ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮರವಂತೆ ಗ್ರಾಮ ಪಂಚಾಯಿತಿಯ ಸುವರ್ಣ ಭವನದಲ್ಲಿ ನಡೆದ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಮತ್ತು ಮಕ್ಕಳ ಹಕ್ಕುಗಳ ಗ್ರಾಮಸಭೆ ನಡೆಯಿತು.
ಬೈಂದೂರು ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಮಾತನಾಡಿ, ಭಾರತದ ಸಂವಿಧಾನವು ದೇಶದ ಏಕತೆ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತದೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ಜನಾರ್ದನ ಮರವಂತೆ, ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮಕ್ಕಳಿಂದ ಸಂವಿಧಾನ ಪೀಠಿಕೆಯನ್ನು ಓದಿಸಲಾಯಿತು ಮತ್ತು ಫಲಕದ ಮೇಲೆ ಬರೆಸಲಾಯಿತು. ಪೀಠಿಕೆಯ ಪ್ರಧಾನ ಅಂಶಗಳ ಕುರಿತು ಸ್ಪರ್ಧೆ ನಡೆಸಿ ಬಹುಮಾನಿತರ ಹೆಸರು ಪ್ರಕಟಿಸಲಾಯಿತು. ಶಿಕ್ಷಕಿ ಚೈತ್ರಾ ಶೆಟ್ಟಿ ಮಕ್ಕಳ ಹಕ್ಕುಗಳ ಕುರಿತು ಮಾಹಿತಿ ನೀಡಿದರು.
ಪಂಚಾಯಿತಿ ಕಾರ್ಯದರ್ಶಿ ದಿನೇಶ್ ಶೇರೆಗಾರ್ ಅಧ್ಯಕ್ಷತೆ ವಹಿಸಿದ್ದರು. ಕರ ಸಂಗ್ರಾಹಕ ಶೇಖರ್ ಮರವಂತೆ ಸ್ವಾಗತಿಸಿದರು. ಗಣಕಯಂತ್ರ ನಿರ್ವಾಹಕ ಗುರುರಾಜ್ ಬಿಲ್ಲವ ವಂದಿಸಿದರು. ಶಿಕ್ಷಕ ಸೀತಾರಾಮ ನಿರೂಪಿಸಿದರು.
ನೇತಾಜಿ ಸುಭಾಶ್ಚಂದ್ರ ಬೋಸ್ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕೆ. ವಿಘ್ನೇಶ್ವರ, ಶಿಕ್ಷಕಿ ನಿರ್ಮಲಾ, ಗ್ರಾಮ ಪಂಚಾಯಿತಿ ನಿಕಟಪೂರ್ವ ಅಧ್ಯಕ್ಷೆ ಅನಿತಾ ಆರ್. ಕೆ ಇದ್ದರು