ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಂದು ಸರ್ಕಾರಿ ಶಾಲೆಗಳು ಎಲ್ಲ ರೀತಿಯಿಂದಲೂ ಸುಸಜ್ಜಿತವಾಗಿವೆ. ಅಲ್ಲಿ ಮೂಲ ಸೌಲಭ್ಯಗಳ ಕೊರತೆ ಇಲ್ಲ. ಖಾಸಗಿ ಶಾಲೆಗಳಿಗಿಂತ ಉತ್ತಮ ಅರ್ಹತೆ, ತರಬೇತಿ, ಅನುಭವ ಪಡೆದ ಶಿಕ್ಷಕರಿದ್ದಾರೆ. ಹಾಗಿದ್ದರೂ ಪೋಷಕರು ಖಾಸಗಿ ಶಿಕ್ಷಣ ಸಂಸ್ಥೆಗಳತ್ತ ಒಲವು ತೋರುತ್ತಿರುವುದರ ಮರ್ಮ ಅರ್ಥವಾಗುತ್ತಿಲ್ಲ ಎಂದು ಮರವಂತೆ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆಯ ಸಂಸ್ಥಾಪನಾ ಸಮಿತಿ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಹೇಳಿದರು.
ಅವರು ವರ್ಚುವಲ್ ವೇದಿಕೆಯಲ್ಲಿ ನಡೆದ ನೇತಾಜಿ ಸುಭಾಶ್ಚಂದ್ರ ಬೋಸ್ ಸರಕಾರಿ ಪ್ರೌಢಶಾಲೆ ಆರಂಭೋತ್ಸವದಲ್ಲಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ, ಶಿಕ್ಷಣ, ಪುಸ್ತಕವೇ ಮೊದಲಾದ ಸೌಕರ್ಯಗಳು ಉಚಿತವಾಗಿ ಸಿಗುತ್ತವೆ. ಗುಣಮಟ್ಟದ ಶಿಕ್ಷಣದ ಕಾರಣದಿಂದ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬರುತ್ತದೆ. ಮುಂದಿನ ದಿನಗಳಲ್ಲಾದರೂ ಪೋಷಕರು ಅವುಗಳ ಲಾಭ ಪಡೆಯುವ ಜಾಣತನ ಪ್ರದರ್ಶಿಸಬೇಕು ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರುಕ್ಮಿಣಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷೆ ಅನಿತಾ ಆರ್. ಕೆ, ಹಿರಿಯ ಪ್ರಾಥಮಿಕ ಶಾಲಾ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರವಿ ಮಡಿವಾಳ ಶುಭ ಹಾರೈಸಿದರು. ಶಿಕ್ಷಕ ಶ್ರೀಧರ ಭಟ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಕೆ. ವಿಘ್ನೇಶ್ವರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮಚಂದ್ರ ದೇವಾಡಿಗ ವಂದಿಸಿದರು. ಚಂದ್ರ ನಿರೂಪಿಸಿದರು. ಶಿಕ್ಷಕ ಸರ್ವೋತ್ತಮ ಭಟ್ ಶಾಲೆಯ ಅಡುಗೆಯವರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸಿದರು.