ಮರವಂತೆ: ಗ್ರಾಮಸಭೆಯಲ್ಲಿ ಪಂಚಾಯಿತಿ ಮೌನವ್ರತ

ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು : ಗ್ರಾಮಸಭೆಯಲ್ಲಿ ಸಾರ್ವಜನಿಕರು ಮಂಡಿಸುವ ನಿರ್ಣಯ ಮತ್ತು ಕೇಳುವ ಪ್ರಶ್ನೆಗಳನ್ನು ಏಳು ದಿನ ಮೊದಲು ಲಿಖಿತವಾಗಿ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಕರಪತ್ರದಲ್ಲಿ ಮುದ್ರಿಸಿದ ಸೂಚನೆಗೆ ಮಂಗಳವಾರ ನಡೆದ ಮರವಂತೆ ಗ್ರಾಮ ಪಂಚಾಯಿತಿಯಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಮಾಜಿ ಅಧ್ಯಕ್ಷ ಎಸ್. ಜನಾರ್ದನ ಈ ವಿಷಯ ಎತ್ತಿದಾಗ ಶೇಖರ ಕುಂದರ್ ಇದು ಜನರ ಬಾಯಿ ಮುಚ್ಚಿಸುವ ಯತ್ನ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ನಿಯಮದಂತೆ ವಸತಿ, ವಾರ್ಡ್‌ಸಭೆಗಳನ್ನು ಗ್ರಾಮಸಭೆಗಿಂತ ತಿಂಗಳು ಮೊದಲು ನಡೆಸಬೇಕು, ವಿಶೇಷ ಆಯವ್ಯಯ ಗ್ರಾಮಸಭೆ ನಡೆಸಬೇಕು, ಎಲ್ಲ ವಾಣಿಜ್ಯ ಸ್ಥಾವರಗಳು ಅನುಮತಿ ಪಡೆದುಕೊಳ್ಳಬೇಕು, ನಿಯಮದಂತೆ ತೆರಿಗೆ ದರ ಹೊರಿಸಬೇಕು, ಫ್ಲೆಕ್ಸ್‌ಗಳ ಬಳಕೆ ತಡೆಗಟ್ಟಬೇಕು, ಪ್ರಚಾರ ಫಲಕಗಳ ಮೇಲೆ ಶುಲ್ಕ ವಿಧಿಸಬೇಕು, ಗ್ರಾಮವನ್ನು ಪ್ಲಾಸ್ಟಿಕ್‌ಮುಕ್ತಗೊಳಿಸಬೇಕು ಎಂಬ ಸಲಹೆಗಳಿಗೆ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳಿಂದ ಮೌನ ಪ್ರತಿಕ್ರಿಯೆ ವ್ಯಕ್ತವಾಯಿತು. ಎರಡು ವರ್ಷಗಳ ಹಿಂದೆ ಅಳವಡಿಸಿದ್ದ ಶುದ್ಧ ಕುಡಿಯುವ ನೀರು ಘಟಕ ಎಂದೋ ಕೆಟ್ಟು ಹೋಗಿದ್ದರೂ ಕ್ರಮ ಕೈಗೊಳ್ಳದಿರುವ ಪ್ರಶ್ನೆಗೂ ಉತ್ತರ ದೊರೆಯಲಿಲ್ಲ. ಎಂ. ಶಂಕರ ಖಾರ್ವಿ ಸ್ಮಶಾನ ನಿರ್ಮಾಣದ ಅಗತ್ಯದ ಕುರಿತು, ಗಣಪತಿ ಖಾರ್ವಿ ಎಲ್ಲ ಅನುದಾನದ ವಿವರ ಇರುವ ಫಲಕ ಪ್ರದರ್ಶಿಸುವ ಕುರಿತು, ವಿಜಯ ಕ್ರಾಸ್ತಾ ಲೋ ವೋಲ್ಟೇಜ್ ಕುರಿತು, ದೇವಿದಾಸ ಶ್ಯಾನುಭಾಗ್ ಮೆಸ್ಕಾಂ ಬಿಲ್ಲಿಂಗ್ ನ್ಯೂನತೆ ಕುರಿತು, ರಮೇಶ ವಿದ್ಯುತ್ ಸಂಪರ್ಕ ಕುರಿತು, ರಾಜು, ಸಂತೋಷ್ ಗಾಂಧಿನಗರವನ್ನು ಎರಡು ವಾರ್ಡ್‌ಗಳ ನಡುವೆ ವಿಭಾಗಿಸಿರುವುದರ ಕುರಿತು ಗಮನ ಸೆಳೆದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ. ಬಾಬು ಶೆಟ್ಟಿ ಫ್ಲೆಕ್ಸ್‌ಗಳ ಕುರಿತು ಗ್ರಾಮಸ್ಥರ ನಿಲುವನ್ನು ಬೆಂಬಲಿಸಿದರು. ಗ್ರಾಮದಲ್ಲಿ ಯಾವುದೇ ಕಾಮಗಾರಿ ನಡೆಸುವ ಮುನ್ನ ಸಂಬಂಧಿಸಿದವರು ಗ್ರಾಮ ಪಂಚಾಯಿತಿಗೆ ಸೂಕ್ತ ಮಾಹಿತಿ ನೀಡದಿದ್ದರೆ, ಕಾಮಗಾರಿ ನಡೆಸಲು ಬಿಡಬಾರದು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸುಸಜ್ಜಿತ ಕಟ್ಟಡ ನಿರ್ಮಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು. ತಾಲ್ಲೂಕು ಪಂಚಾಯಿತಿ ಸದಸ್ಯ ಜಗದೀಶ ಪೂಜಾರಿ ತಾಲ್ಲೂಕು ಪಂಚಾಯಿತಿಯಿಂದ ನೀಡಲಾದ ಅನುದಾನದ ವಿವರ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ಅನಿತಾ ಆರ್. ಕೆ. ಒಂದು ವರ್ಷದ ಹಿಂದೆ ನಿರ್ಮಿಸಿದ್ದ ತ್ಯಾಜ್ಯ ನಿರ್ವಹಣಾ ಘಟಕವನ್ನು ಈಗ ಅಭಿವೃದ್ಧಿ ಪಡಿಸಿದ್ದು, ಬುಧವಾರ ಕಾರ್ಯಾರಂಭಿಸುವುದು ಎಂದರು. ಕಾರ್ಯದರ್ಶಿ ದಿನೇಶ್ ಶೇರೆಗಾರ್ ಸ್ವಾಗತಿಸಿ, ವಂದಿಸಿದರು. ಕರ ಸಂಗ್ರಾಹಕ ಶೇಖರ್ ಮರವಂತೆ ವರದಿ ಮಂಡಿಸಿದರು. ವೈದ್ಯಾಧಿಕಾರಿ ಸನ್ಮಾನ್ ಶೆಟ್ಟಿ, ಮೆಸ್ಕಾಂ ಅಧಿಕಾರಿ ವಿಜಯೇಂದ್ರ, ಪಶು ವೈದ್ಯ ಅರುಣ್, ಅಂಗನವಾಡಿ ಮೇಲ್ವಿಚಾರಕಿ ಸವಿತಾ ಶೆಟ್ಟಿ, ಗ್ರಾಮ ಕರಣಿಕ ಮಹಾಂತೇಶ್ ಮಾಹಿತಿ ನೀಡಿದರು. ಉಪಾಧ್ಯಕ್ಷ ಗಣೇಶ ಪೂಜಾರಿ, ಸದಸ್ಯರು ಮಾರ್ಗದರ್ಶಿ ಅಧಿಕಾರಿ ಡಾ. ಶಂಕರ ಶೆಟ್ಟಿ, ಎಎಸ್‌ಐ ವೆಂಕಟೇಶ ಗೊಲ್ಲ, ಅಭಿವೃದ್ಧಿ ಅಧಿಕಾರಿ ವೀರಶೇಖರ ಇದ್ದರು.

 

Leave a Reply

Your email address will not be published. Required fields are marked *

one × 1 =