ಕುಂದಾಪ್ರ ಡಾಟ್ ಕಾಂ ಸುದ್ದಿ.
ನಾವುಂದ: ತಮ್ಮ ಕೃಷಿ ಜಮೀನಿನಲ್ಲಿ ದುಡಿಯುತ್ತಿರುವಾಗ ಮೃತನಾದ ಕೂಲಿಯಾಳು ಕುಟುಂಬಕ್ಕೆ ಮರವಂತೆ ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಸದಸ್ಯ ಹಕ್ಕಾಡಿ ಜಗದೀಶ ಪೂಜಾರಿ ನಿವೇಶನ ದೊರಕಿಸಿಕೊಟ್ಟು, ಅದರಲ್ಲಿ ಮನೆ ನಿರ್ಮಿಸಿ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.
ಮರವಂತೆಯ ನೀರೋಣಿ ಎಂಬಲ್ಲಿ ಪತ್ನಿ ಗಿರಿಜಾ, ನಿರುದ್ಯೋಗಿ ಪದವೀಧರೆ ಮತ್ತು ಶಾಲಾ ವಿದ್ಯಾರ್ಥಿನಿ ಆಗಿರುವ ಇಬ್ಬರು ಪುತ್ರಿಯರ ಜತೆ ವಾಸಿಸಿದ್ದ ಸುರೇಶ ದೇವಾಡಿಗ ಕೆಲವು ವರ್ಷಗಳಿಂದ ಜಗದೀಶ ಪೂಜಾರಿ ಕೃಷಿಭೂಮಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕುಟುಂಬಕ್ಕೆ ಸ್ವಂತ ನಿವೇಶನ, ಮನೆ ಇರಲಿಲ್ಲ. ಕಳೆದ ವರ್ಷ ಸುರೇಶ ಮೃತರಾಗುವುದರೊಂದಿಗೆ ಕುಟುಂಬ ಅನಾಥವಾಯಿತು. ಆಗ ಅದರ ಬೆಂಬಲಕ್ಕೆ ನಿಂತ ಜಗದೀಶ ಪೂಜಾರಿ ನಾವುಂದದಲ್ಲಿ ಸರ್ಕಾರಿ ನಿವೇಶನ ದೊರಕಿಸಿಕೊಟ್ಟರು. ಅದರಲ್ಲಿ ರೂ 6 ಲಕ್ಷ ವೆಚ್ಚಮಾಡಿ ಮನೆ ನಿರ್ಮಿಸಿದರು. ಈಚೆಗೆ ಅದರ ಪ್ರವೇಶೋತ್ಸವ ನಡೆಯಿತು.
ನೂತನ ಗೃಹಕ್ಕೆ ಭೇಟಿ ನೀಡಿದ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ, ಆಶ್ರಯವಿಲ್ಲದ ಕುಟುಂಬಕ್ಕೆ ಸ್ವಂತ ದುಡಿಮೆಯ ಹಣದಿಂದ ಮನೆ ನಿರ್ಮಿಸಿಕೊಟ್ಟಿರುವುದರ ಜತೆಗೆ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರೂ 30 ಸಾವಿರ ವೆಚ್ಚದಲ್ಲಿ ಇನ್ವರ್ಟರ್ ಕೊಡುಗೆ ನೀಡಿದ ಬಗ್ಗೆ ಜಗದೀಶ ಪೂಜಾರಿ ಅವರನ್ನು ಆತ್ಮೀಯವಾಗಿ ಅಭಿನಂದಿಸಿದರು. ಈ ಸಂದರ್ಭ ಮರವಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ವಿನಾಯಕ ರಾವ್ ಉಪಸ್ಥಿತರಿದ್ದರು.
ಇದನ್ನೂ ಓದಿ:
► ಕುಳ್ಳಂಜೆಯ ‘ಅಜ್ಜಿಮನೆ’ ಗೃಹ ಪ್ರವೇಶ. ಸಾಂತಜ್ಜಿಗೆ ಸಿದ್ದವಾಯ್ತು ಸುಸಜ್ಜಿತ ಸೂರು – https://kundapraa.com/?p=42612.