ಕುಂದಾಪ್ರ ಡಾಟ್ ಕಾಂ ಸುದ್ದಿ
ಬೈಂದೂರು: ಮರವಂತೆಯ ಕಡಲು-ನದಿಗಳ ನಡುವಿನ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಮರವಂತೆಯ ಗ್ರಾಮಸ್ಥರು ಭಾನುವಾರ ಆಯೋಜಿಸಿದ್ದ ಆಭಾರಿ ಸೇವೆಯು ವಿವಿಧ ಧಾರ್ಮಿಕ ವಿಧಿ ಮತ್ತು ಮಹಾ ಅನ್ನಸಂತರ್ಪಣೆಯೊಂದಿಗೆ ಸಂಪನ್ನಗೊಂಡಿತು.
ವಿವಿಧೆಡೆಯ ಕೃಷಿಕರು ಮತ್ತು ಮೀನುಗಾರರು ಸಮೃದ್ಧ ಫಸಲಿಗಾಗಿ, ಪ್ರಕೃತಿ ವಿಕೋಪ ದೂರಮಾಡುವುದಕ್ಕಾಗಿ ಇಲ್ಲಿನ ಅಧಿದೇವತೆಯಾದ ವರಾಹನಿಗೆ ಹರಕೆ ಹೊತ್ತು ಸಲ್ಲಿಸುವ ವಿಶಿಷ್ಟ ಸೇವೆ ಆಭಾರಿ. ಇಂದಿನ ಆಭಾರಿಯ ಸಿದ್ಧತೆಗಳು ಸ್ವಯಂಸೇವಾ ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಡೆದಿದ್ದುವು. ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ತಯಾರಿ ನಡೆದಿದ್ದರೆ, ವರಾಹ ಮತ್ತು ಗಂಗಾಧರ ದೇವಸ್ಥಾನಗಳ ನಡುವೆ ಭಕ್ತರಿಗೆ ಅನ್ನಪ್ರಸಾದ ನೀಡುವುದಕ್ಕಾಗಿ ಬೃಹತ್ ಚಪ್ಪರವನ್ನು ಸಜ್ಜುಗೊಳಿಸಲಾಗಿತ್ತು.
ದೇವಾಲಯದಲ್ಲಿ ಪೂಜೆಗೊಳ್ಳುವ ವರಾಹ, ವಿಷ್ಣು, ನಾರಸಿಂಹ ದೇವರಿಗೆ ಮತ್ತು ಸನಿಹದ ಗಂಗಾಧರೇಶ್ವರನಿಗೆ ವಿಶೇಷ ಅಭಿಷೇಕ, ಪೂಜೆ ಸಲ್ಲಿಸಲಾಯಿತು. ದೇವಾಲಯದ ಮುಂದೆ ನವಗ್ರಹ ಪೂಜೆ, ವಿಷ್ಣು ಹವನ, ಕಲಾವೃದ್ಧಿ ಹೋಮ ಮತ್ತು ಚಂಡಿಕಾ ಹೋಮಗಳು ನಡೆದುವು. ಬಳಿಕ ವರಾಹ ದೇವಾಲಯದಲ್ಲಿ ಮೂರೂ ದೇವರಿಗೆ ಮಹಾ ಮಂಗಳಾರತಿ ಮಾಡಲಾಯಿತು. ಸುತ್ತುಬಲಿಯ ನಂತರ ಪುಷ್ಪ ರಥೋತ್ಸವ ನಡೆಯಿತು. ಆ ಬಳಿಕ ಅನ್ನಸಂತರ್ಪಣೆಗೆ ಸಿದ್ಧಪಡಿಸಿದ್ದ ಅನ್ನದ ರಾಶಿಗೆ ಪೂಜೆ ಸಲ್ಲಿಸಿ, ಅದರಿಂದ ಏಳು ಹೆಡಿಗೆ ತುಂಬ ಅನ್ನವನ್ನು ವಾದ್ಯಘೋಷ ಸಹಿತ ದೇವರಿಗೆ ಪ್ರದಕ್ಷಿಣೆ ಬಂದು ನದಿ ದಂಡೆಗೆ ಒಯ್ದು ಜನರ ಜಯಘೋಷದ ನಡುವೆ ನದಿಯ ಆ ಭಾಗದ ಗುಂಡಿಯಲ್ಲಿ ನೆಲಸಿದೆ ಎಂದು ಜನ ನಂಬುವ ನೆಗಳ(ಮೊಸಳೆ)ಗೆ ಒಂದಾದಮೇಲೊಂದರಂತೆ ಅರ್ಪಿಸಲಾಯಿತು. ಆ ಬಳಿಕ ನಡೆದ ಮಹಾ ಅನ್ನಸಂತರ್ಪಣೆಯಲ್ಲಿ ಸುಮಾರು ೪ ಸಾವಿರಕ್ಕಿಂತ ಅಧಿಕ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು.