ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು: 148 ಉಚಿತ ಲ್ಯಾಪ್‌ಟಾಪ್ ವಿತರಣೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಸರ್ಕಾರಿ ಸಂಸ್ಥೆ ಎಂದು ಅದನ್ನು ಕಡೆಗಣಿಸದೆ ಪರಿಸರದ ಎಲ್ಲ ವರ್ಗಗಳ ಮಕ್ಕಳು ಇಲ್ಲಿ ಸೇರಿ ಶಿಕ್ಷಣ ಪಡೆಯಬೇಕು ಎಂದು ಶಾಸಕ ಬಿ. ಎಂ.ಸುಕುಮಾರ ಶೆಟ್ಟಿ ಹೇಳಿದರು.

ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಥಮ ವರ್ಷದ 148 ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತವಾಗಿ ಒದಗಿಸಿದ ಲ್ಯಾಪ್‌ಟಾಪ್ ವಿತರಿಸಿ ಅವರು ಮಾತನಾಡಿದರು.

ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ನಾಲ್ಕು ದಶಕಗಳಿಂದ ಗ್ರಾಮೀಣ ಭಾಗದ ಮಕ್ಕಳಿಗೆ ಪದವಿ ಶಿಕ್ಷಣ ನೀಡುತ್ತಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ಸರ್ಕಾರ ಶಿಷ್ಯವೇತನ ನೀಡುವುದರ ಜೊತೆಗೆ ಕಲಿಕೆಗೆ ಪೂರಕವಾಗುವ ಲ್ಯಾಪ್‌ಟಾಪ್ ಕೊಡುತ್ತಿದೆ. ವಿದ್ಯಾರ್ಥಿನಿಯರಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ ಎಂದು ಹೇಳಿದರು.

ಈ ಕಾಲೇಜಿನಲ್ಲಿ ಕಲಾ ವಿಭಾಗ, ವಾಣಿಜ್ಯ ವಿಭಾಗ ಮತ್ತು ವಿಜ್ಞಾನ ವಿಭಾಗಗಳು ಇವೆ. ಎಲ್ಲ ವಿಷಯಗಳ ಬೋಧನೆಗೂ ಶಿಕ್ಷಕರಿದ್ದಾರೆ. ಅಗತ್ಯ ಮೂಲಸೌಲಭ್ಯಗಳು ಇವೆ. ಕೊಠಡಿ ಕೊರತೆ ಆಗಬಾರದೆಂದು ನೂತನ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ನ್ಯಾಕ್ ಬಿ ವರ್ಗೀಕರಣ ಪಡೆದಿರುವ ಸಂಸ್ಥೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.

ಇಲ್ಲಿ ವಿದ್ಯಾರ್ಥಿ ಸಂಖ್ಯೆ ಕುಸಿಯದಂತೆ ನೋಡಿಕೊಳ್ಳಬೇಕಾದುದು ಪರಿಸರದ ನಾಗರಿಕರ ಹೊಣೆ ಎಂದು ಅವರು ಹೇಳಿದರು.

ಪ್ರಾಂಶುಪಾಲ ಡಾ. ರಘು ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಉಪನ್ಯಾಸಕ ನವೀನ್ ಎಚ್.ಜಿ. ಸ್ವಾಗತಿಸಿದರು. ಉಪನ್ಯಾಸಕಿ ಮೀನಾಕ್ಷಿ ನಿರೂಪಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ಸದಸ್ಯರಾದ ಎಸ್. ಜನಾರ್ದನ ಮರವಂತೆ, ಎಂ.ಎನ್.ಶೇರೆಗಾರ್, ಚಂದ್ರ ಹಳಗೇರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗೀರಥಿ ಸುರೇಶ್, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಮುತ್ತಯ್ಯ ಪೂಜಾರಿ, ಭೂನ್ಯಾಯ ಮಂಡಳಿ ಸದಸ್ಯ ಜೈಸನ್ ಎಂ.ಡಿ. ಇದ್ದರು.

Leave a Reply

Your email address will not be published. Required fields are marked *

5 × 2 =