ಮಕ್ಕಳ ಸಾಹಿತ್ಯ ಚಟುವಟಿಕೆಗೆ ಸರ್ಕಾರದ ಪ್ರೋತ್ಸಾಹ ಬೇಕು: 20ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದಲ್ಲಿ ಅನುಜ್ಞಾ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕಾರ್ಕಳ: ಅವಕಾಶಗಳೇ ಭಾಗ್ಯದ ಬಾಗಿಲು, ನಾನು ಕೂಡಾ ಸಿಕ್ಕಿದ ಅವಕಾಶ ಬಳಸಿಕೊಂಡು ರಾಷ್ಟ್ರಪತಿಗಳ ವರೆಗೆ ಹೋಗಲು ಹಿರಿಯ ಆಶೀರ್ವಾದ ಪ್ರೇರಣೆಯೇ ಕಾರಣ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ಪ್ರತಿಭೆ ಪಂಚಮಿ ಮಾರೂರು ಹೇಳಿದರು.

Call us

Call us

ಅವರು ಕಾರ್ಕಳದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಡೆದ ಮಿತ್ರ ಮಂಡಳಿ ಕೋಟ ಅರ್ಪಿಸಿದ ಐದು ಜಿಲ್ಲಾ ವ್ಯಾಪ್ತಿಯ 20 ನೇ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಸಮ್ಮೇಳಾನಧ್ಯಕ್ಷೆ ಅನುಜ್ಞಾ ಭಟ್ ಅವರನ್ನು ಸನ್ಮಾನಿಸುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದರು. ಮಿತ್ರ ಮಂಡಳಿ, ಕೋಟ, ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಪ್ರೊಫೆಶನಲ್ ಮತ್ತು ಬಿಸ್‌ನೆಸ್ ಮ್ಯಾನೇಜ್‌ಮೆಂಟ್ ಕಾಲೇಜು, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲೆ, ಕಾರ್ಕಳ ತಾಲೂಕು, ಅಜೆಕಾರು ಹೋಬಳಿ ಘಟಕ ಕಾರ್ಯಕ್ರಮವನ್ನು ಸಂಯುಕ್ತವಾಗಿ ಆಯೋಜಿಸಿದ್ದವು.

ವಿದ್ಯಾರ್ಥಿಗಳು ಸಾಹಿತ್ಯ ಮತ್ತು ಸಂಸ್ಕೃತಿಯತ್ತ ವಿಶೇಷ ಒಲವನ್ನು ತೋರಿಸ ಬೇಕು. ಹಳೆಬೇರು ಆಗಿರುವ ಹಿರಿಯರ ಮಾರ್ಗದರ್ಶನದೊಂದಿಗೆ ಬೆಳೆಯುವ ಹೊಸ ಚಿಗುರಾಗಿ ಬೆಳದು ಬೆಳಗ ಬೇಕು ಎಂಧು ಸಮ್ಮೇಳನಾಧ್ಯಕ್ಷೆ ಅನುಜ್ಞಾ ಭಟ್ ಕಟೀಲು ಅಭಿಪ್ರಾಯ ಪಟ್ಟರು ಬಾಲ ಸಾಹಿತಿಗಳಿಗೆ ಮಕ್ಕಳ ದಿನಾಚರಣೆಯಂದು ಪ್ರಶಸ್ತಿ ನೀಡಬೇಕು, ಪ್ರತಿ ಶಾಲೆಗಳಲ್ಲಿ ಸಾಹಿತ್ಯ ಕಾರ್ಯಕ್ರಮಗಳಿಗೆ ನಿತ್ಯ ನಿರಂತರ ಪ್ರೋತ್ಸಾಹ ಸಿಗಬೇಕು, ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ಸರ್ಕಾರ ಯೋಜನೆ ರೂಪಿಸ ಬೇಕು ಎಂದು ಅವರು ಸರ್ಕಾರವನ್ನು ಆಗ್ರಹಿಸಿದರು.

