ಮರವಂತೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು : ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ದೇಶದಲ್ಲಿ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದೆ. ಸ್ವಾತಂತ್ರ್ಯ ಬಂದಾಗ ದೇಶದ ಸ್ಥಿತಿ ಹೇಗಿತ್ತು, ಆ ಬಳಿಕ ಆಗಿರುವ ಬದಲಾವಣೆ ಏನು ಮತ್ತು ಎಷ್ಟು ಎನ್ನುವುದರ ಅರಿವಿಲ್ಲದ ಹೊಸ ತಲೆಮಾರಿನ ಜನ ಅದನ್ನು ನಂಬುತ್ತಿದ್ದಾರೆ. ಜನರಿಗೆ ಸತ್ಯ ತಿಳಿಸಿ, ಬಿಜೆಪಿ ಅಪಪ್ರಚಾರ ಬಯಲುಗೊಳಿಸುವ ಹೊಣೆಯನ್ನು ಕಾಂಗ್ರೆಸ್ ಕಾರ್ಯಕರ್ತರು ನಿರ್ವಹಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ರಾಜ್ಯ ಮತ್ತು ದೇಶದಲ್ಲಿ ಮರುಸ್ಥಾಪಿಸುವ ಕೆಲಸ ಮಾಡಬೇಕು ಎಂದು ಬೈಂದೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ಮರವಂತೆಯಲ್ಲಿ  ನಡೆದ ಪಕ್ಷ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ದೊರೆತಾಗ ದೇಶ ಆಹಾರ, ವಸತಿ, ರಕ್ಷಣೆ, ಸಂಪರ್ಕವೇ ಆದಿಯಾದ ಎಲ್ಲ ಕ್ಷೇತ್ರಗಳಲ್ಲೂ ಕೊರತೆ ಎದುರಿಸುತ್ತಿತ್ತು. ದೀರ್ಘಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಸೂಕ್ತ ಯೋಜನೆಗಳನ್ನು ರೂಪಿಸಿ ಅನುಷ್ಠಾನಿಸುವ ಮೂಲಕ ಜಗತ್ತಿನ ಮುಂಚೂಣಿಯ ರಾಷ್ಟ್ರಗಳ ಸಾಲಿಗೆ ಸೇರಿಸಿದೆ. ಇದು ಹಿಂದಿನ ಚುನಾವಣೆಯಲ್ಲಿ ದೇಶದ ಜನರನ್ನು ಭಾವನಾತ್ಮಕ ವಿಚಾರಗಳ ಮೂಲಕ ದಾರಿತಪ್ಪಿಸಿ ಅಧಿಕಾರ ಹಿಡಿದ ಬಿಜೆಪಿಯ ಸಾಧನೆ ಅಲ್ಲ ಎಂದು ಅವರು ನುಡಿದರು.

ಕೇಂದ್ರದ ಮೋದಿ ಸರಕಾರ ಚುನಾವಣಾಪೂರ್ವ ನೀಡಿದ ಭರವಸೆಗಳಾದ ಕಾಳಧನ, ಕಳ್ಳನೋಟು ನಿವಾರಣೆ, ಭಾರತೀಯ ಶ್ರೀಮಂತರು ವಿದೇಶದಲ್ಲಿಟ್ಟುವ ಅಕ್ರಮ ಠೇವಣಿ ತಂದು ಜನರಿಗೆ ವಿತರಣೆ, ಪೆಟ್ರೋಲಿಯಂ ಉತ್ಪನ್ನ ಸೇರಿದಂತೆ ದಿನಬಳಕೆ ಸಾಮಗ್ರಿ ದರ ನಿಯಂತ್ರಣ, ಭಯೋತ್ಪಾದನೆ ನಿಗ್ರಹದಂತಹ ಕ್ರಮ ಈಡೇರಿಲ್ಲ. ರೈತರ ಸಮಸ್ಯೆ ನಿವಾರಣೆ ಆಗಿಲ್ಲ. ಬದಲಾಗಿ ಸರಕಾರ ಬೃಹತುದ್ದಿಮೆದಾರರಿಗೆ ಹೆಚ್ಚು ಸೌಲಭ್ಯ ನೀಡುತ್ತಿದೆ. ಅವರ ಬ್ಯಾಂಕ್ ಸಾಲ ಮನ್ನಾ ಮಾಡಲಾಗುತ್ತಿದೆ ಎಂದು ಅವರು ದೂರಿದರು. ಬಿಜೆಪಿಯ ಮಾತೃ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದು ರಾಷ್ಟ್ರ ನಿರ್ಮಾಣ, ರಾಮ ಮಂದಿರ ನಿರ್ಮಾಣದಂತಹ ವಿಷಯ ಮುಂದಿಟ್ಟುಕೊಂಡು ಯುವಕರ ತಲೆ ಕೆಡಿಸುತ್ತಿದೆ. ಹಿಂದೆ ಇದೇ ಕ್ಷೇತ್ರದಲ್ಲಿ ಠಿಕಾಣಿ ಹೂಡಿ, ಯುವಕರನ್ನು ಮನೆಮನೆಗಳಿಂದ ಇಟ್ಟಿಗೆ, ಹಣ ಸಂಗ್ರಹಿಸುವುದಕ್ಕೆ ತೊಡಗಿಸಿದ ಆರ್‌ಎಸ್‌ಎಸ್ ಕಾರ್ಯಕರ್ತ ಅನಂತಕುಮಾರ ಹೆಗಡೆ ಇಂದು ಸಂಸದ, ಸಚಿವ ಸ್ಥಾನಕ್ಕೇರಿದರು. ಇಂದೂ ಕೂಡ ಆ ಸಂಸ್ಥೆ ಹಾಗೂ ಬಿಜೆಪಿ ಕೆಳವರ್ಗದ ಹಿಂದು ಯುವಕರನ್ನು ಅಂತಹದೇ ಕೆಲಸಕ್ಕೆ ಬಳಸಿಕೊಂಡು ಅವರ ಭವಿಷ್ಯ ಕಮರುವಂತೆ ಮಾಡುತ್ತಿವೆ. ಇವುಗಳೊಂದಿಗೆ ಕಾಂಗ್ರೆಸ್ ಈ ದೇಶದ ಪ್ರಗತಿಗೆ, ಜನರ ಜೀವನ ಸುಧಾರಣೆಗೆ ಕೈಗೊಂಡ ರಚನಾತ್ಮಕ ಕ್ರಮಗಳನ್ನು ತುಲನೆ ಮಾಡಬೇಕು ಎಂದರು.

ಬೈಂದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಮತಯಾಚನೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಜನರಿಗೆ ಕೊಟ್ಟ ಹತ್ತಾರು ಯೋಜನೆಗಳ ಮತ್ತು ಅದರ ಅಭ್ಯರ್ಥಿ ಕೆ. ಗೋಪಾಲ ಪೂಜಾರಿ ನಾಲ್ಕು ಶಾಸಕ ಅವಧಿಗಳಲ್ಲಿ ಮಾಡಿದ ಅಭಿವೃದ್ಧಿಯ ಸಮರ್ಥನೆ ಇದೆ. ಕಾರ್ಯಕರ್ತರು ಮನೆಮನೆಗೆ ತೆರಳಿ ಇವೆಲ್ಲವನ್ನು ಮತದಾರರಿಗೆ ವಿವರಿಸಿ, ಎಲ್ಲ ವರ್ಗದ ಜನರ ಪರವಾದ ಕೆಲಸ ಮಾಡುತ್ತಿರುವ, ಅಭಿವೃದ್ಧಿಯನ್ನೇ ಮೂಲಮಂತ್ರವಾಗಿ ಸ್ವೀಕರಿಸಿರುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಬೇಕು. ಪ್ರಾಮಾಣಿಕ, ಕೆಲಸಗಾರ, ಸರಳ ಸಜ್ಜನ ಗೋಪಾಲ ಪೂಜಾರಿ ಇನ್ನೊಮ್ಮೆ ಆಯ್ಕೆಯಾಗುವಂತೆ ಮಾಡಬೇಕು ಎಂದು ವಿನಂತಿಸಿದರು. ಕೆ. ಗೋಪಾಲ ಪೂಜಾರಿ, ಎಸ್. ರಾಜು ಪೂಜಾರಿ ಕಾರ್ಯಕರ್ತರು ಶ್ರಮವಹಿಸಿ ಕೆಲಸಮಾಡಿ ಮರವಂತೆಯ ಐದೂ ಬೂತ್‌ಗಳಲ್ಲಿ ಕಾಂಗ್ರೆಸ್‌ಗೆ ಬಹುಮತ ಬರುವಂತೆ ಮಾಡಬೇಕು ಎಂದು ಕೋರಿದರು.

ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪುಟ್ಟಯ್ಯ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಜಗದೀಶ ಪೂಜಾರಿ, ಎಚ್. ಮಂಜಯ್ಯ ಶೆಟ್ಟಿ, ಉಪ್ಪುಂದದ ಸಹಕಾರಿ ಮೋಹನ ಪೂಜಾರಿ, ವಾರ್ಡ್ ಸಮಿತಿ ಅಧ್ಯಕ್ಷರಾದ ಸಂಜೀವ ಪೂಜಾರಿ, ಶೀನ ದೇವಾಡಿಗ, ಎಂ. ವಿನಾಯಕ ರಾವ್, ರಾಮಕೃಷ್ಣ ಖಾರ್ವಿ, ಇತರರು ಇದ್ದರು.

 

Leave a Reply

Your email address will not be published. Required fields are marked *

one + four =