಿಹ್ಯಗಳನ್ನೂ ಪುರಾಣಕಥೆಗಳನ್ನೂ ಸ್ಥಳಮಾಹಾತ್ಮ್ಯಗಳನ್ನೂ ಅದೊಂದು ಭಿನ್ನವಾದ ಕಾವ್ಯಸತ್ಯದ ನೆಲೆಯಲ್ಲಿ, ಜನತೆಯ ಧಾರ್ಮಿಕಶ್ರದ್ಧೆಯ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ; ಸುಳ್ಳಿನ ಕಂತೆಯೆಂದು ತಳ್ಳಿಹಾಕುವಂತಿಲ್ಲ. ಭಾರತೀಯ ಪುರಾಣಗಳು ಭಾರತೀಯ ಮೌಲ್ಯಗಳಿಗೆ ಭಾರತೀಯ ಪ್ರತಿಭೆ ಸೃಷ್ಟಿಸಿದ ಪ್ರತಿಮಾಪ್ರಪಂಚ ಎನ್ನುತ್ತಿದ್ದರು, ನನ್ನ ಗುರುಗಳಾದ ಕುವೆಂಪು ಅವರು. ಎಲ್ಲ ಧರ್ಮಗಳಲ್ಲಿಯೂ ಎಲ್ಲ ದೇಶಗಳಲ್ಲಿಯೂ ಇದು ಹೀಗೆಯೇ. ಶುದ್ಧ ಇತಿಹಾಸಿಕ ಸಾಕ್ಷ್ಯಾಧಾರಗಳಿಂದ ಇತಿಹಾಸರಚನೆಯ ಕೆಲಸವನ್ನು ತಮ್ಮ ಸರ್ವಶಕ್ತಿಯನ್ನೂ ವಿನಿಯೋಗಿಸಿ ಇತಿಹಾಸಕಾರರು ಮಾಡಬೇಕಾಗುತ್ತದೆ. ಇದಕ್ಕೆ ಪ್ರಾಚೀನ ಕಾಲದ ರೀತಿ ರಿವಾಜುಗಳು ಮಾತ್ರವಲ್ಲದೆ, ಭಾಷಾಶೈಲಿಗಳ ಸಮೀಚೀನವಾದ ತಿಳಿವಳಿಕೆಯೂ ಬೇಕಾಗುತ್ತದೆ.
ವಿಷಾದದ ಸಂಗತಿಯೆಂದರೆ, ನಮ್ಮ ಬಹುಪಾಲು ಇತಿಹಾಸಕಾರರಿಗೆ ಇರಬೇಕಾದ ಪ್ರಮಾಣದಲ್ಲಿ ಭಾಷಾಜ್ಞಾನ ಇಲ್ಲದೆ ಹೋಗಿರುವುದು ಹಾಗೂ ಭಾಷಾಜ್ಞಾನವಿರುವವರಿಗೆ ಇತಿಹಾಸಸಂದರ್ಭಗಳ, ವಿಧಿವಿಧಾನಗಳ ವ್ಯಾಪಕಪರಿಚಯ ಆಗದೆ ಇರುವುದು. ಆರ್. ನರಸಿಂಹಾಚಾರ‍್ಯರಂಥ, ಎ. ವೆಂಕಟಸುಬ್ಬಯ್ಯನವರಂಥ, ಎಂ. ಗೋವಿಂದ ಪೈಗಳಂಥ ಸವ್ಯಚಾಚಿಗಳ ಕೊರತೆ ಕರ್ನಾಟಕದಲ್ಲಿ ಬಹಳ ಕಾಲದಿಂದ ಕಾಡುತ್ತಿದೆ.
ನಮ್ಮ ಇತಿಹಾಸಕಾರರು ಕರ್ನಾಟಕದ ಅರಸುಮನೆತನಗಳ ವಿಚಾರವನ್ನು ಇನ್ನೂ ವಿಶದವಾಗಿ ನಿರೂಪಿಸಲು ‘ಪಂಪಭಾರತ’, ‘ಗದಾಯುದ್ಧ’, ‘ಕಾವ್ಯಾವಲೋಕನ’, ‘ಸೂಕ್ತಿಸುಧಾರ್ಣವ’, ‘ರಾಮನಾಥಚರಿತೆ’, ‘ಶಿವತತ್ತ್ವ ಚಿಂತಾಮಣಿ’, ‘ರಾಜೇಂದ್ರವಿಜಯ’, ‘ಕಾವ್ಯಸಾರ’, ‘ಚಿಕದೇವರಾಜ ವಂಶಾವಳಿ’ ಮತ್ತು ‘ಚಿಕದೇವರಾಜ ವಿಜಯ’, ಅನೇಕ ವೀರಶೈವ ಪುರಾಣಗಳು ಮತ್ತು ಕಾವ್ಯಗಳು, ‘ಕೆಳದಿನೃಪ ವಿಜಯ’, ‘ಕಂಠೀರವನರಸರಾಜ ವಿಜಯ’, ‘ಅಪ್ರತಿಮವೀರಚರಿತೆ’, ‘ರಾಜಾವಳೀಕಥೆ’, ‘ರಾಜೇಂದ್ರನಾಮೆ’ ಮತ್ತು ಹಲವಾರು ಪಾಳೆಯಗಾರರ ಚರಿತ್ರೆಗಳು, ಕೈಫಿಯತ್ತುಗಳು ಇವನ್ನು ಇನ್ನೂ ಚೆನ್ನಾಗಿ ಶೋಧಿಸಬೇಕಾಗಿದೆ.
ಇನ್ನೊಂದು ಮಾತು. ಪ್ರಾಚೀನ ಮತ್ತು ಮಧ್ಯಕಾಲೀನ ಸಾಹಿತ್ಯದ ಹಲವು ಕೃತಿಗಳಲ್ಲಿ, ಈಚೆಯ ಮೈಸೂರು ಒಡೆಯರ ಕಾಲದ ರಚನೆಯಲ್ಲಿ, ಬಗೆಬಗೆಯ ಹೆಸರಿನ ನಾಣ್ಯಗಳ ಉಲ್ಲೇಖಗಳಿವೆ. ಅವುಗಳನ್ನು ವಿವರಿಸಿ, ಐತಿಹಾಸಿಕ ಮಹತ್ತ್ವವನ್ನು ತಿಳಿಸುವ ಕೆಲಸಗಳೇ ಇನ್ನೂ ಸರಿಯಾಗಿ ನಡೆದಿಲ್ಲ. ‘ವಡ್ಡಾರಾಧನೆ’ಯಿಂದ ಹಿಡಿದು ‘ಮಾನೌಮಿಯ ಚೌಪದ’ದ ವರೆಗೆ ಇದು ಕಾಲವ್ಯಾಪ್ತಿಯುಳ್ಳದ್ದು. ನಾಣ್ಯಶಾಸ್ತ್ರಜ್ಞರು ಈ ಪ್ರಾಚೀನ ಕಾವ್ಯಗಳ ಕೆಸರುಗದ್ದೆಯ ಓಟಕ್ಕೆ ಕೊಂಚ ಹೆದರಿರುವಂತಿದೆ.
ಮತ್ತೊಂದು ಮಾತು: ೧೯-೨೦ನೆಯ ಶತಮಾನಗಳಲ್ಲಿ, ಎಂದರೆ ಸುಮಾರು ೨೦೦ ವಷಗಳ ವ್ಯಾಪ್ತಿಯಲ್ಲಿ ಆಗಿಹೋದ ಗಣ್ಯ ಸಾಮಾಜಿಕರ, ವಿದ್ವಾಂಸರ ವಿಚಾರ ಹೆಸರುಗಳ ಮಟ್ಟಿಗೆ ತಿಳಿದಿರುವುದೇ ಸಾಮಾನ್ಯ; ಕಾರ್ಯಚಟುವಟಿಕೆಗಳ, ಜೀವನ ವಿವರಗಳ ಮಾಹಿತಿ ಏನೆಂದರೆ ಏನೂ ಇಲ್ಲ. ಇದು ದುಃಖದ ಸಂಗತಿ. ಆ ಸಾಮಾಜಿಕರ, ವಿದ್ವಾಂಸರ ಪೀಳಿಗೆಯವರಿಗೆ ಸಹ ಇದು ಬೇಕಿಲ್ಲದ ಸಂಗತಿ ಎನ್ನುವಂತಿದೆ. “ಅವರು ಸಂಪಾದಿಸಿರುವ ಸ್ವತ್ತನ್ನು ಅನುಭವಿಸುತ್ತಿರುವ ಅವರ ವಂಶಸ್ಥರೇ ಅವರ ವಿಷಯದಲ್ಲಿ ಹೆಮ್ಮೆ ಇಲ್ಲದವರಾಗಿರುತ್ತಾರೆ. ತಮ್ಮ ಪೂರ್ವಿಕರ ಖ್ಯಾತಿಯನ್ನು ಕಾಪಾಡಬೇಕೆಂಬ ಪಿತೃಭಕ್ತಿ ಸಹ ನಮ್ಮಲ್ಲಿ ಅಪರೂಪವಾಗಿದೆ” ಎಂದಿರುವ ಡಿವಿಜಿ ಅವರ ಮಾತು (ಜ್ಞಾಪಕ ಚಿತ್ರಶಾಲೆ, ಸಂಪುಟ ೧, ಉಪೋದ್ಘಾತ) ಇಲ್ಲಿ ನೆನಪಿಗೆ ಬರುತ್ತದೆ. ಈ ಸಂಬಂಧದಲ್ಲಿ ನನಗಾಗಿರುವ ಅನುಭವಗಳನ್ನೇ ಬರೆಯಹೊರಟರೆ ಅದೇ ಒಂದು ಪುಸ್ತಕವಾಗುವುದು.
ಮೌಖಿಕ ಚರಿತ್ರೆಗೆ ವಿದೇಶೀಯರು ವಿಶೇಷ ಮಹತ್ತ್ವಕೊಡುತ್ತಾರೆ; ನಮಗೆ ಮಾದರಿಯಾಗಿದ್ದಾರೆ. ನಮ್ಮ ಇತಿಹಾಸ ಸಂಶೋಧಕರು ತಮ್ಮ ಕ್ಷೇತ್ರಕಾರ್ಯದ ಭಾಗವಾಗಿ ಮೌಖಿಕ ಚರಿತ್ರೆಗಳ ಸಂಗ್ರಹವನ್ನೂ ಮಾಡಬೇಕೆಂದು ನನ್ನ ಬಿನ್ನಹ. ಮಾಸ್ತಿಯವರ ಹಲವು ಸಣ್ಣಕತೆಗಳು ಹುಟ್ಟಿದ್ದು ಇಂತಹ ಸಂಗ್ರಹದ ಮೂಲಕವೇ. ಈ ಕೆಲಸ ಇತಿಹಾಸಕ್ಕೆ ಮಾತ್ರವಲ್ಲ, ಸಾಮಾಜಿಕ ಭಾಷಿಕ ಅಧ್ಯಯನಕ್ಕೆ ಕೂಡ ಬೇಕಾದ್ದೇ.
ಈಚೆಗೆ ನಮ್ಮ ಭಾಷಾಪಂಡಿತರೂ ಇತಿಹಾಸಕಾರರೂ ಅಂಗೀಕೃತವಾದ ಅನೇಕ ಅಭಿಪ್ರಾಯಗಳನ್ನು, ಸಂಶೋಧನೆ ಸಿದ್ಧಾಂತಗಳನ್ನು ವ್ಯತ್ಯಯಗೊಳಿಸುವಂಥ ದುರ್ಬಲವೂ ಅಸ್ಪಷ್ಟವೂ ಆದ ಆಧಾರಗಳನ್ನು ಮುಂದೆಮಾಡಿ ತೀಕ್ಷ್ಣವಾದ ಪ್ರತಿಕ್ರಿಯೆಗಳಿಗೆ ವೀಳ್ಯ ಕೊಡುತ್ತಿದ್ದಾರೆ. ಕೆಲವು ವೇಳೆ ಮತಾಭಿವೇಶ ಉಬ್ಬರದಲ್ಲಿದ್ದು, ಇನ್ನು ಕೆಲವು ವೇಳೆ ಹಳತೆಂಬುದೆಲ್ಲ ತ್ಯಾಜ್ಯವೆಂಬ ಅಬ್ಬರವೆದ್ದು ಸಂಶೋಧನೆಯ ಹೊಕ್ಕರಣೆ ಕೆಸರೆದ್ದ ಹೊಂಡವಾಗುತ್ತಿದೆ. ಅಲ್ಲದೆ ಕೆಲವರು ಆಡಿದರೆ ಹೇಗೋ, ಬರೆದರೆ ಹೇಗೋ ಎಂಬ ಹಿಂಜರಿಕೆಯಿಂದಿರುತ್ತಿದ್ದು, ಸತ್ಯ ಹುಗಿದುಹೋಗಿ ಮಿಥ್ಯೆ ಇತಿಹಾಸವಾಗಿ ವಿಜೃಂಭಿಸುತ್ತಿದೆ. ಉದಾಹರಣೆಗೆ ಕೆಲವು ಅಗ್ನಿಕಣಗಳು:
ವಿಗ್ರಹಾರಾಧನೆ – ದೇವಾಲಯನಿರ್ಮಾಣ ಚರ್ಚೆಗೆ ವಿಷಯವೇ ಅಲ್ಲವೇ?; ನಂಬಿಕೆ ಯಾವುದು, ಮೂಢನಂಬಿಕೆ ಯಾವುದು?; ಉತ್ತರಭಾರತದಿಂದ ಕರ್ನಾಟಕಕ್ಕೆ ಬಂದವನು ಮೌರ‍್ಯ ಚಂದ್ರಗುಪ್ತನೇ, ಸಂಪ್ರತಿ ಚಂದ್ರಗುಪ್ತನೇ?; ಶಂಕರಾಚಾರ‍್ಯರೂ ರೇವಣಸಿದ್ಧರೂ ಸಮಕಾಲೀನರೇ ಅಲ್ಲವೇ?; ಅಲ್ಲಮ-ಬಸವ-ಅಕ್ಕಮಹಾದೇವಿಗಳ ಬದುಕಿನ ವಿವರಗಳೇನು?; ಕನಕ-ಪುರಂದರರ ಕೀರ್ತನೆಗಳ ಮತ್ತು ಕುಮಾರವ್ಯಾಸ-ಚಾಮರಸರ ಸಾದೃಶ್ಯ ಬಾಂಧವ್ಯಗಳ ವಿಚಾರದ ತಥ್ಯವೇನು?; ವಿದ್ಯಾರಣ್ಯರು-ಕ್ರಿಯಾಶಕ್ತಿ ವಿದ್ಯಾರಣ್ಯರು ಇವರಲ್ಲಿ ಯಾರು ವಿಜಯನಗರದ ಸ್ಥಾಪನೆಯಲ್ಲಿ ಪಾತ್ರ ವಹಿಸಿದರು?; ಕರ್ನಾಟಕಕ್ಕೆ ರಾಮಾನುಜರ ಆಗಮನ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಏಕೆ? ಸಾಯಣ-ಮಾಧವ ಅನ್ಯಾನ್ಯತೆಯ ಸಮಸ್ಯೆ, ಪ್ರಾಚೀನ ಕನ್ನಡ ಶಬ್ದ-ಶಾಸನ ಯಾವುದು? ಲಿಂಗಾಯತವೇ-ವೀರಶೈವವೇ? ಟಿಪ್ಪು-ಹೈದರ್ ಆಡಳಿತ ಮತ್ತು ಜೀವನದೃಷ್ಟಿಯಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶಗಳಿವೆಯೇ?

ಈ ಪಟ್ಟಿ ಬೆಳಸಬಹುದು. ಆದರೆ ಅಗತ್ಯವಿಲ್ಲ. ಇವುಗಳ ಚರ್ಚೆಯಲ್ಲಿ ಆಗಿರುವ ಕೋಲಾಹಲಗಳು ಅಷ್ಟಿಷ್ಟಲ್ಲ. ಸ್ವಹಿತಾಸಕ್ತಿ, ಸ್ವಮತಾಸಕ್ತಿಗಳನ್ನು ದೂರವಿಟ್ಟು, “ನೆನೆಯದಿರಣ್ಣ ಸಂಗತದೊಳಿನ್ ಪೆಱತೇನುಮನೊಂದೆ ಚಿತ್ತದಿನ್ | ನೆನೆವೊಡೆ ಸತ್ಯಮನ್ ನೆನೆಯ” ಎಂಬ ಆದರ್ಶದಲ್ಲಿ ಮನಸ್ಸಿಟ್ಟು ಸಾಗಬೇಕು.

ಕನ್ನಡದ ಮಾತು, ಬರಹ ಕನ್ನಡವೇ?
ಯಾವುದು ಹಳಗನ್ನಡ, ಯಾವುದು ಹೊಸಗನ್ನಡ ಎಂಬ ಚರ್ಚೆ ಆಯಾ ಕಾಲಘಟ್ಟಗಳಲ್ಲಿ ಅಂದಂದಿನ ಸಂದರ್ಭ ಹಿಡಿದು ನಡೆಯುತ್ತ ಬಂದಿದೆ; ಸಂಸ್ಕೃತ ಕನ್ನಡಗಳ ಮಿಶ್ರಣ ಹೇಗಿರಬೇಕೆಂಬ ಚರ್ಚೆಯೂ ಜೊತೆಜೊತೆಗೇ ನಡೆದಿದೆ. ಇದನ್ನು ಈಗ ನಾನು ವಿಚಾರ ಮಾಡುತ್ತಿಲ್ಲ. ನನ್ನ ಆತಂಕವೆಂದರೆ, ನಾವು ದಿಟವಾಗಿ ಕನ್ನಡದಲ್ಲಿ ಮಾತಾಡುತ್ತಿಲ್ಲ, ಬರೆಯುತ್ತಿಲ್ಲ, ಯೋಚನೆ ಚಿಂತನೆಗಳನ್ನು ಮಾಡುತ್ತಿಲ್ಲ ಎನ್ನುವುದು. ರಾಜಕೀಯ ಕಾರಣಗಳಿಂದಾಗಿ ಕನ್ನಡದ ಭೂಪಟ ಕರ್ನಾಟಕ ಏಕೀಕರಣದ ಅನಂತರವೂ ಕುಗ್ಗಿ ಕಿರಿದಾಗಿದೆ. ಇದೇ ಕಾರಣದಿಂದಾಗಿ ಮಹಾರಾಷ್ಟ್ರ, ನೈಜಾಂ ಪ್ರಾಂತ (ಆಂಧ್ರಪ್ರದೇಶ), ತಮಿಳುನಾಡು, ಕೇರಳ ಇಲ್ಲಿಯ ಆಡಳಿತದ ಕಟ್ಟುಕಟ್ಟಳೆಗಳು ಕನ್ನಡ ಭಾಷೆಯ ಮೇಲೂ ಸವಾರಿ ಮಾಡುತ್ತ, ಕನ್ನಡವು ಕನ್ನಡವೇ ಎಂದು ಕೇಳುವಂತಾಗಿದೆ. ಒಂದು ಕಾಲಕ್ಕೆ ಸಂಸ್ಕೃತ ಪ್ರಾಕೃತಗಳು ತೊರೆಯ ನೆರೆಯಂತೆ ಉಕ್ಕಿಬಂದು ಕನ್ನಡದ ನುಡಿಸಿರಿಯನ್ನು ಒಕ್ಕಲಿಕ್ಕಿತು. ಆಗ ಕನ್ನಡ ಹಳ್ಳಿಯವರ ಆಡುಮಾತಿನ ಹಾಗೂ ಸಾಹಿತ್ಯದ ಮೊರೆಹೊಕ್ಕು ಬದುಕುಮಾಡಿತು; ಸಮಸಂಸ್ಕೃತ ತದ್ಭವಗಳ ಸ್ವೀಕರಣದಿಂದ ಮಾರ್ಗಕಾವ್ಯಗಳು ಗರಿಗೆದರಿದುವು. ಉರ್ದು-ಪಾರಸಿಗಳ, ಇಂಗ್ಲಿಷ್-ಹಿಂದಿಗಳ ಹೇರಿಕೆ ಹೆಚ್ಚಿದ ಮೇಲಂತೂ ಈಗ ಕನ್ನಡದ ಕೊರಳಲ್ಲಿ ಉಸಿರು ಸಿಕ್ಕಿಕೊಂಡಂತಾಗಿದೆ. ಚಿಕದೇವರಾಜ ಒಡೆಯರ ಕಾಲದಿಂದೀಚೆಯ ಬೆಳವಣಿಗೆಯಲ್ಲಿ ಸಂಸ್ಕೃತಕಾವ್ಯಗಳ ಧೋರಣೆಯನ್ನು ಹತ್ತಿಕ್ಕಿ ಸಾಂಗತ್ಯ ಷಟ್ಪದಿಗಳು ಕನ್ನಡತನವನ್ನು ಮೆರೆದುವು, ದೇಸಿ ಕಾವ್ಯಗಳ ಮೆರೆವಣಿಗೆ ಸಾಗಿತು. ಮೈಸೂರು ಸಂಸ್ಥಾನದಲ್ಲಿ ಹೈದರ್-ಟಿಪ್ಪು ಆಳಿಕೆಯೊಂದಿಗೆ ಆಡಳಿತ ಮಾತ್ರವಲ್ಲದೆ ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಕೂಡ ಉರ್ದು-ಪಾರಸಿಗಳು ಆಳಿಕೆ ನಡಸಿದುವು. ದೇಶದಲ್ಲಿ ಇಂಗ್ಲಿಷ್ ಶಿಕ್ಷಣಕ್ಕೆ ಪ್ರಾಶಸ್ತ್ಯದೊರೆತ ಮೇಲಂತೂ, ಅರಬನು ಮಲಗುವ ಡೇರೆಯೊಳಗೆ ಒಂಟೆ ಮೆಲ್ಲಗೆ ಮೆಲ್ಲಗೆ ತೂರಿಕೊಂಡಂತೆ ಶಾಲಾಕಾಲೇಜು ಶಿಕ್ಷಣವೆಲ್ಲ ಇಂಗ್ಲಿಷ್‌ಮಯವಾಗಿ, ರಾಷ್ಟ್ರಭಾಷೆ ಸಂಪರ್ಕಭಾಷೆಗಳ ನೆಪದಲ್ಲಿ ಹಿಂದೀಮಯವಾಗಿ, ಕನ್ನಡ ಗರಡಿಯಾಳು ನರಪೇತಲ ನಾರಾಯಣನಾದನು. ಈಗ ಮಕ್ಕಳು ಕರ್ನಾಟಕ ಸಂಗೀತದ ಸ್ವರಪ್ರಸ್ತಾರವನ್ನು ಕೂಡ ಸರಿಗಮ ಎಂದು ಬರೆಯದೆ S ಖ ಉ ಒ ಎಂದು ಬರೆದುಕೊಂಡು ಕಲಿಯುತ್ತಿದ್ದಾರೆ. ಪಕ್ಕವಾದ್ಯಗಳ ಧ್ವನಿಯ ಅಬ್ಬರದಲ್ಲ್ ಸಂಗೀತದ ಸಾಹಿತ್ಯವೂ ಸ್ವಾದವೂ ಮುಚ್ಚಿಹೋಗುತ್ತಿದೆ. ಪಂಪ-ಕುಮಾರವ್ಯಾಸ-ರತ್ನಾಕರವರ್ಣಿಯ, ಅಲ್ಲಮ-ಬಸವ ಮೊದಲಾದ ವಚನಕಾರರ, ಕನಕ-ಪುರಂದರ ಮೊದಲಾದ ಹರಿದಾಸರ ಕನ್ನಡ ಗತಪ್ರಾಯವಾಯಿತು, ಮೃತಪ್ರಾಯವಾಯಿತು. ಈ ಶ್ರೇಣಿಯಲ್ಲಿ ಬರುವವರು ಸಹಜವಾಗಿ, ಸುಂದರವಾಗಿ ಬಳಸಿದ ಅಚ್ಚಗನ್ನಡ ದೇಸಿಗನ್ನಡ ತಿರುಳ್ಗನ್ನಡ ಅಪರಿಚಿತ ಎನ್ನುವಂತಾಯಿತು. ಈಗ ಈ ಕನ್ನಡವನ್ನು ಯಾರಾದರೂ ಹುಡುಕಿ ತರಬೇಕಾಗಿದೆ.
ಇದು ಪಂಪನ ಕನ್ನಡ : ಸಂದರ್ಭ ಪಾಂಡುವಿನ ಸಾವು ಕಂಡು ಕುಂತಿ ಗೋಳಾಡಿದ್ದು:
ಕೊಂತಿ ನೆಲದೊಳ್ ಮೆಯ್ಯನೀಡಾಡಿ ನಾಡಾಡಿಯಲ್ಲದೆ ಪಳಯಿಸಿ-
ಅಡವಿಯೊಳೆನ್ನುಮನೆನ್ನೀ | ನಡಪಿದ ಶಿಶುಗಳುಮನಿರಿಸಿ ನೀನ್ ಪೇೞದೆ ಪೋ
ದೊಡಮೇನೊ ನಿನ್ನ ಬೞಯನೆ | ನಡೆತರ್ಪೆನ್ ನಿನ್ನನರಸ ಬಿಸುಟೆಂತಿರ್ಪೆನ್||
ಇಲ್ಲಿ ‘ಶಿಶು’ ಒಂದೇ ಸಂಸ್ಕೃತಶಬ್ದ.
ಅದೇ ಸಂದರ್ಭಲ್ಲಿ ತಪಸ್ವಿಗಳು ಕುಂತಿಯನ್ನು ಸಮಾಧಾನಮಾಡಿದ್ದು :
ಕೞದವರ್ಗೞ್ವುದೞ್ತೊಡವರೇೞ್ವೊಡಮಂತವರಿನ್ ಬೞಕ್ಕೆ ತಾ
ಮುೞವೊಡಮೇೞರಂತವರಣಮ್ ತಮಗಮ್ ಬರ್ದುಕಿಲ್ಲ ಧರ್ಮಮನ್
ಗೞಯಿಸಿಕೊಳ್ವುದೊಂದೆ ಚದುರಿಂತುಟು ಸಂಸೃತಿಧರ್ಮಮೇಕೆ ಬಾ
ಯೞವುದಿದೇಕೆ ಚಿಂತಿಸುವುದೇಕೆ ಪಲುಂಬುವುದೇಕೆ ನೋವುದೋ ||
(೨-೨೪ವ., ೨೫, ೨೭).
