ರೇಖಾ ಬನ್ನಾಡಿ ಅವರ ‘ಕಾರಂತರ ದುಡಿಮೆಯ ಪ್ರಪಂಚ’ – ವಿಮರ್ಶಾ ಸಂಕಲನ ಬಿಡುಗಡೆ

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಡಾ.ಶಿವರಾಮ ಕಾರಂತರು ಕಾಯಕವನ್ನೇ ಕೈಲಾಸವೆಂದು ನಂಬಿದವರು. ಅದರಲ್ಲೇ ತಮ್ಮ ಜೀವಿತಾವಧಿಯ ಸಾರ್ಥಕ್ಯವನ್ನು ಕಂಡವರು ಎಂದು ಖ್ಯಾತ ಚಿಂತಕ ಜಿ.ರಾಜಶೇಖರ ಅಭಿಪ್ರಾಯಪಟ್ಟರು.

Call us

Call us

ಅವರು ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರೇಖಾ ಬನ್ನಾಡಿ ಅವರ “ಕಾರಂತರ ದುಡಿಮೆಯ ಪ್ರಪಂಚ” – ವಿಮರ್ಶಾ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಕಾರಂತರ ದುಡಿಮೆಯ ಪ್ರಪಂಚ” – ವಿಮರ್ಶಾ ಸಂಕಲನ ಎಂಬ ಶೀರ್ಷಿಕೆಯೇ ವಿಸ್ಮಯವೆನಿಸುವಷ್ಟು ಜೀವನಾನುಭೂತಿಯನ್ನು ಸಮ್ಮಿಳಿಸುತ್ತದೆ. ಬರಹಗಳಲ್ಲಿ ಕಾಳಜಿ, ಸಂವೇದನೆ ಮತ್ತು ಸೂಕ್ಷ್ಮತೆಗಳಿವೆ. ಲೇಖಕರು ಸಮಕಾಲೀನ ವಿದ್ಯಾಮಾನಗಳಿಗೆ ಸ್ಪಂದಿಸಿದ ರೀತಿ ನಿಜಕ್ಕೂ ಕ್ರಾಂತಿ ಎನ್ನಬಹುದು. ಪ್ರತಿ ಬರಹಗಳಲ್ಲಿನ ವಸ್ತುವಿಷಯಗಳು ಒಂದಕ್ಕಿಂತ ಇನ್ನೊಂದು ವಿಶಿಷ್ಟವೆನಿಸುತ್ತಾ ಹೋಗುತ್ತದೆ. ಇದೊಂದು ವಿಮರ್ಶಾ ಕೃತಿಯಲ್ಲ. ಇದೊಂದು ಸಮಕಾಲೀನ ಸಾಹಿತ್ಯದ ದಿಕ್ಸೂಚಿಯಾಗಿದೆ. ಇಲ್ಲಿ ಬರುವಂತಹ ಸಂದರ್ಭೋಚಿತ ಸಂಗತಿಗಳು ಮತ್ತು ಅದರ ನಿರ್ಧಾರ ಮತ್ತು ನಿಯಮಗಳು ಅಂತಿಮವಲ್ಲ ಎಂದು ಹೇಳಿದರು.

ಕಾರಂತರ ಮರಳಿಮಣ್ಣಿಗೆ ಕೃತಿಯನ್ನು ಕುರಿತು ಮಾತನಾಡುತ್ತಾ ಕಾರಂತರು ತಮ್ಮ ಈ ಕೃತಿಯಲ್ಲಿ ಕೋಟ ಮತ್ತು ಕುಂದಾಪುರ ವಲಯದ ಭಾಷಾ ಸೊಗಡನ್ನು ನಾವು ನೋಡಲು ಸಾಧ್ಯವಾಗಿಲ್ಲ. ಅವರು ಇಲ್ಲಿನ ಭಾಷಾ ಸಂಸ್ಕೃತಿಯನ್ನು ಮರಮಾಚಿದ್ದಾರೆ. ಅಲ್ಲದೇ ಕೋಟದ ಸುತ್ತಮುತ್ತಲಿನ ಪರಿಸರ, ಜನಜೀವನ ಅವರ ದುಡಿಮೆಯ ಪ್ರಪಂಚ ಮತ್ತು ಅವರ ಭಾವನಾತ್ಮಕ ಸಂವೇದನೆಗಳನ್ನು ಕಟ್ಟಿಕೊಡುವಲ್ಲಿ ಈ ಕೃತಿ ಯಶಸ್ವಿಯಾಗಿಲ್ಲ. ಯಾವುದೋ ಒಂದು ವರ್ಗವನ್ನು ಕುರಿತು ಕೃತಿಯಲ್ಲಿ ತಂದಾಗ ಅದು ಸಾಮಾಜಿಕ ನೆಲೆಗಳಿಗೆ ಸ್ಪಂದಿಸಿದಂತಾಗುವುದಿಲ್ಲ. ಎಲ್ಲಾ ವರ್ಗದವರ ಸಾಮಾಜಿಕ ಭಾವನಾತ್ಮಕ ನೆಲೆಗಳಿಗೆ ಸ್ಪ್ಂದಿಸಬೇಕಾದದ್ದು ಸಾಹಿತ್ಯವಾಗಬೇಕು ಎಂದು ಅಭಿಪ್ರಾಯಪಟ್ಟರು.

