ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಒಂದು ಕಡೆ ಕಡಲು ಮತ್ತು ಮೂರು ಕಡೆ ನದಿಯಿಂದ ಆವೃತವಾಗಿರುವ ಪ್ರಕೃತಿ ರಮ್ಯ ಮರವಂತೆ, ಜಲಜಾನಪದ ಉತ್ಸವ ನಡೆಸಲು ಅತ್ಯಂತ ಪ್ರಶಸ್ತವಾದ ಸ್ಥಳ. ಇಲ್ಲಿ ನಡೆಸಲು ನಿರ್ಧರಿಸಿರುವುದಕ್ಕೆ ಸ್ವಾಗತವಿದೆ. ಅದರ ಯಶಸ್ಸಿಗೆ ಅಗತ್ಯವಿರುವ ಎಲ್ಲ ವಿಧದ ಬೆಂಬಲವನ್ನು ನೀಡಲಾಗುವುದು ಎಂದು ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ರಾಜ್ಯ ಕನ್ನಡ ಜಾನಪದ ಪರಿಷತ್ತಿನ ಆಶ್ರಯದಲ್ಲಿ ಮರವಂತೆಯಲ್ಲಿ ನಡೆಸಲು ಉದ್ದೇಶಿಸಲಾದ ರಾಜ್ಯ ಜಲಜಾನಪದ ಉತ್ಸವದ ಲಾಂಛನವನ್ನು ಅವರು ಇಲ್ಲಿನ ಮಹಾರಾಜಸ್ವಾಮಿ ವರಾಹ ದೇವಸ್ಥಾನದಲ್ಲಿ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಮರವಂತೆ ರಾಜ್ಯದ ಪ್ರಮುಖ ಸುಂದರ ಪ್ರವಾಸಿ ತಾಣಗಳಲ್ಲಿ ಒಂದು. ಪ್ರತಿದಿನ ನೂರಾರು ಪ್ರವಾಸಿಗಳು ಭೇಟಿ ನೀಡುವ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಅದರೊಂದಿಗೆ ಇಲ್ಲಿ ಪ್ರವಾಸಿಗಳನ್ನು ಆಕರ್ಷಿಸಲು ವಿವಿಧ ಜಲಕ್ರೀಡೆಗಳನ್ನು ನಡೆಸಬೇಕು. ಜಲಜಾನಪದ ಉತ್ಸವದ ಸಂದರ್ಭ ಇಲ್ಲಿನ ಸೌಪರ್ಣಿಕಾ ನದಿಯಲ್ಲಿ ಕೇರಳ ಮಾದರಿಯಲ್ಲಿ ದೋಣಿಗಳ ಸ್ಪರ್ಧೆ ಏರ್ಪಡಿಸುವ ಬಗೆಗೂ ಸಂಘಟಕರು ಯೋಚಿಸಬೇಕು ಎಂದು ಅವರು ಸಲಹೆಯಿತ್ತರು.
ಉತ್ಸವದ ಸ್ಥಳೀಯ ಸಮಿತಿ ಗೌರವಾಧ್ಯಕ್ಷ ಎಸ್. ಜನಾರ್ದನ ಮರವಂತೆ ಸ್ವಾಗತಿಸಿ, ಉತ್ಸವದ ವಿವರ ನೀಡಿದರು. ಉಪಾಧ್ಯಕ್ಷ ಮಂಜುನಾಥ ಮಧ್ಯಸ್ಥ ವಂದಿಸಿದರು. ಪರಿಷತ್ತಿನ ಕರಾವಳಿ ವಿಭಾಗೀಯ ಘಟಕದ ಸಂಚಾಲಕಿ ಡಾ. ಭಾರತಿ ಮರವಂತೆ, ಉದ್ಯಮಿ ಶರತ್‌ಕುಮಾರ ಶೆಟ್ಟಿ, ಯೋಗೀಂದ್ರ ಮರವಂತೆ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸತೀಶ ಎಂ. ನಾಯಕ್, ಸದಸ್ಯರಾದ ಪ್ರಕಾಶ್ ಮರವಂತೆ, ಸಂತೋಷ್ ಪೂಜಾರಿ, ಗಣೇಶ ಖಾರ್ವಿ, ಉತ್ಸವ ಸಮಿತಿಯ ಅಧ್ಯಕ್ಷೆ ಅನಿತಾ ಆರ್. ಕೆ, ಕಾರ್ಯಾಧ್ಯಕ್ಷ ರವಿ ಮಡಿವಾಳ್, ಸಂಚಾಲಕರಾದ ನಾಗರಾಜ ಪಟಗಾರ್, ವಿಶ್ವನಾಥ ಶ್ಯಾನುಭಾಗ್, ಸಹ ಸಂಚಾಲಕಿ ಶೋಭಾ ದೇವಾಡಿಗ, ಸದಸ್ಯರಾದ ಕವಿತಾ ಶ್ಯಾನುಭಾಗ್ ಇದ್ದರು.