ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜನರು ಕೋವಿಡ್-19 ಸಂಕಷ್ಟದಲ್ಲಿರುವಾಗ ಕೇಂದ್ರದ ಬಿಜೆಪಿ ಸರ್ಕಾರ 11 ಸುಗ್ರೀವಾಜ್ಞೆಗಳ ಮೂಲಕ ಜನವಿರೋಧಿ ಶಾಸನಗಳನ್ನು ತರಲು ಮುಂದಾಗಿದೆ. ರಾಜ್ಯದ ಜನರಿಂದ ಸಂಗ್ರಹಿಸಿದ ಜಿಎಸ್‌ಟಿ ಪಾಲು ನೀಡದೆ ಜನರ ಮೇಲೆ ಸಾಲದ ಹೊರೆ ಹೊರಿಸಿದೆ. ಇದು ಖಂಡನೀಯ ಎಂದು ಸಿಪಿಎಂ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಹೇಳಿದರು.
ಸಿಪಿಎಂ ಬೈಂದೂರು ವಲಯ ಸಮಿತಿ ಕೇಂದ್ರದ ನಡೆ ವಿರುದ್ಧ ಇಲ್ಲಿ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದರು.
ಬೈಂದೂರು ಭಾಗವನ್ನು ಪ್ರತಿನಿಧಿಸುವ ಲೋಕಸಭಾ ಸದಸ್ಯರು ಸಂಸತ್ ಅಧಿವೇಶನದಲ್ಲಿ ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಬೇಕು. ರೈತರು, ಕಾರ್ಮಿಕರು ಅನುಭವಿಸುತ್ತಿರುವ ಬವಣೆಯ ಕುರಿತು ಚರ್ಚೆಗೆ ಒತ್ತಾಯಿಸಿ ಅವರ ಪರ ಮಾತನಾಡಬೇಕು ಎಂದು ಆಗ್ರಹಿಸಿದರು.
ಸಿಪಿಎಂ ರಾಜ್ಯ ಮುಖಂಡ ಕೆ. ಶಂಕರ್ ಮಾತನಾಡಿ ಪ್ರಜಾಸತ್ತಾತ್ಮಕವಾಗಿ, ಶಾಂತಿಯುತವಾಗಿ ನಡೆಸಿದ ರಾಜಕೀಯ ಚಳವಳಿಯನ್ನು ಕ್ರಿಮಿನಲ್ ಅಪರಾಧ ಎಂದು ಪರಿಗಣಿಸಿ ಸಿಪಿಎಂ ರಾಷ್ಟ್ರೀಯ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಮೇಲೆ ಹೂಡಿರುವ ಮೊಕದ್ದಮೆಯನ್ನು ಹಿಂಪಡೆಯಬೇಕು. ಹೋರಾಟಗಾರರನ್ನು ಜೈಲಿನಿಂದ ಬಿಡುಗಡೆಗೊಳಿಸಬೇಕು.ಆದಾಯ ತೆರಿಗೆಯಿಂದ ಹೊರಗಿರುವ ಎಲ್ಲರಿಗೂ ರೂ 7500 ನಗದು ಪರಿಹಾರ ನೀಡಬೇಕು. ಅವರಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವುದರ ಜತೆಗೆ ಕೊರೊನಾ ತಡೆಗೆ ಪರಿಣಾಮಕಾರಿ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ್ ಕೋಣಿ, ವಲಯ ಸಮಿತಿ ಸದಸ್ಯ ಸಂತೋಷ ಹೆಮ್ಮಾಡಿ, ಪ್ರಮುಖರಾದ ನಾಗರತ್ನಾ ನಾಡ, ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಮಾಧವ ದೇವಾಡಿಗ, ಚಂದ್ರ ದೇವಾಡಿಗ, ರಾಜೀವ ದೇವಾಡಿಗಉಪಸ್ಥಿತರಿದ್ದರು. ಪಕ್ಷದ ಕಚೇರಿಯಿಂದ ಸಂಸದರ ಕಚೇರಿಗೆ ಮೆರವಣಿಗೆಯಲ್ಲಿ ಹೋದ ಪ್ರತಿಭಟನಕಾರರು 12 ಬೇಡಿಕೆಗಳ ಪಟ್ಟಿಯನ್ನು ಸಂಸದರ ಕಚೇರಿಗೆ ನಿರ್ವಾಹಕರಿಗೆ ನೀಡಿದರು