ಭತ್ತ ಕಟಾವಿಗೆ ದುಬಾರಿ ಬೆಲೆ ನಿಗದಿ: ರೈತರ ಆಕ್ರೋಶ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭತ್ತ ಕಟಾವು ಯಂತ್ರಗಳಿಗೆ ದುಬಾರಿ ಬಾಡಿಗೆ ನಿಗದಿಗೊಳಿಸುವ ಮೂಲಕ ರೈತರನ್ನು ಶೋಷಿಸಲಾಗುತ್ತಿದೆ ಎಂದು ಖಂಬದಕೋಣೆ ವ್ಯಾಪ್ತಿಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Call us

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ರೈತಸಿರಿ ಸಭಾಭವನದಲ್ಲಿ ನಡೆದ ವ್ಯಾಪ್ತಿಯ 9 ಗ್ರಾಮಗಳ ರೈತರ ಮಾಸಿಕ ಸಭೆಯಲ್ಲಿ ಯಂತ್ರಗಳ ಲಭ್ಯತೆ ಮತ್ತು ದರ ಕುರಿತು ಗಂಭೀರ ಚರ್ಚೆ ನಡೆಯಿತು. ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ರೈತರಿಗೆ ಬಾಡಿಗೆ ಮೇಲೆ ಕಟಾವು ಯಂತ್ರ ಒದಗಿಸುವ ವ್ಯವಹಾರದಲ್ಲಿ ದಲ್ಲಾಳಿಗಳ ಕೈವಾಡ ನಡೆಯುತ್ತಿದೆ. ಅವರು ಗಂಟೆಗೆ ರೂ 2,400 ರೂ 2,500 ಕೊಡಬೇಕು ಎನ್ನುತ್ತಿದ್ದಾರೆ. ಇದರ ಕುರಿತು ಕೃಷಿ ಅಧಿಕಾರಿಗಳ ಗಮನ ಸೆಳೆದರೆ ಖಾಸಗಿಯವರ ಮೇಲೆ ತಮಗೆ ಕಾನೂನು ಬದ್ಧ ಹಿಡಿತ ಇಲ್ಲ. ರೈತರೇ ಒಗ್ಗಟ್ಟಾಗಿ ಮಧ್ಯವರ್ತಿಗಳನ್ನು ಹತ್ತಿರಕ್ಕೆ ಸೇರಿಸದೆ ಅವರನ್ನು ಮಣಿಸಬೇಕು ಎನ್ನುತ್ತಾರೆ ಎಂದು ಕೆಲವರು ದೂರಿದರು. ಕೃಷಿ ಇಲಾಖೆಯಿಂದ ಸಹಾಯಧನ ಪಡೆದು ನಿರ್ವಹಿಸಲಾಗುತ್ತಿರುವ ಯಂತ್ರಮನೆಯ ಯಂತ್ರಗಳಿಗೂ ಸುಮಾರಾಗಿ ಖಾಸಗಿಯವರು ನಿಗದಿಗೊಳಿಸಿದ ದರವನ್ನೇ ಸಂಗ್ರಹಿಸಲಾಗುತ್ತಿದೆ ಎಂದು ಇನ್ನು ಕೆಲವರು ಮಾಹಿತಿ ನೀಡಿದರು.

ವಿಸ್ತೃತ ಚರ್ಚೆಯ ಬಳಿಕ ಮಾತನಾಡಿದ ಪ್ರಕಾಶ್ಚಂದ್ರ ಶೆಟ್ಟಿ ರೈತರು ಯಾವುದೇ ಕಾರಣಕ್ಕೂ ರೂ 2000ಕ್ಕಿಂತ ಅಧಿಕ ಬಾಡಿಗೆ ನೀಡಬಾರದು. ಈ ವಿಚಾರದಲ್ಲಿ ರೈತರು ಒಗ್ಗಟ್ಟು ಪ್ರದರ್ಶಿಸಬೇಕು. ಖಂಬದಕೋಣೆ ಸಹಕಾರಿ ಸಂಘವು ರೈತರ ಜತೆಗೆ ನಿಂತು ಅವರ ಹಿತ ರಕ್ಷಿಸಲಿದೆ ಎಂದರು. ಸಂಘದ ನಿರ್ದೇಶಕರಾದ ಮೋಹನ ಪೂಜಾರಿ, ಜಲಜಾಕ್ಷಿ ಪೂಜಾರಿ, ರೈತಕೂಟದ ಸದಸ್ಯರು, ಕೃಷಿ ಸಹಾಯಕರು ಇದ್ದರು.

ಹಿರಿಯ ವ್ಯವಸ್ಥಾಪಕ ಚಂದಯ್ಯ ಶೆಟ್ಟಿ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿ ಚಂದ್ರ ಕೆ. ನಿರೂಪಿಸಿದರು.

ದಾಖಲೆ ನೀಡಿದರೆ ಕ್ರಮ: ಪತ್ರಿಕೆಯ ಪ್ರಶ್ನೆಗೆ ಉತ್ತರಿಸಿರುವ ಬೈಂದೂರು ಕೃಷಿ ಅಧಿಕಾರಿ ಗಾಯತ್ರಿ ಖಾಸಗಿ ಯಂತ್ರ ಮಾಲೀಕರ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಯಂತ್ರದ ಬಾಡಿಗೆ ಗಂಟೆಗೆ ರೂ 1800 ನಿಗದಿಯಾಗಿದೆ. ಅದು ಯಂತ್ರಮನೆಯ ಯಂತ್ರಗಳಿಗೆ ಅನ್ವಯವಾಗುತ್ತದೆ. ಅಲ್ಲಿ ಅಧಿಕ ದರ ಪಡೆದರೆ, ಆ ಬಗ್ಗೆ ದಾಖಲೆ ಒದಗಿಸಿದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

Leave a Reply

Your email address will not be published. Required fields are marked *

3 − 2 =