ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ ಬಳಿಕ ನಾವು ಎಡವಿದ ವಿಷಯಗಳಲ್ಲಿ ಕಾಶ್ಮೀರ ಅತ್ಯಂತ ನೋವಿನದ್ದು. ಅದರ ಪರಿಣಾಮವನ್ನು ನಾವು ಈಗಲೂ ಅನುಭವಿಸುತ್ತಿದ್ದೇವೆ ಎಂದು ಒರಕಲ್ ಕಂಪನಿಯಲ್ಲಿ ಇಂಜಿನಿಯರ್ ಆಗಿರುವ ಬಾಡದ ಪ್ರವೀಣ ಶೆಟ್ಟಿ ಹೇಳಿದರು.
ಭಾನುವಾರ ಇಲ್ಲಿನ ಮಹಾಕಾಳಿ ದೇವಸ್ಥಾನದ ಆವರಣದಲ್ಲಿ ನಡೆದ ಬೈಂದೂರು ಹಿರಿಯ ನಾಗರಿಕರ ವೇದಿಕೆಯ ಸಭೆಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾಶ್ಮೀರ ಸಮಸ್ಯೆಯ ಇತಿಹಾಸವನ್ನು ತೆರೆದಿಟ್ಟ ಅವರು, ಕೋವಿಡ್-೧೯ ಪಿಡುಗಿನ ನಡುವೆ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ನೇಪಾಳ, ಚೀನಾ ಗಡಿ ವಿಚಾರ ಎತ್ತಿಕೊಂಡು ಜಗಳಕ್ಕೆ ನಿಂತಿವೆ. ಅದನ್ನು ಎದುರಿಸಲು ದೇಶದ ಸೇನೆ ಸಮರ್ಥವಾಗಿದೆ. ಈ ಎಲ್ಲ ಸವಾಲುಗಳನ್ನು ಭಾರತ ದಿಟ್ಟವಾಗಿ ಎದುರಿಸಬೇಕು ಎಂದು ಹೇಳಿ ಹುತಾತ್ಮರಾದ ವೀರ ಯೋಧರಿಗೆ ನುಡಿನಮನ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಅಧ್ಯಕ್ಷ ಎಮ್. ಗೋವಿಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾತುಕತೆಯಲ್ಲಿ ಭಾಗವಹಿಸಿದ ಸದಸ್ಯರು ಕೋವಿಡ್ ಮತ್ತು ಲಾಕ್‌ಡೌನ್ ಕಲಿಸಿದ ಮಿತ ಬಳಕೆ, ಪರಿಸರ ಸ್ವಚ್ಛತೆ, ದುಶ್ಚಟ ವರ್ಜನೆ, ಸಂಕಷ್ಟ ಕಾಲ ಎದುರಿಸಲು ಸರಳ ಜೀವನ, ಯೋಗ, ಧ್ಯಾನಗಳ ಕುರಿತು ತಮ್ಮ ಅನುಭವ ವಿನಿಮಯ ಮಾಡಿಕೊಂಡರು.
ಸದಸ್ಯ ಕೋಣಿ ವೆಂಕಟೇಶ ನಾಯಕ್ ಈಗ ಅಗತ್ಯ ಕೆಲಸಗಳಿಗೆ ಬಸ್ ಮತ್ತು ರೈಲಿನಲ್ಲಿ ಸಂಚರಿಸುವ ಹಿರಿಯ ನಾಗರಿಕರಿಗೆ ರಿಯಾಯಿತಿ ನಿರಾಕರಿಸಿ, ಹೆಚ್ಚಿನ ದರ ವಸೂಲಿ ಮಾಡುವ ವಿಚಾರ ಸಭೆಗೆ ತಿಳಿಸಿದರು. ಸಭೆ ಅದನ್ನು ಖಂಡಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಣಯಿಸಿತು.
ಕಾರ್ಯದರ್ಶಿ ಸಂಜೀವ ಆಚಾರ್ ಹಿಂದಿನ ಸಭೆಯ ನಡಾವಳಿಗಳನ್ನು ಓದಿದರು. ಉಪಾಧ್ಯಕ್ಷ ಎ. ಶ್ರೀನಿವಾಸ್, ಮಾಜಿ ಅಧ್ಯಕ್ಷ ವಸಂತ ಹೆಗಡೆ, ಸದಸ್ಯರು ಇದ್ದರು./