ಬೈಂದೂರು: ನಮ್ಮ ಗ್ರಾಮ ವ್ಯಾಪ್ತಿಯ ಗೋಮಾಳ ಭೂಮಿ ಗುರುತಿಸಿಕೊಡುವಂತೆ, ಕಂದಾಯ ಇಲಾಖೆಯ ಅಧಿಕಾರಿಗೆ ಕಳೆದ ಹಲವಾರು ವರ್ಷಗಳಿಂದ ಗ್ರಾಮ ಸಭೆಯಲ್ಲಿ ಮನವಿ ಮಾಡುತ್ತಾ, ಇದ್ದೇವೆ, ಇದುವರೆಗೆ ಗೋಮಾಳ ಭೂಮಿ ಗುರುತಿಸುವ ಕಾರ್ಯ ನಡೆದಿಲ್ಲ. ಶೀಘ್ರ ಗೋಮಾಳ ಭೂಮಿ ಹುಡುಕಿಕೊಡಿ ಪ್ಲೀಸ್ ಎಂದು ಗ್ರಾಮಸ್ಥರು ಕಂದಾಯ ಅಧಿಕಾರಿಗಳಲ್ಲಿ ತಮ್ಮ ಅಳಲು ತೋಡಿಕೊಂಡ ಘಟನೆ ಬಿಜೂರು ಗ್ರಾಮಸಭೆಯಿಲ್ಲಿ ನಡೆಯಿತು.
ಬಿಜೂರು ಗ್ರಾಮ ಪಂಚಾಯಿತಿನ ಮೊದಲ ಸುತ್ತಿನ ಗ್ರಾಮ ಸಭೆಯು ಗ್ರಾ.ಪಂ. ಅಧ್ಯಕ್ಷೆ ಲೋಲಾಕ್ಷಿ ದೇವಾಡಿಗ ಅವರ ಅಧ್ಯಕ್ಷತೆಯಲ್ಲಿ ಕಂಚಿಕಾನ್ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನಡೆಯಿತು.
ಗ್ರಾಮ ವ್ಯಾಪ್ತಿಯಲ್ಲಿ ಗೋಮಾಳ ಭೂಮಿ ಗುರುತಿಸದ ಕಾರಣ ಜಾನುವಾರುಗಳು ಕೃಷಿ ಭೂಮಿಗೆ ನುಗ್ಗುತ್ತಿವೆ, ಇದರಿಂದಾಗಿ ವ್ಯವಸಾಯ ಮಾಡಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದೆ ಎಂದು ಗ್ರಾಮಸ್ಥ ವೆಂಕಟೇಶ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು, ಇದಕ್ಕೆ ಗ್ರಾಮಸ್ಥರಾದ ಗಣೇಶ್ ಪೂಜಾರಿ, ರಾಜೇಂದ್ರ, ಜಯರಾಮ ಶೆಟ್ಟಿ, ರಾಘವೇಂದ್ರ ಮೊದಲಾದವರು ಧ್ವನಿ ಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮ ಕರಣೀಕ ಮಂಜುನಾಥ ಗೋಮಾಳ ಗುರುತಿಸುವಂತೆ ಈಗಾಗಲೇ ಸರ್ವೇಯರಿಗೆ ಸೂಚನೆ ನೀಡಲಾಗಿದೆ ಎಂದು ಸಮಜಾಯಿಸಿ ನೀಡಿದರು. ನೆಮ್ಮದಿ ಕೇಂದ್ರದಲ್ಲಿ ಆರ್ಟಿಸಿ ಪಡೆಯಲು ದಿನವಿಡಿಲಿ ಸರದಿ ಸಾಲಿನಲ್ಲಿ ನಿಂತು ಕಾಯಬೇಕಾಗಿದೆ, ಆರ್ಟಿಸಿಯನ್ನು ಪಂಚಾಯಿತಿನಲ್ಲಿ ನೀಡಲು ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸರ್ಕಾರ ವಿಧಾನಪರಿಷತ್ತಿನ ಸದಸ್ಯ ಪ್ರತಾಪಶ್ಚಂದ್ರ ಶೆಟ್ಟಿಯವರು ಸದನದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದೆ, ಆದರೆ ಇದುವರೆಗೂ ಆ ವ್ಯವಸ್ಥೆ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಗ್ರಾಮಸ್ಥ ವೆಂಕಟೇಶ ರಾವ್ ಹೇಳಿದರು. ಶೀಘ್ರ ಪಂಚಾಯಿತಿನಲ್ಲಿ ನೀಡಲು ವ್ಯವಸ್ಥೆ ಕಲ್ಪಿಸಲು ನಿರ್ಣಯ ಕಳುಹಿಸಿ ಎಂದು ಅವರು ಆಗ್ರಹಿಸಿದರು.
