ಕುಂದಾಪ್ರ ಡಾಟ್ ಕಾಂ ಸುದ್ದಿ
ಸಿದ್ದಾಪುರ: ಬೈಂದೂರು ಕ್ಷೇತ್ರದಲ್ಲಿ ತನ್ನ ಅವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳು ನಡೆದಿವೆ. ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿದ್ದೇನೆ. ಬೈಂದೂರು ಕ್ಷೇತ್ರದಲ್ಲಿ ಈಗಾಗಲೇ 1664 ಫಲಾನುಭವಿಗಳಿಗೆ ಮನೆಗಳು ಮಂಜೂರು ಮಾಡಲಾಗಿದೆ. ಆಕ್ರಮ ಸಕ್ರಮ ಮತ್ತು 94ಸಿ ಹಾಗೂ 94ಸಿಸಿಯಲ್ಲಿ ಜಾಗ ಮಂಜೂರು ಮಾಡಲಾಗಿದೆ. ಪಶು ಭಾಗ್ಯ ಯೋಜನೆಯಲ್ಲಿ 27 ಗುಂಪುಗಳಿಗೆ ಹಸುಗಳನ್ನು ನೀಡಲಾಗಿದೆ. ಕ್ಷೇತ್ರದಲ್ಲಿ ಸುಮಾರು ರೂ.33 ಕೋಟಿ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ, ಯಡಮೊಗೆ ಗ್ರಾಮವನ್ನು ಗ್ರಾಮ ವಿಕಾಸ ಯೋಜನೆಯಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ ಎಂದು ಬೈಂದೂರು ಕ್ಷೇತ್ರ ಶಾಸಕ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಅವರು ಹೇಳಿದರು.
ಅವರು ಸಿದ್ದಾಪುರ ಶ್ರೀ ರಂಗನಾಥ ಸಭಾ ಭವನದಲ್ಲಿ ನಡೆದ ಸಿದ್ದಾಪುರ, ಉಳ್ಳೂರು 74, ಶಂಕರನಾರಾಯಣ, ಯಡಮೊಗೆ, ಹೊಸಂಗಡಿ, ಮಚ್ಚಟ್ಟು ಗ್ರಾಮ ಪಂಚಾಯತ್ ಮಟ್ಟದ ಜನಸ್ಪಂದನ ಸಭೆಯನ್ನು ಉದ್ಘಾಟಿಸಿ, ಫಲಾನುಭವಿಗಳಿಗೆ ವಿವಿಧ ಸವಲತ್ತು ಮತ್ತು ಹಕ್ಕುಪತ್ರವನ್ನು ವಿತರಿಸಿ ಮಾತನಾಡಿದರು.
ಆಕ್ರಮ ಸಕ್ರಮ ಹಾಗೂ 94ಸಿ ಅರ್ಜಿಯಲ್ಲಿ ಜಾಗ ಮಂಜೂರಾತಿಗೆ ಕಾನೂನು ತೊಡಕಿನಿಂದಾಗಿ ತಡವಾಗಿದೆ. ಇದನ್ನು ಕೂಡಲೆ ಸರಿ ಪಡಿಸಿಕೊಂಡು ಜಾಗ ಮಂಜೂರು ಮಾಡಲಾಗುವುದು. ಕಸ್ತೂರಿ ರಂಗನ್ ವರದಿ, ಡೀಮ್‌ಂಡ್ ಫಾರೇಸ್ಟ್, ಕುಮ್ಕಿ ಹಕ್ಕು, ಗೋಮಾಳ, ರೇಷನ್ ಕಾರ್ಡ್ ಮುಂತಾದವುಗಳಿಗೆ ಇದ್ದ ಕಾನೂನಿನ ತೊಡಕುಗಳನ್ನು ಸರಿಪಡಿಸಿಪಡಿಸಲಾಗುವುದು ಎಂದು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರವು ರೈತರ, ಕೂಲಿ ಕಾರ್ಮಿರ, ಬಡವರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ರೂಪಿಸಿ, ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ಶೇ.80ರಷ್ಟು ಜನರಿಗೆ ರೇಷನ್ ಕಾರ್ಡು, ಅನ್ನ ಭಾಗ್ಯ, ಆಶ್ರಯ ಮನೆ ಸಾಲ ಮನ್ನ, ರಾಜೀವ ಗಾಂಧಿ ವಿದ್ಯುತಿಕರಣದ ಮೂಲಕ ಮನೆ ಮನೆಗಳಿಗೆ ವಿದ್ಯುತ್, ಮೊರಾಜಿ ದೇಸಾಯಿ ಶಾಲೆ ಮಂಜೂರು, ಪಶುಭಾಗ್ಯ ಯೋಜನೆ, ಹಾಲಿಗೆ ಸಬ್ಸಿಡಿ, ರೈತರಿಗೆ ಶ್ಯೂನ ಬಡ್ಡಿಯಲ್ಲಿ ಸಾಲ, ಬೋವಿ ಜನಾಂಕಕ್ಕೆ ಎಸ್‌ಸಿ ಸರ್ಟಿಫಿಕೇಟ್, ಪ್ರತಿ ಗ್ರಾ. ಪಂ.