Call us

Call us

ಅದ್ಬುತ ಪ್ರತಿಭೆಗಳು ಇಲ್ಲಿ ತಮ್ಮ ಮಾತಿನ ಮೂಲಕ, ಜ್ಞಾನ ಪ್ರದರ್ಶನದ ಮೂಲಕ ಮಿಂಚಿದ್ದಾರೆ. ಇಷ್ಟು ಸಣ್ಣ ಪ್ರಾಯದಲ್ಲಿ ಅವರು ಮಾಡುತ್ತಿರುವ ಸಾಧನೆ ನೋಡಿ ಮನತುಂಬಿ ಬಂತು. ಇಂತಹ ಸಮ್ಮೇಳನಗಳು ನಿಜಾರ್ಥದಲ್ಲಿ ನಾಳಿನ ಭವಿಷ್ಯ ರೂಪಿಸುವ ಕಾರ್ಯಕ್ರಮಗಳು. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯ ಬೇಕು ಎಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮೂಡುಬಿದರೆಯ ಮೊಹಮ್ಮದಾಲಿ ಅಬ್ಬಾಸ್ ಹಾರೈಸಿದರು.

ಮಕ್ಕಳ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ನೀಡಬೇಕು ಅದು ಹಿರಿಯರ ಕರ್ತವ್ಯ. ಶೇಖರ ಅಜೆಕಾರು ಅಂತಹ ಕಾರ್ಯಕ್ರಮ ಸಂಘಟಿಸುವುದರಲ್ಲಿ ನಿಸ್ಸೀಮರು ಎಂದು ಹಿರಿಯ ಉದ್ಯಮಿ ಸಮಾಜ ಸೇವಕ ವಿಶ್ವನಾಥ ಶೆಣೈ ಉಡುಪಿ ಹೇಳಿದರು.
ಬೆಳ್ಳಿ ಹಬ್ಬದ ಬೆಳಕಲ್ಲಿ ಸಂಭ್ರಮಿಸುತ್ತಿರುವ ನಮ್ಮೀ ಕಾಲೇಜಿನಲ್ಲಿ ಐದು ಜಿಲ್ಲೆಗಳ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸಮಾಗಮದ ಈ ಸಮ್ಮೇಳನ ನಮಗೆ ವಿಶೇಷ ಸಂತೋಷ, ಹೊಸ ಅನುಭವ ನೀಡಿದೆ ಎಂದು ಅತಿಥಿಗಳಾಗಿದ್ದ ಕಾರ್ಕಳ ಸರ್ಕಾರಿ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಶ್ರೀವರ್ಮ ಅಜ್ರಿ ಸಂತೋಷ ವ್ಯಕ್ತ ಪಡಿಸಿದರು.

ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಶರತ್ ಕಾನಂಗಿ ಅವರು ನಿತಿಶ್ ಪಿ ಬೈಂದೂರು ಅವರ ಏಕ ವ್ಯಕ್ತಿ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿದರು. ಸೂಕ್ತ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಮತ್ತು ಯುವಜನತೆ ದೇಶದ ಆಸ್ತಿ ಆಗಬಲ್ಲರು ಎಂದು ರೋಟರ‍್ಯಾಕ್ಟ್ ಜಿಲ್ಲಾ ಸಭಾಪತಿ ಶೈಲೇಂದ್ರ ರಾವ್ ಅಭಿಪ್ರಾಯ ಪಟ್ಟರು.

ಸಾಹಿತಿ ಮಸುಮ ಅವರು ಸ್ವಾಗತಿಸಿದರು. ಪ್ರಧಾನ ಸಂಚಾಲಕ ಶೇಖರ ಅಜೆಕಾರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮ್ಮೇಳನ ಸಂಚಾಲಕಿ ಸುಪ್ರಿಯಾ ಚೆನ್ನಿಬೆಟ್ಟು ಉಪಸ್ಥಿತರಿದ್ದರು. ಎಂ.ಕಾಂವಿದ್ಯಾರ್ಥಿ ರಮೇಶ ಮತ್ತು ಸುಚಿತಾ ನಿರೂಪಿಸಿದರು.

