ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ,ಜು.27: ಕಾರಿನಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದ ಯುವಕರನ್ನು ಪ್ರಶ್ನಿಸಿದ ಪೊಲೀಸ್ ಹೆಡ್ ಕಾನ್ಸ್‌ಟೆಬಲ್ ಮೇಲೆ ಕಾರು ಚಾಲಕ ಹಲ್ಲೆ ನಡೆಸಿದ ಘಟನೆ ಶಂಕರನಾರಾಯಣದಲ್ಲಿ ನಡೆದಿದೆ. ಇದಿನಬ್ಬ ಸಾಹೀದ್ ಆರೋಪಿಯಾಗಿದ್ದು ಆತನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆಗಿದ್ದೇನು:
ಶಂಕರನಾರಾಯಣ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೆಬಲ್ ವಿಲ್ಪೇಡ್ ಡಿ’ಸೋಜಾ (50) ಅವರು ಸಮವಸ್ತ್ರದಲ್ಲಿ ಇತರ ಸಿಬ್ಬಂದಿಗಳ ಜೊತೆಗೆ ಕರ್ತವ್ಯದಲ್ಲಿದ್ದು ಕೋವಿಡ್ -19 ಮಾರ್ಗಸೂಚಿಯಂತೆ ಕರೋನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಕ್ಕಾಗಿ ಮಾಸ್ಕ್ ಧರಿಸದೇ ತಿರುಗಾಟ ಮಾಡುವವರ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಕಾರಿನಲ್ಲಿ 4 ಜನ ಪ್ರಯಾಣ ಮಾಡುತ್ತಿದ್ದನ್ನು ನೋಡಿ ಕಾರನ್ನು ನಿಲ್ಲಿಸುವಂತೆ ಸೂಚನೆ ನೀಡಿದ್ದಾರೆ.
ಮಾಸ್ಕ್ ಧರಿಸದೆ ಪ್ರಯಾಣ ಮಾಡುತ್ತಿದ್ದ ಬಗ್ಗೆ ವಿಚಾರಿಸುತ್ತಿರುವಾಗ ಕಾರಿನ ಚಾಲಕ ಆರೋಪಿ ಇದಿನಬ್ಬ ಸಾಹೀದ್ ಕಾರಿನಿಂದ ಇಳಿದು ಬಂದು ಹೆಡ್ ಕಾನ್ಸ್ಟೆಬಲ್ ವಿಲ್ಪೇಡ್ ಡಿ’ಸೋಜಾ ಮೈ ಮೇಲೆ ಬಿದ್ದು ಕೈಯಿಂದ ಬೆನ್ನಿಗೆ ಹಾಗೂ ಕಪಾಳಕ್ಕೆ ಹೊಡೆದು ಹಲ್ಲೆಮಾಡಿ ಸಮವಸ್ತ್ರವನ್ನು ಹರಿದು ಹಾಕಿ ಸರಕಾರಿ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ್ದಾನೆ. ವಿಲ್ಪೆಡ್ ಅವರಿಗೆ ಈ ಹಲ್ಲೆಯಿಂದಾಗಿ ಪೆಟ್ಟಾಗಿದ್ದು ಚಿಕಿತ್ಸೆಗಾಗಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.