ಇಲ್ಲಿ ಧರ್ಮ, ಸಂಸೃತಿಧರ್ಮ ಎರಡೇ ಸಂಸ್ಕೃತಶಬ್ದಗಳು. ಪಾಂಡವರ ಆಟಪಾಟಗಳನ್ನು ತಿಳಿಸುವ ಹತ್ತಿರದ ಇನ್ನೊಂದು ಕಂದಪದ್ಯದಲ್ಲಿ ಒಂದೇ ಒಂದು ಸಂಸ್ಕೃತಶಬ್ದವಿಲ್ಲ. ಈ ಶಕ್ತಿಯನ್ನು ನಮ್ಮ ಪ್ರಾಚೀನ ಚಂಪೂಕವಿಗಳು ಹಲವರಲ್ಲಿ ನಾವು ಸಮೃದ್ಧವಾಗಿ ಕಾಣುತ್ತೇವೆ.
ಈಗ ನಾನು ಅಲ್ಲಮ ಪ್ರಭುವಿನ ಒಂದು ವಚನವನ್ನು ಎತ್ತಿಹೇಳುತ್ತೇನೆ:
ಅಱವು ಅಱವೆನುತ್ತಿಪ್ಪಿರಿ, ಅಱವು ಸಾಮಾನ್ಯವೆ?
ಹಿಂದಣ ಹಜ್ಜೆಯ ನೋಡಿ ಕಂಡಲ್ಲದೆ
ನಿಂದ ಹಜ್ಜೆಯನಱಯ ಬಾರದು
ಮುಂದಣ ಹಜ್ಜೆಯಳಿದಲ್ಲದೆ ಒಂದು ಪಾದ ನೆಲೆಗೊಳ್ಳದು
ನೆಲನ ಬಿಟ್ಟು ಆಕಾಶದಲ್ಲಿ ನಿಂದು
ಮುಗಿಲೊಳಗೆ ಮಿಂಚಿದಲ್ಲದೆ ತಾನಾಗ ಬಾರದು
ಗುಹೇಶ್ವರನೆಂಬುದು ಬಱದೆ ಬಹುದೆ, ಹೇಳಿರೆ? (೪೭೫)
ಇಲ್ಲಿ ಸಾಮಾನ್ಯ, ಪಾದ, ಆಕಾಶ ಎಂಬ ಸುಪರಿಚಿತ ಸಂಸ್ಕೃತಶಬ್ದಗಳು ಮೂರು ಮಾತ್ರ ಇವೆ.
ಇಲ್ಲೆಲ್ಲ ಮಾತುಗಾರಿಕೆ ಬಗೆದಂತೆ ಬಂದದ್ದು; ಕನ್ನಡತನದಲ್ಲಿ ಮಿಂದು ಮಡಿಯಾಗಿ ಮಿಂಚಿದ್ದು. ಸಮಸಂಸ್ಕೃತ ತದ್ಭವಗಳ ಮೂಲಕ ಸಂಸ್ಕೃತ ಪ್ರಾಕೃತಗಳು ಕನ್ನಡದ ಮರ್ಜಿಹಿಡಿದು ಕನ್ನಡವೇ ಆದುವು. ಅವು ಕನ್ನಡದಲ್ಲಿ ಅರಗಿ ನುರುಗಿಹೋದುವು. ವೀರ‍್ಯವತ್ತಾದ ಸನ್ನಿವೇಶಗಳಿಗೆ, ವರ್ಣನೆಗಳಿಗೆ, ಪಾತ್ರಗಳ ಸ್ವಭಾವಕ್ಕೆ ಸಂಸ್ಕೃತ ವಿಜೃಂಭಿಸಿದ್ದೇನೋ ದಿಟ. ಅದರ ಮೀಮಾಂಸೆಯನ್ನು ನಾನು ಅನ್ಯತ್ರ ಮಾಡಿದ್ದೇನೆ. ಅವರಿಗೆ ಎಲ್ಲಿ ದೇಸಿ, ಎಲ್ಲಿ ಮಾರ್ಗ (Poಠಿuಟಚಿಡಿ ಚಿಟಿಜ ಅಟಚಿssiಛಿಚಿಟ) ಎಂಬುದರ ಮರ್ಮ ಚೆನ್ನಾಗಿ ತಿಳಿದಿತ್ತು. ಈ ಗುಟ್ಟು ದೇಸಿ ಛಂದಸ್ಸುಗಳ ಕವಿಗಳ, ವಚನಕಾರರ, ಕೀರ್ತನಕಾರರ ಶ್ರೇಣಿಗೆ ವಾಕ್ಯರಚನೆಯ ವೈಖರಿಯಲ್ಲಿಯೂ ಚೆನ್ನಾಗಿ ಗೊತ್ತಿತ್ತು. ಗದ್ಯಕವಿಗಳಲ್ಲಿ ‘ವಡ್ಡಾರಾಧನೆ’ಯ ಕರ್ತೃವಿಗೆ, ‘ಮುದ್ರಾಮಂಜೂಷ’ ಮತ್ತು ‘ರಾಜಾವಳೀಕಥೆ’ಯ ಕರ್ತೃಗಳಿಗೆ ಕೂಡ ಗೊತ್ತಿತ್ತು.
ವಿಜಯನಗರಕಾಲದ ಶಾಸನಕವಿಗಳಲ್ಲಿ ಬರೆವಣಿಗೆ ಹಸಗೆಟ್ಟಿತು ಎಂದರೂ ಹೈದರ್‌ನಾಮ-ಜಂಗ್‌ನಾಮಗಳಂತಹ ರಚನೆಗಳ ಕಾಲಕ್ಕೆ ಇನ್ನೂ ಹಸಗೆಟ್ಟಿತು. ಇವಕ್ಕೆ ನಾನು ಉದಾಹರಣೆಗಳನ್ನು ಕೊಡಲು ಹೋಗುವುದಿಲ್ಲ. ಇಲ್ಲಿ ಕನ್ನಡನುಡಿಗೆ ಇಬ್ಬಾಯ ಖಡ್ಗದ ಇರಿತವಾಗಿದೆ. ಲೇಖನದೋಷಗಳು ಒಂದು ಕಡೆ, ಅನ್ಯದೇಶ್ಯಗಳ ಹಾವಳಿ ಇನ್ನೊಂದು ಕಡೆ.
ಇಲ್ಲಿ ನಮ್ಮ ಹೊಸತನದ ಹುಡುಕಾಟವೇನು? ಅಚ್ಚಗನ್ನಡಪದಗಳ ಕೋಶವೊಂದನ್ನು ನಾವು ಸಾಂಸ್ಥಿಕವಾಗಿ ಸಿದ್ಧಮಾಡಬೇಕು. ಈ ಕೋಶದ ಒಂದು ಸಣ್ಣ ಪ್ರಯತ್ನವನ್ನು ನಾನು ‘ಅಚ್ಚಗನ್ನಡ ಪ್ರಾಣಿಪದಕೋಶ’ ಎಂಬ ರಚನೆಯಲ್ಲಿ ಮಾಡಿದ್ದೇನೆ. ಇದು ಹೇಗಿರಬಹುದೆಂದರೆ ಧರ್ಮ-ಧರ್ಮದ್ರೋಹಿ, ಸೂರ್ಯ-ಚಂದ್ರ ಎಂಬ ಬಹುಪರಿಚಯದ ಶಬ್ದಗಳಿವೆಯಷ್ಟೆ. ಅಱ-ಅಱಗುಲಿ, ನೇಸಱು-ತಿಂಗಳು ಇವು ಮುಖ್ಯ ಶಬ್ದಗಳಾಗಿ ಇವಕ್ಕೆ ಸಂಸ್ಕೃತಶಬ್ದಗಳು ಪರ‍್ಯಾಯಗಳಾಗುತ್ತವೆ. ಒಂದು ಶಬ್ದಭಂಡಾರದ ಎಲ್ಲ ಬಗೆಯ ಶಬ್ದಗಳೂ ಇಲ್ಲಿ ಸ್ಥಾನ ಪಡೆಯಬೇಕಾಗುತ್ತವೆ.

ದೇಸಿಯನ್ನು ಗೆಲ್ಲಿಸೋಣ: ‘ಸಿರಿಗನ್ನಡಂ ಗೆಲ್ಗೆ’
ಹಳ್ಳಿಯ ಬದುಕಿನ ಹಿನ್ನೆಲೆಯಲ್ಲಿ ಗೀತ-ನರ್ತನ-ವಾದ್ಯಗಳು, ಗಣಿತ ವೈದ್ಯ ಪ್ರಾಣಿವಿಜ್ಞಾನ ಮುಂತಾದ ಶಾಸ್ತ್ರಗಳು, ಕ್ರೀಡೆ-ಮನೋರಂಜನೆ, ಶಿಲ್ಪ-ವಾಸ್ತು, ಹಬ್ಬ-ಹುಣ್ಣಿಮೆ, ಆಚಾರ-ವಿಚಾರಗಳು, ಕೃಷಿ-ಕೈಕಸುಬುಗಳು, ನಾಣ್ಯಗಳು-ಮುದ್ರೆಗಳು, ಅಳತೆ-ತೂಕಗಳು, ಪ್ರಾಣಿ-ಪಕ್ಷಿ-ಕೀಟಗಳು, ಗಿಡ-ಮರ-ಬಳ್ಳಿಗಳು, ದವಸಧಾನ್ಯಗಳು-ಅಡುಗೆಯ ತಿಂಡಿತೀರ್ಥಗಳು, ಕಾಯಿಲೆ-ಕಸಾಲೆಗಳು ಮತ್ತು ಚಿಕಿತ್ಸೆಗಳು ಹೀಗೆ ಎಷ್ಟೋ ಬಾಬುಗಳಲ್ಲಿ ಕನ್ನಡದ ದೇಶ್ಯಪದಗಳ ಭಂಡಾರ ಸಂಪದ್ಯುಕ್ತವಾದ್ದು; ಅದನ್ನು ಹೊಂದಿಕೊಂಡ ಬದುಕಿನ ಬಗೆಯೂ ಸುಂದರವಾದ್ದು, ಸಮೃದ್ಧವಾದ್ದು. ಈ ವಿಷಯದಲ್ಲಿ ನಮ್ಮ ಹಳೆಯ ಕವಿಗಳು ತಂತಮ್ಮ ಕಾವ್ಯಗಳಲ್ಲಿ, ಗದ್ಯಗ್ರಂಥಗಳಲ್ಲಿ, ಶಾಸ್ತ್ರಗ್ರಂಥಗಳಲ್ಲಿ ವಿಪುಲವಾಗಿ ಸಾಮಗ್ರಿಯನ್ನು ತುಂಬಿ ತುಂಬಿ ಗಿಡಿದಿದ್ದಾರೆ. ಇವನ್ನು ಒಮ್ಮೆಯಾದರೂ ಕಣ್ಣೆತ್ತಿನೋಡುವ ಸಂಕಲ್ಪವನ್ನೂ ಸಾಹಸವನ್ನೂ ಮಾಡಿದರೆ ರತ್ನದ ಗಣಿ ತೆರೆದುಕೊಳ್ಳುತ್ತದೆ. ಇಲ್ಲವೆ ‘ಬಯ್ಚಿಟ್ಟ ಬಯ್ಕೆ’ಯಾಗಿ ಹೂತುಹೋಗುತ್ತದೆ.
ನಮ್ಮ ಹಳಗನ್ನಡ ನಡುಗನ್ನಡದ ಕವಿಗಳು ತಮ್ಮನ್ನು ಸಂಸ್ಕೃತಕ್ಕೆ ಮಾರಿಕೊಂಡರು, ಪ್ರೌಢಸಂಸ್ಕೃತವನ್ನು ತಮ್ಮ ಕಾವ್ಯಗಳಲ್ಲಿ ತುಂಬಿ ರಾಜಾಸ್ಥಾನದ ಪಂಡಿತರನ್ನು ಮೆಚ್ಚಿಸಲು ಹೊರಟರು ಎಂದು ಹೇಳುವುದು ಸಾಮಾನ್ಯವಾಗಿದೆ. ಸಂಸ್ಕೃತ-ಕನ್ನಡಗಳ ಬಳಕೆಯ ಸಂಬಂಧದಲ್ಲಿ ಮುತ್ತು-ಮೆಣಸು, ತುಪ್ಪ-ಎಣ್ಣೆ, ಕೆಂಪುಹವಳ-ಕರಿಮಣಿ ಇಂಥ ಸಾದೃಶ್ಯಗಳ ಮೀಮಾಂಸೆ ಏನೇ ಇರಲಿ, ದೇಸಿ-ಮಾರ್ಗಗಳೆರಡರ ಹಿತಮಿತಮಿಶ್ರಣವೇ ಅವರಿಗೆ ಆದರ್ಶವಾಯಿತು. ಕಣ್ಣಿಟ್ಟು ನೋಡಿದರೆ ದೇಸಿಯ ವಿಶ್ವರೂಪವನ್ನಿಲ್ಲಿ ಕಾಣಬಹುದು. ಅವನ್ನು ಹೆಕ್ಕಿ ತೆಗೆದು, ಸಾಂಸ್ಕೃತಿಕ ಪದಕೋಶಗಳನ್ನು ತಯಾರಿಸಬಹುದು; ಆಡುಮಾತು ಸಾಹಿತ್ಯರಚನೆಯ ರೂಢಿಯಲ್ಲಿ ಸಜೀವಗೊಳಿಸಬಹುದು. ಪಂಜೆಯವರೂ ಮುಳಿಯರೂ ಬಿಎಂಶ್ರೀ ಅವರೂ ಮಾಸ್ತಿಯವರೂ ನಿರ್ಮಿಸಿರುವ ಹೆದ್ದಾರಿಗಳಿವೆ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ನಮ್ಮ ಭಾಷೆಯನ್ನೂ ಭಾಷಿಕರನ್ನೂ ನುಂಗಿ ನೊಣೆಯುವ ಮೊದಲು ಈ ಕೆಲಸ ಆಗಬೇಕಾಗಿದೆ. ಹಳೆಯ ಕವಿಗಳ ಸ್ವಯಾರ್ಜಿತಪಾಂಡಿತ್ಯದ ಮೇಲೆ, ಅವರಿಗೆ ಶಕ್ತಿಧಾರೆಯನ್ನೆರೆದ ಪರಂಪರಾಗತವಿದ್ಯೆಯ ಮೇಲೆ ದಂಡೆತ್ತಿಹೋದರೆ ಈಗ ಪ್ರಯೋಜನ ವೇನೂ ಇಲ್ಲ; ಅಲ್ಲಿ ಸಾರವತ್ತಾದ್ದು, ದೇಸಿಯ ಐಸಿರಿಯೇನುಂಟೋ ಅವನ್ನು ಹೀರಿಕೊಳ್ಳೋಣ, ಕಾಯ್ದುಕೊಳ್ಳೋಣ.
ದ್ರಾವಿಡ ಭಾಷಾಶಾಸ್ತ್ರಜ್ಞರಾಗಿದ್ದ ಭದ್ರಿರಾಜು ಕೃಷ್ಣಮೂರ್ತಿಗಳ ಮಾರ್ಗದರ್ಶನದಲ್ಲಿ ‘ಮಾಂಡಲಿಕ ವೃತ್ತಿಪದಕೋಶ’ದ ಸಂಪುಟಗಳು ತೆಲುಗು ಭಾಷೆಯಲ್ಲಿ ಬಹಳ ಹಿಂದೆಯೇ ಸಿದ್ಧವಾಗಿ ಪ್ರಸಿದ್ಧವಾಯಿತು. ಹಂಪಿಯ ಕನ್ನಡ ವಿಶ್ವವಿದ್ಯಾಲಯ ಈ ದಿಕ್ಕಿನಲ್ಲಿ ಸ್ವಲ್ಪಮಟ್ಟಿಗೆ ಕನ್ನಡದ ವೃತ್ತಿಪದಕೋಶಗಳ ರಚನೆಗೆ ತೊಡಗಿದ್ದನ್ನು ನಾನು ಬಲ್ಲೆ. ಇನ್ನೂ ವ್ಯಾಪಕವಾಗಿ ಈ ಕೆಲಸ ನಡೆಯಬೇಕಾಗಿದ್ದು, ಕ್ಷೇತ್ರಕಾರ್ಯದ ಉತ್ಸಾಹಿ ಶೋಧಕರಿಗಾಗಿ ಕಾಯುತ್ತಿದೆ.
ಇನ್ನೂ ಒಂದು ದಿಕ್ಕಿನಲ್ಲಿ ನಾವು ಗಂಭೀರವಾಗಿ ಯೋಚಿಸುವುದು ಅಗತ್ಯವಿದೆ. ಅದು ತುಳು ಹವಿಕ ಗೌಡಕನ್ನಡ ಕೊಡವ ಬ್ಯಾರಿ ಕೊಂಕಣಿ ಭಾಷೆಗಳೂ ಸೇರಿದ ಹಾಗೆ ಕನ್ನಡ ನಾಡಿನ ಜನಪದರ ಆಡುಮಾತು ಸಾಹಿತ್ಯಗಳನ್ನು ಭಾಷಿಕವಾಗಿಯೂ ಸಾಂಸ್ಕೃತಿಕವಾಗಿಯೂ ಗಾಢವಾಗಿ ಅಭ್ಯಾಸಮಾಡಬೇಕು, ಕನ್ನಡತನವನ್ನು ಗುರುತಿಸಬೇಕು, ವಿಮರ್ಶಿಸಬೇಕು ಮತ್ತು ಜನಸಮುದಾಯಕ್ಕೆ ಅದರ ಸೊಗಸು ಸೌಂದರ‍್ಯಗಳನ್ನು ವಿವರಿಸಿ ಅವರು ಅವಕ್ಕೆ ಹೆಚ್ಚು ಹತ್ತಿರವಾಗುವಂತೆ ಮಾಡಬೇಕು. ಪ್ರಸಾರಮಾಧ್ಯಮಗಳಲ್ಲಿ ಇವು ಕಾಣುವಂತೆ, ಕೇಳುವಂತೆ ಏರ್ಪಾಡು ನಡೆಯಬೇಕು. ಒಂದು ಜಾನಪದ ತ್ರಿಪದಿಯ ಧ್ವನಿ ಸಂದೇಶಗಳು ಒಂದು ಗದ್ಯಪ್ರಬಂಧಕ್ಕಿಂತ ಮಿಗಿಲಾಗಿ ಮನಸ್ನನ್ನು ತುಂಬಿಕೊಳ್ಳ ಬಲ್ಲುದು.
ತುಳುನಾಡಿನ ದೇಸಿಯಿರುವುದು ತುಳುಭಾಷೆಯಲ್ಲಿ, ಅದರ ಸಾಹಿತ್ಯವೂ ಈಗ ಸಮೃದ್ಧಿಯತ್ತ ಸಾಗುತ್ತಿದೆ; ತುಳು ಭಾಷೆಯಾಡುವ ಜನಸಂಖ್ಯೆಯೂ ಸು. ೫ ಲಕ್ಷವನ್ನು ದಾಟಿದ್ದು, ಮಧ್ಯದ್ರಾವಿಡದ ವಿಶೇಷತೆಯಿಂದ ಸ್ವತಂತ್ರವಾಗಿರುವ ಈ ಭಾಷೆ ನಮ್ಮ ಸಂವಿಧಾನದ ೮ನೆಯ ಪರಿಚ್ಛೇದದನ್ವಯ ಅಧಿಕೃತಸ್ಥಾನ ಪಡೆಯಬೇಕೆಂಬುದರಲ್ಲಿ ಯಾವ ರಾಜಕೀಯವೂ ಇಲ್ಲದ ಒತ್ತಡವನ್ನು ನಾವು ಕೇಂದ್ರಸರ್ಕಾರದ ಮೇಲೆ ತರಬೇಕಾಗಿದೆ.

ಭಾಷಾಮಾಧ್ಯಮ
ಕರ್ನಾಟಕದಲ್ಲಿ ಆಡಳಿತ ನ್ಯಾಯವಿತರಣೆ ಶಿಕ್ಷಣ ಈ ಮೂರು ಕ್ಷೇತ್ರಗಳನ್ನೂ ಒಳಗೊಂಡ ಹಾಗೆ ಎಲ್ಲ ವ್ಯವಹಾರಗಳೂ ರಾಜ್ಯಭಾಷೆಯಾದ ಕನ್ನಡದಲ್ಲಿಯೇ ನಡೆಯಲೆಂಬುದು ನಾಡಿನ ಹಿತಚಿಂತಕರ ಅಪೇಕ್ಷೆ. ಕನ್ನಡದ ಮುನ್ನಡೆಗೆ ಇರುವ ಕಾಲ್ತೊಡಕುಗಳ ಕಾರಣಗಳನ್ನೆಲ್ಲ ಪಟ್ಟಿಮಾಡಿದರೆ, ಮುಖ್ಯವಾಗಿ ತೋರುವುದೆಂದರೆ, ತಕ್ಷಣವೇ ಕಾರ್ಯಪ್ರವೃತ್ತವಾಗಲು ಬೇಕಾದ ಕ್ರಿಯಾಸಂಕಲ್ಪ ಹಾಗೂ ಸಾಹಸಪ್ರವೃತ್ತಿಯ ಕೊರತೆ. ಇಂಗ್ಲಿಷ್ ಭಾಷಾವ್ಯಾಮೋಹದ ಜನಸಮುದಾಯಕ್ಕೆ ಇರುವ ದೊಡ್ಡ ಪಗಾರದ ಭ್ರಮೆ ಹಾಗೂ ರಾಜಕೀಯ ನಾಯಕತ್ವದ ಚದುರಂಗದಾಟ. ಭಾವಶುದ್ಧಿಯಿಲ್ಲದೆ, ಸರಿಯಾದ ಮುನ್ನೋಟವಿಲ್ಲದೆ, ಸಮುದಾಯದ ಏಳಿಗೆ ಸಾಧ್ಯವಿಲ್ಲ. ಉದ್ದೇಶವನ್ನು ಸಾಧಿಸಲು ಧೈರ‍್ಯದಿಂದ ಮುನ್ನಡೆಯಬೇಕು; ಆ ಮುನ್ನಡೆಗೆ ಕನ್ನಡದ ಸಹಜಪ್ರೇಮವಿರುವ ಉದಾತ್ತನಾಯಕತ್ವದ ಬೆಂಬಲಬೇಕು. ಸಮಾಜ ಸರ್ಕಾರಗಳು ಒಮ್ಮತವಾಗಿ, ಒಂದು ಕೈಯಾಗಿ ತಮ್ಮ ಸಂಕಲ್ಪಶಕ್ತಿಯನ್ನು, ಸಾಧನಾಬಲವನ್ನು ಕನ್ನಡದ ವ್ಯಾಪ್ತಿ ವೃದ್ಧಿ ಸುಸ್ಥಿತಿಗಳಿಗೆ ಕೇಂದ್ರೀಕರಿಸುವ ಕಾಲ ಈಗ ಸನ್ನಿಹಿತವಾಗಿದೆ. ಭಾಷಾಸಮಿತಿಗಳೂ ಆಯೋಗಗಳೂ ಸಾಕಷ್ಟು ಚಿಂತನಮಂಥನಗಳನ್ನು ನಡಸಿ ಕಾರ್ಯವಿಧಾನಗಳನ್ನು ರೂಪಿಸಿವೆ.
ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆಯಾ ರಾಜ್ಯಭಾಷೆಯನ್ನು ಅಧಿಕೃತವಾಗಿ ವ್ಯವಹಾರದಲ್ಲಿ ತರಬೇಕೆನ್ನುವುದಕ್ಕೆ ಸಹಮತವಾಗಿದೆ, ಕಾರ‍್ಯಪ್ರವೃತ್ತವೂ ಆಗಿದೆ. ಜನಜಾಗೃತಿಗೆ ಪ್ರಯತ್ನಗಳು ಹೆಚ್ಚಾಗಿವೆ. ನಮ್ಮ ನಾಡಿನಲ್ಲಿ ನಮ್ಮ ಎಲ್ಲ ವ್ಯವಹಾರಗಳ ಮಾಧ್ಯಮವಾದ ಭಾಷೆ ಕನ್ನಡ, ಕೇಂದ್ರ ಮತ್ತು ಅನ್ಯರಾಜ್ಯಗಳೊಂದಿಗೆ ವ್ಯವಹರಿಸುವಾಗ ಇಂಗ್ಲಿಷ್ ಅಥವಾ ಹಿಂದಿ ಎನ್ನುವುದು ಸ್ಪಷ್ಟವಾಗಬೇಕು. ಕನ್ನಡ ಕೈತಪ್ಪಿ ಹೋಗದಿರ ಬೇಕಾದರೆ, ದರ್ಬಲವಾಗದಿರಬೇಕಾದರೆ ಪ್ರೌಢಶಾಲೆಯ ಹಂತದವರೆಗೆ ಕಲಿಕೆಯ ಮಾಧ್ಯಮ ಕನ್ನಡಭಾಷಿಕರಿರಲಿ, ಅನ್ಯಭಾಷಿಕರಿರಲಿ, ಕನ್ನಡದಲ್ಲಿಯೇ ನಡೆಯುವುದನ್ನು ಸಮರ್ಥಿಸಬೇಕು, ಸಾಧಿಸಬೇಕು. ಈ ಘಟ್ಟದಲ್ಲಿಯೇ ಸಂಪರ್ಕಸೇತು ವಾಗಿ, ಮಾನವಿಕ ಮತ್ತು ವಿಜ್ಞಾನವಿಷಯಗಳಿಗೆ ಬೇಕಾಗುವ ಇಂಗ್ಲಿಷ್ ಭಾಷೆಯನ್ನು ಒಂದು ಕಲಿಕೆಯ ಭಾಷೆಯ ಸ್ಥಾನದಲ್ಲಿರಿಸಿ ಚೆನ್ನಾಗಿಯೇ ಕಲಿಸುವುದಾಗಬೇಕು. ಹಿಂದಿಯೋ ಎಂದರೆ, ಅದನ್ನು ಸ್ವತಂತ್ರವಾಗಿ ಒದಗಿಬರುವ ಸಂದರ್ಭಗಳಿಂದಲೋ ಸನ್ನಿವೇಶಗಳಿಂದಲೋ ಕಲಿಯುವುದು ಸಾಧ್ಯವಿದೆಯೆಂದು ತಿಳಿಯಬಹುದು.
