ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಅಭಿವೃದ್ಧಿಗೆ ಶಿಕ್ಷಣವೇ ಬುನಾದಿಯಾಗಿರುವುದರಿಂದ ಕ್ಷೇತ್ರದ ಶಿಕ್ಷಣ ವ್ಯವಸ್ಥೆಯ ಉನ್ನತಿಗೆ ಆದ್ಯತೆ ನೀಡುತ್ತೇನೆ. ಶತಮಾನ ಪೂರೈಸಿದ ಮರವಂತೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲವಾದ ಕಟ್ಟಡಗಳ ಸ್ಥಾನದಲ್ಲಿ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಭರವಸೆ ನೀಡಿದರು.
ಅವರು ಶಾಲೆಗೆ ಭೇಟಿ ನೀಡಿ, ಕಟ್ಟಡ, ಶಾಲೆಯ ಸ್ಥಿತಿಗತಿ ಮತ್ತು ಚಟುವಟಿಕೆಗಳ ಅವಲೋಕನ ನಡೆಸಿದ ಬಳಿಕ ಮಾತನಾಡಿದರು.
ಶಾಲೆಯ ಕುರಿತು ವಿವರ ನೀಡಿದ ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ, ಶಾಲಾ ಸ್ಥಾಪನೆಯ ದಾಖಲೆ ಇಲ್ಲದ್ದರಿಂದ 2015-16ರಲ್ಲಿ ಅಮೃತ ಮಹೋತ್ಸವ ಆಚರಿಸಲಾಯಿತು. ಆಗ ಸಭಾಂಗಣ, ಕಂಪ್ಯೂಟರ್ ಕೊಠಡಿ ನಿರ್ಮಿಸಲಾಯಿತು. ಆ ಬಳಿಕ ಸಂಸ್ಥೆ ಶತಮಾನ ಪೂರೈಸಿದೆ ಎನ್ನುವುದಕ್ಕೆ ಹಿರಿಯ ಹಳೆ ವಿದ್ಯಾರ್ಥಿ ಎಸ್. ಜನಾರ್ದನ ಪರ್ಯಾಯ ದಾಖಲೆ ಒದಗಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಶಾಲೆ ಶತಮಾನೋತ್ಸವ ಆಚರಿಸಲು ಸಿದ್ಧತೆ ನಡೆಸುತ್ತಿದೆ. ಹಳೆ ವಿದ್ಯಾರ್ಥಿ ಸಂಘ ರೂ 14 ಲಕ್ಷ ವೆಚ್ಚದಲ್ಲಿ ಬಸ್ ಒದಗಿಸಿದೆ. ಅದರೊಂದಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದರಿಂದ ವಿದ್ಯಾರ್ಥಿ ಸಂಖ್ಯೆ ಗಣನೀಯವಾಗಿ ಹೆಚ್ಚಿ, ಈಗ 282ಕ್ಕೆ ತಲುಪಿದೆ. 90 ವರ್ಷಗಳ ಹಿಂದಿನ ಮೂಲ ಕಟ್ಟಡ ಮತ್ತು ಆ ಬಳಿಕ ನಿರ್ಮಾಣವಾದ ಕೊಠಡಿಗಳು ಶಿಥಿಲಗೊಂಡಿವೆ. ನೂತನ ಕಟ್ಟಡ ಆಗಬೇಕಾಗಿದೆ ಎಂದು ಮನವಿ ಮಾಡಿಕೊಂಡರು.
ಈ ಸಂದರ್ಭ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕರುಣಾಕರ ಆಚಾರ್ಯ, ಸದಸ್ಯರು, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಅನಿತಾ ಆರ್. ಕೆ, ಶಿಕ್ಷಕರು ಇದ್ದರು.