ಮುಳ್ಳಿಕಟ್ಟೆ-ಕುಂದಾಪುರ ಪಯಣ ಅನುಚಿತ. ಧೂಳು ಮಾತ್ರ ಉಚಿತ.

Call us

ಕುಂದಾಪುರ: ನಿಮಗೆ ಧೂಳಿನಲ್ಲಿ ಸ್ನಾನ ಮಾಡಬೇಕೆಂಬ ಹರಕೆ ಅಥವಾ ಆಸೆಯೇನಾದರೂ ಇದ್ದರೆ ಅಥವಾ ಹಾಗೆಂದರೇನು ಎಂಬ ಬಗೆಗೆ ಕುತೂಹಲವಿದ್ದರೆ ನೀವು ತತ್ ಕ್ಷಣ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆಯಿ0ದ ನೇರವಾಗಿ ಕುಂದಾಪುರಕ್ಕೆ ಸಾಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಒಮ್ಮೆ ಹಾಗೆ ಸುಮ್ಮನೆ ಬೈಕ್ ನಲ್ಲಿ ಒಂದು ರೈಡ್ ನಿಧಾನವಾಗಿ ಹೋಗಿಬನ್ನಿ. ಅದರ ಸಂಪೂರ್ಣ ಅರಿವು ನಿಮಗಾಗದಿದ್ದರೆ ಕೇಳಿ. ಇಲ್ಲಿನ ರಸ್ತೆಯಲ್ಲಿ ಪಯಣಿಸಿದ್ದೇ ಆದರೆ ನಿಮಗೆ ಒಂದು ಕೆ.ಜಿ ಧೂಳು ಫ್ರೀಯಾಗಿ ನಿಮ್ಮ ಬಟ್ಟೆ ದೇಹದೊಂದಿಗೆ ನಿಮ್ಮ ಮನೆಯನ್ನು ಸೇರುತ್ತದೆ.

Call us

Call us

ಹೌದು. ರಾಷ್ಟ್ರೀಯ ಹೆದ್ದಾರಿ 66 ಎಂದು ಕರೆಯಲ್ಪಡುವ ಈ ಭಾಗದ ರಸ್ತೆಯನ್ನು ಕನಿಷ್ಠ ರಸ್ತೆ ಎಂದು ಕರೆಯಲೂ ಬೇಸರವಾಗುತ್ತದೆ. ಮುಳ್ಳಿಕಟ್ಟೆಯಿಂದ ಆರಾಟೆ, ಮುವತ್ತುಮುಡಿ ಸೇತುವೆ ಮುಗಿಯುವ ತನಕದ ರಸ್ತೆ ಅತ್ಯಂತ ಹದಗೆಟ್ಟು ಹೋಗಿದ್ದು ಕೆಲವು ಭಾಗಗಳಲ್ಲಂತೂ ಡಾಂಬರು ಸಂಪೂರ್ಣ ಕಿತ್ತುಹೋಗಿ ಕಲ್ಲು ಮಣ್ಣಿನ ಅಸ್ಥಿಗಳಷ್ಟೇ ಕಾಣಸಿಗುತ್ತಿವೆ. ರಸ್ತೆ ತುಂಬೆಲ್ಲಾ ದೊಡ್ಡ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು ಪ್ರತಿಯೊಬ್ಬ ವಾಹನಸವಾರರು ಜೀವವನ್ನು ಪಣಕ್ಕಿಟ್ಟೇ ವಾಹನ ಓಡಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ದ್ವಿಚಕ್ರ ವಾಹನ ಸವಾರರಿಗಂತೂ ಇದು ಸಾಕ್ಷಾತ್ ನರಕ. ಪಾದಚಾರಿಗಳಿಗಂತು ಕೆಲವು ಕಡೆ ನಡೆದಾಡಲು ಜಾಗವೇ ಇಲ್ಲ ಅನ್ನುವುದು ಸತ್ಯ. ಭಾರೀ ಘನವಾಹನಗಳು ರಸ್ತೆಯ ಹೊಂಡಗಳಿಂದ ತಪ್ಪಿಸಿಕೊಳ್ಳಲೋಸುಗ ರಸ್ತೆಯ ಇಕ್ಕೆಲಗಳಲ್ಲಿ ಸಾಗುವ ಅಪ್ರಯೋಜಕ ಪ್ರಯತ್ನ ನಡೆಸುವುದರಿಂದಾಗಿ ಇಲ್ಲಿ ಧೂಳಿನ ದಟ್ಟ ಮೋಡಗಳೇ ಸೃಷ್ಟಿಯಾಗುತ್ತಿದ್ದು ಇದು ವಾಹನ ಸವಾರರ ಆರೋಗ್ಯದ ಮೇಲೇಯೂ ದುಷ್ಪರಿಣಾಮಗಳನ್ನು ಬೀರುತ್ತಿದೆ. ರಾತ್ರಿ ವೇಳೆಯ ಇಲ್ಲಿನ ಪಯಣ ತೀರಾ ಆತಂಕಗಳನ್ನು ತಂದೊಡ್ಡುತ್ತಿದೆ. ಹೊಂಡ ತಪ್ಪಿಸುವಾಗ ವಾಹನಗಳು ಕೆಲವೊಮ್ಮೆ ಒಂದು ಚಕ್ರವನ್ನು ಗಾಳಿಯಲ್ಲಿ ತೇಲಿಸಿಕೊಂಡೇ ಹೋಗಬೇಕಾಗಿದೆ ಎಂದರೆ ಪರಿಸ್ಥಿತಿಯ ಭೀಕರತೆ ಅರಿವಾದೀತು.”