ಮುಂದುವರಿದ ವಿದೇಶಗಳಲ್ಲಿ ರಷ್ಯ ಫ್ರಾನ್ಸ್ ಜಪಾನ್ ಜರ್ಮನಿ ದೇಶಗಳು ತಂತಮ್ಮ ಮೂಲಭಾಷೆಗಳನ್ನು ಅಧಿಕೃತಗೊಳಿಸಿರುವಂತೆ, ಐರ‍್ಲೆಂಡಿನಲ್ಲಿ ಗ್ಯಾಲಿಕ್ ಮತ್ತು ಇಸ್ರೇಲಿನಲ್ಲಿ ಹೀಬ್ರೂಭಾಷೆಗಳಿಗೆ ಹಾಗೆಯೇ ಮನ್ನಣೆ ದೊರೆತಿರುವಂತೆ, ಕನ್ನಡ ಭಾಷೆಗೆ ಆ ಅಧಿಕಾರ ಮಾನ್ಯತೆಗಳು ದೊರೆಯುವುದರಲ್ಲಿ ಯಾವ ಪ್ರತಿರೋಧವೂ ಇರದಂತೆ ನಾವು ನೋಡಿಕೊಳ್ಳಬೇಕು.
ಭವಿಷ್ಯವಾಣಿಯಂತಿರುವ ಎರಡು ಮುಂಗಾಣ್ಕೆಗಳನ್ನು ಇಲ್ಲಿ ಉದ್ಧರಿಸಬಹುದಾಗಿದೆ:
೧. ಮೈಸೂರು ದೊರೆ ಮುಮ್ಮಡಿ ಕೃಷ್ಣರಾಜರ ದತ್ತಪುತ್ರ ೧೦ನೆಯ ಚಾಮರಾಜೇಂದ್ರ ಒಡೆಯರು ರಾಯಲ್ ಸ್ಕೂಲ್ ಕಾಲೇಜುದರ್ಜೆಗೆ ಏರಿದಾಗ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹೇಳಿದ್ದು:
“ಇಂಗ್ಲಿಷ್ ವಿದ್ಯಾಭ್ಯಾಸ ಪಡೆದುಕೊಂಡವರು ತಾವೇ ಒಂದು ‘ಜಾತಿ’ ಎನ್ನುವಂತೆ, ಮಧ್ಯಯುಗದ ವಿದ್ವಾಂಸರ ಹಾಗೆ ತಮ್ಮ ಹಿರಿಮೆಗೆ ತಾವೇ ತೃಪ್ತಿಪಟ್ಟುಕೊಂಡು ಕುಳಿತುಕೊಳ್ಳಬಾರದು; ಇಂಥವರು ಇಂಗ್ಲಿಷ್ ವಿದ್ಯಾಭ್ಯಾಸವಿಲ್ಲದವರಿಗಿಂತ ತಾವೇ ಹೆಚ್ಚಾಗಿ ಜನಸಂಪರ್ಕದಿಂದ ದೂರವಾಗುತ್ತಾರೆ. ನಮ್ಮ ದೇಶದ ರಾಷ್ಟ್ರೀಯಸಾಹಿತ್ಯ, ವಾಸ್ತು, ದರ್ಶನಗಳು, ಸಿದ್ಧಾಂತಗಳಲ್ಲಿ ಮಿಗಿಲಾದ ಆಸಕ್ತಿಯನ್ನೂ ಇಂಗ್ಲಿಷ್ ಕಲಿಯದ ಜನರ ಭಾವನೆಗಳ, ಆಶೋತ್ತರಗಳ ವಿಷಯದಲ್ಲಿ ಸಹಾನುಭೂತಿಯನ್ನೂ ಅವರು ತೋರಿಸಬೇಕು. ಇಂಗ್ಲಿಷ್ ವಿದ್ಯೆ ಬರಡಾಗಿ ವ್ಯರ್ಥವಾಗುವುದನ್ನು ತಡೆಯಬೇಕಾದರೆ, ದೇಶಭಾಷೆಯ ವ್ಯಾಸಂಗ ಸಾಂಗವಾಗಿ ನಡೆಯಬೇಕು…. ಈ ಕಾಲೇಜು ಬರಲಿರುವ ದಿನಗಳಲ್ಲಿ ಪಾಶ್ಚಾತ್ಯಜ್ಞಾನದ ನಾನಾ ಶಾಖೆಗಳಲ್ಲಿ ಉನ್ನತಶಿಕ್ಷಣವನ್ನು ದೇಶಭಾಷೆಯ ಮೂಲಕವೇ ನಡೆಸುವ ಮಟ್ಟಿಗೆ ಕನ್ನಡದ ವ್ಯಾಸಂಗವನ್ನು ನಡಸುವುದೆಂಬ ಭರವಸೆ ನನಗಿದೆ”.
ಈ ಭರವಸೆ ಈಗ ಸುಮಾರು ನೂರು ವರ್ಷಗಳು ದಾಟಿಯೂ ಏಕೆ ಇನ್ನೂ ಫಲಿಸಿಲ್ಲ? ಇದು ವಿಚಾರವಂತರು ಯೋಚಿಸಬೇಕಾದ್ದು.
೨. ೧೯೨೧ರಷ್ಟು ಹಿಂದೆಯೇ ನಮ್ಮ ಹಿರಿಯ ಸಾಹಿತಿಗಳೂ ಮೇಧಾವಿಗಳೂ ಆದ ಮಾಸ್ತಿ ವೆಂಕಟೇಶ ಅಯ್ಯಂಗಾರ‍್ಯರು ಭಾಷಾಸ್ಪರ್ಧೆಗಳ ವಿಚಾರವನ್ನು ಚರ್ಚಿಸುತ್ತ ಒಂದೆಡೆ ಹೀಗೆಂದಿದ್ದಾರೆ:
“ಪ್ರಪಂಚ ಕಂಡಿರುವ ಅತ್ಯನ್ನತ ನಾಗರಿಕತೆ ಒಂದರಲ್ಲಿ ಬೆಳೆದುಬಂದಿರುವ ನಮ್ಮ ಜನರಲ್ಲಿ ಒಂದು ಉನ್ನತ ಸಂಸ್ಕೃತಿಗೆ ಬೇಕಾದ ತಳಹದಿಯಿದೆ. ಏನೇ ಮಾಡಿದರೂ ಇಂಗ್ಲಿಷು ಸಿದ್ಧಿಸುವುದು ಕೆಲವರಿಗೆ ಮಾತ್ರ; ಎಲ್ಲ ಜನತೆಗೆ ಅಲ್ಲ. ಕಲಿಯುವವರ ಸಮುದಾಯ ಈ ಭಾಷೆಯನ್ನು ಕಾಣದು; ಕಲಿತಿರುವ ಸಮುದಾಯವಾದರೂ ಇದರಲ್ಲಿ ದಿಟವಾದ ಪ್ರಭುತ್ವವನ್ನು ಪಡೆಯುವುದು ಅಪರೂಪ. ವಿದ್ಯೆ ಪಡೆದವರೆಂಬ ಜನ ತಮ್ಮ ಯೋಚನೆಯನ್ನೆಲ್ಲ ಇಂಗ್ಲಿಷಿನಲ್ಲಿ ನಡಸಿ, ಏತರದೊ ಒಂದು ಸಂಸ್ಕೃತಿಯನ್ನು ಬೆಳಸಿ ಸಾಮಾನ್ಯಜನರಿಗೆಂದು ಅದನ್ನು ದೇಶಭಾಷೆಗಳಲ್ಲಿ ಬಸಿದುಕೊಡಬಹುದು; ಹೀಗೆ ಬಸಿದ ಈ ಸಂಸ್ಕೃತಿ ಜನತೆಯ ಸ್ವಂತ ಸಂಸ್ಕೃತಿ ಆಗುವುದಿಲ್ಲ. ವಿದ್ಯಾವಂತ ಜನ, ಸಾಮಾನ್ಯಜನ ಎಂಬ ಈ ವಿಭಾಗ ಅಂತತಃ ಕೃತ್ರಿಮ ಆಗಿರುತ್ತದೆ. ಎರಡು ಪಕ್ಷಕ್ಕೂ ಇದರಿಂದ ಕೆಡುಕು. ಈ ಸಂಸ್ಕೃತಿಯಲ್ಲಿ, ವಿದ್ಯಾವಂತರದೆಂಬ ಈ ಸಂಸ್ಕೃತಿಯಲ್ಲಿ, ತಿರುಳು ಇರುವುದಿಲ್ಲ, ಜೀವ ಇರುವುದಿಲ್ಲ. ದೇಶಭಾಷೆಗಳ ಮೂಲಕ ಬೆಳೆಯಿತೇ, ಸಂಸ್ಕೃತಿ ಎಲ್ಲ ಜನರ ಸಂಸ್ಕೃತಿ ಆಗುತ್ತದೆ, ಜೀವಂತವಾಗಿ ಸಾರವತ್ತಾಗಿರುತ್ತದೆ. ಈ ಎರಡರಲ್ಲಿ ನಾವು ಯಾವುದನ್ನು ವಹಿಸೋಣ? ಈಗ ಇರುವಂತೆ ಇರಲಿ ಎನ್ನುವುದು ಸುಲಭ. ಮಾರ್ಪಾಟಿನಿಂದ ಏನು ತೊಂದರೆಯೊ ಎನ್ನುವ ಭಯ ಸಹಜ. ಈ ಕಾರಣದಿಂದ ನಮಗೆ ಸದ್ಯದ ಸ್ಥಿತಿ ಇದ್ದುಕೊಳ್ಳಲಿ ಎಂದು ತೋರುವುದು ಸಾಧ್ಯ. ಆದರೆ ತಿಳಿವಿಗೆಂದು ಬಾಯ್ತೆರೆದು ಕಾದಿರುವ ಕೋಟಿಕೋಟಿ ಜನರ ಕಡೆ ಕಣ್ಣು ತಿರುಗಿಸಿದೆವಾದರೆ, ಈ ಯೋಚನೆ ಹಿಮ್ಮೆಟ್ಟುತ್ತದೆ. ಜನಾಂಗ ನಿಜವಾಗಿ ಬಾಳಬಹುದು. ಇದಕ್ಕೆ ಇರುವುದು ಒಂದೇ ದಾರಿ, ಬೇರೆ ಇಲ್ಲ. ಪಾಠ ಹೇಳುವುದಕ್ಕೆ, ಸಂಸ್ಕೃತಿಯ ಪ್ರಸಾರಕ್ಕೆ ಎಲ್ಲ ತೆರನ ಅನ್ವೇಷಣಕ್ಕೆ ಜನ ಮನೆಯಲ್ಲಿ ಬೀದಿಯಲ್ಲಿ ಬಳಸುವ ಮಾತನ್ನು ಬಳಸಬೇಕು.”
ಹೀಗೆ ಹೇಳಿದ ಮಾಸ್ತಿಯವರು, “ಇಂಗ್ಲಿಷು ಎಲ್ಲ ಪಾಠಗಳನ್ನೂ ಕಲಿಸುವ ಭಾಷೆಯಾಗದೆ, ಕಲಿಯುವ ಒಂದು ಭಾಷೆಯಾಗಿರುವುದನ್ನು ನಾವು ಒಪ್ಪುತ್ತೇವೆ” ಎಂದು ಸಹ ಸ್ಪಷ್ಟಪಡಿಸಿದ್ದಾರೆ.
ರವೀಂದ್ರನಾಥ ಠಾಕೂರ್, ಜಗದೀಶಚಂದ್ರ ಬೋಸ್, ಸಿ.ಆರ್. ರೆಡ್ಡಿ, ಜಾನ್ ಮಥಾಯ್, ಕೆ.ಎಂ. ಫಣಿಕ್ಕರ್, ಮಿರ್ಜಾ ಇಸ್ಮಾಯಿಲ್ ಮೊದಲಾಗಿ ಹಲವರು ಪ್ರಮುಖರು ಮೈಸೂರು ವಿಶ್ವವಿದ್ಯಾನಿಲಯವೂ ಸೇರಿದಂತೆ ನಮ್ಮ ದೇಶದ ಬೇರೆ ಬೇರೆ ವಿಶ್ವವಿದ್ಯಾನಿಲಯಗಳ ವಾರ್ಷಿಕ ಘಟಿಕೋತ್ಸವಗಳ ಸಮಾರಂಭಗಳಲ್ಲಿ ದೇಶಭಾಷೆಗಳ ಮೂಲಕವೇ ನಮ್ಮ ಉನ್ನತವಿದ್ಯಾಭ್ಯಾಸ ಸಹ ನಡೆಯುವುದಾಗಬೇಕು ಎಂದು ಸಾರಿ ಹೇಳಿದ್ದಾರೆ; ಇಂಗ್ಲಿಷ್ ಒಂದು ಸಾಹಿತ್ಯಭಾಷೆಯಾಗಿ, ಸಂಪರ್ಕಭಾಷೆಯಾಗಿ ಮುಂದುವರಿಯಲೆಂದು ಆಶಿಸಿದ್ದಾರೆ. ಅಸೀಮ ಕನ್ನಡಭಾಷಾಪ್ರೇಮಿ ಕವಿವರ್ಯ ಕುವೆಂಪು ಅವರು “ಇನ್ನು ಮುಂದೆ ಇಂಗ್ಲಿಷ್ ಎಲ್ಲರಿಗೂ ಬೇಡ, ಹಲವರಿಗೆ ಕೊಂಚ ಮಟ್ಟಿಗೆ ಬೇಕು, ಕೆಲವರಿಗೆ ಮಾತ್ರ ಚೆನ್ನಾಗಿಯೇ ಬೇಕು” ಎಂದು ಹೇಳುವಾಗ ಇಂಗ್ಲಿಷ್ ಭಾಷೆಯ ಬಲಾತ್ಕಾರಕಲಿಕೆಯ, ಹೇರಿಕೆಯ ಅನಾಹುತಗಳನ್ನು ಪರಿಭಾವಿಸಿಯೇ ಹೇಳಿದ್ದಾರೆ ಎನ್ನಬೇಕು. ೧೯೨೯ರಲ್ಲಿ ಮುಂಬಯಿ ವಿಶ್ವವಿದ್ಯಾನಿಲಯದಲ್ಲಿ ದೇಶಭಾಷೆಗಳ ಸ್ಥಾನವನ್ನು ವಿವೇಚಿಸುತ್ತ ಶಿಕ್ಷಣತಜ್ಞ ಆರ್.ಎ. ಜಹಗೀರ್‌ದಾರ್ ಅವರು “ದೇಶಭಾಷೆಗಳ ತಳಹದಿಯ ಮೇಲೆಯೇ ರಾಷ್ಟ್ರೀಯಶಿಕ್ಷಣದ ಕಟ್ಟಡವನ್ನು ಕಟ್ಟಿಸುವುದು ಶಕ್ಯವಿದೆ” ಎಂಬುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದು, ಇನ್ನೂ ತನ್ನ ಬೇರುಗಳನ್ನು ಗಟ್ಟಿಗೊಳಿಸಬೇಕಾಗಿದೆ ಎಂದು ನಾನು ತಿಳಿಯುತ್ತೇನೆ.