ನಾಯ್ಕನಕಟ್ಟೆಯಲ್ಲಿರವ ಕೃಷಿ ಯಂತ್ರಮನೆಗೆ ಸರ್ಕಾರ ೭೫ ಲಕ್ಷ ರೂ. ನೀಡಿದೆ, ಆದರೆ ಈಗ ಅದು ಶೋರೂಂ ಆಗಿದಂತಿದೆ, ಇಲ್ಲಿನ ಕೃಷಿ ಯಂತ್ರಗಳಿಗೆ ಸಮರ್ಪಕ ಚಾಲಕ ಇಲ್ಲ, ಅಲ್ಲಿ ವ್ಯವಸ್ಥೆ ಹದಗೆಟ್ಟಿದ್ದು, ಮುಂದಿನ ವರ್ಷ ಇಲ್ಲಿನ ಯಂತ್ರಗಳು ಗುಜರಿ ಅಂಗಡಿಗೆ ಸೇರುವ ಸಾಧ್ಯತೆಯಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಅಲ್ಲಿ ಕೇವಲ ೨ ಕೃಷಿ ಯಂತ್ರಗಳು ಇರುವುದರಿಂದ, ಕೃಷಿಕರು ದುಬಾರಿ ಬೆಲೆ ನೀಡಿ ಖಾಸಗಿ ವ್ಯಕ್ತಿಗಳ ಯಂತ್ರಗಳಿಂದ ಕೃಷಿ ಚಟುವಟಿಕೆ ನಡೆಸಬೇಕಾಗಿದೆ, ಇದನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಹಾನಿ ಸಂವಿಸಿದಾಗ ಇಲಾಖೆ ನೀಡುವ ಪರಿಹಾರದ ಮೊತ್ತ ತುಂಬಾ ಕಡಿಮೆಯಾಗಿದೆ, ಇಂದು ಕೃಷಿ ಚಟುವಟಿಕೆಯ ಉತ್ಪಾದನ ವೆಚ್ಚ ಅಧಿಕವಾಗಿದೆ, ಇಲ್ಲಿನ ವ್ಯವಸ್ಥೆಯ ಅನಾನೂಕೂಲತೆಯಿಂದಾಗಿ ರೈತರು ಆತ್ಮಹತ್ಯೆಯಂತಹ ಮಾಡಿಕೊಳ್ಳುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ತಾ.ಪಂ. ಸದಸ್ಯೆ ಗೌರಿ ದೇವಾಡಿಗ ಬಿಜೂರು, ಮಾರ್ಗದರ್ಶಿ ಅಧಿಕಾರಿ ನಾಗೇಶ್ ನಾಯ್ಕ, ಗ್ರಾಮ ಪಂಚಾಯಿತಿನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು. ಅರಣ್ಯ ಇಲಾಖೆಯ ಭಿರ್ತಿ ರಾಜ್, ಕಂದಾಯ ಇಲಾಖೆಯ ಮಂಜುನಾಥ, ಆರೋಗ್ಯ ಇಲಾಖೆಯ ಶಾಂತಾ ಬಿ., ನಮ್ಮ ಭೂಮಿ ಸಂಸ್ಥೆಯ ಶಾಂತಿ, ಪಶುಸಂಗೋಪನಾ ಇಲಾಖೆಯ ಕಾಳಿಂಗ ಕೊಠಾರಿ, ಮೆಸ್ಕಾಂ ರಾಘವೇಂದ್ರ, ಕೃಷಿ ಇಲಾಖೆಯ ಗೋಪಾಲ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೇದಿತಾ ತಮ್ಮ ಇಲಾಖೆಯ ಮಾಹಿತಿಯ ನೀಡಿದರು. ಕಾರ್ಯದಶಿ ಮಾಧವ ದೇವಾಡಿಗ ನಿರೂಪಿಸಿದರು.