ಗಂಗೊಳ್ಳಿ : ದೇವರಿಗೆ ಭಕ್ತಿ ಪ್ರದಾನವೇ ಹೊರತು ನಾವು ಅರ್ಪಿಸುವ ವಸ್ತುಗಳಲ್ಲ. ದೇವರನ್ನು ಭಕ್ತಿ ಶ್ರದ್ಧಾಪೂರ್ವಕವಾಗಿ ಸ್ತುತಿಸಿ ಭಜಿಸಿದರೆ ದೇವರು ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ. ಭಜನೆಯಿಂದ ದೇವರನ್ನು ಸುಲಭವಾಗಿ ಒಲಿಸಿಕೊಳ್ಳಲು ಸಾಧ್ಯವಿದೆ. ಭಜನೆಯು ದೇವರ ಮತ್ತು ಮನುಷ್ಯರ ನಡುವಿನ ಸೇತುವೆಯಾಗಿ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ಭಜನೆಯಿಂದ ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ಲಭಿಸಿ ಸಮಾಜದ ಏಳಿಗೆ ಸಾಧ್ಯವಾಗುತ್ತದೆ ಎಂದು ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಅಪ್ಪಣ್ಣ ಹೆಗ್ಡೆ ಹೇಳಿದರು.
ಅವರು ಗಂಗೊಳ್ಳಿ ಮೇಲ್‌ಗಂಗೊಳ್ಳಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಧಾರ್ಮಿಕ ಸಮಾರಂಭ ಹಾಗೂ ಉಡುಪಿ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ನಮ್ಮಲ್ಲಿನ ಜಾತಿ ಧರ್ಮಗಳ ನಡುವಿನ ಗೊಂದಲಗಳಿಂದ ಸಮಾಜದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿ ಧಾರ್ಮಿಕ ಚಟುವಟಿಕೆಗಳು ಕಡಿಮೆಯಾಗುತ್ತಿದೆ. ಸಂಜೆ ಹೊತ್ತು ಪ್ರತಿ ಮನೆ ಮನೆಗಳಲ್ಲಿ ಭಜನೆ ನಡೆದು ಯುವ ಜನರಲ್ಲಿ ಧಾರ್ಮಿಕ ಭಾವನೆಗಳು ಹೆಚ್ಚುವಂತೆ ಮಾಡುವ ಮೂಲಕ ಸಮಾಜ ಮುನ್ನಡೆಸಬೇಕು ಎಂದು ಅವರು ಹೇಳಿದರು.
ದಾನಿಗಳಾದ ಎಂ.ರಾಮಕೃಷ್ಣ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ.ಮಂಜುನಾಥ, ಗಂಗೊಳ್ಳಿ ವಲಯ ಸವಿತಾ ಸಮಾಜದ ಮಾಜಿ ಅಧ್ಯಕ್ಷ ಮಂಜುನಾಥ ಸಾಲಿಯಾನ್, ಗಂಗೊಳ್ಳಿ ರೋಟರಿ ಕ್ಲಬ್‌ನ ಅಧ್ಯಕ್ಷ ಪ್ರದೀಪ ಡಿ.ಕೆ., ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ಬಿ.ಗಣೇಶ ಶೆಣೈ, ಚೆಂದು, ಪತ್ರಕರ್ತ ಬಿ.ರಾಘವೇಂದ್ರ ಪೈ, ಕರ್ಣಾಟಕ ಬ್ಯಾಂಕಿನ ಆಫೀಸರ್ ಮಹಾಬಲ ಕೆ., ಗಂಗೊಳ್ಳಿ ಸಿಂಡಿಕೇಟ್ ಬ್ಯಾಂಕಿನ ಆಫೀಸರ್ ಅಪ್ಪಯ್ಯ ಶಾಂಕೆವರ್ಣ, ಮುಖ್ಯೋಪಾಧ್ಯಾಯ ಮುಡೂರ ಅಂಬಾಗಿಲು, ಗುತ್ತಿಗೆದಾರ ವಾಸುದೇವ ಶೇರುಗಾರ್, ಮಾತೃ ಮಂಡಳಿಯ ಅಧ್ಯಕ್ಷೆ ಭೂದೇವಿ, ಗೌರವಾಧ್ಯಕ್ಷೆ ಪದ್ಮಾವತಿ, ದೇವಸ್ಥಾನದ ಆಡಳಿತ ಮೊಕ್ತೇಸರ ಈಶ್ವರ ಜಿ. ಮೊದಲಾದವರು ಉಪಸ್ಥಿತರಿದ್ದರು. ಶಂಕರ ಜಿ. ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.