ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾನೂನು ಸೇವಾ ಪ್ರಾಧಿಕಾರದ ಮೂಲಕ ರಾಜ್ಯದ 30 ಜಿಲ್ಲೆ ಹಾಗೂ 149 ತಾಲೂಕುಗಳ ಪ್ರತಿಯೊಂದು ಹಳ್ಳಿಗಳಲ್ಲಿ ಕಾನೂನು ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ರಾಜ್ಯದ 69 ಸಾವಿರಕ್ಕೂ ಹೆಚ್ಚು ಗ್ರಾಮದಲ್ಲಿನ ಕಟ್ಟಕಡೆಯ ವ್ಯಕ್ತಿಗೂ ಕಾನೂನಿನ ಅರಿವು ಮತ್ತು ನೆರವು ನೀಡುವ ಉದ್ದೇಶದಿಂದ ಪ್ರಾಧಿಕಾರ ಈ ಕಾರ್ಯಕ್ರಮವನ್ನು ನೀಡುತ್ತಿದೆ ಎಂದು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶಿಧರ ಶೆಟ್ಟಿ ಹೇಳಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಅರಣ್ಯ ಇಲಾಖೆ ಉಡುಪಿ, ಕುಂಭಾಸಿ ಗ್ರಾಮ ಪಂಚಾಯತ್ ಮತ್ತು ಕೊರಗ ಸಂಘಟನೆಗಳ ಸಹಯೋಗದೊಂದಿಗೆ 75ನೇ ಸ್ವಾತಂತ್ರ್ಸೋವದ ಅಮೃತ ಮಹೋತ್ಸವದ ಆಚರಣೆಯ ಅಂಗವಾಗಿ ಕುಂಭಾಸಿ ಮಕ್ಕಳ ಮನೆಯಲ್ಲಿ ಶನಿವಾರ ಜರುಗಿದ ಬುಡಕಟ್ಟು ಜನರಿಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅವರು ಸಮಾಜ ಎದುರಿಸುತ್ತಿರುವ ಸಾಮಾಜಿಕ ಪಿಡುಗುಗಳಾದ ಬಾಲ್ಯ ವಿವಾಹ ತಡೆ ಕಾಯಿದೆ, ದೇವದಾಸಿ ಪದ್ದತಿ, ಮಾದಕ ದ್ರವ್ಯ, ಪೋಕ್ಸೋ ಕಾಯ್ದೆ ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಈ ಕಾನೂನು ಅರಿವು ನೆರವಾಗಲಿದೆ ಎಂದರು.
ಈ ಸಂದರ್ಭ ಕುಂಭಾಸಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ವೇತಾ ಎಸ್ ಆರ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿಯ ಹಿರಿಯ ವಕೀಲ ಉದಯ ಕುಮಾರ್ ನಲ್ಸಾ(ಬುಡಕಟ್ಟು ಹಕ್ಕುಗಳ ರಕ್ಷಣೆ ಮತ್ತು ಜಾರಿ) ಯೋಜನೆ 2016 ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು. ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಎಸ್, ಉಡುಪಿ ವಕೀಲ ಸಂಘದ ಅಧ್ಯಕ್ಷ ನಾಗರಾಜ ಬಿ ಉಪಸ್ಥಿತರಿದ್ದರು.
ಕೊರಗ ಶ್ರೇಯೋಭಿವೃದ್ಧಿ ಸಂಘದ ಅಧ್ಯಕ್ಷ ಗಣೇಶ್ ವಿ ಕುಂದಾಪುರ ಕಾರ್ಯಕ್ರಮ ನಿರೂಪಿಸಿದರು. ಐಟಿಡಿಪಿ ಇಲಾಖೆ ವ್ಯವಸ್ಥಾಪಕ ವಿಶ್ವನಾಥ ಶೆಟ್ಟಿ ವಂದಿಸಿದರು.