ಪ್ರತಿಭಾನ್ವಿತ ಬಾಲಕಿ ಮಂಗಳೂರಿನ ರೆಮೋನಾ ಇವೆಟ್ ಪಿರೇರಾ ಪ್ರಾರ್ಥನಾ ನೃತ್ಯ ಮತ್ತು ಕಾಸರಗೋಡಿನ ತೇಜಸ್ವಿನಿ ಕೆ. ಜಾದುಗಾರ್ತಿ ಪೈವಳಿಕೆ ಅವರ ಜಾದು ನೃತ್ಯ ಗಮನಸೆಳೆಯಿತು. ಅತಿಥೇಯ ಕಾಲೇಜಿನ ವಿದ್ಯಾರ್ಥಿವೃಂದ ನಾಡ ಗೀತೆ ಮತ್ತು ರೈತ ಗೀತೆಗಳನ್ನು ಪ್ರಸ್ತುತ ಪಡಿಸಿದರು.

ವಿದ್ಯಾರ್ಥಿ ಸಮ್ಮೇಳನ ಸಮಾರೋಪ: 18 ಮಂದಿಗೆ ಗೌರವ

ಕಾರಂತರಿಗೆ ಕಾರಂತರೇ ಸಾಟಿ- ಸೋಮಯಾಜಿ
ಕಾರಂತರು ನಿತ್ಯೋಲ್ಲಾಸದ ಅಪ್ರತಿಮ ಸಾಹಿತಿ, ೯೦ ರ ಹರೆಯದಲ್ಲೂ ಗೆಜ್ಜೆ ಕಟ್ಟಿ ಕುಣಿದ ದಣಿವರಿಯದ ವ್ಯಕ್ತಿತ್ವ ಅವರದ್ದು ಅವರ ಹೆಸರಲ್ಲಿ ಈಗ ಅವರ ನೆನಪಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಸಮ್ಮೇಳನಕ್ಕೆ ಇಪ್ಪತ್ರರ ಹರೆಯ ಖುಷಿಯ ವಿಷಯ. ಕಾರಂತರಿಗೆ ಕಾರಂತರೇ ಸಾಟಿ ಎಂದು ಮಿತ್ರ ಮಂಡಳಿ ಕೋಟ ಅಧ್ಯಕ್ಷ, ಹಿರಿಯರಾದ ಉಪೇಂದ್ರ ಸೋಮಯಾಜಿ ಹೇಳಿದರು.

ಅವರು ಮಿತ್ರ ಮಂಡಳಿ ಕೋಟ, ಕಾರ್ಕಳದ ಎಂಪಿಎಂ ಸರ್ಕಾರಿ ಪ್ರಥಮ ದರ್ಜೆ ಪ್ರೊಫೆಶನಲ್ ಮತ್ತು ಬಿಸ್‌ನೆಸ್ ಮ್ಯಾನೆಜ್‌ಮೆಂಟ್ ಮತ್ತು ಅಜೆಕಾರು ಕಸಾಪ ಘಟಕ ಜಂಟಿಯಾಗಿ ಆಯೋಜಿಸಿದ್ದ ವಿಂಶತಿ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಂಸ್ಕೃತ ಶ್ಲೋಕವೊಂದು ಹೇಳಿದಂತೆ ಶಿಷ್ಯ ಅಜೆಕಾರು ನಮ್ಮನ್ನು ಮೀರಿ ಉತ್ತಮ ಸಂಘಟಕ ಎಂದು ತೋರಿಸಿಕೊಟ್ಟಿದ್ದಾರೆ. ಈ ಸಮ್ಮೇಳನದಲ್ಲಿ ಐದು ಜಿಲ್ಲೆಗಳ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿ, ೬೦ ಕ್ಕೂ ಹೆಚ್ಚು ಮಂದಿಗೆ ವೇದಿಕೆ ಒದಗಿಸಿ ಉತ್ತಮ ಸಾಧನೆ ಮಾಡಿದ್ದಾರೆ. ಸರ್ಕಾರಿ ಕಾಲೇಜುಗಳು ಹೇಗೆ ಮಾದರಿಯಾಗಿ ಬೆಳೆಯುತ್ತಿವೆ ಎಂಬುದಕ್ಕೆ ಈ ಪದವಿ ಕಾಲೇಜು ಮಾದರಿಯಾಗಿದೆ ಎಂದು ಅವರು ಪ್ರಶಂಸಿದರು.

