ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮೀನುಗಾರರಿಗೆ ಹಾಗೂ ಮೀನುಗಾರಿಕಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ನೀಡಲು ಮೀನುಗಾರರ ಕಲ್ಯಾಣ ಮಂಡಳಿಯನ್ನು ರಚಿಸಬೇಕು ಎಂದು ಅಖಿಲ ಭಾರತ ಮೀನುಗಾರರ ಮತ್ತು ಮೀನುಗಾರಿಕಾ ಕಾರ್ಮಿಕರ ಒಕ್ಕೂಟಕ್ಕೆ ಸಂಯೋಜಿಸಲ್ಪಟ್ಟ ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆ. ಶಂಕರ್ ಸರ್ಕಾರವನ್ನು ಒತ್ತಾಯಿಸಿದರು.
ಉಪ್ಪುಂದ ಕಾಸನಾಡಿ ದೈವಸ್ಥಾನ ವಠಾರದಲ್ಲಿ ಸಂಘಟನೆಯ ಆಶ್ರಯದಲ್ಲಿ ನಡೆದ ಉಪ್ಪುಂದ ಪ್ರದೇಶದ ಮೀನುಗಾರರ ಮತ್ತು ಮೀನುಗಾರಿಕಾ ಕಾರ್ಮಿಕರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಕೋಣಿ ಮಾತನಾಡಿ, 60 ವರ್ಷ ಪ್ರಾಯ ಮೀರಿದ ಮೀನುಗಾರರಿಗೆ ಹಾಗೂ ಮೀನುಗಾರಿಕಾ ಕಾರ್ಮಿಕರಿಗೆ ತಿಂಗಳಿಗೆ ರೂ 600 ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಮೀನುಗಾರರ ಮತ್ತು ಮೀನುಗಾರಿಕಾ ಕಾರ್ಮಿಕರ 12 ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಅ.1ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಜರಗುವ ಪ್ರತಿಭಟನೆ, ಮನವಿ ಸಲ್ಲಿಕೆ ಹೋರಾಟ ಕಾರ್ಯಕ್ರಮದಲ್ಲಿ ಅಧಿಕ ಸಂಖ್ಯೆಯಲ್ಲಿ ಸೇರಿಕೊಂಡು ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸ್ಥಳೀಯ ಮೀನುಗಾರರ ಮುಖಂಡ ಬಾಬು ಖಾರ್ವಿ ಉಪ್ಪುಂದ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹೊಸದಾಗಿ ಅಸ್ತಿತ್ವಕ್ಕೆ ಬಂದ ಉಪ್ಪುಂದ ಮೀನುಗಾರರ ಮತ್ತು ಮೀನುಗಾರಿಕಾ ಕಾರ್ಮಿಕರ ಸಂಘದ ಕಾರ್ಯಕಾರಿ ಸಮಿತಿಗೆ ರಾಮ ಖಾರ್ವಿ ಉಪ್ಪುಂದ ಅವರನ್ನು ಅಧ್ಯಕ್ಷರಾಗಿ, ವಿಠಲ್ ಖಾರ್ವಿ ಉಪ್ಪುಂದ ಅವರನ್ನು ಕಾರ್ಯದರ್ಶಿಯಾಗಿ, ಜ್ಯೋತಿ ಮೊಗವೀರ ಅವರನ್ನು ಕೋಶಾಧಿಕಾರಿಯಾಗಿ ಮತ್ತು ಏಳು ಜನರನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು. ನೂತನ ಕಾರ್ಯದರ್ಶಿ ವಿಠಲ್ ಖಾರ್ವಿ ವಂದಿಸಿದರು.
ಬೈಂದೂರು ತಾಲ್ಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ಉಪಾಧ್ಯಕ್ಷ ಮಾಧವ ದೇವಾಡಿಗ ಉಪ್ಪುಂದ, ಶ್ರೀಧರ್ ದೇವಾಡಿಗ ಉಪ್ಪುಂದ ಉಪಸ್ಥಿತರಿದ್ದರು