ಬೈಂದೂರು ಕ್ಷೇತ್ರದ ರಸ್ತೆ, ಸೇತುವೆ ಹಾಗೂ ಕಾಲೇಜು ಕಟ್ಟಡ ನಿರ್ಮಾಣಕ್ಕೆ 50.92 ಕೋಟಿ ಅನುದಾನ: ಶಾಸಕ ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ರಸ್ತೆ, ಸೇತುವೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ರೂ. 40.92 ಕೋಟಿ ಅನುದಾನ ಹಾಗೂ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ 10 ಕೋಟಿ ವಿಶೇಷ ಅನುದಾನ ಮಂಜೂರಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸಹಕಾರ ನೀಡುತ್ತಿರುವ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಗ್ರಾಮೀಣಾಧಿವೃದ್ಧಿ ಸಚಿವರು,ಲೋಕೋಪಯೋಗಿ ಸಚಿವರು ಹಾಗೂ ರಾಜ್ಯಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಅವರು ತಿಳಿದರು.

ಅವರು ಬೈಂದೂರು ಶಾಸಕರ ಕಛೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೊಲ್ಲೂರು ಪ್ರವಾಸಿ ಮಂದಿರ ನಿರ್ಮಾಣ, ಕೊಡ್ಲಾಡಿ ಗ್ರಾಮದ ಹೊಲದಮನೆ ಬಳಿ ಕುಬ್ಜ ನದಿಗೆ ಸೇತುವೆ ನಿರ್ಮಾಣ, ಶಂಕರನಾರಾಯಣ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ಪ್ರಯೋಗಾಲಯ ಮತ್ತು ತರಗತಿ ಕೊಠಡಿ ಹಾಗೂ ಹೊಸ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುದಾನ ಮಂಜೂರಾಗಿದೆ ಎಂದರು.

ರಸ್ತೆ ಅಭಿವೃದ್ಧಿಗೆ ಅನುದಾನ:
ಬೆಳ್ಳಾಲ ಗ್ರಾಮದ ಮೆಲ್ಟು ಮಾಕಾಡಿ ಜೆಡ್ಡು, ವಂಡ್ಸೆ ನಂದ್ರೋಳಿ, ಬೇಲ್ತೂರು ದೇವಸ್ಥಾನ ರಸ್ತೆ, ಬಾಲಿಕೆರೆ ದೇವಸ್ಥಾನ ರಸ್ತೆ, ಉಪ್ಪಿನಕುದ್ರು ಬೇಡರ ಕೊಟ್ಟಿಗೆ ಬೊಬ್ಬರ್ಯನ ಮನೆ ರಸ್ತೆ, ಮುಳ್ಳಿಕಟ್ಟೆ, ಮೋವಾಡಿ, ಸೌಡ ಸಿದ್ಧಾಪುರ ರಸ್ತೆ, ಸಿದ್ಧಾಪುರ – ಹಳ್ಳಿಹೊಳೆ – ಜಡ್ಕಲ್ ರಸ್ತೆ, ಕಂಡ್ಲೂರು ಪೇಟೆ ರಸ್ತೆ, ಸಂಗಮೇಶ್ವರ ದೇವಸ್ಥಾನದಿಂದ ನಾಯಕವಾಡಿ ಕಾಲನಿ ರಸ್ತೆ, ಗುಲ್ವಾಡಿ ಮಾವಿನಕಟ್ಟೆ ಮಸೀದಿಯಿಂದ ಕಾಲನಿ ರಸ್ತೆ, ಶಿರೂರು ಮೇಲ್ಪಂಕ್ತಿ ಕಾಲನಿ ರಸ್ತೆ, ಎಲ್ಲೂರಿನಿಂದ ಬಾಳೆಕೊಡ್ಲು ಕಾಲೋನಿ ರಸ್ತೆ, ಕಮಲಶಿಲೆ ಬಡಾಮನೆ ಮಂಗನಮಕ್ಕಿ ಕಾಲನಿ ರಸ್ತೆ, ಹೊಸೂರು ತೂದಳ್ಳಿ ಕಾಲನಿ ರಸ್ತೆ, ಕುಂದಬಾರಂದಾಡಿ ಶಾಲೆಯಿಂದ ಎಸ್.ಟಿ ಕಾಲೋನಿ ರಸ್ತೆ, ಶಿರೂರು ಬೂಕಾರಿ ಎಸ್.ಟಿ ಕಾಲೋನಿ ರಸ್ತೆ, ವಂಡ್ಸೆ – ಆಲೂರು – ಗುಜ್ಜಾಡಿ ರಸ್ತೆ, ಗಂಗೊಳ್ಳಿ ತ್ರಾಸಿ ರಸ್ತೆ, ಸಿದ್ದಾಪುರ ಹಳ್ಳಿಹೊಳೆ ಜಡ್ಕಲ್ ರಸ್ತೆ ನವೀಕರಣ, ಸೌಡ ಸಿದ್ಧಾಪುರ ರಸ್ತೆ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಡಿಯಲ್ಲಿ ಅನುದಾನ ಮಂಜೂರಾಗಿದ್ದರೇ, ವಿಶೇಷ ಅನುದಾನದಡಿಯಲ್ಲಿ ವಿವಿಧ ರಸ್ತೆಗಳ 10ಕೋಟಿ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿ ಮಾಡಲಾಗುವುದು ಎಂದವರು ತಿಳಿಸಿದರು.

 

Leave a Reply

Your email address will not be published. Required fields are marked *

4 × 4 =