ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅದು ಕಾಂಗ್ರೆಸ್ ಕಾರ್ಯಕರ್ತರ ಸಭೆ. ಸಭೆ ಆರಂಭಕ್ಕೂ ಮೊದಲೇ ಸ್ವಇಚ್ಛೆಯಿಂದ ಅಲ್ಲಿಗೆ ಯಡ್ತರೆ ಗ್ರಾಪಂ ಸದಸ್ಯೆ ಆಶಾ ಕಿಶೋರ್ ಬಂದಿದ್ದರು. ನೆರದಿದ್ದ ಸಭಿಕರಿಗೂ ಇವರ ಆಗಮನ ಆಶ್ಚರ್ಯ ತಂದಿತ್ತು. ಸಭೆ ಆರಂಭಗೊಳ್ಳುತ್ತಿದ್ದಂತೆ ಅವರ ಬಂದ ಕಾರಣವೂ ತಿಳಿದು ಹೋಯಿತು. ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಸೇರುವ ಇರಾದೆ ತೋರಿರುವುದು ಸ್ಪಷ್ಟವಾಗಿತ್ತು. ಮೊದಲ ಸುತ್ತಿನ ಮಾತುಕತೆ ನಡೆದಿದ್ದರಿಂದ ಕಾಂಗ್ರೆಸ್ ನಾಯಕರುಗಳು ಮೊದಲಿಗೆ ವೇದಿಕೆಗೆ ಆಹ್ವಾನಿಸಿ ಅವರನ್ನು ಕುರಿಸಿ ಬಳಿಕ ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರೇ ಕಾಂಗ್ರೆಸ್ ಶಾಲು ಹಾಕಿ, ಹೂ ನೀಡಿ ಪಕ್ಷಕ್ಕೆ ಬರಮಾಡಿಕೊಂಡಿದ್ದರು.
ಕಾರ್ಯಕ್ರಮ ಮುಗಿದು ಒಂದು ಗಂಟೆಯೂ ಆಗಿಲ್ಲ. ಆಗಲೇ ಬಿಜೆಪಿ ವಯಲದಲ್ಲಿ ದೊಡ್ಡ ಚರ್ಚೆ ಆರಂಭಗೊಂಡಿತ್ತು. ಬಿಜೆಪಿ ಬೆಂಬಲಿತ ಹಾಲಿ ಗ್ರಾಪಂ ಸದಸ್ಯೆಯ ಈ ದಿಢಿರ್ ನಿರ್ಣಯ ಪಕ್ಷದ ಮುಖಂಡರಿಗೂ ಆಶ್ಚರ್ಯವನ್ನುಂಟುಮಾಡಿತ್ತು. ಮತ್ತೆ ಆಪರೇಷನ್ ಕಮಲ ಶುರು. ಆಶಾ ಕಿಶೋರ್ ಅವರ ಮನೆಗೆ ದೌಡಾಯಿಸಿದ ಬೈಂದೂರು ಬಿಜೆಪಿ ಮುಖಂಡರು ಸ್ವಪಕ್ಷಕ್ಕೆ ಮರಳುವಂತೆ ಸತತವಾಗಿ ಅವರ ಮನವೊಲಿಸಿ ಕೊನೆಗೂ ಸಫಲರಾಗಿದ್ದಾರೆ. ‘ನಾನು ಬಿಜೆಪಿಯ ಸದಸ್ಯೆಯಾಗಿರುತ್ತೇನೆ. ನನ್ನ ಗಮನಕ್ಕೆ ಬಾರದೇ ಕಾಂಗ್ರೆಸ್ ಪಕ್ಷ ಸೇರಿದ್ದೆ. ನನ್ನ ನಡೆ ಸರಿಕಾಣದೆ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದೇನೆ ಬೈಂದೂರು ಬಿಜೆಪಿ ಅಧ್ಯಕ್ಷರಿಗೆ ಮನವಿ ಕೊಡಿಸುವುದರ ಮೂಲಕ ಸದ್ಯಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ)
ಆದರೆ ಹೀಗೆ ಸ್ವಂತ ನಿರ್ಣಯವನ್ನೂ ತೆಗೆದುಕೊಳ್ಳಲಾರದೆ ಯಾರದ್ದೂ ಮಾತು ಕೇಳಿ ಗಂಟೆಗೊಂದು ಪಕ್ಷ ಬದಲಿಸುವವರಿಂದ ಜನರಾದರೂ ಏನನ್ನು ನಿರೀಕ್ಷಿಸಲು ಸಾಧ್ಯವಿದೆ ಎಂದು ಆಡಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಶಾಲು ಹಾಕಿದ ಪಕ್ಷದ ನಾಯಕರಿಗೂ, ಮರಳಿ ಕರೆತಂದ ಪಕ್ಷದ ನಾಯಕರಿಗೂ ಇರಿಸುಮುರಿಸು ಉಂಟುಮಾಡಿದೆ.