ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಮಾಧ್ಯಮವು ವಿವಿಧ ಆಯಾಮಗಳನ್ನು ಹೊಂದಿರುವುದರಿಂದ ಸಮಾಜದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಆಳ್ವಾಸ್ ಸ್ನಾತಕೋತ್ತರ ಎಂ.ಕಾಂ ವಿಭಾಗದ ಸಂಯೋಜಕ ಪ್ರೊ. ಪವನ್ ಕಿರಣಕೆರೆ ಹೇಳಿದರು.
ಅವರು ಆಳ್ವಾಸ್ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಫೋರಂ ‘ಅಭಿವ್ಯಕ್ತಿ’ಯ ಪ್ರಸ್ತುತ ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಸೂಕ್ಷ್ಮವಾದುದನ್ನು ಸ್ಥೂಲವಾಗಿಸುವುದು ಅಭಿವ್ಯಕ್ತಿ ಅದ್ದರಿಂದ ಸಮಾಜದ ಮುಂದೆ ಅನಾವರಣಗೊಳ್ಳದ ವಿಚಾರಗಳಿಗೆ ಬೆಳಕು ಚೆಲ್ಲುವ ಕೆಲಸ ಮಾಧ್ಯಮದಿಂದಾಗಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ವೃತ್ತಿಗೆ ಅವಕಾಶವಿದ್ದರೂ ಜನರಲ್ಲಿ ಕೌಶಲ್ಯಗಳ ಕೊರತೆಯಿದೆ. ಪ್ರಶ್ನಿಸುವ ಹವ್ಯಾಸವು ಹೊಸ ಯೋಚನೆಗಳಿಗೆ ದಾರಿಯಾಗುತ್ತದೆ ಇದರಿಂದ ಉದ್ಯೋಗ ಕ್ಷೇತ್ರದಲ್ಲಿ ಬೇಡಿಕೆ ಹೆಚ್ಚುತ್ತದೆ. ಶಿಕ್ಷಣ ಮತ್ತು ಔದ್ಯೋಗಿಕ ಕ್ಷೇತ್ರದ ನಡುವಿನ ಅಂತರವನ್ನು ಭರಿಸಬೇಕಾದರೆ ವಿದ್ಯಾರ್ಥಿಗಳಿಗೆ ತಮ್ಮ ಅಭಿರುಚಿಯನ್ನು ವ್ಯಕ್ತಪಡಿಸಲು ಸೂಕ್ತ ವೇದಿಕೆಗಳ ಅಗತ್ಯವಿದೆಯೆಂದರು.
ಕಾರ್ಯಕ್ರಮದಲ್ಲಿ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಉಪನ್ಯಾಸಕರಾದ ಡಾ. ಸಫಿಯಾ, ಶ್ರೀಗೌರಿ ಜೋಷಿ, ನಿಶಾನ್, ಅಕ್ಷಯ್ ರೈ, ವಿದ್ಯಾರ್ಥಿ ಸಂಘಟಕರಾದ ಚೈತ್ರಾ ಹಾಗೂ ಕೀರ್ತನಾ ಉಪಸ್ಥಿತರಿದ್ದರು. ಪ್ರಥಮ ಪತ್ರಿಕೋದ್ಯಮ ವಿದ್ಯಾರ್ಥಿನಿ ನಳಿನಿ ಕಾರ್ಯಕ್ರಮ ನಿರೂಪಿಸಿದರು.