ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ‘ಭಾಷೆಯನ್ನು ಉಳಿಸಿ, ಬೆಳೆಸುವುದು ಸಾಹಸ ಕಾರ್ಯವೇನೂ ಅಲ್ಲ. ಅದನ್ನು ಎಲ್ಲ ಆಯಾಮಗಳಲ್ಲಿ ಬಳಸಿದರೆ ಅದು ಸದಾ ಜೀವಂತವಾಗಿರುತ್ತದೆ’ ಎಂದು ಬೈಂದೂರು ರೋಟರಿ ಮಾಜಿ ಅಧ್ಯಕ್ಷ ಗೋವಿಂದ ಎಂ. ಹೇಳಿದರು.
ಬೈಂದೂರು ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಅಕ್ಕಮ್ಮ ಮತ್ತು ಪರಮೇಶ್ವರ ಹೆಬ್ಬಾರ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ ಮಾತನಾಡಿದರು.
ತಾಯ್ನುಡಿಯನ್ನು ಉಳಿಸಿ ಬೆಳೆಸುವ ಜವಬ್ದಾರಿ ಅದರ ವಾರಸುದಾರರ ಮೇಲಿದೆ. ಅದರ ಬಗೆಗೆ ಅಭಿಮಾನ ತಾಳಿ ಮಾತು, ಬರಹಗಳಲ್ಲಿ ಬಳಸಿದರೆ ಅದು ಮುಂದಿನ ತಲೆಮಾರಿಗೆ ವರ್ಗಾವಣೆಯಾಗುತ್ತದೆ. ಕುಂದಗನ್ನಡವು ಅತ್ಯಂತ ಸುಲಭ ಹಾಗೂ ಸಂಕ್ಷಿಪ್ತ ಪದಗಳಿಂದ ಕೂಡಿದ್ದು ಮಾತೃಭಾಷೆಯಾಗಿರುವವರು ಅದರ ಮೂಲ ಸ್ವರೂಪದಲ್ಲಿ ಅದನ್ನು ಬಳಸಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಬೈಂದೂರು ತಾಲ್ಲೂಕು ಘಟಕದ ಅಧ್ಯಕ್ಷ ರವೀಂದ್ರ ಎಚ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್, ಶಿಕ್ಷಣ ಸಂಯೋಜಕ ಅಬ್ದುಲ್ ರವೂಫ್, ದತ್ತಿದಾನಿ ಪ್ರಕಾಶ ಹೆಬ್ಬಾರ್ ಮುಖ್ಯ ಅತಿಥಿಗಳಾಗಿದ್ದರು. ಬೈಂದೂರು ಘಟಕದ ಗೌರವ ಕಾರ್ಯದರ್ಶಿ ಗಣಪತಿ ಹೋಬಳಿದಾರ , ಸಂಘಟನಾ ಕಾರ್ಯದರ್ಶಿ ಮಂಜುನಾಥ ದೇವಾಡಿಗ ಇದ್ದರು.