ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಪ್ರತಿವರ್ಷ ಪಾದಯಾತ್ರೆ ಮೂಲಕ ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ, ನಿರಂತರವಾಗಿ ರಕ್ತದಾನ ಮಾಡುವ ಮೂಲಕ ಗಂಗೊಳ್ಳಿಯ ಯಕ್ಷಾಭಿಮಾನಿ ರಕ್ತದಾನಿಗಳ ಬಳಗ ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿದೆ. ಅಂಧತ್ವವನ್ನು ನಿವಾರಿಸಲು ನೇತ್ರದಾನದ ಮಹಾಸಂಕಲ್ಪಕ್ಕೆ ಮುಂದಾಗುವ ಮೂಲಕ ’ಜೀತೆ ಜೀತೆ ರಕ್ತದಾನ್, ಜಾತೆ ಜಾತೆ ನೇತ್ರದಾನ್’ ಎಂಬ ಘೋಷ ವಾಕ್ಯದೊಂದಿಗೆ ನೇತ್ರದಾನದ ಒಂದು ಪುಣ್ಯದ ಕೆಲಸ ನಡೆಸುತ್ತಿರುವುದು ಶ್ಲಾಘನೀಯ ಎಂದು ಮಣಿಪಾಲದ ಅಭಯಹಸ್ತ ಹೆಲ್ಫ್‌ಲೈನ್ ಸಂಸ್ಥೆಯ ಅಧ್ಯಕ್ಷ ಸತೀಶ ಸಾಲಿಯಾನ್ ಮಣಿಪಾಲ ಹೇಳಿದರು.
ಗಂಗೊಳ್ಳಿ ಮ್ಯಾಂಗನೀಸ್ ವಾರ್ಫ್‌ನಲ್ಲಿ ಮಂಗಳವಾರ ಜರಗಿದ ಗಂಗೊಳ್ಳಿಯ ಯಕ್ಷಾಭಿಮಾನಿ ರಕ್ತದಾನಿಗಳ ಬಳಗ ಇದರ ೮ನೇ ವರ್ಷದ ಯಕ್ಷಾಗನ ಸೇವೆ ಹಾಗೂ ಕುಟುಂಬ ನೇತ್ರದಾನ ಅಭಿಯಾನಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಕುಂದಾಪುರದ ಹೆಲ್ಫಿಂಗ್ ಹ್ಯಾಂಡ್ ಸಂಸ್ಥೆಯ ಅಧ್ಯಕ್ಷ ಪ್ರದೀಪ ಮೊಗವೀರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪುರೋಹಿತರಾದ ಮಂಜುನಾಥ ಕಾರಂತ್ ಕಾರ್ಯಕ್ರಮ ಉದ್ಘಾಟಿಸಿ ಕುಟುಂಬ ನೇತ್ರದಾನ ಅಭಿಯಾನಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಬಿ.ರಾಘವೇಂದ್ರ ಪೈ ಮತ್ತು ಉಡುಪಿ ಸೇವಾಬಂಧು ಸಂಘದ ಅಧ್ಯಕ್ಷ ನಿತೇಶ್ ಮಲ್ಪೆ ಶುಭಾಶಂಸನೆಗೈದರು. ಇದೇ ಸಂದರ್ಭ ಅಭಯಹಸ್ತ ಹೆಲ್ಫ್‌ಲೈನ್ ಸಂಸ್ಥೆಯ ಅಧ್ಯಕ್ಷ ಸತೀಶ ಸಾಲಿಯಾನ್ ಮಣಿಪಾಲ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜನಾರ್ಧನ ಖಾರ್ವಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯೆ ನಿರ್ಮಲಾ ಪೂಜಾರಿ, ಮತ್ಸ್ಯೋದ್ಯಮಿ ಜಿ.ಟಿ.ಮಂಜುನಾಥ್, ಯಕ್ಷಾಭಿಮಾನಿ ರಕ್ತದಾನಿಗಳ ಬಳಗದ ಚರಣ್ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಯಕ್ಷಾಭಿಮಾನಿ ರಕ್ತದಾನಿಗಳ ಬಳಗದ ಅಶೋಕ್ ಎನ್. ಡಿ. ಸ್ವಾಗತಿಸಿದರು. ಸುಂದರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.