ಕುಂದಾಪ್ರ ಡಾಟ್ ಕಾಂ ಸುದ್ದಿ
ಗಂಗೊಳ್ಳಿ: ಕೊಂಕಣಿ ಖಾರ್ವಿ ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಹುಟ್ಟಿದ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘ ಸುಧೀರ್ಘ ಇತಿಹಾಸ ಹೊಂದಿದೆ. ಸರಕಾರದ ಸೌಲಭ್ಯಗಳನ್ನು ಕಟ್ಟಕಡೆಯ ಮೀನುಗಾರ ಕುಟುಂಬಗಳಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಉತ್ತಮ ದಕ್ಷ, ಪಾರದಕ್ಷಕ ಆಡಳಿತದ ಮೂಲಕ ಸಂಸ್ಥೆಯನ್ನು ಸದೃಢವಾಗಿ ಬೆಳೆಸಲಾಗುವುದು. ಮೀನುಗಾರರ ಏಳಿಗೆ ಹಾಗೂ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ನೂತನ ಅಧ್ಯಕ್ಷ ಸದಾಶಿವ ಖಾರ್ವಿ ಹೇಳಿದರು.
ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರ ಸಂಘದ ಕಛೇರಿಯಲ್ಲಿ ಬುಧವಾರ ಜರಗಿದ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು.
ಸಂಘದ ಸದಸ್ಯರಿಗೆ ಚಿನ್ನಾಭರಣ ಸಾಲ ಹಾಗೂ ಮುಚ್ಚಿರುವ ಡೀಸೆಲ್ ಬಂಕ್ ಪುನರಾರಂಭಕ್ಕೆ ಆದ್ಯತೆ ನೀಡಲಾಗುವುದು. ಇತರ ಆರ್ಥಿಕ ಸಂಸ್ಥೆಗಳ ಪೈಪೋಟಿ ನಡುವೆಯೂ ಸಂಘದ ಅಭಿವೃದ್ಧಿಗೆ ಪೂರಕವಾದ ಯೋಜನೆ ರೂಪಿಸಿ, ಸಂಘದ ಸದಸ್ಯರ ನಂಬಿಕೆ, ವಿಶ್ವಾಸಕ್ಕೆ ಯಾವುದೇ ಚ್ಯುತಿ ಬಾರದಂತೆ ಎಲ್ಲಾ ಹಿರಿಯ ಸಹಕಾರಿಗಳ ಮಾರ್ಗದರ್ಶ ಪಡೆದು ಕಾರ್ಯನಿರ್ವಹಿಸುವುದಾಗಿ ಅವರು ಭರವಸೆ ನೀಡಿದರು.
ಬಿಜೆಪಿ ಬೈಂದೂರು ಮಂಡಲ ಅಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಉಪ್ಪಿನಕುದ್ರು, ಬಾಲಚಂದ್ರ ಭಟ್, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಮತ್ತಿತರರು ಶುಭಾಶಂಸನೆಗೈದರು. ಸಂಘದ ಉಪಾಧ್ಯಕ್ಷ ಸೂರಜ್ ಖಾರ್ವಿ, ನಿರ್ದೇಶಕರಾದ ಹರೀಶ ಖಾರ್ವಿ, ಚಂದ್ರ ಖಾರ್ವಿ, ಮೋಹನ ಖಾರ್ವಿ, ಗುರುರಾಜ್ ಖಾರ್ವಿ, ನಾಗ ಖಾರ್ವಿ, ರಾಜೇಶ ಸಾರಂಗ್, ಜ್ಯೋತಿ ಆರ್. ಮತ್ತು ಸರೋಜಿನಿ ಹಾಗೂ ಸಂಘದ ವ್ಯವಸ್ಥಾಪಕ ಮೋಹನ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಸಿಬ್ಬಂದಿ ಕೇಶವ ಖಾರ್ವಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.