ಗಂಗೊಳ್ಳಿ: ಇಲ್ಲಿನ ಬೇಲಿಕೇರಿ ಸಮೀಪದ ಸಮುದ್ರ ದಡದಲ್ಲಿ ಶುಕ್ರವಾರ ರಾತ್ರಿ ದಿಕ್ಕು ತಪ್ಪಿ ಸಮುದ್ರದ ತೀರಕ್ಕೆ ಬಂದಿದ್ದ ಬೋಟು ಮರಳು ದಿಣ್ಣೆಗೆ ಢಿಕ್ಕಿಯಾಗಿ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.
ಮಲ್ಪೆ ಬಂದರಿನಿಂದ ಗಂಗೊಳ್ಳಿ ಬಂದರಿನತ್ತ ಬರುತ್ತಿದ್ದ ಬೋಟು ಗಂಗೊಳ್ಳಿ ಸಮೀಪಿಸುತ್ತಿದ್ದಂತೆ ದಿಕ್ಕು ತಪ್ಪಿ ಚಲಿಸಿದ ಕಾರಣ ಮರಳಿನಲ್ಲಿ ಸಿಕ್ಕಿಹಾಕಿಕೊಂಡಿತ್ತು. ನಂತರ ಅದನ್ನು ದಡಕ್ಕೆ ತರುವ ಪ್ರಯತ್ನವನ್ನು ನಡೆಸಿ ತ್ತಾದರೂ ಸಾಧ್ಯವಾಗಿರಲಿಲ್ಲ. ನಂತರ ರಾತ್ರಿ ಅಲೆಗಳ ಅಬ್ಬರಕ್ಕೆ ಮರಳು ದಿಣ್ಣೆಗೆ ಬಂದು ಢಿಕ್ಕಿ ಹೊಡೆದಿದೆ. ಬೋಟಿನ ಬಹುಭಾಗ ಹಾನಿಯಾಗಿದ್ದು ಸುಮಾರು ರೂ. 30 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿ ಸಲಾಗಿದೆ. ಬೋಟು ಶಾಂತಾ ಶ್ರೀಯಾನ್ ಅವರಿಗೆ ಸೇರಿದ್ದು, ಮಲ್ಪೆ ಬಂದರಿನಿಂದ ಗಂಗೊಳ್ಳಿಯತ್ತ ಸಾಗುತ್ತಿತ್ತು. ಮರಳಿನಲ್ಲಿ ಹೂತಿದ್ದ ಬೋಟನ್ನು ದಡಕ್ಕೆ ತರಲು ಪ್ರಯತ್ನಪಟ್ಟರೂ ಅಸಾಧ್ಯವಾದ ಹಿನ್ನೆಲೆಯಲ್ಲಿ ಈ ನಷ್ಟ ಸಂಭವಿಸಿದೆ. ದಿಕ್ಕು ತಪ್ಪಿದ ಬೋಟಿನಲ್ಲಿದ್ದ ಮೂವರು ಅಪಾಯದಿಂದ ಪಾರಾಗಿದ್ದಾರೆ.