ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯ ಒದಗಿಸುವ ಉದ್ದೇಶದಿಂದ ಶಾಲಾ ಹಳೆ ವಿದ್ಯಾರ್ಥಿ ಸಂಘ ಬಸ್ ಕೊಡುಗೆ ನೀಡಿತು. ಕೋವಿಡ್ ಕಾರಣದಿಂದ ಹಿಂದಿನ ವರ್ಷ ತರಗತಿಗಳು ನಡೆಯದ್ದರಿಂದ ಬಸ್ ನಿರ್ವಹಣೆಗೆ ಹಣದ ಕೊರತೆ ಕಾಡುತ್ತಿದೆ ಎಂದು ಸಂಘದ ಅಧ್ಯಕ್ಷ ರವಿ ಮಡಿವಾಳ ಹೇಳಿದರು.
ಮರವಂತೆ ಸಾಧನಾ ಸಮುದಾಯ ಭವನದ ವಿ. ಕೆ. ಕಾಮತ್ ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಬೆಂಬಲದಿಂದ ಶಾಲೆಯಲ್ಲಿ ವಿದ್ಯಾರ್ಥಿ ಸಂಖ್ಯೆ ವೃದ್ಧಿಸಿದೆ. ಹಳೆ ವಿದ್ಯಾರ್ಥಿಗಳು ಸಂಘದ ಆಜೀವ ಸದಸ್ಯರಾಗುವ ಮತ್ತು ಸಾಧ್ಯ ಇರುವವರು ದೇಣಿಗೆ ನೀಡುವ ಮೂಲಕ ಸಂಘಕ್ಕೆ ಆರ್ಥಿಕ ಬಲ ತುಂಬಬೇಕು ಎಂದು ವಿನಂತಿಸಿದರು.
ಹಿಂದಿನ ಸಾಲಿನ ಏಳನೇ ತರಗತಿಯಲ್ಲಿ ಶ್ರೇಷ್ಠ ಅಂಕ ಪಡೆದು ಉತ್ತೀರ್ಣರಾದ ಮಕ್ಕಳಿಗೆ ಬಿ. ರಾಮಕೃಷ್ಣ ಮಾಲೂರು ಪ್ರವರ್ತಿಸಿದ ವಿದ್ಯಾರ್ಥಿವೇತನ ವಿತರಣೆ, ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ನಡೆಸಿದ ನಮ್ಮೂರ ಪ್ರತಿಭಾನ್ವೇಷಣೆ ಸ್ಪರ್ಧೆಯಲ್ಲಿ ವಿಜೇತರಾದ ನ್ನು ಕಿರಿಯ, ಹಿರಿಯ ಸಾರ್ವಜನಿಕ ಎನ್ನುವ ಮೂರು ವಿಭಾಗದಲ್ಲಿ ದೇಶಭಕ್ತಿ ಗೀತೆ ಮತ್ತು ಸ್ವಾತಂತ್ರ್ಯದ ಕುರಿತಾದ ವಿವಿಧ ವಿಷಯದ ಬಗ್ಗೆ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ವಿಜ್ಞಾನ ಪ್ರಕಲ್ಪ ಆಧಾರಿತ ಪ್ರಬಂಧ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾದ ಶಿವಾನಿ ಪೂಜಾರಿ, ಅಪೇಕ್ಷಾ ಅವರನ್ನು ಗೌರವಿಸಲಾಯಿತು.
ಸುಜಾತಾ, ಸುನಿತಾ ಪ್ರಾರ್ಥನೆ ಹಾಡಿದರು. ಜೊತೆ ಕಾರ್ಯದರ್ಶಿ ಸಂತೋಷ ಮೊಗವೀರ ಸ್ವಾಗತಿಸಿದರು. ವಿಶ್ವನಾಥ್ ಶಾನುಭಾಗ್ ಸಭೆಯ ತಿಳುವಳಿಕೆ ಪತ್ರ ಓದಿದರು. ಕಾರ್ಯದರ್ಶಿ ರಾಜೇಶ್ ಆಚಾರ್ಯ ವರದಿ ಮತ್ತು ಲೆಕ್ಕ ಪತ್ರ ಮಂಡಿಸಿದರು. ದೇವಿದಾಸ್ ಶಾನುಭಾಗ್ ನಿರೂಪಿಸಿದರು. ಗೌರವಾಧ್ಯಕ್ಷ ದಯಾನಂದ ಬಳೆಗಾರ್, ಕೋಶಾಧಿಕಾರಿ ಕರುಣಾಕರ ಆಚಾರ್ಯ, ಸದಸ್ಯರಾದ ಎಸ್. ಜನಾರ್ದನ, ಶೇಷಗಿರಿ ಆಚಾರ್ಯ ಮತ್ತು ಸುನೀತಾ ಎಂ ಶುಭ ಹಾರೈಸಿದರು. ಅಣ್ಣಪ್ಪ ಖಾರ್ವಿ ವಂದಿಸಿದರು.
