ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಇಲ್ಲಿಗೆ ಸಮೀಪದ ಕಂಬದಕೋಣೆಯ ಹೊಳೆಬಾಗಿಲು ಎಂಬಲ್ಲಿ ಟ್ಯಾಂಕರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಪ್ರಭಾಕರ ದೇವಾಡಿಗ (25) ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.
ಘಟನೆಯ ವಿವರ:
ನಾಗೂರಿನ ಗ್ಯಾರೇಜ್ ಒಂದರಲ್ಲಿ ಮ್ಯಾಕ್ಯಾನಿಕ್ ಆಗಿರುವ ಪ್ರಭಾಕರ ದೇವಾಡಿಗ ಊಟಕ್ಕೆಂದು ಬಿಜೂರಿನ ತಮ್ಮ ಮನೆಗೆ ಬಂದಿದ್ದರು. ಊಟ ಮುಗಿಸಿ ಮತ್ತೆ ನಾಗೂರಿನ ಗ್ಯಾರೇಜಿಗೆ ಹಿಂತಿರುಗುತ್ತಿದ್ದ ವೇಳೆ ಕಂಬದಕೋಣೆಯ ಹೊಳೆಬಾಗಿಲು ಎಂಬಲ್ಲಿ ಕುಂದಾಪುರ ಕಡೆಯಿಂದ ಭಟ್ಕಳಕ್ಕೆ ತೆರಳುತ್ತಿದ್ದ ಟ್ಯಾಂಕರ್ ಮುಖಾಮುಖಿ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಗಂಭೀರ ಗಾಯಗೊಂಡ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಕುಂದಾಪ್ರ ಡಾಟ್ ಕಾಂ)