ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಕುಂದಾಪುರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಸಮೀಪ ದೊಡ್ಡ ಗುಂಡಿ ಮಾಡಲಾಗಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಮುಖ್ಯ ರಸ್ತೆಯಿಂದ ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ತಿರುಗುವ ರಸ್ತೆ ಬದಿಯಲ್ಲಿ ಇಂತಹ ಗುಂಡಿ ತೋಡಲಾಗಿದೆ. ಇದರಿಂದ ಅಚಾನಕ್ಕಾಗಿ ಬಸ್ ಚಾಲಕರಿಗೂ ಗೊಂದಲ ಉಂಟಾಗುವ ಸಂಭವವಿದೆ. ಮುಖ್ಯ ರಸ್ತೆಯ ಸಮೀಪವೇ ಈ ಗುಂಡಿ ಇರುವ ಕಾರಣ ದ್ವಿಚಕ್ರ ವಾಹನ ಅಥವಾ ಯಾವುದೇ ವಾಹನ ಚಾಲಕರಿಗೆ ಈ ಗುಂಡಿ ಅರಿವಿಲ್ಲದೇ ಅಪಾಯ ತಂದೊಡ್ಡುವ ಸಾಧ್ಯತೆಯಿದೆ. ಪಕ್ಕದಲ್ಲೇ ಸರ್ವಿಸ್ ರಸ್ತೆ ಕಾಮಗಾರಿ ನಡೆದಿದ್ದು ಅಲ್ಲಿ ವಾಹನಗಳ ಓಡಾಟ ಇದೆ. ಆದ್ದರಿಂದ ಸರ್ವಿಸ್ ರಸ್ತೆಗೂ ಅಪಾಯ ಕಟ್ಟಿಟ್ಟ ಬುತ್ತಿ. ನಿಂತ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಅದು ಇನ್ನೊಂದು ಉಪಟಳಕಾರಿ ರೋಗ ಹರಡಲು ಕಾರಣವಾದೀತೇ ಎಂಬ ಭಯವೂ ಇದೆ.
ಇಷ್ಟು ನಿಧಾನಗತಿಯ ಕಾಮಗಾರಿ ಮಾಡಿದರೆ ಒಟ್ಟು ಕಾಮಗಾರಿ ಮುಗಿಯುವುದು ಯಾವಾಗ, ಜನತೆಗೆ ಉಪಯೋಗಕ್ಕೆ ದೊರೆಯುವುದು ಯಾವಾಗ ಎಂದು ಜನ ಕೇಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸುಮಾರು 10 ಅಡಿಗಿಂತಲೂ ಆಳದ ನೂರಾರು ಅಡಿ ಉದ್ದದ 20 ಅಡಿಯಷ್ಟು ಅಗಲದ ಗುಂಡಿ ಮಾಡಲಾಗಿದೆ. ಫ್ಲೈ ಓವರ್ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು ಈ ಹಿನ್ನೆಲೆಯಲ್ಲಿ ಈ ಗುಂಡಿ ಕೂಡಾ ಮಾಡಲಾಗಿದೆ. ಇದು ಕೂಡಾ ಕಾಮಗಾರಿಯಂತೆಯೇ ನಿಧಾನಗತಿಯಲ್ಲಿ ಸಾಗಿದೆ. ಏಕೆಂದರೆ ಗುಂಡಿ ಮಾಡಿಟ್ಟ ಯಂತ್ರ ಅದರ ಬದಿಯೇ ಯಥಾಸ್ಥಿತಿಯಲ್ಲಿ ಕಳೆದ ಕೆಲವು ದಿನಗಳಿಂದ ನಿಂತಿದೆ. ಆದರೆ ಕಾಮಗಾರಿಯಲ್ಲಿ ಪ್ರಗತಿ ಇಲ್ಲ. ಕೆಲ ದಿನಗಳ ಹಿಂದೆ ಭಾರೀ ಮಳೆ ಸುರಿದಿದೆ. ಆ ನೀರೆಲ್ಲ ಈ ಗುಂಡಿಯಲ್ಲಿ ತುಂಬಿಕೊಂಡಿದೆ. ಅದನ್ನೂ ತೆರವು ಮಾಡಿಲ್ಲ. ಇದರಿಂದ ಇನ್ನಷ್ಟು ಅಪಾಯ ಭೀತಿ ಎದುರಾಗಿದೆ.