ಬಂಗಾಳಿಯ ವಿಷಯದಲ್ಲಿ ಬಂಕಿಮಚಂದ್ರರೂ ರವೀಂದ್ರನಾಥ ಠಾಕೂರರೂ ಜನಜಾಗೃತಿಯ ಬೀಜಗಳನ್ನು ಬಿತ್ತುವಲ್ಲಿ ಮಾರ್ಗದರ್ಶಕರಾದರು; ಹಾಗೆಯೇ ಕನ್ನಡದ ವಿಷಯದಲ್ಲಿ ಆಲೂರು ವೆಂಕಟರಾಯ, ಡೆಪ್ಯುಟಿ ಚನ್ನಬಸಪ್ಪ, ರಾ.ಹ. ದೇಶಪಾಡೆ ಮೊದಲಾದವರು, ಪಂಜೆ ಮಂಗೇಶರಾಯ ಗೋವಿಂದ ಪೈ ಮುಳಿಯ ತಿಮ್ಮಪ್ಪಯ್ಯ ಮೊದಲಾದವರು, ಬಿ.ಎಂ.ಶ್ರೀಕಂಠಯ್ಯ ಮಾಸ್ತಿ ಎ.ಆರ್. ಕೃಷ್ಣಶಾಸ್ತ್ರೀ, ಕುವೆಂಪು ಅನಕೃ ಮೊದಲಾದವರು ಮಾರ್ಗದರ್ಶಕರಾಗಿದ್ದಾರೆ. ಅವರು ಕಂಡ ಕಾಣ್ಕೆಗಳು, ಆಡಿದ ಮಾತುಗಳು, ಮಾಡಿದ ಹರಕೆ ಹಾರೈಕೆಗಳು ವ್ಯರ್ಥವಾಗದಂತೆ ನಾವು ನಡೆದುಕೊಳ್ಳಬೇಕಾಗಿದೆ.

ಸಮಸ್ಯೆಯಾಗಿರುವ ‘ಶಾಸ್ತ್ರೀಯ ಭಾಷೆ’ಯ ಕೆಲಸಗಳ ಚಾಲನೆ
ಭಾರತದ ಪ್ರಾಚೀನ ಭಾಷೆಗಳ ಪರಿಚಯ-ಪ್ರಸಾರ, ಸಂಗ್ರಹ-ಸಂರಕ್ಷಣೆ-ಸಂಪಾದನೆ ಇವನ್ನು ಲಕ್ಷ್ಯದಲ್ಲಿಟ್ಟುಕೊಂಡು ಅಧ್ಯಯನ ಅಧ್ಯಾಪನ ಸಂಶೋಧನೆಗಳ ಮೂಲಕ ನಮ್ಮ ಕಾಲದ ಜನ ಅವುಗಳ ಪ್ರಯೋಜನ ಪಡೆಯುವಂತಾಗಬೇಕು ಎಂದು ಭಾರತಸರ್ಕಾರ ಯೋಚಿಸಿತು. ಅಂತಹ ಪ್ರಾಚೀನಭಾಷೆಗಳನ್ನು ಗುರುತಿಸಿ, ಮನ್ನಣೆ, ಕಾರ್ಯಯೋಜನೆಗಳಿಗೆ ಅನುದಾನ, ಅಧ್ಯಯನಪೀಠಗಳ ಸ್ಥಾಪನೆ, ಫೆಲೋಷಿಪ್, ಪ್ರಶಸ್ತಿ ಮೊದಲಾದ ಅನುಕೂಲಗಳನ್ನು ಘೋಷಿಸಿತು.
೨೦೦೪ರಲ್ಲಿ ತಮಿಳುಭಾಷೆಗೆ ಶಾಸ್ತ್ರೀಯ ಭಾಷೆಯ ಮನ್ನಣೆ ದೊರೆಯಿತು. ೨೦೦೫ರಲ್ಲಿ ಸಂಸ್ಕೃತ ಮತ್ತು ೨೦೦೮ರಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳು ಆ ಮನ್ನಣೆ ಪಡೆದವು. ಈಚೆಗೆ ಇತರ ಭಾರತೀಯ ಭಾಷೆಗಳೂ ಸೇರಿವೆ, ಸೇರುತ್ತಿವೆ. ನಮ್ಮ ಮಟ್ಟಿಗೆ ಈ ಮನ್ನಣೆ ಹೋರಾಟದ ಫಲ. ಮನ್ನಣೆಗೆ ಮೊದಲಲ್ಲಿಯೇ ಮೈಸೂರಿನ ಭಾರತೀಯ ಭಾಷಾಸಂಸ್ಥಾನದಲ್ಲಿ ಪೂರ್ವಭಾವಿಯಾಗಿ ಕೆಲವು ಸಲ ವಿದ್ವತ್ಸಮಾಲೋಚನೆಗಳು ನಡೆದುವು. ಈ ಸಮಾಲೋಚನೆಗಳಲ್ಲಿ ಕಾರ್ಯಸಾಧ್ಯವಾಗುವ ಹಲವು ಯೋಜನೆಗಳ ನೀಲನಕ್ಷೆಗಳನ್ನು ಕೂಡ ತಯಾರಿಸಿದ್ದಾಯಿತು. ಈ ನಡುವೆ ಕರ್ನಾಟಕಸರ್ಕಾರವೂ ಆಸಕ್ತಿವಹಿಸಿ, ಸಲಹೆ ಸಮಾಲೋಚನೆಗಳಿಗೆಂದು ಬೇರೆ ಬೇರೆ ಸಮಿತಿಗಳನ್ನು ನೇಮಿಸಿ, ಚರ್ಚೆಗಳನ್ನು ನಡಸಿತು. ಹಾಗೆಯೇ ಬೆಂಗಳೂರಿನಲ್ಲಿ ‘ಕರ್ನಾಟಕ ಸಂಶೋಧಕರ ಒಕ್ಕೂಟ’ ಎಂಬ ಸಂಸ್ಥೆ ೨೦೦೯ರಲ್ಲಿ ಆರಂಭಗೊಂಡು ಸ್ವತಂತ್ರವಾಗಿಯೇ ಶಾಸ್ತ್ರೀಯ ಭಾಷೆಯ ಅಧ್ಯಯನಗಳಲ್ಲಿ ಆಸಕ್ತರಾದವರಿಗೆ ಉಪನ್ಯಾಸಗಳನ್ನೂ ಶಿಬಿರಗಳನ್ನೂ ಕರ್ನಾಟಕದ ಆದ್ಯಂತ ನಡಸುತ್ತ ಒಂದು ಜಾಗೃತಿಯನ್ನುಂಟುಮಾಡಿತು.
೨೦೦೯ರಲ್ಲಿಯೇ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಕಾರ್ಯಾನುಷ್ಠಾನಕ್ಕೆಂದು ಉನ್ನತಮಟ್ಟದ ಸಲಹಾಸಮಿತಿಯ ಸಲಹೆಗಳನ್ನು ಅನುಸರಿಸಿ ಕಾರ್ಯಕಾರಿ ಸಮಿತಿಯೊಂದನ್ನು ನಿಯಮಿಸಿ, ಈ ಸಮಿತಿಗೆ ನಾಲ್ಕು ಮುಖಗಳಲ್ಲಿ ಯೋಜನೆಗಳನ್ನು ಕೈಕೊಳ್ಳುವಂತೆ ತಿಳಿಸಿತು. ಬಹುಶಃ ಇದರ ಅನ್ವಯವೇ, ಕನ್ನಡ ಅಭಿವೃದ್ಧಿಪ್ರಾಧಿಕಾರ ಕನ್ನಡ ಶಾಸ್ತ್ರೀಯಸ್ಥಾನ – ಸಂಶೋಧನಾವಿಧಾನ ಕುರಿತು ಸಂಶೋಧನಾಸಕ್ತರಿಗಾಗಿ ಎಂದು ಒಂದು ಕಮ್ಮಟವನ್ನು ಬೆಂಗಳೂರಿನಲ್ಲಿ ೨೦೦೯ ಆಗಸ್ಟ್ ತಿಂಗಳಲ್ಲಿ ನಡೆಸಿತು. ಇಂತಹ ಕೆಲವು ಕಮ್ಮಟಗಳು ಕರ್ನಾಟಕದ ಇತರ ಭಾಗಗಳಲ್ಲಿಯೂ ಹೊರರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿಯೂ ನಡೆದುವು.
ಈ ಜಾಗೃತಿ ಕೊಂಚ ಕೆಲಸಮಾಡಿದಂತೆ ತೋರುತ್ತದೆ. ಶಾಸ್ತ್ರೀಯ ಕನ್ನಡಭಾಷೆಯ ಸಂಬಂಧವಾದ ಎಲ್ಲ ಕೆಲಸಗಳ ಜವಾಬ್ದಾರಿ ಹೊತ್ತ ಮೈಸೂರಿನ ಭಾರತೀಯ ಭಾಷಾಸಂಸ್ಥಾನವು ೧೭-೧೧-೨೦೧೧ರಂದು ತನ್ನ ಆವರಣದಲ್ಲಿಯೇ ‘ಶಾಸ್ತ್ರೀಯ ಕನ್ನಡದ ಅತ್ಯುನ್ನತ ಅಧ್ಯಯನಕೇಂದ್ರ’ವನ್ನು ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳ ಸಚಿವರ ಮತ್ತು ಇತರ ಹಿರಿಯರ ಸಮ್ಮುಖದಲ್ಲಿ ವಿಧಿವತ್ತಾಗಿ ಆರಂಭಿಸಿತು; ಅಂತರ್ಜಾಲತಾಣವೂ ಆನಾವರಣವಾಯಿತು. ೨೦೧೨ರಲ್ಲಿ ಗುಲ್ಬರ್ಗದ ಕರ್ನಾಟಕ-ಕೇಂದ್ರ ವಿಶ್ವವಿದ್ಯಾನಿಲಯದಲ್ಲಿ ಶಾಸ್ತ್ರೀಯ ಕನ್ನಡ ಭಾಷೆಗೆಂದೇ ಒಂದು ಪ್ರಾಧ್ಯಾಪಕ ಪೀಠವೇರ್ಪಟ್ಟು, ಇಲ್ಲಿಯ ವಿಭಾಗವು ತಾನೇ ಒಂದು ವಿಸ್ತೃತ ನೀಲನಕ್ಷೆಯನ್ನು ಸಿದ್ಧಪಡಿಸಿತು (ಅeಟಿಣಡಿe ಜಿoಡಿ ಅಟಚಿssiಛಿಚಿಟ ಏಚಿಟಿಟಿಚಿಜಚಿ: ಖoಚಿಜ ಒಚಿಠಿ). ಅಲ್ಲದೆ ಉತ್ಸಾಹ ದಿಂದಲೇ ಕಾರ್ಯಪ್ರವೃತ್ತವಾಗಿ, ವಿಶೇಷ ಉಪನ್ಯಾಸಗಳು, ಪ್ರಕಟನೆಗಳು, ಕಾರ್ಯಾಗಾರ ಗಳು, ಸಂಶೋಧನವಿದ್ಯಾರ್ಥಿಗಳಿಗೆ ಉನ್ನತ ಪದವಿಗಳಿಗೆಂದು ಮಾರ್ಗದರ್ಶನ ಇವನ್ನು ನಡಸಿಕೊಂಡು ಬರುತ್ತಿದೆ.