ಸಾಧಕರಿಗೆ ಗೌರವ ಸನ್ಮಾನ ಮಾಡಿದ ರಾಷ್ಟ್ರ ಪ್ರಸಸ್ತಿ ವಿಜೇತ ಶಿಕ್ಷಕ ನಕ್ರೆ ಜಾರ್ಜ್ ಕ್ಯಾಸ್ಟಲಿನೋ ಅವರು ವಿದ್ಯಾಥಿಗಳಿಗೆ ಅವಕಾಶ ನೀಡುವ ಮಾರ್ಗದರ್ಶನ ನೀಡುವ ಇಂತಹ ಕೆಲಸಗಳು ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖವಾಗುತ್ತವೆ ಎಂದರು.

ನನ್ನ ಬದುಕಿನ ಅತ್ಯಂತ ಧನ್ಯತೆಯ ಕ್ಷಣಗಳನ್ನು ಈ ಅಧ್ಯಕ್ಷತೆಯ ಮೂಲಕ ಅನುಭವಿಸಿದ್ದೇನೆ. ಅಜೆಕಾರು ಅವರು ಈ ವಿದ್ಯಾರ್ಥಿ ಸಮ್ಮೇಳನವನ್ನು ಅದೆಷ್ಟು ಗಂಭೀರವಾಗಿ ತೆಗೆದು ಕೊಂಡಿದ್ದಾರೆ ಎಂದರೆ ಅವರು ಕಾಲೇಜಿಗೆ ಅತಿಥಿಗಳೊಂದಿಗೆ ಬಂದು ನನ್ನನ್ನು ಸನ್ಮಾನಿಸಿ ಇಲ್ಲಿ ಕೊಟ್ಟಿರುವ ಗೌರವದಿಂದ ತಿಳಿಯುತ್ತದೆ. ಇಂತಹ ಅವಕಾಶಗಳನ್ನು ಎಂದಿಗೂ ಕಳೆದು ಕೊಳ್ಳ ಬಾರದು ಎಂದು ಸಮ್ಮೇಳನಾಧ್ಯಕ್ಷೆ ಅನುಜ್ಞಾ ಭಟ್ ಕಟೀಲು ಪ್ರತಿಕ್ರಿಯಿಸಿದರು.

ಗೌರವ ಸಿಗುತ್ತೆ ಎಂದು ಯಾರೂ ಕೆಲಸ ಮಾಡುವುದಿಲ್ಲ, ಮಾಡಬಾರದು. ನಾವು ನಮ್ಮ ಕರ್ತವ್ಯವನ್ನು ಸಾಧ್ಯವಿರುವ ಕೆಲಸಗಳನ್ನು ಮಾಡುತ್ತಾ ಹೋಗ ಬೇಕು ಎಂದು ಕಾರಂತ ಗೌರವ ಸ್ವೀಕರಿಸಿದ ನೆಂಪು ನರಸಿಂಹ ಭಟ್ಟ ಅವರು ಹೇಳಿದರು.

ಟ್ಯುಟೋರಿಯಲ್ ಕಾಲೇಜುಗಳ ಬಗೆಗೂ ಕಾರಂತರ ಹೆಸರಲ್ಲಿ ಈ ಬಗೆಯ ಗೌರವ ಸಂದಿರುವುದು ಸಾರ್ಥಕದ ಭಾವವನ್ನು ಮೂಡಿಸಿದೆ ಎಂದು ಕಾರಂತ ಸಾಂಸ್ಥಿಕ ಗೌರವ ಸ್ವೀಕರಿಸಿದ ಬೆಳ್ಳ ಹಬ್ಬ ಪೂರೈಸಿರುವ ಯಶಸ್ವಿ ಟ್ಯೂಟೋರಿಯಲ್ ಕಾಲೇಜಿನ ಪ್ರಾಂಶುಪಾಲ ಗಣೇಶ ಕಾಮತ್ ಸಂತಸ ವ್ಯಕ್ತ ಪಡಿಸಿದರು.