Call us

Call us

“ಕಾರಂತರ ದುಡಿಮೆಯ ಪ್ರಪಂಚ” – ವಿಮರ್ಶಾ ಸಂಕಲನ ಕೃತಿಯ ಕುರಿತು ಲೇಖಕಿ ಜ್ಯೋತಿ ಚೆಳ್ಯಾರು ಅವರು ಮಾತನಾಡಿ ಕೃತಿಯಲ್ಲಿನ ಮೊದಲ ಬರಹವೇ ಕಾರಂತರ ದುಡಿಮೆಯ ತಾತ್ವಕತೆಯನ್ನು ಕಟ್ಟಿಕೊಡುತ್ತದೆ. ಕಾರಂತರ ಕೃತಿಗಳಲ್ಲಿನ ದುಡಿಮೆಯ ಪ್ರಪಂಚದ ಕುರಿತಂತೆ ಹೊಸ ನೆಲೆಯನ್ನು ಹುಟ್ಟುಹಾಕುತ್ತದೆ. ಒಳ್ಳೆಯ ಓದು , ಸಂವೇದನೆ ಮತ್ತು ಬರಹಗಳು ಕೃತಿಗಳಿಗೆ ಗುಣಮಟ್ಟದೊಂದಿಗೆ ಸಾರ್ಥಕ್ಯವನ್ನು ತಂದುಕೊಡುತ್ತದೆ. ಕಾರಂತರು ನೇರ ನಡೆನುಡಿಯ ವ್ಯಕ್ತಿತ್ವದವರು. ಅವರ ಬರಹಗಳಲ್ಲಿ ಸತ್ಯದ ಕಾಣ್ಕೆ ಇದೆ. ಅವರ ಕೃತಿಗಳು ಚಿಂತನೆಗೆ ಎಡೆಮಾಡಿಕೊಡುತ್ತದೆ. ಕಾರಂತರ ದೃಷ್ಟಿಯಲ್ಲಿ ಪುರುಷ ಮತ್ತು ಸ್ತ್ರೀ ಇವರಿಬ್ಬರೂ ಸಮಾನರು. ಅದೇ ದೃಷ್ಟಿಕೋನವನ್ನು ನಾವು ಅವರ ಬರಹಗಳಲ್ಲಿ ಕಾಣುತ್ತೇವೆ. ಈ ಕೃತಿಯನ್ನು ಓದುತ್ತಾ ಸಮಕಾಲೀನತೆಯ ಮತ್ತು ಸಮಾನತೆಯ ದರ್ಶನವಾಗುತ್ತದೆ. ಅವುಗಳು ನಮ್ಮನ್ನು ಚಿಂತನೆಗೀಡು ಮಾಡುತ್ತದೆ. ಸಾಹಿತ್ಯ, ಸಂಸ್ಕೃತಿ ಮತ್ತು ಬದುಕು ಇವುಗಳು ಒಂದನ್ನೊಂದು ಬಿಟ್ಟಿರಲು ಸಾಧ್ಯವಿಲ್ಲ. ಅವು ಈ ಕೃತಿಯಲ್ಲಿ ಹಲವು ಸಂದರ್ಭಗಳಲ್ಲಿ ಬಿಂಬಿತವಾಗಿದೆ. ತನ್ಮೂಲಕ ಹೊಸ ತಾತ್ವಕತೆಯನ್ನು ನಮ್ಮಲ್ಲಿ ಹುಟ್ಟುಹಾಕುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಗೊಂಡ ವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಉಪಸ್ಥಿತರಿದ್ದರು. ಕೃತಿಯ ಲೇಖಕಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ರೇಖಾ ಬನ್ನಾಡಿ ಸ್ವಾಗತಿಸಿದರು. ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ಅರುಣ್ ಕುಮಾರ್ ಎಸ್.ಆರ್ ವಂದಿಸಿದರು. ವಿದ್ಯಾರ್ಥಿನಿ ಮಹಾಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *

twenty − seven =