ಮರವಂತೆ ಪಂಚಾಯತ್‌ನ ನೀರಿನ ಒವರ್‌ಹೆಡ್ ಟ್ಯಾಂಕ್ ಕುಸಿಯುವ ಭೀತಿ

ಕುಂದಾಪ್ರ ಡಾಟ್ ಕಾಂ ವರದಿ
ಬೈಂದೂರು: ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆಟದ ಬಯಲಿನಲ್ಲಿರುವ ಗ್ರಾಮ ಪಂಚಾಯಿತಿಯ ನೀರಿನ ಒವರ್‌ಹೆಡ್ ಟ್ಯಾಂಕ್‌ನ ಕೆಲವಡೆ ಬಿರುಕು ಕಾಣಿಸಿಕೊಂಡಿದ್ದು, ಅದರ ಭದ್ರತೆಯ ಬಗ್ಗೆ ಈಗ ಕಳವಳ ಉಂಟಾಗಿದೆ. ಈ ಆಟದ ಬಯಲನ್ನು ವಿದ್ಯಾರ್ಥಿಗಳು ಬಳಸುತ್ತಾರೆ. ಟ್ಯಾಂಕ್ ಬಳಿಯೇ ಅಂಗನವಾಡಿ, ಕೆಲವು ಮನೆಗಳು, ಅಂಗಡಿಗಳು, ಜನ, ವಾಹನ ಸಂಚರಿಸುವ ರಸ್ತೆಗಳು ಇವೆ. ಅದು ನಿಜವಾಗಿಯೂ ಶಿಥಿಲವಾಗಿ, ಕುಸಿಯುವ ಸಾಧ್ಯತೆ ಇದ್ದರೆ ಗಂಭೀರ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಜನರು ಆತಂಕಿತರಾಗಿದ್ದಾರೆ.

ಟ್ಯಾಂಕ್‌ನ ತಳಭಾಗದ ಸ್ವಲ್ಪ ಗಾರೆ ಕಿತ್ತುಬಿತ್ತು. ಅಲ್ಲಿದ್ದವರು ಗಾಬರಿಗೊಂಡ ಟ್ಯಾಂಕ್‌ನತ್ತ ನೋಡಿದಾಗ ಅದರ ಒಂದು ಕಂಬದಲ್ಲಿ, ಎರಡು ಟೈಬೀಮ್‌ನಲ್ಲಿ ಬಿರುಕು ಬಂದಿರುವುದನ್ನು ಗಮನಿಸಿ ಪಂಚಾಯಿತಿಯ ಗಮನಕ್ಕೆ ತಂದರು. ಅಧ್ಯಕ್ಷೆ ಅನಿತಾ ಆರ್. ಕೆ. ಉಪಾಧ್ಯಕ್ಷ ಗಣೇಶ ಪೂಜಾರಿ, ಅಭಿವೃದ್ಧಿ ಅಧಿಕಾರಿ ವೀರಶೇಖರ್ ಬಂದು ನೋಡಿ ಅದರಲ್ಲಿ ಸಂಗ್ರಹವಾಗಿದ್ದ ನೀರನ್ನು ಬರಿದುಮಾಡಿದರು. ಅದರ ಸಮೀಪದಲ್ಲಿದ್ದ ಅಂಗನವಾಡಿಯ ಮಕ್ಕಳನ್ನು ಮನೆಗೆ ಕಳುಹಿಸಿದರು.

ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ಕಿರಿಯ ಇಂಜಿನಿಯರ್ ಶ್ರೀಕಾಂತ್ ಟ್ಯಾಂಕ್‌ನ್ನು ಪರಿಶೀಲಿಸಿದರು. ಅದರ ಭದ್ರತೆಯ ಬಗ್ಗೆ ಪರಿಣತರ ಅಭಿಪ್ರಾಯ ಪಡೆಯ ಬೇಕೆಂದು ಸಲಹೆ ನೀಡಿದರು. ಒಂದು ಲಕ್ಷ ಲಿಟರ್ ಸಾಮರ್ಥ್ಯದ ಈ ಟ್ಯಾಂಕನ್ನು ಊರಿನ ನದಿತೀರದ ಉಪ್ಪುನೀರು ಪ್ರಭಾವಿತ ಪ್ರದೇಶದ ಜನರಿಗಾಗಿ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ 1982ರಲ್ಲಿ ನಿರ್ಮಿಸಲಾಗಿತ್ತು. ಮುಂದೆ ಊರಿನ ಅನ್ಯ ಪ್ರದೇಶಗಳ ಅಗತ್ಯವನ್ನೂ ಇದರಿಂದ ಪೂರೈಸಲಾಗುತ್ತಿತ್ತು. ಈಗ ಅದಕ್ಕೆ ನೀರು ಹರಿಸುವುದನ್ನು ನಿಲ್ಲಿಸಲಾಗಿದೆ. ಬದಲಾಗಿ ಸಂಬಂಧಿಸಿದ ಮನೆಗಳಿಗೆ ನೇರವಾಗಿ ಪೈಪ್ ಮೂಲಕ ಪಂಪ್ ಮಾಡಲಾಗುತ್ತಿದೆ. ಅಂಗನವಾಡಿಯನ್ನು ಸ್ಥಳಾಂತರಿಸುವ ಬಗ್ಗೆ ಯೋಚಿಸಲಾಗುತ್ತಿದೆ. ಟ್ಯಾಂಕ್‌ನ ಭದ್ರತೆಯ ಬಗ್ಗೆ ಶಂಕೆ ಮೂಡಿರುವುದರಿಂದ ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಮತ್ತು ನೀರು ಪೂರೈಕೆಯ ಬದಲಿ ವ್ಯವಸ್ಥೆಯ ಬಗ್ಗೆ ಗ್ರಾಮ ಪಂಚಾಯಿತಿ ಚಿಂತಿತವಾಗಿದೆ.

Leave a Reply

Your email address will not be published. Required fields are marked *

fifteen + nineteen =