ಸರ್ಕಾರದ ಕಡೆಯಿಂದ ೨೭-೫-೨೦೧೩ರಲ್ಲಿ ನಡೆದ ಒಂದು ಸಮಾಲೋಚನ ಸಭೆಯಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖಾಸಚಿವರ ಅಧ್ಯಕ್ಷತೆಯಲ್ಲಿ ಚರ್ಚೆ ನಡೆದು, ಸರ್ಕಾರ ಕಾರ್ಯನಿರ್ವಹಣೆಯಲ್ಲಿ ತನ್ನ ಪಾತ್ರ ಮತ್ತು ಕಛೇರಿ ಎಲ್ಲಿ ಇರಬೇಕೆಂದು ವಿಶೇಷವಾಗಿ ಚರ್ಚಿಸಿತೆಂದು ನನ್ನ ಜ್ಞಾಪಕ. ಈಚೆಗೆ ೨೦೧೩ರ ಅಕ್ಟೋಬರ್ ತಿಂಗಳಲ್ಲಿ ಭಾರತೀಯ ಭಾಷಾಸಂಸ್ಥಾನವು ಅನುಷ್ಠಾನಕ್ಕೆ ಮಾರ್ಗಸೂಚಿಸಿದ್ಧತೆಯ ಸಭೆ ಏರ್ಪಡಿಸಿತು; ೨೦೧೪ರಲ್ಲಿ ೨ ದೊಡ್ಡ ಪ್ರಮಾಣದ ಕಾರ್ಯಾಗಾರಗಳು ಹತ್ತು-ಹತ್ತು ದಿನಗಳ ಕಾಲ ಇಲ್ಲಿಯೇ ನಡೆದುವು. ೨ ಪುಸ್ತಕಗಳನ್ನು ಕೇಂದ್ರ ಹೊರತಂದಿತು. ಈ ಎಲ್ಲ ಚಟುವಟಿಕೆಗಳಲ್ಲಿಯೂ ನಾನು ಬಲುಮಟ್ಟಿಗೆ ಭಾಗವಹಿಸಿದ್ದೇನೆ, ಸಮಾಲೋಚನ ಸಭೆಗಳಲ್ಲಿ ಪಾಲುಗೊಂಡಿದ್ದಾನೆ, ಯೋಜನೆಗಳ ನೀಲನಕ್ಷೆಗಳನ್ನು ಸಿದ್ಧಪಡಿಸಿದ್ದೇನೆ, ಕಾರ್ಯಾಗಾರಗಳನ್ನು ನಿರ್ವಹಿಸಿದ್ದೇನೆ, ಸಂವಾದಗಳಲ್ಲಿ ಭಾಗವಹಿಸಿದ್ದೇನೆ, ಉಪನ್ಯಾಸಗಳನ್ನು ನೀಡಿದ್ದೇನೆ.
ಇನ್ನೂ ಈಚೆಗೆ ಕರ್ನಾಟಕ ಅಭಿವೃದ್ಧಿ ಪ್ರಾಧಿಕಾರ ೨೦೧೪ರ ಡಿಸೆಂಬರ್ ತಿಂಗಳಲ್ಲಿ ಒಂದು ಸಮಾಲೋಚನಸಭೆ ನಡಸಿ, ಉದ್ದೇಶಿತವಾದ ರೀತಿಯಲ್ಲಿ, ಪೂರ್ಣ ಪ್ರಮಾಣದಲ್ಲಿ ಶಾಸ್ತ್ರೀಯಭಾಷೆಯ ಯೋಜನೆಗಳಿಗೆ ಚಾಲನೆ ನೀಡಲು ಕೈಕೊಳ್ಳಬೇಕಾದ ಕ್ರಮಗಳನ್ನು ಮತ್ತೆ ಚರ್ಚಿಸಿತು. ಯೋಜನೆಗಳ ಕಾರ್ಯನಿರ್ವಹಣೆಗೆ ಕಛೇರಿ ಬೆಂಗಳೂರಿನಲ್ಲಿ ನೆಲೆಯಾಗಬೇಕೆಂದೂ ಮೈಸೂರಿನ ಭಾರತೀಯ ಭಾಷಾಸಂಸ್ಥಾನ ಆರ್ಥಿಕ, ಆಡಳಿತಾತ್ಮಕ ಹಾಗೂ ಶೈಕ್ಷಣಿಕ ವ್ಯವಹಾರಗಳ ಸಂಬಂಧದಲ್ಲಿ ಕೇಂದ್ರದ ಮಾನವಸಂಪನ್ಮೂಲ ಸಚಿವಾಲಯದ ನಿರ್ದೇಶನದಂತೆ ತಕ್ಕ ಏರ್ಪಾಡುಗಳನ್ನು ಮಾಡ ಬೇಕೆಂದೂ ನಿರ್ಧರಿಸಿತು. ಕಛೇರಿ ಮೈಸೂರಿನಲ್ಲಿಯೇ ಇರಲೆಂದು ನಾನು ವಾದಿಸಿದ್ದೆ.
ಭಾರತೀಯ ಭಾಷಾಸಂಸ್ಥಾನವು ಸಿಬ್ಬಂದಿವರ್ಗದ ನೇಮಕಾತಿಗೆ ವಿಧಿವಿಧಾನಗಳನ್ನು ರೂಪಿಸಿ, ಪ್ರಕಟನೆ ಕೊಟ್ಟಿತು. ಸಂದರ್ಶನಗಳು ನಡೆದರೂ ಆಯ್ಕೆಯ ತೊಡಕುಗಳು ಬಂದುವು. ಈ ತೊಡಕುಗಳು ಶೀಘ್ರವಾಗಿ ನಿವಾರಣೆಗೊಂಡು, ಶೈಕ್ಷಣಿಕಯೋಜನಾಧಿಕಾರಿ ನೇಮಕವಾಗಬೇಕಾಗಿದೆ. ಈಗ ನಮಗೆ ಬೇಕಾಗಿರುವುದು ಒಬ್ಬ ದಕ್ಷ-ಕ್ರಿಯಾಶೀಲ-ಪ್ರಾಮಾಣಿಕ ಶೈಕ್ಷಣಿಕ ಯೋಜನಾಧಿಕಾರಿ. ಉಳಿದ ಕೆಲಸಗಳನ್ನು ಆತ ಸ್ವಂತವಿವೇಚನೆ ಶಕ್ತಿಗಳಿಂದ ನಿರ್ವಹಿಸಲಿ. ಕರ್ನಾಟಕಸರ್ಕಾರವೂ ಭಾರತೀಯ ಭಾಷಾಸಂಸ್ಥಾನವೂ ಈಗ ಮೈಚಳಿ ಕೊಡವಿಕೊಂಡು ಎದ್ದು, ಅಂಥ ಅಧಿಕಾರಿಯನ್ನು ಆಯ್ಕೆಮಾಡಲು ಅತ್ಯಂತ ತುರ್ತಾಗಿ ಗಮನ ಕೊಡಬೇಕು. ತಕ್ಕ ವಯೋಮಿತಿಯ ಸಮರ್ಥರು ಸಿಕ್ಕದಿದ್ದರೆ ಒಂದು ವರ್ಷದ ತಾತ್ಪೂರ್ತಿಕವ್ಯವಸ್ಥೆಯ ಆಧಾರದಮೇಲೆ ತಾವೇ ಅಂಥ ಸಮರ್ಥರನ್ನು ಆಹ್ವಾನಿಸಿ, ಅವರಿಗೆ ಎಲ್ಲ ಸೌಕರ್ಯಗಳನ್ನೂ ಮಾಡಿಕೊಟ್ಟು ಕೆಲಸಕ್ಕೆ ಚಾಲನೆ ಕೊಡುವಂತೆ ವ್ಯವಸ್ಥೆಮಾಡಲು ನಾನು ಮನವಿಮಾಡುತ್ತೇನೆ. ಈಗ ಉದ್ದೇಶಿತ ರೀತಿಯಲ್ಲಿ, ಪೂರ್ಣಪ್ರಮಾಣದಲ್ಲಿ ಶಾಸ್ತ್ರೀಯ ಕನ್ನಡ ಭಾಷೆಯ ಹಲವು ಯೋಜನೆಗಳನ್ನು ಹಂತಹಂತವಾಗಿ ಎತ್ತಿಕೊಳ್ಳುವ, ಸಾಧ್ಯಮಾಡುವ, ಅದಕ್ಕಾಗಿ ದೊರೆಯುವ ಅನುದಾನಗಳನ್ನು ಚೆನ್ನಾಗಿ ಬಳಸುವ, ಯೋಜನೆಗಳ ಅರ್ಥಪೂರ್ಣ ಪ್ರಯೋಜನ ಜನಸಮುದಾಯಕ್ಕೆ ಒದಗುವಂತೆ ಮಾಡುವ ಕಡೆ ಕರ್ನಾಟಕಸರ್ಕಾರವೂ ಭಾರತೀಯ ಭಾಷಾಸಂಸ್ಥಾನವೂ ಕಾರ್ಯಪ್ರವೃತ್ತವಾಗಲಿ ಎಂದು ಈ ವೇದಿಕೆಯಿಂದ ಮನವಿಮಾಡುತ್ತೇನೆ. ಈಗಾಗಲೇ ನಡೆದಿರುವ ಕೆಲಸಗಳ ಮಾದರಿ ಕಣ್ಣೆದುರಿಗಿದೆ; ಮುದ್ರಿತವಾಗಿರುವ ಕಾರ್ಯವಿಧಾನಗಳ ಹಾಗೂ ಕಾರ್ಯಯೋಜನಗಳ ಪ್ರಪತ್ರಗಳು ನಾಲ್ಕಾರು ಸಿದ್ಧವಾಗಿವೆ; ಜೊತೆಗೆ ಸಮಾಲೋಚನಸಭೆಗಳಲ್ಲಿ ವಿದ್ವಾಂಸರು ವಿಚಾರಮಾಡಿ ಒಪ್ಪಿಸಿರುವ ಅದೇ ಉದ್ದೇಶದ ಸಲಹೆ ಸೂಚನೆಗಳೂ ನೀಲನಕ್ಷೆಗಳೂ ಇವೆ. ಇವನ್ನು ಬಳಸಿ ಮುನ್ನಡೆಯುವುದು ಕಷ್ಟವಾಗದು.
ಇವುಗಳನ್ನು ನಾನು ಇಲ್ಲಿ ವಿಸ್ತಾರವಾಗಿ ವಿವೇಚಿಸುವುದಕ್ಕೆ ಸಾಧ್ಯವಾಗದು. ಸಾಮಾನ್ಯ ವಿದ್ಯಾವಂತರು ನಮ್ಮ ಹಿರಿಯರು ಮಾಡಿಟ್ಟುಹೋಗಿರುವ ಪ್ರಾಚೀನ ಸಾಹಿತ್ಯವೆಂಬ ಬೌದ್ಧಿಕ ಆಸ್ತಿಯನ್ನು ಕಾಪಾಡಿಕೊಳ್ಳುವುದು, ತಿಳಿದು ಪ್ರಯೋಜನ ಪಡೆಯುವುದು, ತಿಳಿಯದವರಿಗೆ ತಿಳಿಸಿಹೇಳುವುದು ಎನ್ನುವ ಪುಣ್ಯಕಾರ್ಯದಲ್ಲಿ ನಾವು ಭಾಗಿಗಳಾಗ ಬೇಕಾಗಿದೆ. ಈ ಪುಣ್ಯಕಾರ್ಯದಲ್ಲಿ ವಿಶ್ವವಿದ್ಯಾನಿಲಯಗಳೂ ಅಕಾಡೆಮಿಗಳೂ ಪ್ರತಿಷ್ಠಾನಗಳೂ ಸಾಹಿತ್ಯಪರಿಷತ್ತೂ ತಪ್ಪದೆ ಸೇರಿಕೊಳ್ಳಬೇಕಾಗಿದೆ.
ಶಾಸ್ತ್ರೀಯ ಕನ್ನಡಭಾಷೆಯ ಸಕಲಪಠ್ಯಗಳೂ ಪರಾಮರ್ಶನಗ್ರಂಥಗಳೂ ಒಂದೇ ಕಡೆ ಅಧ್ಯಯನ ಸಂಶೋಧನಗಳಿಗೆ ದೊರೆಯುವುದು ಅವಶ್ಯವಿದ್ದು, ಈ ಸಂಬಂಧದಲ್ಲಿ ಆಧುನಿಕತಂತ್ರಜ್ಞತೆಯ ಎಲ್ಲ ಮುಖಗಳ ಪ್ರಯೋಜನಗಳನ್ನೂ ಪಡೆಯುವುದು ಸಾಧ್ಯವಿದೆ. ಸಂರಕ್ಷಣೆ-ಸಂಗ್ರಹಣೆ-ಸಂಪಾದನೆಗಳಿಗೆ, ಅಧ್ಯಯನ-ಅಧ್ಯಾಪನ-ಸಂಶೋಧನೆಗಳಿಗೆ ಯಾವ ಪ್ರಾಮುಖ್ಯ ದೊರೆಯುವುದೋ ಅದೇ ಪ್ರಾಮುಖ್ಯ ಪ್ರಕಟನೆ-ಪ್ರಸಾರ-ಪರಿಪಾಚನ ಗಳಿಗೆ (Pubಟiಛಿಚಿಣioಟಿ-ಣಡಿಚಿಟಿsmissioಟಿ-ಚಿssimiಟಚಿಣioಟಿ) ಕೊಡಬೇಕಾಗಿದೆ. ಈ ವಿಷಯದಲ್ಲಿ ಉಪನ್ಯಾಸಗಳೂ ಕಾರ್ಯಾಗಾರಗಳೂ ಪ್ರಕಟನೆಗಳೂ ಕೈಪಿಡಿಗಳೂ ವಾಚಿಕೆಗಳೂ ಎಲ್ಲವೂ ಸಹಕಾರಿಯಾಗಬಹುದಾಗಿದೆ. ಈಚೆಗೆ ನಾನು ಹಳಗನ್ನಡಭಾಷೆಯ ಸಾಮಾನ್ಯ ಪರಿಚಯಕ್ಕೆಂದು ಬರೆದ ‘ಹಳಗನ್ನಡ ವ್ಯಾಕರಣಪ್ರವೇಶಿಕೆ’ಯನ್ನು ತಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ.
