ಬೈಂದೂರಿನಲ್ಲಿಯೇ ಉನ್ನತ ಶಿಕ್ಷಣದ ಚಿಂತನೆ: ಸೊರಕೆ

ಬೈಂದೂರು: ಇಲ್ಲಿನ ಪ್ರಥಮದರ್ಜೆ ಕಾಲೇಜಿನಲ್ಲಿ ನೂತನ ಹೆಚ್ಚುವರಿ ಕಟ್ಟಡ ಉದ್ಘಾಟನೆ ಹಾಗೂ ಹೆಚ್ಚುವರಿ ಹೊಸ ಕಟ್ಟಡದ ಶಂಕುಸ್ಥಾಪನೆ ಇಂದು ನೆರವೇರಿತು. ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ ಸೊರಕೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆಯ ಮಾಡಿದ ಬಳಿಕ ಮಾತನಾಡಿ ಎಲ್ಲಾ ರೀತಿಯ ಮೂಲಸೌಕರ್ಯ ಹೊಂದಿರುವ ಬೈಂದೂರಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗ್ರಾಮೀಣ ಭಾಗದ ಸುಮಾರು 700ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಆ ವಿದ್ಯಾರ್ಥಿಗಳಿಗೆ  ಅನುಕೂಲವಾಗುವಂತೆ ಇಲ್ಲಿಯೇ ಸ್ನಾತಕೋತರ ಪದವಿ ಶಿಕ್ಷಣ ಆರಂಭಿಸುವಂತೆ, ವಿಶ್ವವಿದ್ಯಾಲಯಕ್ಕೆ ಹಾಗೂ ಸಂಬಂಧಿತ ಇಲಾಖೆಗೆ ಶಿಫಾರಸ್ಸು ಮಾಡಲಾಗುವುದು ಎಂದು  ಹೇಳಿದರು.

ರಾಜ್ಯದಲ್ಲಿ ಬಹಳಷ್ಟು ವರ್ಷಗಳಿಂದ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ ಬಹುತೇಕ ಸರ್ಕಾರಿ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿದೆ, ಈಗ ಅದರ ಅಂತರ ಹೆಚ್ಚಾಗಿದೆ. ಪ್ರಸ್ತುತ ಉನ್ನತ ಶಿಕ್ಷಣ ಇಲಾಖೆ ಪ್ರಗತಿಪರ ಹೆಜ್ಜೆಯಿರಿಸಿದ್ದು, ಉಪನ್ಯಾಸಕರ ನೇಮಕಾತಿ ಶೀಘ್ರದಲ್ಲಿ ಆಗಲಿದೆ. ಅಲ್ಲದೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಂಚಾರಕ್ಕೆ ಅನುಕೂಲವಾಗುವಂತೆ ಇತ್ತೀಚೆಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಕಾರಿಗಳು ಸಾರಿಗೆ ಇಲಾಖಾಧಿಕಾರಿಗಳ ಸಭೆ ನಡೆಸಿದ್ದು, ಗ್ರಾಮೀಣ ಭಾಗದ ಬೇಡಿಕೆಯನುಗುಣವಾಗಿ 100ಕ್ಕೂ ಅಧಿಕ ಬಸ್ಸ್‌ಗಳಿಗೆ ಫರ್ಮಿಟ್ ನೀಡಲಾಗಿದೆ ಎಂದರು.

ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬೈಂದೂರಿನಲ್ಲಿ ತಲಾ 100 ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಎಸ್‌ಟಿ ಹಾಸ್ಟೆಲ್ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿನಿಯರ ಹಾಸ್ಟೆಲ್ ಮಂಜೂರಾತಿ ಮಾಡಲಾಗಿದ್ದು ಶೀಘ್ರವೇ ಅನುಷ್ಠಾನಗೊಳ್ಳಲಿದೆ ಎಂದರು.

ಜಿಲ್ಲ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ತಾ.ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ, ತಾ.ಪಂ. ಸದಸ್ಯ ರಾಮ ಕೆ., ಗ್ರಾ.ಪಂ ಅಧ್ಯಕ್ಷ ಜನಾರ್ದನ್, ಕಾರ್ಯನಿರ್ವಹಕ ಇಂಜಿನಿಯರ್ ಚಂದ್ರಶೇಖರ, ಉನ್ನತ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಶಿವಮೂರ್ತಿ ಗೌಡ, ನಿವೃತ ಪ್ರಿನ್ಸಿಪಾಲ್ ರಘುರಾಮ ಶೆಟ್ಟಿ, ನಿವೃತ ಐಎಫ್‌ಎಸ್ ಜಗನ್ನಾಥ ಶೆಟ್ಟಿ, ಕಾಲೇಜಿನ ಪ್ರಿನ್ಸಿಪಾಲ್ ಬಿ.ಎ. ಮೇಳಿ ಉಪಸ್ಥಿತರಿದ್ದರು.

ಪ್ರಥಮದರ್ಜೆ ಕಾಲೇಜಿನಲ್ಲಿ ನೂತನ ಹೆಚ್ಚುವರಿ ಕಟ್ಟಡವನ್ನು 75ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿತ್ತು ಹಾಗೂ  52ಲಕ್ಷ ರೂ. ವೆಚ್ಚದ ಹೊಸ ಕಟ್ಟಡದ ಶಂಕುಸ್ಥಾಪನೆಯನ್ನು ಮಾಡಲಾಯಿತು

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ರಾಜು ಪೂಜಾರಿ ಸ್ವಾಗತಿಸಿದರು, ಉಪನ್ಯಾಸಕ ಪಾಂಡುರಂಗ ನಿರೂಪಿಸಿ, ಮದನಕುಮಾರ ವಂದಿಸಿದರು.

Leave a Reply

Your email address will not be published. Required fields are marked *

14 + sixteen =