ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಎರಡು ವರ್ಷಗಳಿಂದ ಮುದ್ದಾಗಿ ಸಾಕಿದ ಹಸುವಿಗೆ ಅದ್ದೂರಿ ಸೀಮಂತ ಶಾಸ್ತ್ರ ನೆರವೇರಿಸಿದ ವೈಶಿಷ್ಟ್ಯಪೂರ್ಣ ಘಟನೆ ತಾಲೂಕಿನ ಗುಲ್ವಾಡಿ ಗ್ರಾಮದ ಕೌಂಜೂರು ಎಂಬಲ್ಲಿ ನಡೆದಿದೆ.
ಕೌಂಜೂರು ನಿವಾಸಿ ಬಾಲಕೃಷ್ಣ ಆಚಾರ್ಯ ಅವರ 2 ವರ್ಷದ ಹಿಂದೆ ಮುದ್ದಾದ ಹೆಣ್ಣು ಕರುವನ್ನು ತಂದು ನಂದಿನಿ ಎಂಬ ಹೆಸರಿಟ್ಟು ಪ್ರೀತಿಯಿಂದ ಸಾಕಿದ್ದರು. ಈ ಕರು ಮನೆಯೊಳಗೆಯೇ ಹೆಚ್ಚಾಗಿ ಇರುತ್ತಿತ್ತು. ರಾತ್ರಿ ಹೊತ್ತು ಮಾತ್ರ ಕೊಟ್ಟಿಗೆಯೊಳಗೆ ಇರುತ್ತಿದ್ದು, ಮನೆಯ ಸದಸ್ಯರಿಗೆ ಅಚ್ಚುಮೆಚ್ಚಿನದಾಗಿತ್ತು. ಈ ನಂದಿನಿ ಈಗ ಗರ್ಭ ಧರಿಸಿದ್ದು 7 ತಿಂಗಳ ಗರ್ಭಿಣಿಗೆ ಮನೆಯವರು ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಬಯಕೆ ಶಾಸ್ತ್ರ ಮಾಡಿದ್ದಾರೆ.
ಸೀಮಂತಕ್ಕೆ ನಂದಿನಿ ಹಸುವನ್ನು ಮದುಮಗಳಂತೆ ಸಿಂಗರಿಸಲಾಗಿತ್ತು. ಚಿನ್ನದ ಸರ, ತಲೆಗೆ ಬಿಂದಿ ಹಾಕಿ ಸೀರೆ ಉಡಿಸಿ, ಸಿಂಗಾರ ಮೊದಲಾದ ಹೂಗಳಿಂದ ಸಿಂಗರಿಸಲಾಗಿತ್ತು. ಬಯಕೆ ಶಾಸ್ತ್ರವನ್ನು ಮನುಷ್ಯರಿಗೆ ಹೇಗೆ ಮಾಡಬೇಕೋ ಅದೇ ರೀತಿ ನಾನಾ ರೀತಿಯಲ್ಲಿ ಭಕ್ಷ್ಯಗಳನ್ನು (ಸಿಹಿತಿಂಡಿ, ಚಕ್ಕುಲಿ ಮೊದಲಾದ ತಿನಿಸು) ಬಡಿಸಿ 15ಕ್ಕೂ ಅಧಿಕ ಮಹಿಳೆಯರು ಅರಶಿನ, ಕುಂಕುಮ ಹಚ್ಚಿ ಆರತಿ ಎತ್ತಿ ಶಾಸ್ತ್ರೋಕ್ತವಾಗಿ ಬಯಕೆ ಶಾಸ್ತ್ರ ನೆರವೇರಿಸಿದರು. ಮನೆಯೊಳಗೆ ಈ ಶಾಸ್ತ್ರವನ್ನು ಅದ್ದೂರಿಯಾಗಿಯೇ ಮಾಡಿ ಅಚ್ಚರಿಗೆ ಕಾರಣವಾಗಿದ್ದಾರೆ. ಸೀಮಂತಕ್ಕೆ ಸುಮಾರು 2 ಸಾವಿರ ರೂ. ಖರ್ಚು ಮಾಡಿದ್ದಾರೆ.