ಒಂದು ಸಂತೋಷದ ಸುದ್ದಿಯೆಂದರೆ, ಗಣ್ಯ ಸಂಸ್ಕೃತವಿದ್ವಾಂಸರಾದ ಡಾ. ಷೆಲ್ಡನ್ ಪೊಲಾಕ್ ಅವರು ಕನ್ನಡದ ಪ್ರಾಚೀನಕಾವ್ಯಗಳನ್ನು ಇಂಗ್ಲಿಷಿಗೆ ವಿದ್ವಾಂಸರ ಸಹಕಾರದಿಂದ ಭಾಷಾಂತರಿಸುವ ದೊಡ್ಡ ಯೋಜನೆಯನ್ನು ಪ್ರತಿಷ್ಠಾನವೊಂದರ ನೆರವಿನಿಂದ ಕಾರ್ಯಗತ ಗೊಳಿಸುತ್ತಿರುವುದು, ಹಾಗೆಯೇ ವಚನಸಾಹಿತ್ಯದ ವಿವಿಧಭಾಷೆಯ ಅನುವಾದಗಳ ಯೋಜನೆಗಳನ್ನು ಕೂಡ ಬೇರೆ ಬೇರೆ ಸಂಸ್ಥೆಗಳು ಕೈಗೂಡಿಸುತ್ತಿರುವುದು. ಈ ಯೋಜನೆಗಳು ಇನ್ನಷ್ಟು ಮತ್ತಷ್ಟು ವ್ಯಾಪಕವಾಗಿ ನಡೆದು ಕನ್ನಡದ ಸಾಹಿತ್ಯ ಸಂಪತ್ತು ಬೇರೆ ದೇಶಗಳಿಗೂ ತಿಳಿಯುವಂತಾಗಲಿ ಎಂದು ನಾನು ಹಾರೈಸುತ್ತೇನೆ.

ಸಮಸ್ಯೆಗಳ ಸರಪಳಿ
ಜ್ವಲಂತಸಮಸ್ಯೆಗಳು ನಮ್ಮ ದೇಶದ ಒಂದೊಂದು ರಾಜ್ಯವನ್ನೂ ಕಿತ್ತು ತಿನ್ನುತ್ತಿವೆ, ಸಾಮಾಜಿಕಸುಸ್ಥಿತಿಗೆ ಮಾರಕವಾಗಿವೆ. ಸಮಸ್ಯೆಗಳು ಎಲ್ಲ ದೇಶಕ್ಕೂ ಎಲ್ಲ ಕಾಲಕ್ಕೂ ಇದ್ದಂಥವೇ, ಇರುವಂಥವೇ. ಇವುಗಳ ಪರಿಹಾರದಲ್ಲಿ ರಾಜ್ಯದ ಜನತೆಯ ಸಹಿಷ್ಣುತೆಯಿದೆ, ದೂರದರ್ಶಿತ್ವದ ವಿವೇಕವಿದೆ, ಪರಸ್ಪರಸಾಮರಸ್ಯದ ಕೌಶಲವಿದೆ, ಔದಾರ‍್ಯವಿದೆ. ರಾಜಕೀಯ ಹಿತಾಸಕ್ತಿಗಳು ಅಡ್ಡಗಾಲು ಹಾಕದಿದ್ದರೆ, ಒಣಪ್ರತಿಷ್ಠೆಗಳು ಮುಂದಾಗದಿದ್ದರೆ ಮಾತ್ರ ಇದು ಸಾಧ್ಯ.
ನಮ್ಮ ಸಮಸ್ಯೆಗಳು ಹಲವು ಬಗೆ. ಜಾತಿಗಳ ಮೇಲಾಟ ಮತ್ತು ಹೊಡೆದಾಟ, ಧನದಾಹಮೂಲವಾದ ಭ್ರಷ್ಟಾಚಾರ, ನೈತಿಕತೆ ಮತ್ತು ಸಂಯಮ ಕಳೆದುಹೋದ ಅತ್ಯಾಚಾರ, ಮಾನವೀಯ ಸಂಬಂಧಗಳ ವಾಣಿಜ್ಯೀಕರಣ, ಅಕ್ಷರವಿದ್ಯೆಯೂ ಉದ್ಯೋಗದ ಅವಕಾಶವೂ ಇಲ್ಲದ ದಾರಿದ್ರ್ಯ ಇವೆಲ್ಲ ಒಂದು ತೆರನಾದವು. ರಾಜ್ಯರಾಜ್ಯಗಳ ನಡುವೆ ಗಡಿಸಮಸ್ಯೆಗಳು, ಅನಾವೃಷ್ಟಿಯಿಂದ ಉಂಟಾಗುವ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆಗಳು, ಅತಿವೃಷ್ಟಿಯಿಂದ ಉಂಟಾಗುವ ಬೆಳೆನಷ್ಟದ ಪರಿಹಾರದ ಸಮಸ್ಯೆಗಳು, ಆಹಾರಧಾನ್ಯಗಳ ನೈಜ ಮತ್ತು ಕೃತಕ ಅಭಾವದ ಹಾಗೂ ಬೆಲೆಯೇರಿಕೆಯ ಸಮಸ್ಯೆಗಳು, ವಿದ್ಯಾಭ್ಯಾಸಸಂಬಂಧವಾದ ವಿಧವಿಧವಾದ ಸಮಸ್ಯೆಗಳು – ಹೀಗೆ ಹೇಳುತ್ತಹೋದರೆ ಸಮಸ್ಯೆಗಳ ಸರಪಳಿಗೆ ಬಳೆಗಳ ಮೇಲೆ ಬಳೆಗಳನ್ನು ಕೂಡಿಸಬೇಕಾಗುತ್ತದೆ.
ನಮ್ಮ ಜನದಲ್ಲಿ ಸಂಯಮ ವಿವೇಕ ಗಾಂಭೀರ್ಯ ಮೊದಲ ಗಳಿಕೆಯಾಗಬೇಕು. ನಮ್ಮ ರಾಜಕೀಯಸ್ಥರು ಪಕ್ಷಭೇದಗಳನ್ನು ಮರೆತು ಸ್ವಂತ ಹಿತಾಸಕ್ತಿಗಳನ್ನು ಹಿಂದಿಕ್ಕಿ ಜನತಾಜನಾರ್ದನನು ಕೊಟ್ಟ ಜನಸೇವೆಯ ಅವಕಾಶವನ್ನು ಸದುಪಯೋಗಪಡಿಸಿ ಕೊಳ್ಳಬೇಕು. ಅದು ಅವರ ಜವಾಬ್ದಾರಿ ಕೂಡ. ಆತ್ಮಾಭಿಮಾನ ಸ್ವಾವಲಂಬನೆ ಸೇವಾನಿಷ್ಠೆ ಮುಪ್ಪರಿಗೊಂಡರೆ ಸಮಾಜಕ್ಕೆ, ರಾಜ್ಯಕ್ಕೆ ತಂತಾನೆ ಶಕ್ತಿ ಕೂಡಿಕೊಳ್ಳುತ್ತದೆ.
ಕರ್ನಾಟಕದ ಹಿತರಕ್ಷಣೆಗಾಗಿ ಹಲವು ಆಯೋಗಗಳು ನೇಮಕಗೊಂಡುವು. ಅವು ಪ್ರಯೋಗಸಾಧ್ಯವಾದ ಸಲಹೆ ಸೂಚನೆ ಮಾರ್ಗದರ್ಶನ ನೀಡಿದುವು. ಆದರೆ ಯಾವುವೂ ತೃಪ್ತಿಕರವಾಗಿ ಅನುಷ್ಠಾನಕ್ಕೆ ಬರಲಿಲ್ಲವೇಕೆ? ಹೊಸತನದ ಹುಡುಕಾಟಕ್ಕೆ ಇದು ಕೂಡ ಒಂದು ವಿಷಯವೇ.
ಮಹಾರಾಷ್ಟ್ರಿಕರ ರಾಜಸ ಸ್ವಭಾವ ಕಾರಣವಾಗಿ ಬೆಳಗಾವಿ ಕರ್ನಾಟಕದ ಅಧಿಕೃತ ಭಾಗವಾಗಿಯೂ, ಇನ್ನೂ ಸಮಸ್ಯೆಯಾಗಿ ಉಳಿದಿದೆ. ಕನ್ನಡಿಗರ ಸಾತ್ತ್ವಿಕ ಸ್ವಭಾವ ಕಾರಣವಾಗಿ, ಕಾಸರಗೋಡು ಸೇರಿದಂತೆ ಇನ್ನೂ ಹಲವು ಪ್ರದೇಶಗಳು ನಮ್ಮವಾಗದೆ ಸಮಸ್ಯೆಯಾಗಿ ಉಳಿದಿದೆ; ಗೋವಾದ ಬೈನಾದಲ್ಲಿರುವ ಕನ್ನಡಿಗರು ನೆಲೆ ಕಳೆದುಕೊಳ್ಳುತ್ತಿರು ವುದು ನಮ್ಮನ್ನು ಆತಂಕಕ್ಕೆ ಒಳಗು ಮಾಡಿದೆ. ನಮ್ಮ ಹೋರಾಟದಲ್ಲಿ ಕಸುವಿಲ್ಲದಾಗಿದೆ, ಬಿಸಿಯಿಲ್ಲದಾಗಿದೆ.
ಇನ್ನು ನದಿನೀರಿನ ಸಮಸ್ಯೆ. ಇಲ್ಲಿಯೂ ಹೋರಾಟದಲ್ಲಿ ತಮಿಳುನಾಡು ಸಾಮಾನ್ಯವಾಗಿ ಗೆಲವು ಸಾಧಿಸುತ್ತ, ಕಾವೇರಿ ನದಿಯ ನೀರಿನ ಹಂಚಿಕೆ ವಿವಾದವಾಗಿಯೇ ಉಳಿದಿದೆ. ಉತ್ತರಕರ್ನಾಟಕ ಭಾಗದಲ್ಲಿ ಮಹದಾಯಿ-ಮಲಪ್ರಭಾ ನದಿಗಳ ಕಳಸಾ-ಬಂಡೂರಿ ನಾಲೆಗಳ ಸಂಬಂಧದಲ್ಲಿ ರಾಜ್ಯಗಳ ನಡುವೆ ತಿಕ್ಕಾಟವಿದೆ. ಮಧ್ಯ ಮತ್ತು ದಕ್ಷಿಣ ಕರ್ನಾಟಕದಲ್ಲಿ ಬಯಲುಸೀಮೆಯ ಕೆಲವು ಜಲಾಭಾವದ ಜಿಲ್ಲೆಗಳಿಗೆ ನೀರಿನ ಹರಿವು-ನೇತ್ರಾವತಿಯ ಕೆಲವು ಉಪನದಿಗಳ ನೀರಿನ ಬಳಕೆ ಎಂಬುದರ ಸಂಬಂಧದಲ್ಲಿ ಚಳವಳಿಗಳು ನಡೆಯುತ್ತಿವೆ. ಪರಿಸರಸಂರಕ್ಷಣೆಯ ನ್ಯಾಯವಾದ ನಿಲವಿನಲ್ಲಿ ಪರಿಸರವಾದಿಗಳೂ ಹೋರಾಟದ ಕಣದಲ್ಲಿದ್ದಾರೆ. ನಮ್ಮ ದೇಶದಲ್ಲಿ ಜಲಸಂಪನ್ಮೂಲಗಳಿಗೆ ಕೊರತೆಯಿಲ್ಲ, ಆದರೆ ಬಳಕೆಯಲ್ಲಿ ವಿಚಕ್ಷಣೆಯಿಲ್ಲದ್ದೇ ತೊಂದರೆಗಳಿಗೆ ಕಾರಣವೆಂದು ಪರಿಣತರು ಹೇಳುತ್ತಾರೆ; ರಾಷ್ಟ್ರೀಯ ಜಲನೀತಿ ಮತ್ತು ನದಿಗಳ ರಾಷ್ಟ್ರೀಕರಣ ಪರಿಹಾರವೆನ್ನುತ್ತಾರೆ, ಹಾಗಲ್ಲದೆ ನ್ಯಾಯಮಂಡಲಿಗಳೂ ಆಯೋಗಗಳೂ ಮಾಡುವ ಶಿಫಾರಸುಗಳೂ ನಿರ್ದೇಶನಗಳೂ ರಾಜ್ಯ ರಾಜ್ಯಗಳ ನಡುವೆ ತೃಪ್ತಿ ತರಲಾರವು ಎನ್ನುತ್ತಾರೆ. ಪರಿಸರತಜ್ಞರೂ ನೀರಾವರಿ ವಿಭಾಗದ ವಿಜ್ಞಾನಿಗಳೂ ರಾಜಕೀಯಸ್ಥರೂ ಜನರ ಸಹಕಾರ ಪಡೆದು ಎಲ್ಲರಿಗೂ ಸಮಾಧಾನವಾಗುವಂತೆ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ; ಅದಕ್ಕೆ ತಕ್ಕ ಮಾತುಕತೆಗಳಿಗೆಂದು ವೇದಿಕೆಗಳಿವೆ.

Leave a Reply

Your email address will not be published. Required fields are marked *

8 − six =