ಭಗವದ್ಗೀತೆ ಪಠಣದಿಂದ ಏಕಾಗ್ರತೆ, ಮನೋಬಲ ಸಿದ್ಧಿ: ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಭಗವದ್ಗೀತೆಯಲ್ಲಿರುವ ಅಂಶಗಳು ಬಹುಪಾಲು ವ್ಯವಹಾರಶಾಸ್ತ್ರ ಹಾಗೂ ಮನಶಾಸ್ತ್ರಕ್ಕೆ ಸಂಬಂಧಿಸಿದವು. ಅದರಲ್ಲಿನ 700 ಶ್ಲೋಕಗಳೂ ಜ್ಞಾನಪ್ರದವಾಗಿದೆ. ಭಗವದ್ಗೀತೆ ಪಠಣದಿಂದಾಗಿ ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹಾಗೂ ಮನೋಬಲ ಹೆಚ್ಚುವುದಲ್ಲದೇ ಶೈಕ್ಷಣಿಕವಾಗಿಯೂ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಎಳಜಿತ ಶ್ರೀ ರಾಮಕೃಷ್ಣ ಕುಟೀರದ ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿಯವರು ಹೇಳಿದರು.

ಅವರು ಕೆರಾಡಿಯ ವರಸಿದ್ಧಿವಿನಾಯಕ ಪದವಿಪೂರ್ವ ಕಾಲೇಜಿನ ಕೃಷ್ಣಮ್ಮ ವೀರಣ್ಣ ಶೆಟ್ಟಿ ಸಭಾಭವನದಲ್ಲಿ ಸಂಪೂರ್ಣ ಭಗವದ್ಗೀತಾ ಅಧ್ಯಯನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಗವಾನ್ ಶ್ರೀಕೃಷ್ಣ ಮಹಾನ್ ಮನಶಾಸ್ತ್ರಜ್ಞ ಎಂದು ವಿಜ್ಞಾನಿಗಳೂ ಕೊಂಡಾಡಿದ್ದಾರೆ. ಇದರಲ್ಲಿ ಎಲ್ಲಿಯೂ ಮತಧರ್ಮದ ವಿಚಾರವೇ ಬರುವುದಿಲ್ಲ. ವಿದ್ಯಾರ್ಥಿಗಳು ಯಾವ ವಿಷಯ ಜ್ಞಾನವನ್ನು ಪಡೆಯಲು ಕಾಲೇಜಿಗೆ ಬಂದಿದ್ದಾರೋ, ಆ ಜ್ಞಾನ ಸುಲಲಿತವಾಗಿ ಸಿದ್ಧಿಸಲು ಭಗವದ್ಗೀತೆ ಸಹಕಾರಿ ಎಂದವರು.

ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಆರ್. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಭಗವದ್ಗೀತೆಯ ಆರಂಭದ ಶ್ಲೋಕವನ್ನು ಭೋದಿಸಲಾಯಿತು. ಎಳಜಿತ ಶ್ರೀ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ವಿದ್ಯಾರ್ಥಿಗಳು ಶ್ಲೋಕ ಪಠಿಸಿದರು.

ವಿದ್ಯಾರ್ಥಿಗಳಾದ ಶರತ್ ಸ್ವಾಗತಿಸಿ, ಓಂಕಾರ್ ವಂದಿಸಿದರು. ಸುಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

ಭಗವದ್ಗೀತಾ ಅಭಿಯಾನದ ಅಧ್ಯಕ್ಷರಾದ ರಾಮಕೃಷ್ಣ ಶೇರುಗಾರ್ ಅವರ ಆಶಯದಂತೆ, ಆಸರೆ ಫೌಂಡೇಶನ್ ಪ್ರವರ್ತಿತ ವರಸಿದ್ಧಿವಿನಾಯಕ ಪದವಿಪೂರ್ವ ಕಾಲೇಜಿನ ಅಧ್ಯಕ್ಷರಾದ ಕೆರಾಡಿ ಚಂದ್ರಶೇಖರ ಶೆಟ್ಟಿ ಸಹಕಾರದೊಂದಿಗೆ ಅಭಿಯಾನವನ್ನು ಆಯೋಜಿಸಲಾಗಿತ್ತು. ಶ್ರೀ ಸತ್ಯಸ್ವರೂಪಾನಂದ ಸ್ವಾಮೀಜಿಯವರು ಏಳು ತರಗತಿಗಳಲ್ಲಿ ಸಂಪೂರ್ಣ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಕಲಿಸಲಿದ್ದಾರೆ.

Leave a Reply

Your email address will not be published. Required fields are marked *

seventeen − three =