ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಿವಿಧ ಕಾರಣಗಳಿಂದ ಕಳೆದ ಮೂರು ವರ್ಷಗಳಿಂದ ಮನೆಗಳನ್ನು ನೀಡಲು ಸಾಧ್ಯವಾಗಿರಲಿಲ್ಲ. ಕಳೆದ ವಿಧಾನಸಭಾ ಅಧಿವೇಶನದಲ್ಲಿ ಗ್ರಾಮೀಣ ಭಾಗದ ಜನರ ಸಮಸ್ಯೆ ಹಾಗೂ ವಸತಿ ರಹಿತರಿಗೆ ವಸತಿ ನೀಡುವಂತೆ ಇಲಾಖೆಯ ಸಚಿವರ ಗಮನ ಸೆಳೆದು ಒತ್ತಾಯಿಸಲಾಗಿತ್ತು. ಇದಕ್ಕೆ ಸ್ಪಂದಿಸಿರುವ ರಾಜ್ಯ ಸರಕಾರ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ವಸತಿ ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 9 ಸಾವಿರ ಮಂದಿ ಮನೆಗೆ ಅರ್ಜಿ ಸಲ್ಲಿಸಿದ್ದು ಆದ್ಯತೆ ಮೇರೆಗೆ ಅರ್ಹರಿಗೆ ವಸತಿ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ ಹೇಳಿದರು.
2021-22ನೇ ಸಾಲಿಗೆ ವಸತಿ ಯೋಜನೆಯಡಿ ಸರಕಾರದಿಂದ ನಿಗದಿಪಡಿಸಿದ ಗುರಿಗೆ ಫಲಾನುಭವಿಗಳ ಆಯ್ಕೆ ಕುರಿತು ಹೆಮ್ಮಾಡಿಯ ಜಯಶ್ರೀ ಸಭಾಭವನದಲ್ಲಿ ಜರಗಿದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಮುಂದಿನ ಒಂದು ವರ್ಷದೊಳಗೆ ಪ್ರತಿಯೊಂದು ಮನೆ ಮನೆಗೂ ಕುಡಿಯುವ ನೀರು ನೀಡಲಾಗುವುದು. ಪಡಿತರ ಚೀಟಿ ವಿತರಣೆ ಕಾರ್ಯ ಶೀಘ್ರದಲ್ಲೇ ಆರಂಭಿಸಲು ಕ್ರಮಕೈಗೊಳ್ಳಲಾಗಿದೆ. ಪಡಿತರ ಚೀಟಿ ಇದ್ದ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡುವ ಸಂಬಂಧ ಸರಕಾರ ಶೀಘ್ರದಲ್ಲೇ ಆದೇಶ ಹೊರಡಿಸಲಿದೆ. ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಆದಷ್ಟು ಶೀಘ್ರ ನಿವೇಶನ ನೀಡಲು ಸರಕಾರ ಕ್ರಮಕೈಗೊಂಡಿದೆ ಎಂದು ಹೇಳಿದ ಅವರು ಗ್ರಾಮ ಪಂಚಾಯತ್ ಸದಸ್ಯರು ಜನರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಜನಹಿತ ಕೆಲಸದ ಜೊತೆಗೆ ಜನರಿಗೆ ಪೂರಕವಾದ ಕೆಲಸ ಮಾಡಬೇಕು. ವಸತಿ ಯೋಜನೆಗೆ ಸರಿಯಾದ ಫಲಾನುಭವಿಗಳನ್ನು ಗುರುತಿಸಿ ಅರ್ಹರಿಗೆ ವಸತಿ ದೊರೆಯುವಂತೆ ಮಾಡಬೇಕು. ಪಿಡಿಒಗಳು ಜನರಿಗೆ ಹಿಂಸೆ ಕೊಡುವ ಕೆಲಸ ಮಾಡಬಾರದು ಎಂದರು.
ವಿವಿಧ ಗ್ರಾಮ ಪಂಚಾಯತ್ ಸದಸ್ಯರು ಸ್ಥಳೀಯ ಸಮಸ್ಯೆ ಹಾಗೂ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿದರು. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು. ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಕೇಶವ ಶೆಟ್ಟಿಗಾರ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.