ಹೆಮ್ಮಾಡಿಯಿಂದ ಮುಂದಕ್ಕೆ ರಸ್ತೆ ಕೊಂಚ ಉತ್ತಮವಾಗಿರುವಂತೆ ಕಾಣಿಸುತ್ತಿದೆಯಾದರೂ ಅಲ್ಲಲ್ಲಿ ದುತ್ತನೆ ಎದುರಾಗುವ ಭಾರೀ ಹೊಂಡಗಳು ಅಪಾಯಕ್ಕೆ ಆಹ್ವಾನ ನೀಡುತ್ತಿವೆ. ತಲ್ಲೂರಿನ ಸೇತುವೆಯ ಮೇಲಿನ ಒಂದೆರಡು ಹೊಂಡಗಳಲ್ಲಿ ಕಬ್ಬಿಣದ ಸರಳುಗಳು ಮೇಲೆದ್ದಿದ್ದು ಅಪಾಯದ ಮುನ್ನುಡಿ ಬರೆಯುತ್ತಿವೆ. ಇನ್ನು ಕುಂದಾಪುರದ ಸಂಗಮ್ ನಿಂದ ಶಾಸ್ತ್ರೀ ಸರ್ಕಲ್ ವರೆಗಿನ ರಸ್ತೆಯೂ ಸಂಪೂರ್ಣವಾಗಿ ಹದಗೆಟ್ಟಿದ್ದು ವಾಹನ ಸವಾರರಿಗೆ ಮಾರಕವಾಗಿ ಪರಿಣಮಿಸಿದೆ. ಇದನ್ನು ಅದೆಷ್ಟು ಬಾರಿ ರಿಪೇರಿ ಮಾಡಿದ್ದರೂ ಆ ದೇವರೇ ಬಲ್ಲ. ಈ ಭಾಗದ ರಸ್ತೆಗಳಲ್ಲಿ ಪ್ರತಿಸಲ ರಿಪೇರಿಯ ಹೆಸರಿನಲ್ಲಿ ಅದೆಷ್ಟು ಜನರು ಉಂಡೆದ್ದರೋ ಗೊತ್ತಿಲ್ಲ. ಆದರೆ ರಸ್ತೆಯ ಗೋಳು ಮಾತ್ರ ತಪ್ಪಿಲ್ಲ. ಚತುಷ್ಪಥ ಪಂಚಪಥದ ಕನಸು ಕಾಣೋ ಜನಗಳಿಗೆ ಇರುವ ಪಥವನ್ನು ಇರುವಷ್ಟು ಕಾಲವಾದರೂ ಚೆನ್ನಾಗಿಟ್ಟಿರಬೇಕು ಎನ್ನುವ ಮೂಲ ವಿಷಯಗಳೇ ಅರ್ಥವಾಗದಿದ್ದರೆ ಹೇಗೆ ಅನ್ನುವುದು ಈ ಭಾಗದ ಎಲ್ಲಾ ಜನರ/ಸವಾರರ ಪ್ರಶ್ನೆ.
ಉತ್ತರಿಸುವವರಾರು? ಹೆದ್ದಾರಿ ಹೆಮ್ಮಾರಿಯಾಗುತ್ತಿದೆ. ಕಾಯುವವರಾರೋ…?

Call us

Call us

ಚಿತ್ರ ವರದಿ: ನರೇಂದ್ರ ಎಸ್ ಗಂಗೊಳ್ಳಿ

Leave a Reply

Your email address will not be published. Required fields are marked *

8 − six =