ಗಳಲ್ಲಿ ಬಾಪೂಜಿ ಕೇಂದ್ರ ಮೊದಲಾದ ಸೌಲಭ್ಯಗಳನ್ನು ರಾಜ್ಯ ಸರಕಾರ ನೀಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ತಾ. ಪಂ. ಸದಸ್ಯರಾದ ಎಸ್.ಕೆ. ವಾಸುದೇವ ಪೈ, ಉಮೇಶ ಶೆಟ್ಟಿ, ಶಂಕರನಾರಾಯಣ ಗ್ರಾ. ಪಂ. ಅಧ್ಯಕ್ಷ ಸದಾಶಿವ ಶೆಟ್ಟಿ, ಸಿದ್ದಾಪುರ ಗ್ರಾ. ಪಂ. ಅಧ್ಯಕ್ಷೆ ಸರೋಜಿನಿ ಶೆಟ್ಟಿ, ಉಳ್ಳೂರು-74 ಗ್ರಾ. ಪಂ. ಅಧ್ಯಕ್ಷೆ ಭಾರತಿ ಕೋಟಿ ಪೂಜಾರಿ, ಹೊಸಂಗಡಿ ಗ್ರಾ. ಪಂ. ಅಧ್ಯಕ್ಷೆ ಯಶೋಧ ಶೆಟ್ಟಿ, ಯಡಮೊಗೆ ಗ್ರಾ. ಪಂ. ಅಧ್ಯಕ್ಷೆ ಸಣ್ಣಮ್ಮ, ಬೈಂದೂರು ವಿಶೇಷ ತಹಶೀಲ್ದಾರ್ ಕಿರಣ ಗೋರಯ್ಯ ಮೊದಲಾದವರು ಉಪಸ್ಥಿತರಿದ್ದರು.
ಮೇಸ್ಕಾಂ, ಆರೋಗ್ಯ ಇಲಾಖೆ, ಕೃಷಿ ಇಲಾಖೆ, ಅರಣ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಮೀನುಗಾರಿಕ ಇಲಾಖೆ, ಅಬಕಾರಿ ಇಲಾಖೆ, ತೋಟಗಾರಿಕೆ ಇಲಾಖೆ, ವಾರಾಹಿ ಇಲಾಖೆ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.
ಯಡಮೊಗೆ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಸುದರ್ಶನ ಅವರು ಕೊಳವಿ ರಚನೆಗೆ ಪರವಾನಿಗೆ ನೀಡದೆ ಸತಾಯಿಸುತ್ತಿದ್ದಾರೆ ಎಂದು ಗ್ರಾಮದ ಮಹಿಳೆ ನಾಗರತ್ನ ಅವರು ಶಾಸಕರ ಗಮನಕ್ಕೆ ತಂದರು. ಶಾಸಕರು ಅಭಿವೃದ್ಧಿ ಅಧಿಕಾರಿಯನ್ನು ತರಾಟೆ ತೆಗೆದುಕೊಂಡು, ಜನರಿಗೆ ಏಕೆ ಅನಾವಶಕವಾಗಿ ತೊಂದರೆ ನೀಡುತ್ತಿರಿ. ಕೂಡಲೆ ಪರವಾನಿಗೆ ನೀಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಕ್ಕು ಪತ್ರ ಸೇರಿದಂತೆ ವಿವಿಧ ಇಲಾಖೆಗಳ ಸೌಲಭ್ಯಗಳನ್ನು ವಿತರಿಸಿದರು.ಕುಂದಾಪುರ ತಹಶೀಲ್ದಾರ್ ಜಿ.ಎಂ. ಬೋರ್ಕರ್ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಮೇಸ್ಕಾಂ ನಿರ್ದೇಶಕ ಸಂಪಿಗೇಡಿ ಸಂಜೀವ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಮನೋರಾಜ್ ಶೆಟ್ಟಿ ಜಾಂಬೂರು ಕಾರ್ಯಕ್ರಮ ನಿರೂಪಿಸಿದರು. ಸಿದ್ದಾಪುರ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಸತೀಶ ನಾಯ್ಕ ವಂದಿಸಿದರು.