ಬಿದ್ಕಲ್‌ಕಟ್ಟೆ ಶಾಲೆ : ಖಾಸಗಿ ವಾಹಿನಿಯ ವರದಿಗಾರ್ತಿ ಪವಿತ್ರಾರೊಂದಿಗೆ ಮುಕ್ತ ಸಂವಾದ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ವಲಯದ ಬಿದ್ಕಲ್‌ಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ’ಶಾಲೆಗೆ ಬನ್ನಿ ಶನಿವಾರ ಕಲಿಕೆಗೆ ನೀಡಿ ಸಹಕಾರ’ ಕಾರ್ಯಕ್ರಮದಡಿ ತಿಂಗಳ ಕಲಿಕಾ ಪ್ರದರ್ಶನ ಕಾರ್ಯಕ್ರಮದಲ್ಲಿ ದಿಗ್ವಿಜಯ ನ್ಯೂಸ್ ವಾಹಿನಿಯ ವರದಿಗಾರ್ತಿ, ಶಾಲಾ ಹಳೆವಿದ್ಯಾರ್ಥಿ ಕುಮಾರಿ ಪವಿತ್ರ ಅವರೊಂದಿಗೆ ಮಕ್ಕಳು ಮುಕ್ತ ಸಂವಾದ ನಡೆಸಿದರು. ಮಕ್ಕಳು ವಿಭಿನ್ನವಾದ ಪ್ರಶ್ನೆಗಳನ್ನು ಕೇಳುವ ಮೂಲಕ ಟಿ.ವಿ.ವಾಹಿನಿಯ ಕಾರ್ಯಕ್ರಮಗಳು ಹೇಗೆ ರೂಪಿತವಾಗುತ್ತವೆ? ಎಂಬ ಬಗ್ಗೆ ತಮ್ಮ ಮನಸ್ಸಿನಲ್ಲಿ ಮೂಡಿದ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಪಡೆದರು. ಕೆಲವರು ತಾವೂ ವರದಿಗಾರರಾಗಬೇಕೆಂಬ ಆಸೆಯನ್ನು ವ್ಯಕ್ತಪಡಿಸಿ ಸಲಹೆ ಹಾಗೂ ಮಾರ್ಗದರ್ಶನ ಕೇಳಿದರು. ಇನ್ನು ಕೆಲವರು ಇದೇ ಶಾಲೆಯಲ್ಲಿ ಓದಿದ ಪವಿತ್ರಾರವರ ಬಾಲ್ಯದ ದಿನಗಳು, ಬಾಲ್ಯ ಶಿಕ್ಷಣ, ಕಲಿಸಿದ ಗುರುಗಳು, ಆಸಕ್ತಿ ಮೂಡಿದ ಬಗೆ, ಕನಸು ನನಸಾದ ಬಗೆ ಇತ್ಯಾದಿ ವಿಚಾರಗಳಬಗ್ಗೆ ಮುಕ್ತ ಪ್ರಶ್ನೆಗಳನ್ನು ಮುಂದಿಟ್ಟರು.

ಮಕ್ಕಳ ತುಂಟ ಪ್ರಶ್ನೆಗಳಿಗೆ ನಗುಮೊಗದಿಂದಲೇ ಉತ್ತರಿಸಿದ ಪವಿತ್ರ ಕೊನೆಗೆ ಮಕ್ಕಳನ್ನು ಬಳಸಿಕೊಂಡು, ಸುದ್ದಿ ನಿರೂಪಣೆ ಮತ್ತು ನೇರ ವರದಿಯನ್ನು ಮಾಡುವ ವಿಧಾನವನ್ನು ಒಂದು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.

ಸಮಾರಂಭದಲ್ಲಿ ಬಿದ್ಕಲ್‌ಕಟ್ಟೆ ಸಿ.ಆರ್.ಪಿ ಶ್ರೀ ಸುಧಾಕರ ಶೆಟ್ಟಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ಸುಧಾಕರ್, ಮುಖ್ಯೋಪಾಧ್ಯಾಯರಾದ ಶ್ರೀಮತಿ ನಾಗರತ್ನ ಹೆಬ್ಬಾರ್, ಸಹಶಿಕ್ಷಕರುಗಳಾದ ಶ್ರೀ ಸತೀಶ್ ಶೆಟ್ಟಿಗಾರ್, ಶ್ರೀಮತಿ ರಮಣಿ, ಶ್ರೀಮತಿ ಜ್ಯೋತಿಲಕ್ಷ್ಮಿ, ಶ್ರೀಮತಿ ಚಿತ್ರಾ, ಅತಿಥಿ ಶಿಕ್ಷಕಿಯರಾದ ಶ್ರೀಮತಿ ಮಹಾಲಕ್ಷ್ಮೀ, ಶ್ರೀಮತಿ ಭಾರತಿ, ಅವಕಾಶ ಫೌಂಡೇಷನ್ ಶಿಕ್ಷಕಿ ಶ್ರೀಮತಿ ಸವಿತಾ ಡಿ, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು.

ಪ್ರಾರಂಭದಲ್ಲಿ ಸಹಶಿಕ್ಷಕ ಸತೀಶ್ ಶೆಟ್ಟಿಗಾರ್ ಸರ್ವರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರೆ, ಮುಖ್ಯೋಪಾಧ್ಯಾಯರಾದ ನಾಗರತ್ನ ವಂದಿಸಿದರು.

Leave a Reply

Your email address will not be published. Required fields are marked *

4 × five =