ಕಾರಂತ ಗೌರವ ಪುರಷ್ಕೃತ ನಿತೇಶ ಮಾರ್ನಾಡ್ ಸಮಾರೋಪ ಭಾಷಣ ಮಾಡಿದರೆ, ಅಶ್ವಿನಿ.ಬಿ.ಕೆ ಉಗ್ರಾಣಕಟ್ಟೆ ಕವನ ವಾಚನದ ಮೂಲಕ ಕೃತಜ್ಞತೆ ಸಲ್ಲಿಸಿದರು. ಉಪನ್ಯಾಸಕ ಕೃಷ್ಣಮೂರ್ತಿ ವೈದ್ಯ ಪ್ರಶಸ್ತಿ ಪತ್ರ ವಿತರಣಾ ಕಾರ್ಯಕ್ರಮ ನೆರವೇರಿಸಿದರು.

ಕೊಡ್ಲಿಪೇಟೆ ಕಾಲೇಜಿನ ವಿದ್ಯಾರ್ಥಿನಿ ಸಂಶೀನ ಕಾಲೇಜನ್ನು ಗುರುತಿಸಿದ್ದಕ್ಕಾಗಿ ಮತ್ತು ನೂರಾರು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಿದ್ದಕ್ಕಾಗಿ ವಂದಿಸಿದರು. ಪುರ ಸಭಾ ಉಪಾಧ್ಯಕ್ಷ ಗಿರಿಧರ ನಾಯಕ್, ಜೇಸಿಐ ಕಾರ್ಕಳ ಉಪಾಧ್ಯಕ್ಷ ಗಿರಿಧರ ನಾಯಕ್, ಯೋಗಿಶ್ ಡಿ.ಎಚ್, ಸುಪ್ರಿಯಾ ಚೆನ್ನಿಬೆಟ್ಟು, ಮಂಜಪ್ಪ ಗೋಣಿ ಅತಿಥಿಗಳಾಗಿದ್ದರು. ಅತ್ಯುತ್ತಮ ಪಾಲ್ಗೊಳ್ಳುವಿಕೆಗಾಗಿ ಎಸ್‌ವಿಟಿ ಮಹಿಳಾ ಕಾಲೇಜಿನ ಗೌರವವನ್ನು ಉಪನ್ಯಾಸಕ ಅಶೋಕ್ ಕ್ಲಿಫರ್ಡ್ ಡಿಸೋಜಾ ಅವರು ವಿದ್ಯಾರ್ಥಿ ವೃಂದದೊಂದಿಗೆ ಸ್ವೀಕರಿಸಿದರು.

