ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಗ್ರಾಮ ಸರ್ಕಾರವಾದ ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ನಾಗರಿಕ ಸೌಲಭ್ಯಗಳ ಸೃಷ್ಟಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದೆ, ಸಮಗ್ರ ಅಭಿವೃದ್ಧಿಯ ಗುರಿ ಸಾಧಿಸಬೇಕು. ತಮ್ಮ ಕಾರ್ಯಸೂಚಿಯಲ್ಲಿ ಮಹಿಳೆಯರ, ಮಕ್ಕಳ ಮತ್ತು ಹಿರಿಯ ನಾಗರಿಕರ ರಕ್ಷಣೆ ಹಾಗೂ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಹೇಳಿದರು.
ಅವರು ಇಲಾಖೆಯಿಂದ ಯೂಟ್ಯೂಬ್ ಮೂಲಕ ಆಯೋಜಿಸಿದ್ದ ಗ್ರಾಮ ಪಂಚಾಯಿತಿ ಶಿಕ್ಷಣ ಕಾರ್ಯಪಡೆಗಳ ಸದಸ್ಯರ ಒಂದು ದಿನದ ರಾಜ್ಯವ್ಯಾಪಿ ತರಬೇತಿಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ದೇಶ ಇಂದು ಸ್ವಾತಂತ್ರ್ಯದ 75ನೇ ವರ್ಷಾಚರಣೆ ಮಾಡುತ್ತಿರುವಾಗ ಗಾಂಧೀಜಿಯವರ ಗ್ರಾಮ ಸ್ವರಾಜ್ ಕನಸು ನನಸು ಮಾಡುವ ಹೊಣೆ ನಮ್ಮ ಮೇಲಿದೆ. ಅದೇ ವೇಳೆ ಕೋವಿಡ್ ಸೋಂಕಿನ ಕಾರಣ ಮಕ್ಕಳು, ಮಹಿಳೆಯರು, ಹಿರಿಯರು ವಿವಿಧ ಸಂಕಷ್ಟ ಎದುರಿಸುತ್ತಿದ್ದಾರೆ. ಶಾಲೆ ತ್ಯಜಿಸಿದ ಮಕ್ಕಳನ್ನು ಶಾಲೆಗೆ ತರುವ, ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯಗಳನ್ನು ತಡೆಯುವ, ಹಿರಿಯ ನಾಗರಿಕರಿಗೆ ಸಾಂತ್ವನ ನೀಡುವ ಕೆಲಸದಲ್ಲಿ ಗ್ರಾಮ ಪಂಚಾಯಿತಿಗಳು ಸಕ್ರಿಯವಾಗಿ ತೊಡಗಬೇಕು. ಪರಿಣತರು ಇವುಗಳಿಗೆ ಸಂಬಂಧಿಸಿದ ವಿಷಯಗಳನ್ನು ಇಂದಿನ ತರಬೇತಿಯಲ್ಲಿ ತಿಳಿಸಿಕೊಡುತ್ತಾರೆ. ಅವುಗಳನ್ನು ಚಾಚೂ ತಪ್ಪದೆ ಆಚರಣೆಗೆ ತನ್ನಿ ಎಂದು ಅವರು ಸೂಚಿಸಿದರು.
ತರಬೇತಿಯ ಅವಧಿಯಲ್ಲಿ ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟುವ ಕುರಿತು ಇಂಟರ್‌ನ್ಯಾಶನಲ್ ಜಸ್ಟೀಸ್ ಮಿಶನ್ ಸದಸ್ಯ ವಿಲಿಯಂ ಕ್ರಿಸ್ಟೂಫರ್, ಬಾಲ್ಯ ವಿವಾಹ ತಡೆ ಕುರಿತು ಬೆಂಗಳೂರಿನ ಚೈಲ್ಡ್ ರೈಟ್ಸ್ ಟ್ರಸ್ಟ್‌ನ ವಿಷಯ ತಜ್ಞ ವಾಸುದೇವ ಶರ್ಮ, ಮಕ್ಕಳ ದತ್ತಾಂಶ ಕ್ರೋಢೀಕರಿಸುವ ಬಗೆಗೆ ಪಂಚಾಯತ್ ರಾಜ್ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಹಿರಿಯ ನಾಗರಿಕರ ಆರೋಗ್ಯ ಮತ್ತು ಸಾಮಾಜಿಕ ಸಮಸ್ಯೆ ನಿರ್ವಹಣೆ ಬಗೆಗೆ ಬೆಂಗಳೂರಿನ ಮನ:ಶಾಸ್ತ್ರಜ್ಞೆ ಡಾ. ಇಂದಿರಾ ಜೈಪ್ರಕಾಶ್, ಮಾನಸಿಕ ಆರೋಗ್ಯ ನಿರ್ವಹಣೆ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ಉಪ ನಿರ್ದೇಶಕಿ ಡಾ. ರಜನಿ ಪಾರ್ಥಸಾರಥಿ, ಬಾಲನ್ಯಾಯ ಕಾಯಿದೆ ಹಾಗೂ ಮಕ್ಕಳ ರಕ್ಷಣೆ ವಿಚಾರವಾಗಿ ಸಮಗ್ರ ಶಿಶು ರಕ್ಷಣಾ ಯೋಜನೆಯ ನಿರ್ದೇಶಕಿ ಪಲ್ಲವಿ ಅಕುರಾತಿ, ಕೌಟುಂಬಿಕ ದೌರ್ಜನ್ಯ ಕುರಿತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ರಕ್ಷಣಾಧಿಕಾರಿ ಲತಾ ಕೆ. ಎಚ್ ಮಾಹಿತಿ ನೀಡಿದರು. ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭೂಬಾಲನ್ ಟಿ. ಬಾಲ್ಯ ವಿವಾಹ ತಡೆಗಟ್ಟುವ ವಿಚಾರದಲ್ಲಿ ತಮ್ಮ ಅನುಭವ ವಿವರಿಸಿದರು.
ಮೈಸೂರಿನ ಅಬ್ದುಲ್ ನಜೀರ್ ಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ನಿರ್ದೇಶಕಿ ಕೆ. ಎಂ. ಗಾಯತ್ರಿ ಸ್ವಾಗತಿಸಿದರು. ಸಂಶೋಧನಾಧಿಕಾರಿ ದೀಪಾ ಎನ್ ನಿರ್ವಹಿಸಿದರು. ಬೈಂದೂರು ವ್ಯಾಪ್ತಿಯ ಎಲ್ಲ ಗ್ರಾಮ ಪಂಚಾಯಿತಿ ಶಿಕ್ಷಣ ಕಾರ್ಯಪಡೆ ಸದಸ್ಯರು ತಮ್ಮತಮ್ಮ ಪಂಚಾಯಿತಿಗಳಲ್ಲಿ ತರಬೇತಿ ಪಡೆದರು.