ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಅವ್ಯವಸ್ಥೆ ವಿರುದ್ಧ, ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಸಿಗದಿರುವುದು ಹಾಗೂ ಆಡಳಿತ ವೈದ್ಯಾಧಿಕಾರಿ ಕರ್ತವ್ಯ ಲೋಪ ಎಸಗುತ್ತಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಸಮುದಾಯ ಆರೋಗ್ಯ ಕೇಂದ್ರದ ಎದುರುಗಡೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಭಾರೀ ಪ್ರತಿಭಟನೆ ನಡೆಯಿತು.
ಪ್ರತಿಭಟನೆ ನೇತ್ರತ್ವ ವಹಿಸಿ ಮಾತನಾಡಿದ ಶ್ರೀಧರ ಬಿಜೂರು, ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಎರಡು ಖಾಸಗಿ ಆಸ್ಪತ್ರೆ ನಡೆಸುತ್ತಿದ್ದಾರೆ. ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಬಂದರೆ ಅವರನ್ನು ಇವರ ಖಾಸಗಿ ಆಸ್ಪತ್ರೆಗೆ ಚೀಟಿ ಕೊಡುತ್ತಾರೆ. ರಾಜಕೀಯ ಪ್ರಭಾವ ಹೊಂದಿರುವ ಇವರು ಇತರ ವೈದ್ಯರಿಗೆ ಇಲ್ಲಿಗೆ ಬರಲು ಬಿಡುತ್ತಿಲ್ಲ. ತಮ್ಮ ಕರ್ತವ್ಯವನ್ನು ಸರಿಯಾಗಿ ಮಾಡುವುದಿಲ್ಲ ಎಂದಾದರೆ ಕೆಲಸಕ್ಕೆ ರಾಜನಾಮೆ ಕೊಟ್ಟು ಅಥವಾ ವರ್ಗಾವಣೆಯಾಗಿ ಹೋಗಲಿ. ಜನಸಾಮಾನ್ಯರಿಗೆ ಸೇವೆ ನೀಡಲು ಹಿಂದೇಟು ಹಾಕುವ ಇಂತಹ ವೈದ್ಯರು ನಮಗೆ ಬೇಕಿಲ್ಲ ಎಂದ ಅವರು, ಈ ಬಗ್ಗೆ 10 ದಿನಗಳೊಳಗೆ ಹಿರಿಯ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನವೀನ್ ಚಂದ್ರ ಉಪ್ಪುಂದ ಮಾತನಾಡಿ, ಬೈಂದೂರು ಸಮುದಾಯ ಆರೋಗ್ಯ ಕೇಂದ್ರ ಸಾರ್ವಜನಿಕರಿಗೆ ತುರ್ತು ಚಿಕಿತ್ಸೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮೂರು ಅಂಬುಲೈನ್ಸ್‌ಗಳಿಗೆ ಚಾಲಕರಿಲ್ಲದೆ ನಿಂತಿದ್ದು, ಆಕ್ಸಿಜನ್ ಪ್ಲಾಂಟ್ ನಿರ್ವಹಣೆಗೆ ವ್ಯವಸ್ಥೆಗಳಿಲ್ಲ. 20 ವರ್ಷ ಹಳೆಯದಾದ ಯಾವುದೇ ದಾಖಲೆಗಳಿಲ್ಲದ ಜೀಪ್ ಬದಲಿಸಬೇಕು. ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಸರಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಬೇಕು. ಒಂದೊಮ್ಮೆ ಸರಿಪಡಿಸದ್ದಲ್ಲಿ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಉಗ್ರ ಹೋರಾಟ ನಡೆಸಲಿದ್ದಾರೆ ಎಂದ ಎಚ್ಚರಿಕೆ ನೀಡಿದರು.
ನಂತರ ಬೈಂದೂರು ಸಮುದಾಯ ಆರೋಗ್ಯ ಕೇಂದ್ರದಿಂದ ಬೈಂದೂರು ತಾಲೂಕು ಕಛೇರಿಗೆ ಪಾದಯಾತ್ರೆಯ ಮೂಲಕ ತೆರಳಿದ ಪ್ರತಿಭಟನಾಕಾರರು ತಹಶೀಲ್ದಾರ್ ಶೋಭಾಲಕ್ಷ್ಮೀ ಎಚ್. ಎಸ್. ಇವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ರೈತ ಮುಖಂಡ ವೀರಭದ್ರ ಗಾಣಿಗ, ಕಾರ್ಮಿಕ ಮುಖಂಡ ವೆಂಕಟೇಶ ಕೋಣಿ, ಯಡ್ತರೆ ಗ್ರಾಪಂ ಮಾಜಿ ಅಧ್ಯಕ್ಷ ಗಣೇಶ ಪೂಜಾರಿ ಮೊದಲಾದವರು ಮಾತನಾಡಿದರು. ವಿವಿಧ ಸಂಘ ಸಂಸ್ಥೆಯ ನೂರಾರು ಸದಸ್ಯರು ಇದ್ದರು.