ಕುಂದಾಪುರ: ಬಸ್ರೂರು ಶ್ರೀ ಕಾಶೀ ಮಠದಲ್ಲಿ ನೂತನವಾಗಿ ನಿರ್ಮಿಸಿರುವ ಗುರುವರ್ಯರ ದೇವರ ಕೋಣೆ ಹಾಗೂ ವರದೇಂದ್ರ ಸಭಾಗೃಹ ಸಮರ್ಪಣಾ ಕಾರ್ಯಕ್ರಮ ಕಾಶೀ ಮಠಾದೀಶ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪಟ್ಟ ಶಿಷ್ಯ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತದಿಂದ ನೆರವೇರಿತು.
ಸಭಾ ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿಯ ಬಿ.ಎನ್.ಪ್ರಭು ಸ್ವಾಗತಿಸಿದರು ಹಾಗೂ ಬಸ್ರೂರು ಶಾಖಾ ಮಠದ ಮುಖ್ಯಸ್ಥರಾದ ಶ್ರೀಧರ ವಿಠ್ಠಲ ಕಾಮತರವರು ಪ್ರಸ್ಥಾವನೆಗೈದರು. ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಆಶೀರ್ವಚಿಸುತ್ತಾ ಶ್ರೀ ಕಾಶೀ ಮಠದ ಪರಂಪರೆಯಲ್ಲಿ ವಾರಣಾಸಿಯ ಮೂಲ ಮಠದ ನಂತರ ಎರಡನೇ ಮಠ ಹಾಗೂ ದಕ್ಷಿಣ ಭಾರತದ ಮೊದಲ ಶಾಖಾ ಮಠವಾಗಿ ಬಸ್ರೂರಿನಲ್ಲಿ ಸ್ಥಾಪನೆಗೊಂಡಿತು. ಗುರುಪರಂಪರೆಯ ಎಲ್ಲಾ ಯತಿಗಳು ಇಲ್ಲಿ ಮೊಕ್ಕಾಂ ಹೂಡಿದ್ದಾರೆ. ಅಲ್ಲದೇ ಶ್ರೀಮತ್ ಕೇಶವೇಂದ್ರ ತೀರ್ಥ ಸ್ವಾಮೀಜಿ ಹಾಗೂ ಶ್ರೀಮತ್ ಭುವನೇಂದ್ರ ತೀರ್ಥ ಸ್ವಾಮೀಜಿಯವರ ಬೃಂದಾವನದ ಬಗ್ಗೆ ಕೂಡ ಅವರು ಉಲ್ಲೇಖಿಸಿದರು. ಶ್ರೀ ಹರಿ ಗುರು ಸೇವಾ ಪ್ರತಿಷ್ಟಾನದ ಕುಂದಾಪುರ ಶ್ರೀನಿವಾಸ ಪ್ರಭು ಹಾಗೂ ಎನ್. ಗಣೇಶ ಮಲ್ಯರನ್ನು ಶ್ರೀಗಳು ಫಲ ಮಂತ್ರಾಕ್ಷತೆ ನೀಡಿ ಹರಸಿದರು.