ಸುವಿಚಾರ ಗೋಷ್ಠಿಯ ಅಧ್ಯಕ್ಷೆ ವಿಜೇತಾ ಶೆಟ್ಟಿ ಉಡುಪಿ, ಕಥಾ ಸಮಯದ ಅಧ್ಯಕ್ಷ ಗಣಪತಿ ದಿವಾಣ ಮತ್ತು ಕವಿತಾ ಲೋಕ ಕವಿಗೋಷ್ಠಿಯ ಅಧ್ಯಕ್ಷ ವಿಷ್ಣುಪ್ರಸಾದ್ ಕೊಡಿಬೆಟ್ಟು ಅವರನ್ನು ಗೌರವಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಜನಾರ್ದನ ಸುರ್ಯ, ಅಶ್ವಿನಿ.ಬಿ.ಕೆ ಉಗ್ರಾಣಿಕಟ್ಟೆ, ಶ್ಯಾಮ್ ಪ್ರಸಾದ್, ಪ್ರೇಮಾ ಹಿರೆಮಾಗಿ, ಎಂಜಿ.ಎಂ ಕಾಲೇಜಿನ ವಿದ್ಯಾರ್ಥಿನಿ ಚಿತ್ರ ನಟಿ ಅಶ್ವಿತಾ ನಾಯಕ್, ಆಳ್ವಾಸ್ ಕಾಲೇಜಿನ ನಿತೇಶ್ ಮಾರ್ನಾಡ್, ಎಸ್.ಡಿ.ಎಂ. ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಗಿನ್ನಿಸ್ ದಾಖಲೆಯ ಹೆಜ್ಜೆ ಇಟ್ಟಿರುವ ಪ್ರಥ್ವೀಶ್ ಪೇತ್ರಿ, ಕಟೀಲು ಪದವಿ ಕಾಲೇಜಿನ ಕೆರೆಕಾಡು ಅಜಿತ್ ಕುಮಾರ್, ತೆಂಕನಿಡಿಯೂರು ಸರ್ಕಾರಿ ಕಾಲೇಜಿನ ವಿಜೇತಾ ಶೆಟ್ಟಿ, ಅತಿಥೇಯ ಎಂ.ಪಿ.ಎಂ ಸರ್ಕಾರಿ ಕಾಲೇಜಿನ ವಿದ್ಯಾನಂದ ಮತ್ತು ಪುಪ್ಪಲತಾ ಅವರನ್ನು ಕಾರಂತ ವಿದ್ಯಾರ್ಥಿ ಗೌರವ ನೀಡಿ ಸನ್ಮಾನಿಸಲಾಯಿತು. ಸಮ್ಮೇಳನ ಪ್ರಧಾನ ಸಂಚಾಲಕ, ಕಸಾಪ ಅಜೆಕಾರು ಹೋಬಳಿ ಅಧ್ಯಕ್ಷ ಶೇಖರ ಅಜೆಕಾರು ವಂದಿಸಿದರು.

ವಿದ್ಯಾರ್ಥಿ ಸಮ್ಮೇಳನ ಗೋಷ್ಠಿಗಳಲ್ಲಿ ಮಿಂಚಿದ ವಿದ್ಯಾರ್ಥಿಗಳು
ಕರಾವಳಿ ತೀರದ ಭಾರ್ಗವ, ನಡೆದಾಡುವ ವಿಶ್ವಕೋಶ, ಜ್ಞಾನ ಪೀಠ ಪ್ರಶಸ್ತಿ ಪುರಷ್ಕೃತ ಡಾ.ಕೋಟ ಶಿವರಾಮ ಕಾರಂತರ ನೆನಪಲ್ಲಿ ನಡೆದ ೨೦ ನೇ ವರ್ಷದ ಕರಾವಳಿ ವಿದ್ಯಾರ್ಥಿ ಸಮ್ಮೇಳನದ ಮೂರು ಗೋಷ್ಠಿಗಳಲ್ಲಿ ಅವಕಾಶ ಗಿಟ್ಟಿಸಿಕೊಂಡ ವಿದ್ಯಾರ್ಥಿಗಳು ಮಿಂಚಿದರು.

ವಿಚಾರಗೋಷ್ಠಿ
ತೆಂಕನಿಡಿಯೂರು ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿನಿ ವಿಜೇತಾ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರಂತರ ಬದುಕು ಬರಹ ಕುರಿತ ವಿಚಾರ ಗೋಷ್ಠಿಯಲ್ಲಿ ಸಿ.ಎ. ವಿದ್ಯಾರ್ಥಿನಿ ರೀಮಾಪ್ರಿಯಾ ಗುಂಡಮ, ಕೊಡ್ಲಿಪೇಟೆ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಸಂಶೀನ, ಹೇಮರಾಜ್ ಎ.ಎಸ್, ಸ್ವಾತಿ, ಗುಣಶ್ರೀ ಕಾರಂತರ ಕುರಿತು ಪ್ರಬಂಧ ಮಂಡಿಸಿದರು.

