ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಬೈಂದೂರು – ಗಂಗಾನಾಡು ಮಾರ್ಗದಲ್ಲಿ ಎತ್ತಬೇರು ಹಾಗೂ ಮಾವಡ ನಡುವಿನ ಕಿರು ಸಂಪರ್ಕ ಸೇತುವೆ ಶಿಥಿಲಗೊಂಡು ಮುರಿದುಬಿದ್ದು ಎರಡು ವರ್ಷ ಕಳೆದಿದ್ದರೂ ಮರುನಿರ್ಮಾಣವಾಗದೆ ಸಂಚಾರಕ್ಕೆ ತೊಡಕಾಗಿದೆ.
ಗ್ರಾಮೀಣ ಭಾಗದ ನಡೆದಾರಿ ಮತ್ತು ಸಣ್ಣ ವಾಹನ ಸಂಚರಿಸುವ ಈ ಮಾರ್ಗ ಅಲ್ಲಿನ ಜನರ ಜೀವನಾಡಿ. ಈಗಲೂ ಅದರಲ್ಲೇ ಓಡಾಡುತ್ತಿದ್ದಾರೆ. ಮಳೆಗಾಲದಲ್ಲಿ ಅದರ ಮೇಲೆ ಹಳ್ಳದ ನೀರು ಹರಿಯುವುದರಿಂದ ಸಂಚಾರ ಸಾಧ್ಯವಾಗುವುದಿಲ್ಲ. ಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ನೀಡಿರೂ ಕ್ರಮ ಆಗಿಲ್ಲ. ಈ ಬಗ್ಗೆ ಬೇಸತ್ತಿರುವ ಜನಸಾಮಾನ್ಯರು ಶೀಘ್ರ ದುರಸ್ತಿಗೆ ಆಗ್ರಹಿಸಿದ್ದಾರೆ
‘ಯಡ್ತರೆ, ಬೈಂದೂರು ಹಾಗೂ ಪಡುವರಿ ಗ್ರಾಮ ಪಂಚಾಯಿತಿಗಳು ವಿಲೀನಗೊಂಡು ಎರಡು ತಿಂಗಳುಗಳು ಆಗಿವೆ. ಇಷ್ಟರಲ್ಲೇ ವ್ಯಾಪ್ತಿಯಲ್ಲಿ ಕೆಟ್ಟು ಹೋಗಿರುವ ರಸ್ತೆ, ಸೇತುವೆಗಳ ದುರಸ್ತಿ ಬಗ್ಗೆ ಕ್ರಿಯಾಯೋಜನೆ ಸಿದ್ಧಪಡಿಸಿದೆ. ಅಂದಾಜು ವೆಚ್ಚದ ಕರಡು ಪಟ್ಟಿಯನ್ನು ಸಂಬಂಧಪಟ್ಟವರಿಗೆ ಕಳುಹಿಸಲಾಗಿದೆ. ಅನುದಾನ ಬಿಡುಗಡೆಯಾದ ನಂತರ ಎಲ್ಲ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ಹಾಗೂ ಎತ್ತಬೇರು-ಮಾವಡ ಸೇತುವೆ ಮರುನಿರ್ಮಾಣಕ್ಕೆ ಕನಿಷ್ಠ ₹ 20 ಲಕ್ಷ ಅಗತ್ಯವಿದೆ. ಅದರ ಬಗ್ಗೆಯೂ ಗಮನ ಹರಿಸಲಾಗುವುದು’ ಎಂದು ಬೈಂದೂರು ಪಟ್ಟಣ ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.