ಕಥಾಗೋಷ್ಠಿ
ಯುವ ಭರವಸೆಯ ಕಥೆಗಾರ ಎಂ.ಜಿ.ಎಂ ಕಾಲೇಜಿನ ವಿದ್ಯಾರ್ಥಿ ಗಣಪತಿ ದಿವಾಣ ಅಧ್ಯಕ್ಷತೆಯಲ್ಲಿ ಕಥಾ ಸಮಯ ನಡೆಯಿತು. ಬಾರ್ಕೂರು ಎಸ್‌ಆರ್‌ಎಸ್‌ಎಂಎನ್‌ಜಿ ಕಾಲೇಜಿನ ಅರ್ಚನಾ ಪೈ ಗಂಗೊಳ್ಳಿ, ಎಸ್‌ಡಿಎಂಜೆ ಬಿಎಎಡ್‌ಕಾಲೇಜು ಉಜಿರೆ ವಿದ್ಯಾರ್ಥಿನಿ ಶುತಿ ಕೆ.ಜಿ, ಕಾರ್ಕಳ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿ ದೀಕ್ಷಣ್ ಕುಮಾರ್, ಕಾಪು ಪ್ರಥಮ ದರ್ಜೆ ಕಾಲೇಜಿನ ಸಾತ್ವಿಕ್ ಎಸ್. ಕುಲಾಲ್ ಕಥಾ ವಾಚನ ಮಾಡಿದರು.

ಕವಿಗೋಷ್ಠಿ
ಆಳ್ವಾಸ್ ಕಾಲೇಜಿನ ವಿಜ್ಞಾನ ಸ್ನಾತಕೋತ್ತರ ವಿದ್ಯಾರ್ಥಿ ವಿಷ್ಣುಪ್ರಸಾದ್ ಕೊಡಿಬೆಟ್ಟು ಕವಿತಾ ಲೀಕ ಕವಿಗೋಷ್ಠಿಯ ಅಧ್ಯಕ್ಷರಾಗಿದ್ದರು.

ಆಳ್ವಾಸ್ ಕಾಲೇಜಿನ ಕೀರ್ತನಾ ಕೆ, ಅಮೀನ್, ಕಾರ್ಕಳ ಎಸ್‌ವಿಟಿ ಮಹಿಳಾ ಕಾಲೇಜಿನ ರಾಜಲಕ್ಷ್ಮೀ ನಾಯಕ್, ಕಾರ್ಕಳ ಭುವನೇಂದ್ರ ಕಾಲೇಜಿನ ವಿನಯ ಆರ್ ಭಟ್, ವಾಮದಪದವು ಸರ್ಕಾರಿ ಕಾಲೇಜಿನ ಸಂತೋಷ ನೆಲ್ಲಿಕಾರು, ಎಸ್.ಡಿ.ಎಂ ಕಾಲೇಜಿನ ಅಬೂಬಕರ್ ಸಿದ್ದಿಕ್, ಹಿರಿಯಡ್ಕ ಸರ್ಕಾರಿ ಕಾಲೇಜಿನ ಶ್ವೇತಾ ಎಸ್ ,ಪಿಪಿಸಿ ಕಾಲೇಜಿನ ಶ್ರೀಜಿತ್ (ಕಸುಶ್ರೀ), ಎಸ್.ಡಿಎಂ ಕಾಲೇಜ್ ಆಫ್ ಎಜ್ಯುಕೇಶನ್‌ನ ತನುಜಾ ಪಿ, ಕಾರ್ಕಳ ಎಂಪಿ.ಎಂ ಕಾಲೇಜಿನ ಪ್ರಣಮ್ಯ ಕುಮಾರಿ ಕವಿತಾ ವಾಚನ ಮಾಡಿದರು.

news-20th-vidyarthi-sahitya-sammelana1 news-20th-vidyarthi-sahitya-sammelana3news-20th-vidyarthi-sahitya-sammelana2

Leave a Reply

Your email address will not be published. Required fields are marked *

5 × 3 =